ರಾಯಚೂರು (ಜೂ.11) : ಸ್ಥಳೀಯರಲ್ಲದ, ಏಮ್ಸ್ ಕಿತ್ತುಕೊಳ್ಳುವ ಹುನ್ನಾರ ಹೂಡಿರುವ ವೈದ್ಯಕೀಯ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹಿಂತಿರುಗಿ ಹೋಗಲು ಆಗ್ರಹಿಸಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಾಯಚೂರು ನಾಗರಿಕ ವೇದಿಕೆ ನೇತೃತ್ವದಲ್ಲಿ ಸೇರಿದ ವಿವಿಧ ಸಂಘಟನೆಗಳ ಮುಖಂಡರು, ಪದಾಧಿಕಾರಿಗಳು ಉಸ್ತುವಾರಿ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಗೆ ಸಚಿವ ಸ್ಥಾನವಿಲ್ಲದ ಕಾರಣಕ್ಕೆ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿದೆ. ಇದೀಗ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯ ಬೋಸರಾಜುಗೆ ಸಚಿವ ಸ್ಥಾನ ನೀಡಿದ್ದಾರೆ. ಅವರಿಗೆ ಜಿಲ್ಲೆಯ ಸಮಸ್ಯೆಗಳ ಕುರಿತು ಸಾಕಷ್ಟುತಿಳಿದಿದೆ. ಹಿನ್ನೆಲೆ ಅವರಿಗೆ ಉಸ್ತುವಾರಿ ಜವಾಬ್ದಾರಿ ನೀಡದೆ ದೂರದ ಕಲಬುರಗಿಯ ಶರಣಪ್ರಕಾಶ ಪಾಟೀಲ್ಗೆ ವಹಿಸಿರುವುದು ಖಂಡನೀಯ ವಿಷಯವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಯಚೂರು: ವಿರೋಧದ ನಡುವೆಯೂ ಇಂದು ನಗರಕ್ಕೆ ಉಸ್ತುವಾರಿ ಸಚಿವ ಪಾಟೀಲರು!
ಏಮ್ಸ್ನ್ನು ರಾಯಚೂರು ಜಿಲ್ಲೆಗೆ ಮಂಜೂರು ಮಾಡಬೇಕು ಎಂದು ಒತ್ತಾಯಿಸಿ ಕಳೆದ 394 ದಿನಗಳಿಂದ ನಿರಂತರ ಧರಣಿ ನಡೆಸಲಾಗುತ್ತಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಗೆ ಏಮ್ಸ್ ಕೊಡುವುದಾಗಿ ಕಾಂಗ್ರೆಸ್ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇದರ ಮಧ್ಯೆಯೂ ಅದೇ ಪಕ್ಷದ ಸಚಿವ ಶರಣಪ್ರಕಾಶ ಪಾಟೀಲ್ ಅವರು ಕಲಬುರಗಿಗೆ ಏಮ್ಸ್ ತರುವುದಾಗಿ ಹೇಳಿಕೆ ನೀಡಿದ್ದಾರೆ. ಇದರಿಂದ ಅವರಿಗೆ ರಾಯಚೂರು ಜಿಲ್ಲೆ ಮೇಲಿನ ಆಸಕ್ತಿ ಎಷ್ಟುಇದೆ ಎಂದು ತಿಳಿಯುತ್ತಿದೆ. ಈ ಹಿನ್ನೆಲೆಯಲ್ಲಿ ಅವರು ಯಾವುದೇ ಕಾರಣಕ್ಕೆ ನಗರಕ್ಕೆ ಕಾಲಿಡಬಾರದು, ಉಸ್ತುವಾರಿಯನ್ನು ಸ್ಥಳೀಯರಾದ ಬೋಸರಾಜು ಅವರಿಗೆ ನೀಡಬೇಕು, ಇಲ್ಲವಾದಲ್ಲಿ ಹೋರಾಟವನ್ನು ತೀವ್ರ ಸ್ವರೂಪಕ್ಕೆ ತೆಗೆದುಕೊಂಡು ಹೋಗಬೇಕಾಗುತ್ತದೆ ಎಂದು ಪ್ರತಿಭಟನಾ ನಿರತರು ಎಚ್ಚರಿಸಿದರು.
ಸಚಿವ ಶರಣಪ್ರಕಾಶ ಪಾಟೀಲರಿಗೆ ಉಸ್ತುವಾರಿ ಪಟ್ಟ: ರಾಯಚೂರಲ್ಲಿ ಅಸಮಾಧಾನ ಸ್ಫೋಟ!
ಹೋರಾಟದಲ್ಲಿ ವೇದಿಕೆ ಮುಖಂಡರಾದ ರಾಘವೇಂದ್ರ ಕುಷ್ಟಗಿ, ಚಾಮರಸ ಮಾಲಿಪಾಟೀಲ್, ಡಾ.ಬಸವರಾಜ ಕಳಸ, ಎಸ್.ಮಾರೆಪ್ಪ, ಖಾಜಾ ಅಸ್ಲಂ ಅಹಮ್ಮದ್, ಜಾನ್ ವೆಸ್ಲಿ ಕಾತರಕಿ, ಜಿ.ಅಮರೇಶ, ಮಾರೆಪ್ಪ ಹರವಿ, ಬಷೀರ್ ಅಹಮ್ಮದ್ ಹೊಸಮನಿ, ಮೊಹಮ್ಮದ್ ಇಕ್ಬಾಲ್, ಅಂಬಾಜಿ, ಬಸವರಾಜ ಸೇರಿ ಅನೇಕರು ಇದ್ದರು.