‘ಪಕ್ಷಕ್ಕಾಗಿ ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ನನಗೆ ಪಕ್ಷ ಮಾತ್ರ ಮುಖ್ಯ. ನಾನು ಯಾರ ಜೊತೆಗೂ ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ. ಪಕ್ಷ ಕಟ್ಟಲು ಅಧ್ಯಕ್ಷನಾಗಿದ್ದೇನೆ ಅಷ್ಟೇ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ.
ಬೆಂಗಳೂರು/ಮೈಸೂರು (ಫೆ.01): ‘ಪಕ್ಷಕ್ಕಾಗಿ ಎಲ್ಲಾ ಟೀಕೆಗಳನ್ನು ಸಹಿಸಿಕೊಳ್ಳುತ್ತೇನೆ. ನನಗೆ ಪಕ್ಷ ಮಾತ್ರ ಮುಖ್ಯ. ನಾನು ಯಾರ ಜೊತೆಗೂ ಯುದ್ಧ ಮಾಡಲು ಅಧ್ಯಕ್ಷನಾಗಿಲ್ಲ. ಪಕ್ಷ ಕಟ್ಟಲು ಅಧ್ಯಕ್ಷನಾಗಿದ್ದೇನೆ ಅಷ್ಟೇ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀಕ್ಷ್ಣವಾಗಿ ಹೇಳಿದ್ದಾರೆ. ಸಂಸದ ಡಾ.ಕೆ.ಸುಧಾಕರ್ ನನಗೆ ಯಾವುದೇ ಫೋನ್ ಕರೆ ಮಾಡಿಲ್ಲ. ಪಕ್ಷ ಯಾರ ಸ್ವತ್ತೂ ಅಲ್ಲ. ಸುಧಾಕರ್ ಅವರು ಹಗುರವಾಗಿ ಮಾತನಾಡಬಾರದು ಎಂಬ ಮನವಿ ಮಾಡುತ್ತೇನೆ ಎಂದೂ ಅವರು ತಿಳಿಸಿದ್ದಾರೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸುಧಾಕರ್ ಬಾಯಲ್ಲಿ ಯುದ್ಧದ ಮಾತು ಯಾಕೆ ಬಂತೋ ಗೊತ್ತಿಲ್ಲ. ನಾನು ಅವರ ಜೊತೆ ಮಾತನಾಡಲು ಮುಕ್ತನಾಗಿದ್ದೇನೆ. ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷರ ನೇಮಕ ವಿಚಾರದಲ್ಲಿ ನನ್ನ ಯಾವ ಪಾತ್ರವೂ ಇಲ್ಲ. ಜಿಲ್ಲಾಧ್ಯಕ್ಷರ ನೇಮಕದಲ್ಲಿ ಸುಧಾಕರ್ ಅವರನ್ನು ನಾನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯಾಧ್ಯಕ್ಷನಾಗಿ ನಾನು ಯಾವುದೇ ಜಿಲ್ಲೆ ಅಧ್ಯಕ್ಷರ ನೇಮಕ ಕುರಿತು ಅಭಿಪ್ರಾಯವನ್ನೂ ನೀಡಿಲ್ಲ. ಹಾಗೆ ಅಭಿಪ್ರಾಯ ನೀಡುವುದಕ್ಕೆ ಅವಕಾಶವೂ ಇಲ್ಲ. ಪಕ್ಷದ ರಾಷ್ಟ್ರೀಯ ಘಟಕದಿಂದ ರಾಜ್ಯದ ಚುನಾವಣೆ ಜವಾಬ್ದಾರಿಯನ್ನು ವಿಧಾನಪರಿಷತ್ತಿನ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಅವರಿಗೆ ನೀಡಲಾಗಿತ್ತು. ಚುನಾವಣಾ ವೀಕ್ಷಕರನ್ನೂ ನೇಮಿಸಲಾಗಿತ್ತು. ಅವರು ಸ್ಥಳೀಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಮೂರು ಹೆಸರುಗಳನ್ನು ಅಂತಿಮಗೊಳಿಸಿ ಹೈಕಮಾಂಡ್‌ಗೆ ಕಳುಹಿಸಿದ್ದರು. ನಂತರ ಚುನಾವಣೆ ನಡೆಸಿ ಒಬ್ಬರನ್ನು ಆಯ್ಕೆ ಮಾಡಲಾಗಿದೆ ಎಂದು ವಿವರಿಸಿದರು.
ಮಠಮಾನ್ಯಗಳಿಂದ ಸಂಸ್ಕೃತಿ, ಪರಂಪರೆ ಉಳಿಸುವ ಕೆಲಸ: ಬಿ.ವೈ.ವಿಜಯೇಂದ್ರ
ಇದರಲ್ಲಿ ಯಾವ ಹಂತದಲ್ಲೂ ನನ್ನ ಪಾತ್ರ ಬರುವುದಿಲ್ಲ. ರಾಜ್ಯಾಧ್ಯಕ್ಷನಾಗಿದ್ದರೂ ನಾನು ನನ್ನ ಜಿಲ್ಲೆಯ ಅಧ್ಯಕ್ಷರ ಆಯ್ಕೆ ಬಗ್ಗೆ ಮಾತ್ರ ಅಭಿಪ್ರಾಯ ನೀಡಬಹುದೇ ಹೊರತು ಬೇರೆ ಜಿಲ್ಲೆಗಳ ಬಗ್ಗೆ ಅಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯೇ ದೇಶದ ಎಲ್ಲ ರಾಜ್ಯಗಳಲ್ಲೂ ನಡೆದಿದೆ. ಇದನ್ನು ಸುಧಾಕರ್ ಅವರೂ ಅರ್ಥ ಮಾಡಿಕೊಳ್ಳಬೇಕು. ಈಗ ಜಿಲ್ಲಾಧ್ಯಕ್ಷರಾಗಿರುವ ಸಂದೀಪ್ ಅವರು ಸುಧಾಕರ್ ಅವರ ಸಂಬಂಧಿಯೇ ಎಂದು ವಿಜಯೇಂದ್ರ ಹೇಳಿದರು.
ಮೆಸೇಜ್ ಮಾಡಿದ್ದರು: ನಾಲ್ಕು ದಿನಗಳ ಹಿಂದೆ ಮಾತನಾಡಬೇಕೆಂದು ಮೆಸೇಜ್ ಮಾಡಿದ್ದರು. ನಾನು ಅನಿವಾರ್ಯವಾಗಿ ದೆಹಲಿಗೆ ಹೋಗಬೇಕಿತ್ತು. ಆದ್ದರಿಂದ ಭೇಟಿ ಸಾಧ್ಯವಾಗಲಿಲ್ಲ. ಅವರು ನನಗೆ ಯಾವುದೇ ಕರೆ ಮಾಡಿಲ್ಲ. ಅಂಥ ನಾಯಕರು ಕರೆ ಮಾಡಿದರೆ ಸ್ವೀಕರಿಸಲು ಆಗದಷ್ಟು ದೊಡ್ಡವನು ನಾನಲ್ಲ. ಯಾವ ಅರ್ಥದಲ್ಲಿ ಸುಧಾಕರ್ ಟೀಕಿಸಿದ್ದಾರೋ ಗೊತ್ತಿಲ್ಲ ಎಂದರು. ಚಿಕ್ಕಬಳ್ಳಾಪುರ ಜಿಲ್ಲಾ ಬಿಜೆಪಿ ಅಧ್ಯಕ್ಷರ ನೇಮಕದ ಹಿನ್ನೆಲೆಯಲ್ಲಿ ಕ್ರುದ್ಧರಾಗಿರುವ ಮಾಜಿ ಸಚಿವ ಸುಧಾಕರ್, ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಲು ಅಡ್ಡ ದಾರಿ ಹಿಡಿದಿದ್ದಾರೆಂದು ಟೀಕಾ ಪ್ರಹಾರ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ವಿಜಯೇಂದ್ರ ಅವರು, ಪಕ್ಷಕ್ಕಾಗಿ ನಾನು ಎಲ್ಲಾ ಟೀಕೆ ಸಹಿಸಿಕೊಳ್ಳುತ್ತೇನೆ. ಯಾರು ಏನೇ ಮಾತನಾಡಲಿ ಎಲ್ಲವನ್ನೂ ಸೌಮ್ಯವಾಗಿ ಸ್ವೀಕರಿಸಿದ್ದೇನೆ.
ಕುಂಭಮೇಳ ಟೀಕಿಸುವ ಕಾಂಗ್ರೆಸ್‌ನವರು ಅಯೋಗ್ಯರು: ಬಿ.ವೈ.ವಿಜಯೇಂದ್ರ
ಎಲ್ಲರಿಂದಲೂ ಅನುಭವಗಳನ್ನು ಕಲಿಯುತ್ತಿದ್ದೇನೆ. ನನಗೆ ಪಕ್ಷ ಮಾತ್ರ ಮುಖ್ಯ. ನಾನು ಯಡಿಯೂರಪ್ಪ ಅವರಿಂದ ಜೀವನದ ಅನುಭವಗಳನ್ನು ಕಲಿತಿದ್ದೇನೆ. ನಾನು ಯಾರ ಜೊತೆಗೂ ಯುದ್ಧ ಮಾಡಲು ಅಧ್ಯಕ್ಷ ಆಗಿಲ್ಲ. ಪಕ್ಷ ಕಟ್ಟಲು ಅಧ್ಯಕ್ಷ ಆಗಿದ್ದೇನೆ ಅಷ್ಟೇ ಎಂದು ಹೇಳಿದರು. ಸುಧಾಕರ್ ಅವರಿಗೆ ಅನುಭವ ಹಾಗೂ ಮಾಹಿತಿ ಕೊರತೆ ಇದೆ. ಈಗಾಗಿ ಈ ರೀತಿ ಮಾತನಾಡಿದ್ದಾರೆ. ಇದರಲ್ಲಿ ನಾನು ಟಾರ್ಗೆಟ್ ಆಗಿದ್ದೇನೆ, ಯಡಿಯೂರಪ್ಪ ಮಗ ಅನ್ನುವ ಕಾರಣಕ್ಕೆ ಟಾರ್ಗೆಟ್ ಆಗಿದ್ದೇನೆ ಎಂಬುದೆನ್ನೆಲ್ಲ ನಾನು ಹೇಳುವುದಿಲ್ಲ. ಯಡಿಯೂರಪ್ಪನವರ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ. ಹೀಗಾಗಿ ಎಲ್ಲಾ ಟೀಕೆಗಳಿಂದ ಪಾಠ ಕಲಿತಿದ್ದೇನೆ ಎಂದರು.