ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಫೆ.2ರಂದು ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ನಗರದ ಮಹದೇಶ್ವರ ದೇವಸ್ಥಾನದ ಬಳಿ ಬೃಹತ್ ಕೃತಜ್ಞತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಚನ್ನಪಟ್ಟಣ (ಫೆ.01): ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಫೆ.2ರಂದು ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ನಗರದ ಮಹದೇಶ್ವರ ದೇವಸ್ಥಾನದ ಬಳಿ ಬೃಹತ್ ಕೃತಜ್ಞತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು ಭಾಗವಹಿಸಲಿದ್ದಾರೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು. ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಭಾರಿ ಮತಗಳ ಅಂತರದಿಂದ ನನ್ನನ್ನು ಗೆಲ್ಲಿಸಿ ಮತ್ತೊಮ್ಮೆ ಶಾಸಕನನ್ನಾಗಿ ಮಾಡಿದ್ದಾರೆ. ಚುನಾವಣೆ ವೇಳೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಾಕಷ್ಟು ಭರವಸೆ ನೀಡಲಾಗಿತ್ತು. ಸಿಎಂ, ಡಿಸಿಎಂ, ಸಚಿವರು, ಶಾಸಕರು ನನ್ನ ಪರ ಪ್ರಚಾರ ನಡೆಸಿದ್ದು, ಈ ವೇಳೆ ಸಾಕಷ್ಟು ಭರವಸೆ ನೀಡಿದ್ದರು.
ಈ ಕುರಿತು ಸರ್ಕಾರದ ಗಮನ ಸೆಳೆಯುವ ಜತೆಗೆ ಮತದಾರರಿಗೆ ಧನ್ಯವಾದ ಸಲ್ಲಿಸಬೇಕು ಎಂದು ಕಾಂಗ್ರೆಸ್ ಜಿಲ್ಲಾ ಹಾಗೂ ತಾಲೂಕು ಘಟಕದಿಂದ ತೀರ್ಮಾನಿಸಲಾಗಿದೆ ಎಂದರು. ಇದೇ ವೇಳೆ ತಾಲೂಕಿನ ಹಲವು ಅಭಿವೃದ್ಧಿ ವಿಚಾರ ಸಂಬಂಧಿಸಿದಂತೆ ಸರ್ಕಾರದ ಗಮನ ಸೆಳೆಯಲಾಗುವುದು. ರಾಜ್ಯದಲ್ಲಿ ಅತಿ ಹೆಚ್ಚು ಹಾಲು ಉತ್ಪಾದನೆ ಮಾಡುವ ತಾಲೂಕು ನಮ್ಮದಾಗಿದೆ. ಆದರೆ, ಹೈನುಗಾರರು ಪೂರೈಕೆ ಮಾಡುವ ಹಾಲಿಗೆ ಬಮೂಲ್ ನಿಗದಿ ಮಾಡಿರುವ ದರ ಕಡಿಮೆ ಇದೆ. ಇದರಿಂದ ರೈತರಿಗೆ ಲಾಭವಾಗುತ್ತಿಲ್ಲ. ಇಡೀ ದೇಶದಲ್ಲೇ ರಾಜ್ಯದಲ್ಲಿ ಮಾತ್ರ ಹಾಲಿಗೆ ಇಷ್ಟು ಕಡಿಮೆ ದರ ಇದೆ. ಹೈನು ಉದ್ಯಮ ಉಳಿಸುವ ನಿಟ್ಟಿನಲ್ಲಿ ಹೈನುಗಾರರಿಗೆ ಪ್ರತಿ ಲೀಟರ್ ಹಾಲಿಗೆ 5 ರು. ಪ್ರೋತ್ಸಾಹ ಧನ ನೀಡಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎಂದರು.
ದಲಿತರ ಸ್ಮಶಾನ, ನಿವೇಶನ ಸಮಸ್ಯೆ ಪರಿಹಾರಕ್ಕೆ ಆದ್ಯತೆ: ಶಾಸಕ ಸಿ.ಪಿ.ಯೋಗೇಶ್ವರ್
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಾಕಷ್ಟು ಯೋಜನೆ ಹಾಕಿಕೊಂಡಿದ್ದೇವೆ. ತಾಲೂಕಿನ ಕಣ್ವ ಜಿಲಾಶಯದ ಬಳಿ ಸುಮಾರು 150 ಎಕರೆ ಸರ್ಕಾರಿ ಜಾಗವಿದ್ದು, ಅಲ್ಲಿ ಪ್ರವಾಸೋದ್ಯಮಕ್ಕೆ ಉತ್ತಮ ವಾತಾವರಣವಿದೆ. ಕಾರ್ಯಕ್ರಮ ಮುಗಿದ ನಂತರ ತಾಲೂಕಿನ ಕಣ್ವ ಜಲಾಶಯಕ್ಕೆ ಮುಖ್ಯಮಂತ್ರಿಗಳನ್ನು ಕರೆದುಕೊಂಡು ಹೋಗಲಾಗುವುದು. ಪ್ರವಾಸೋದ್ಯಮ ಇಲಾಖೆಯಿಂದ ಅಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಅನುಕೂಲವಿದ್ದು, ಅದನ್ನು ಮನದಟ್ಟು ಮಾಡಲಾಗುವುದು ಎಂದರು. ಮತದಾರಿಗೆ ಕೃತಜ್ಞತೆ ಸಲ್ಲಿಸುವ ಕಾರ್ಯಕ್ರಮ ಈ ಹಿಂದೆಯೇ ನಡೆಯಬೇಕಿತು.
ಆದರೆ, ಹಲವು ಕಾರಣಗಳಿಂದ ನಿಗದಿಯಾಗಿದ್ದ ಕಾರ್ಯಕ್ರಮ ಎರಡು ಮೂರು ಬಾರಿ ರದ್ದಾಗಿತ್ತು. ಉಪಚುನಾವಣೆಯಲ್ಲಿ ಸಾಕಷ್ಟು ಮುಖಂಡರು, ಕಾರ್ಯಕರ್ತರು ಸಾಕಷ್ಟು ಕೆಲಸ ಮಾಡಿ ಶಕ್ತಿ ತುಂಬಿದ್ದಾರೆ. ಇದಲ್ಲದೇ ಮುಂದೆ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯತಿ ಚುನಾವಣೆ ಸಹ ಇದ್ದು, ಸಂಘಟನೆ ದೃಷ್ಟಿಯಿಂದ ಸಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್. ಪ್ರಮೋದ್, ಸುನೀಲ್, ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್, ನಗರಸಭೆ ಸದಸ್ಯರಾದ ಸತೀಶ್ ಬಾಬು, ಕೋಟೆ ಚಂದ್ರು, ಕಾಂತರಾಜು, ರಮೇಶ್, ಶೇಖರ್, ಶಿವು, ಪ್ರಸನ್ನ, ಲಾಯರ್ ಹನುಮಂತು, ನಾಗೇಂದ್ರ ಇದ್ದರು.
ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ₹300 ಕೋಟಿ ಬೇಕು: ತಾಲೂಕಿನಲ್ಲಿ ಉಳಿದಿರುವ ನೀರಾವರಿ ಯೋಜನೆಗೆ ಹೆಚ್ಚಿನಸ ಒತ್ತು ನೀಡಬೇಕು. ಯುಜಿಡಿ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಬೇಕು. ಜಿಲ್ಲೆಯಲ್ಲಿ ಆನೆ ಹಾವಳಿ ಇದೆ. ಇದನ್ನು ನಿಯಂತ್ರಿಸಲು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ₹300 ಕೋಟಿ ಅನುದಾನದ ಅವಶ್ಯಕತೆ ಇದೆ. ಆನೆಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆಯಬೇಕಿದೆ. ಇದಕ್ಕೆಲ್ಲ ಸಾಕಷ್ಟು ಅನುದಾನ ಬೇಕಿದೆ. ಇದಲ್ಲದೇ ತಾಲೂಕಿನ ಸಮಗ್ರ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಂದ ಸಾಕಷ್ಟು ಅನುದಾನ ಬೇಕಿದ್ದು, ಈ ಕುರಿತು ಮುಖ್ಯಮಂತ್ರಿಗಳ ಗಮನ ಸೆಳೆಯಲಾಗುವುದು ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ಯೋಗೇಶ್ವರ್‌ಗೆ ತಾಕತ್ತಿದ್ದರೆ ಜೆಡಿಎಸ್ ಶಾಸಕರನ್ನು ಸೆಳೆಯಲಿ: ಪುಟ್ಟರಾಜು ಸವಾಲು
ನೀರಾ ಹೆಸರಿನಲ್ಲಿ ಸಾಕಷ್ಟು ಜನ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಂಡರು. ಆದರೆ ಅದರಿಂದ ರೈತರಿಗೆ ಲಾಭವಾಗಲಿಲ್ಲ. ನೀರಾವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಿ ಮಾರುಕಟ್ಟೆ ಒದಗಿಸಬೇಕು ಎಂಬುದರ ಕುರಿತು ಚಿಂತನೆ ನಡೆಸಲಾಗಿದೆ.
-ಸಿ.ಪಿ. ಯೋಗೇಶ್ವರ್ ಶಾಸಕ