Chitradurga: ಹಿರಿಯೂರಿನ ಪ್ರಮುಖ ಬೀದಿಗಳಲ್ಲಿ ಗಾಲಿ ಜನಾರ್ಧನ ರೆಡ್ಡಿ ಭರ್ಜರಿ ರೋಡ್ ಶೋ

By Suvarna NewsFirst Published Feb 4, 2023, 10:38 PM IST
Highlights

ರಾಜ್ಯದಲ್ಲಿ ನೂತನ KRP ಪಕ್ಷ ಸ್ಥಾಪನೆ ಆದಾಗಿನಿಂದ ಸಂಸ್ಥಾಪಕ ಜನಾರ್ಧನ ರೆಡ್ಡಿ ಹಾಗೂ ಪತ್ನಿ ಅರುಣ ಲಕ್ಷ್ಮಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡರಂತೆ ರಾಜ್ಯ ಪ್ರವಾಸ  ಕೈಗೊಂಡಿದ್ದಾರೆ. ಇಂದು ಹಿರಿಯೂರಿನಲ್ಲಿ ಬೃಹತ್  ಸಾರ್ವಜನಿಕ ಸಭೆ ಹಾಗೂ ರೋಡ್ ಶೋ ನಡೆಸುವ ಮೂಲಕ ತಮ್ಮ ಪಕ್ಷದ ಶಕ್ತಿ ಪ್ರದರ್ಶನ ಮಾಡಿದರು.

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.4): ರಾಜ್ಯದಲ್ಲಿ ನೂತನ KRP ಪಕ್ಷ ಸ್ಥಾಪನೆ ಆದಾಗಿನಿಂದ ಸಂಸ್ಥಾಪಕ ಗಾಲಿ ಜನಾರ್ಧನ ರೆಡ್ಡಿ ಹಾಗೂ ಪತ್ನಿ ಅರುಣ ಲಕ್ಷ್ಮಿ ಕಾಲಿಗೆ ಗೆಜ್ಜೆ ಕಟ್ಟಿಕೊಂಡರಂತೆ ರಾಜ್ಯ ಪ್ರವಾಸ  ಕೈಗೊಂಡಿದ್ದಾರೆ. ಇಂದು ಹಿರಿಯೂರಿನಲ್ಲಿ ಬೃಹತ್  ಸಾರ್ವಜನಿಕ ಸಭೆ ಹಾಗೂ ರೋಡ್ ಶೋ ನಡೆಸುವ ಮೂಲಕ ತಮ್ಮ ಪಕ್ಷದ ಶಕ್ತಿ ಪ್ರದರ್ಶನ ಮಾಡಿದರು.   ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಪಟ್ಟಣದಲ್ಲಿ ಇಂದು KRP ಪಕ್ಷದಿಂದ ಆಯೋಜಿಸಿದ್ದ ಬೃಹತ್ ರೋಡ್ ಶೋ ಹಾಗೂ ಸಾರ್ವಜನಿಕ ಸಭೆಯಲ್ಲಿ ಪಕ್ಷದ ಸಂಸ್ಥಾಪಕ ಜನಾರ್ಧನ ರೆಡ್ಡಿ ಹಾಗೂ ಪತ್ನಿ ಅರುಣಾ ಲಕ್ಷ್ಮಿ ಸೇರಿದಂತೆ ಪಕ್ಷದ ರಾಜ್ಯ ನಾಯಕರು ಭಾಗಿ ಆಗಿದ್ದರು. ಇದರೊಟ್ಟಿಗೆ ಹಿರಿಯೂರು ಕ್ಷೇತ್ರದ ಪ್ರಬಲ ಆಕಾಂಕ್ಷಿ ಆಗಿರುವ ಮಹೇಶ್ ಗನ್ನಾಯಕನಹಳ್ಳಿ ಅವರು ಕೂಡ ಹಾಜರಿದ್ದು, ಬೃಹತ್ ಸಾರ್ವಜನಿಕ ಸಭೆಯ ಯಶಸ್ಸಿಗೆ ಕಾರಣರಾದರು. ಕಾರ್ಯಕ್ರಮದಲ್ಲಿ ಮಾತನಾಡಿದ ಜನಾರ್ಧನ ರೆಡ್ಡಿ ಅವರ ಪತ್ನಿ, ಜನರಿಗೆ ಒಳಿತನ್ನು ಮಾಡಲು ಒಳ್ಳೆಯ ಮನಸಿರಬೇಕು. ನಮ್ಮ ಪತಿ ಮಂತ್ರಿಯಾಗಿದ್ದಾಗ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಯಾರು ಏನೆ ಆರೋಪ‌ ಮಾಡಿದರು ಜನಾರ್ಧನ ರೆಡ್ಡಿ ವಜ್ರ ಇದ್ದಂಗೆ. ಅವರಿಗೆ ಎಷ್ಟೇ ಕಷ್ಟ ಬಂದರು ಗೆದ್ದು ಬಂದಿದ್ದೇವೆ. ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೇಲೆ‌ ಎಲ್ಲರ ಆಶೀರ್ವಾದ ಇರಲಿ. ಆಡಳಿತ ನಮ್ಮದು ಅಧಿಕಾರ‌ ನಿಮ್ಮದು ಎಂದರು.  ಬಸವಣ್ಣನವರ ಸಿದ್ಧಾಂತದ ಮೇಲೆ ನಮ್ಮ ಪಕ್ಷ ನಿಂತಿದೆ. ಸಾಮಾಜಿಕ ನ್ಯಾಯದ ಮೇಲೆ ನಾವು ಪಕ್ಷ‌ ಕಟ್ಟಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಪಾರ ಜನಸ್ತೋಮ ಕಂಡು KRP ಸಂಸ್ಥಾಪಕ ಜನಾರ್ಧನ ರೆಡ್ಡಿ ಸಂಸತ ವ್ಯಕ್ತಪಡಿಸಿದರು‌. ಹಿರಿಯೂರು ಅಂದ್ರೆ ನನ್ನ ಹೃದಯದಿಂದ ಪ್ರೀತಿ ಖುಣ ತೀರಿಸುವ ಉದ್ದೇಶ‌. 2008 ರಲ್ಲಿ ಅಂದಿನ ಬಿಜೆಪಿ ಪಕ್ಷದ ಜವಾಬ್ದಾರಿ ಹೊತ್ತಾಗ ಹಿರಿಯೂರು ಜನರು ಆಶೀರ್ವಾದ ಮಾಡಿದ್ರು. ಹಿರಿಯೂರು ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯ ಸಹಕಾರದಿಂದ ಅಂದು ಬಿಜೆಪಿ ಸರ್ಕಾರ ಬಂದಿತ್ತು‌. ಬಿ.ಎಸ್ ಯಡಿಯೂರಪ್ಪ ಅವರ ಸರ್ಕಾರ ಬರಲಿಕ್ಕೆ ಈ ಕ್ಷೇತ್ರವೇ ಕಾರಣ. ಹಾಗಾಗಿ ಈ ಕ್ಷೇತ್ರದ ಜನರಿಗೆ ತಲೆ ಬಾಗಿಸಿ ನಮಸ್ಕರಿಸುತ್ತೇನೆ. ನಮ್ಮ ಕುಟುಂಬದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಹಣ ಮಾಡಲು ನಾನು ರಾಜಕೀಯಕ್ಕೆ ಬರಲಿಲ್ಲ. ಒಂದಾನೊಂದು ಕಾಲದಲ್ಲಿ ಸುಷ್ಮಾ ಸ್ವರಾಜ್ ಗೋಸ್ಕರ ನಾನು ರಾಜಕೀಯಕ್ಕೆ ಬಂದೆ. ರಾಜಕೀಯ ಬಿಟ್ಟು ಬ್ಯುಸಿನೆಸ್ ಮಾಡಿದ್ರೆ ಮುಖೇಶ್ ಅಂಬಾನಿ ಹಿಂದೆ ಈ ರೆಡ್ಡಿ ಹೆಸರು ಇರೋದು. ಸುಷ್ಮಾ ಸ್ವರಾಜ್ ನನ್ನ ಆಫೀಸ್ ಗೆ ಬಂದು ನೀನು ಬರಬೇಕು ತಮ್ಮ ಎಂದಿದ್ದಕ್ಕೆ ರಾಜಕೀಯಕ್ಕೆ ಬಂದೆ ‌ಎಂದು ಹಳೇಯದನ್ನು ಮೆಲುಕು ಹಾಕಿದರು.

ರಾಜಕೀಯ ಅಂದ್ರೆ ಮೋಸ, ಸುಳ್ಳು, ಬೇರೊಬ್ಬರ ತಲೆ ಮೇಲೆ ತುಳಿದು ಹೋಗುವುದು ರಾಜಕೀಯ. ಆದ್ರೆ ನಾನು ಆ ರೀತಿಯ ರಾಜಕೀಯ ಮಾಡಲಿಲ್ಲ. ನಾನು ಹೇಳಿದ್ದನ್ನೇ ಮಾಡ್ತೀನಿ, ಅದೇ ಜನಾರ್ಧನ ರೆಡ್ಡಿ. ಒಂದು ಮಾತು ಹೇಳಿ ಬೇರೆ ಕೆಲಸ ಮಾಡುವ ವ್ಯಕ್ತಿ ನಾನಲ್ಲ. 12 ವರ್ಷಗಳ ಕಾಲ ಮನೆಯಿಂದ ಹೊರಗೆ ಬರದೇ ಜೈಲಲ್ಲಿ ಇಟ್ಟು ಬಂಧನ ಮಾಡಿದ್ರು. ಎಲ್ಲಿ ರೆಡ್ಡಿ ಸಿಎಂ ಸ್ಥಾನಕ್ಕೆ ಹೋಗ್ತಾನೆ ಎಂದು ಕೆಲವರು ನನಗೆ ಬಲೆ ಹಾಕಿದ್ರು. ಯಾವುದೇ ಸರ್ಕಾರಿ ದುಡ್ಡು ಕಬಳಿಸಿ ನಾನು ಜೈಲಿಗೆ ಹೋಗಲಿಲ್ಲ. 

ಒಂದು ಪಕ್ಷ ಬೆಳೆಯುತ್ತೆ ಎಂದು ಇನ್ನೊಂದು ಪಕ್ಷ ನನ್ನನ್ನು ಬಂಧನ ಮಾಡಿದ್ರು. ಹೊರಗಡೆ ಬಂದಾಗ ಎಲ್ಲರೂ ನನ್ನನ್ನು ನೋಡಿ ಬಹುತೇಕ ಸುಮ್ನೆ ಇದ್ದಾರೆ. ಸಿಎಂ ಆಗುವ ಆಸೆ ಇರೋರು ಎಲ್ಲರೂ ನನ್ನ ದೂರ ಇಡುವ ಕೆಲಸ ಮಾಡಿದ್ರು. ರಾಜಕೀಯವಾಗಿ ಶತೃಗಳು ಕಷ್ಟ ಪಡ್ತಾರೆ ಅಂದ್ರೆ ಒಪ್ಕೊಳ್ಳಬಹುದು. ಆದ್ರೆ ನಮ್ಮವರೇ ಎಂದು ನಂಬಿದವರು ನನಗೆ ದ್ರೋಹ ಮಾಡಿದ್ರು. ಹುಲಿ ದಿನ ಬಂದು ಭೇಟಿ ಆಗಲ್ಲ ಅದಕ್ಕೆ ಹಸಿವಾದಾಗ ಭೇಟೆ ಆಡುತ್ತೆ. ಸಣ್ಣ ಪುಟ್ಟ ಜಿಂಕೆ ಭೇಟೆ ಆಡಲ್ಲ, ಐದಾರು ದಿನಕ್ಕೆ ಆಗುವಷ್ಟು ಬೇಟೆ ಆಡುತ್ತೆ. ಐದು ವರ್ಷ ನಾನು ಮನೆಯಲ್ಲಿ ಸುಮ್ಮನೆ ಕೂತಿರಲಿಲ್ಲ ಎಲ್ಲವನ್ನೂ ನೋಡ್ತಿದ್ದೆ. ಸಾರ್ವಜನಿಕ ಬದುಕಲ್ಲಿ ನಾನು ಬರಬೇಕು ಎಂದಾಗ ಬಳ್ಳಾರಿಯಲ್ಲಿ ಇರಲು ಅವಕಾಶ ಮಾಡ್ಲಿಲ್ಲ.‌ಚುನಾವಣೆ ಹತ್ತಿರ ಬರ್ತಿರೋದ್ರಿಂದ ಬಳ್ಳಾರಿಯಿಂದ ಹೊರಗೆ ಹೋಗ್ತಾನೆ ಎಂದು ಪ್ಲಾನ್ ಮಾಡಿದ್ರು. ನನಗಿನ್ನು 55 ವರ್ಷ,  20 ವರ್ಷ ರಾಜಕೀಯ ಮಾಡುವ ವಯಸ್ಸಿದೆ. ಬೆಂಗಳೂರಿನಲ್ಲಿ ಕೂಡದೇ ಜನರ ಬಳಿ ಹೋಗ್ತೀನಿ ಎಂದು ಹೊಸ ಪಕ್ಷ ಕಟ್ಟಿದೆ.

ಸಿಂಧನೂರಿನಲ್ಲಿ ಜ.6ರಂದು,‌ ಬಳ್ಳಾರಿಯಲ್ಲಿ ಜ.11ರಂದು ಜನಾರ್ದನ ರೆಡ್ಡಿ ಬೃಹತ್ ಸಮಾವೇಶ

ರಾಜಕೀಯದಲ್ಲಿ ಎಷ್ಟೊಂದು ಮಂದಿಗೆ ನೀನು ಸಹಾಯ ಮಾಡಿದೆ. ಈಗ ಈ ರೀತಿ ಆಗ್ತಿದೆ ಎಂದು ಬೇಸರದಿಂದ ನನ್ನ ಶ್ರೀಮತಿ ಜನರ ಬಳಿ ಹೋಗುವ ನಡಿ ಎಂದು ನನ್ನ ಜೊತೆ ಬಂದಿದ್ದಾಳೆ ಎಂದರು. ಗುಡಿಸಲು ರಹಿತ ಹಿರಿಯೂರು ಕ್ಷೇತ್ರ ಮಾಡುವುದೇ ನನ್ನ ಗುರಿ. ನಾನು ಆಣೆ ಪ್ರಮಾಣ ಮಾಡಿದ ರಾಜಕಾರಣಿ ನಾನಲ್ಲ. ಟೀ ಕುಡಿಯುವಾಗ ಇದು ಅಮೃತ ಎಂದು ಕುಡಿದು ಯಾಮಾರಿಸೋ ರಾಜಕಾರಣಿಗಳು ಇದ್ದಾರೆ. ಪ್ರಾಣ ಬೇಕಾದ್ರೆ ಕೊಡ್ತೀನಿ ಕೊಟ್ಟ ಮಾತು ತಪ್ಪುವ ರೆಡ್ಡಿ ನಾನಲ್ಲ. ಸಕ್ಕರೆ ಕಾರ್ಖಾನೆಯನ್ನು ಈ ಕ್ಷೇತ್ರಕ್ಕೆ ನಿರ್ಮಾಣ ಮಾಡ್ತೀನಿ. ನಾನು ಈಗಾಗಲೇ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ನನ್ನ ಪತ್ನಿ ಬಳ್ಳಾರಿ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡೋದು ಖಚಿತ. ಹಿರಿಯೂರು ಕ್ಷೇತ್ರಕ್ಕೆ ಹೆಚ್ ಮಹೇಶ್ ಗನ್ನಾಯಕನಹಳ್ಳಿ ಅವರನ್ನು ಅಭ್ಯರ್ಥಿ ಆಗಿ ರೆಡ್ಡಿ ಘೋಷಣೆ. ನೂರು ದಿನ ಚುನಾವಣೆ ಇದೆ ಯಾರೇ ಅಮೀಷ ತೋರಿಸಿದ್ರು ತಲೆ ಬಾಗಬೇಡಿ. ಹಿರಿಯೂರು ಕ್ಷೇತ್ರದ ಸ್ವಾಭಿಮಾನ ಎಂದು ತಿಳಿದು ಮಹೇಶ್ ಗೆ ಆಶೀರ್ವಾದ ಮಾಡಿ ಎಂದು ಜನರಲ್ಲಿ ರೆಡ್ಡಿ ಮನವಿ ಮಾಡಿದರು.

ಸದ್ದು ಗದ್ದಲವಿಲ್ಲದೆ ಶುರುವಾಗಿದೆ ಗಾಲಿ ರೆಡ್ಡಿ ಹವಾ, ಇತರ ಪಕ್ಷದಲ್ಲಿ ಬೇಸರಗೊಂಡವರೇ ಟಾರ್ಗೆಟ್!

 ಒಟ್ಟಾರೆಯಾಗಿ ಜಿಲ್ಲೆಗೆ ಮೊದಲ ಬಾರಿಗೆ KRP ಪಕ್ಷದ ನಾಯಕರು ಆಗಿಮಿಸಿದ್ರು ಕೂಡ ಹಿರಿಯೂರಿನಲ್ಲಿ ಅದ್ದೂರಿ ರೆಸ್ಪಾನ್ಸ್ ಸಿಕ್ಕಿತು ಅಂದ್ರೆ ತಪ್ಪಾಗಲಿಕ್ಕಿಲ್ಲ. ಆದ್ರೆ ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಈ ಜನಸಂಖ್ಯೆ ಮತಗಳಾಗಿ ಹೇಗೆ ಬದಲಾಗ್ತಾವೆ ಎಂಬುದನ್ನು ಕಾದು ನೋಡಬೇಕಿದೆ.

click me!