Mandya: ಜಿಲ್ಲಾ ಉಸ್ತುವಾರಿ ಸಚಿವರಾದ ಹಿನ್ನೆಲೆ ಆರ್.ಅಶೋಕ್ ವಿರುದ್ಧ ಗೋ ಬ್ಯಾಕ್ ಅಭಿಯಾನ

By Gowthami KFirst Published Jan 26, 2023, 12:47 PM IST
Highlights

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ನೇಮಕ ಹಿನ್ನೆಲೆಯಲ್ಲಿ ಅವರ ವಿರುದ್ಧ ಗೋ ಬ್ಯಾಕ್ ಅಭಿಯಾನ ನಡೆಸಲಾಗಿದೆ. ಆರ್.ಅಶೋಕ್ ಗೆ ಮಂಡ್ಯ ಉಸ್ತುವಾರಿ ಕೊಟ್ಟಿರೋದಕ್ಕೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದೆ.

ಮಂಡ್ಯ (ಜ.26): ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗಿ ಆರ್.ಅಶೋಕ್ ನೇಮಕ ಹಿನ್ನೆಲೆಯಲ್ಲಿ ಅವರ ವಿರುದ್ಧ ಗೋ ಬ್ಯಾಕ್ ಅಭಿಯಾನ ನಡೆಸಲಾಗಿದೆ. ಆರ್.ಅಶೋಕ್ ಗೆ ಮಂಡ್ಯ ಉಸ್ತುವಾರಿ ಕೊಟ್ಟಿರೋದಕ್ಕೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಗೋ ಬ್ಯಾಕ್ ಅಶೋಕ್ ಅಭಿಯಾನ ನಡೆಸಲಾಗಿದೆ. ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಸಹಿಸುವುದಿಲ್ಲ. ನಾವು ಬಿಜೆಪಿ ಕಾರ್ಯಕರ್ತರು. 'ಗೋ ಬ್ಯಾಕ್ ಆರ್.ಅಶೋಕ್' ಮಂಡ್ಯದ ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರೇ ಸಾಕು ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸ್ಕೊತ್ತೀವಿ. ದಯವಿಟ್ಟು ನೀವು ವಾಪಸ್ ಹೋಗಿ ಎಂದು ಅಭಿಯಾನ ಹಮ್ಮಿಕೊಳ್ಳಲಾಗಿದೆ.

ರೈತರ ಸಮಸ್ಯೆ ಬಗೆಹರಿಸಲು ಬದ್ಧ: ಆರ್‌. ಅಶೋಕ್‌:
ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸಲು ಸರ್ಕಾರ ಬದ್ಧವಾಗಿದೆ. ಸ್ಥಗಿತಗೊಂಡಿದ್ದ ಜಿಲ್ಲೆಯ ಎರಡು ಸಕ್ಕರೆ ಕಾರ್ಖಾನೆಗಳಿಗೆ ಮರುಚಾಲನೆ ನೀಡಿರುವುದು, ಕಬ್ಬಿಗೆ ರಾಜ್ಯ ಸರ್ಕಾರ 100 ರು. ಘೋಷಿಸಿರುವುದೇ ಇದಕ್ಕೆ ಸಾಕ್ಷಿ ಎಂದು ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ಅಶೋಕ್‌ ಹೇಳಿದರು.

ನಗರದ ಫ್ಯಾಕ್ಟರಿ ವೃತ್ತದ ಬಳಿ ಬುಧವಾರ ಬಿಜೆಪಿ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಚುನಾವಣೆ ಬರುವ ಮುನ್ನವೇ ನನಗೆ ಉಸ್ತುವಾರಿ ಸಚಿವ ಸ್ಥಾನವೂ ಸಿಕ್ಕಿದೆ. ನನಗೆ ಇದು ಮೊದಲನೇನಲ್ಲ. ಎರಡು ಬಾರಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸಕ್ಕರೆ ಕಾರ್ಖಾನೆಗಳನ್ನು ಪುನರಾರಂಭಿಸಲು ನಮ್ಮ ಸರ್ಕಾರವೇ ಬರಬೇಕಾಯಿತು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಇದನ್ನು ಮನಗಾಣಬೇಕಿದೆ. ಬಿಜೆಪಿ ಸರ್ಕಾರವು ಜಿಲ್ಲೆ ಹಾಗೂ ರಾಜ್ಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಬಿಜೆಪಿ ಒಂದು ಖಾತೆಯನ್ನು ವಿಧಾನಸಭಾ ಚುನಾವಣೆಯಲ್ಲಿ ತೆರೆಯುವ ಮೂಲಕ ಶುಭಾರಂಭ ಮಾಡಲಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯದಂತೆ ದೇಶದ ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತ ಯಾಚನೆ ಮಾಡುತ್ತೇವೆ. ಜನರಿಗೂ ಬಿಜೆಪಿ ಪಕ್ಷದ ಮೇಲೆ ವಿಶ್ವಾಸವಿದೆ. ಹಳೇ ಮೈಸೂರು ಭಾಗದಲ್ಲಿಯೂ ಬಿಜೆಪಿ ಹೆಚ್ಚು ಸ್ಥಾನಗಳಿಸುವ ಉದ್ದೇಶ ಇಟ್ಟುಕೊಂಡಿದ್ದು, ಇದಕ್ಕೆ ತಯಾರಿ ಹಾಗೂ ಯೋಜನೆಗಳನ್ನು ರೂಪಿಸಲಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ ಜಿಲ್ಲಾ ಉಸ್ತುವಾರಿಯಾಗಿ ಆರ್. ಅಶೋಕ್‌ ನೇಮಕ

ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳನ್ನು ನೋಡಿ ಜಿಲ್ಲೆಯ ಜನ ಸಾಕಾಗಿದ್ದಾರೆ, ಹಾಗಾಗಿ ಬಿಜೆಪಿ ಮೇಲೆ ಜನರಿಗೆ ವಿಶ್ವಾಸವಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ರೀತಿಯಲ್ಲಿ ಶ್ರಮ ಹಾಕಲಾಗುವುದು ಎಂದರು.

ಕೋಲಾರದಲ್ಲೂ ಸಿದ್ದು ಗೆಲ್ಲಲ್ಲ, ಸೋಲಿಸಲು ಆ ಪಕ್ಷದವರೇ ರೆಡಿಯಾಗಿದ್ದಾರೆ: ಸಚಿವ ಅಶೋಕ್‌

ಮುಖಂಡರಾದ ವಿದ್ಯಾ ನಾಗೇಂದ್ರ, ಎಚ್‌.ಪಿ.ಮಹೇಶ್‌, ಅಶೋಕ್‌ ಜಯರಾಂ, ಸಿ.ಟಿ.ಮಂಜುನಾಥ್‌, ಎಚ್‌.ಆರ್‌.ಅರವಿಂದ್‌, ಎಚ್‌.ಆರ್‌.ಅಶೋಕ್‌ಕುಮಾರ್‌, ವಿವೇಕ್‌, ರಮೇಶ್‌, ಪುಟರ್‌ಮಲ್‌ ಜೈನ್‌ ಇತರರಿದ್ದರು.

click me!