ಮಂಗಳೂರು: ಮೋದಿ ಸಮಾವೇಶಕ್ಕೆ ಮಳೆ ಭೀತಿ, ಕಾರ್ಯಕ್ರಮಕ್ಕೆ ವಿಶಾಲ ಜರ್ಮನ್‌ ಪೆಂಡಾಲ್‌ ಅಳವಡಿಕೆ

By Kannadaprabha News  |  First Published Aug 27, 2022, 12:30 AM IST

ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಸೆ.2ರಂದು ಕೂಡ ಭಾರಿ ಮಳೆಯ ಮುನ್ಸೂಚನೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಸಮಾವೇಶಕ್ಕೆ ತೊಂದರೆಯಾಗದಂತೆ ಇಡೀ ಸಮಾವೇಶ ಸ್ಥಳವನ್ನು ಪೂರ್ತಿಯಾಗಿ ನೆಲಮಟ್ಟದಿಂದ ತುಸು ಎತ್ತರದಲ್ಲಿ ರಚಿಸಲು ನಿರ್ಧಾರ  


ಮಂಗಳೂರು(ಆ.27):  ಮಂಗಳೂರಿನಲ್ಲಿ ಸೆ.2ರಂದು ನಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರಿ ಸಮಾವೇಶಕ್ಕೆ ವಿಶಾಲ ಜರ್ಮನ್‌ ಪೆಂಡಾಲ್‌ ಅಳವಡಿಸಲಾಗುತ್ತಿದೆ. ಅಲ್ಲದೆ ವೇದಿಕೆ ಸಹಿತ ಇಡೀ ಸಭಾಂಗಣ ಪೂರ್ತಿ ನೆಲದಿಂದ ಎತ್ತರದಲ್ಲಿ ಇರಲಿದೆ.

ಕರಾವಳಿಯಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಸೆ.2ರಂದು ಕೂಡ ಭಾರಿ ಮಳೆಯ ಮುನ್ಸೂಚನೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಸಮಾವೇಶಕ್ಕೆ ತೊಂದರೆಯಾಗದಂತೆ ಇಡೀ ಸಮಾವೇಶ ಸ್ಥಳವನ್ನು ಪೂರ್ತಿಯಾಗಿ ನೆಲಮಟ್ಟದಿಂದ ತುಸು ಎತ್ತರದಲ್ಲಿ ರಚಿಸಲು ನಿರ್ಧರಿಸಲಾಗಿದೆ. ಇದರಿಂದಾಗಿ ಒಂದು ವೇಳೆ ಭಾರಿ ಮಳೆ ಬಂದರೂ ಕಾರ್ಯಕ್ರಮಕ್ಕೆ ತೊಂದರೆಯಾಗದು. ಅಲ್ಲದೆ ಮಳೆ ನೀರು ನಿಂತು ಕೆಸರಿನ ತಾಪತ್ರಯವೂ ಇರದು. ಜರ್ಮನ್‌ ಮಾದರಿ ಬೃಹತ್‌ ಪೆಂಡಾಲ್‌ ಮಳೆಯಿಂದ ಪೂರ್ತಿ ರಕ್ಷಣೆ ನೀಡಲಿದ್ದು, ಇದಕ್ಕೆ ಬೇಕಾದ ಎಲ್ಲ ರೀತಿಯ ತಯಾರಿಗಳನ್ನು ಮಾಡಲಾಗುತ್ತಿದೆ.

Tap to resize

Latest Videos

30 ಎಕರೆ ಪ್ರದೇಶದಲ್ಲಿ ಸಮಾವೇಶ: ಮೋದಿ ಮಂಗ್ಳೂರು ರ‍್ಯಾಲಿಗೆ ಭಾರಿ ಸಿದ್ಧತೆ

ಸಮತಟ್ಟು ಕೆಲಸಕ್ಕೆ ವೇಗ:

ಪ್ರಧಾನಿ ಕಾರ್ಯಕ್ರಮ ನಡೆಯುವ ನಗರದ ಹೊರವಲಯದ ಬಂಗ್ರಕೂಳೂರು ಗೋಲ್ಡ್‌ಫಿಂಚ್‌ ಸಿಟಿಯ 30 ಎಕರೆ ಜಾಗವನ್ನು ಪೂರ್ತಿ ಶುಚಿಗೊಳಿಸುವ ಕೆಲಸ ನಡೆಯುತ್ತಿದೆ. ಅಲ್ಲಲ್ಲಿರುವ ಗಿಡಗಂಟೆ, ಮೋರಿ, ಪೈಪುಗಳನ್ನು ತೆರವುಗೊಳಿಸಲಾಗಿದೆ. ಜೆಸಿಬಿ ಮೂಲಕ ಹಗಲು ರಾತ್ರಿ ಸಮತಟ್ಟುಗೊಳಿಸುವ ಕೆಲಸ ನಡೆಯುತ್ತಿದೆ. ಅಲ್ಲಲ್ಲಿ ಮಣ್ಣು, ಜಲ್ಲಿಪುಡಿ ಬಳಸಿ ಮೈದಾನದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲಾಗುತ್ತಿದೆ.

ನೀರು ಬಸಿದುಹೋಗುವಂತೆ ಸಣ್ಣಪುಟ್ಟಚರಂಡಿ ಮಾಡಲಾಗಿದ್ದು, ಅದರಲ್ಲಿ ನೀರು ಸರಾಗ ಹರಿದುಹೋಗುವಂತೆ ನೋಡಿಕೊಳ್ಳಲಾಗಿದೆ. ನವಮಂಗಳೂರು ಬಂದರು ಪ್ರಾಧಿಕಾರ(ಎನ್‌ಎಂಪಿಎ) ಈ ಕಾರ್ಯಕ್ರಮಕ್ಕೆ ಸ್ಥಳ ಸಿದ್ಧಪಡಿಸುವ ಹೊಣೆಯನ್ನು ಹೊತ್ತುಕೊಂಡಿದೆ.

ಸೆ.2ಕ್ಕೆ ಮಂಗಳೂರಿಗೆ ಪ್ರಧಾನಿ ಭೇಟಿ: ಟ್ರೋಲ್‌ ಪೇಜ್‌ಗಳಲ್ಲಿ ರೋಸ್ಟ್ ಆಗ್ತಿರುವ ಸ್ಥಳೀಯ ಬಿಜೆಪಿಗರು

ಡಿವೈಡರ್‌ಗೆ ಕತ್ತರಿ:

ಸಮಾವೇಶ ನಡೆಯುವ ಮೈದಾನಕ್ಕೆ ಬರಲು ಪ್ರತ್ಯೇಕ ಹೆಚ್ಚುವರಿ ರಸ್ತೆ ನಿರ್ಮಿಸುವ ಕೆಲಸವೂ ನಡೆದಿದೆ. ರಾಷ್ಟ್ರೀಯ ಹೆದ್ದಾರಿ- 66ರ ಡಿವೈಡರ್‌ ಕತ್ತರಿಸಿ ಪ್ರತ್ಯೇಕ ಕ್ರಾಸಿಂಗ್‌ ನಿರ್ಮಿಸುವ ಕಾರ್ಯ ಮಾಡಲಾಗುತ್ತಿದೆ. ಹೆದ್ದಾರಿ ಪಕ್ಕದಲ್ಲೇ ಮೈದಾನ ಇರುವ ಕಾರಣ ಕಾರ್ಯಕ್ರಮದ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಸಂಚಾರವನ್ನು ಬೇರೆ ಕಡೆಗೆ ಸ್ಥಳಾಂತರವಾಗುವ ಸಾಧ್ಯತೆಗಳೂ ಇವೆ.

ಎಸ್‌ಪಿಜಿ ಭೇಟಿ ಬಳಿಕ ಅಂತಿಮ:

ಪ್ರಧಾನಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಹೆಲಿಪ್ಯಾಡ್‌, ವೇದಿಕೆ, ಆಗಮನ, ನಿರ್ಗಮನ, ಪ್ರಧಾನ ಸಭಾಂಗಣ ಸೇರಿದಂತೆ ಎಲ್ಲ ರೀತಿಯ ರೂಪುರೇಷೆಗಳನ್ನು ಕೈಗೊಳ್ಳಲಾಗಿದ್ದು, ಇದನ್ನು ದೆಹಲಿಯಿಂದ ಪ್ರಧಾನಿ ಭದ್ರತೆಯ ಎಸ್‌ಪಿಜಿ(ಸ್ಪೆಷಲ್‌ ಪ್ರೊಟೆಕ್ಷನ್‌ ಗ್ರೂಪ್‌)ವಿಶೇಷ ತಂಡ ಆಗಮಿಸಿ ಸಂಪೂರ್ಣ ವೀಕ್ಷಿಸಿ ಸೂಚನೆ ನೀಡಿದ ಬಳಿಕವೇ ಎಲ್ಲವೂ ಅಂತಿಮಗೊಳ್ಳಲಿದೆ.
 

click me!