
ಬೆಂಗಳೂರು (ಡಿ.22): ದೆಹಲಿಯಲ್ಲಿ ಬೀಡುಬಿಟ್ಟು ತೀವ್ರ ಒತ್ತಡ ಹಾಕಿದ ಕಾರ್ಯಕರ್ತರ ತಂತ್ರ ಫಲಿಸಿದೆ. ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಗೆ ಕೇವಲ ಶಾಸಕರ ಹೆಸರು ಸೂಚಿಸಿ ಸಿದ್ಧಪಡಿಸಿದ್ದ ಪಟ್ಟಿಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದ್ದು, ಶಾಸಕರ ಜತೆಗೆ ಕಾರ್ಯಕರ್ತರಿಗೂ (ಪಕ್ಷದ ಮುಖಂಡರು) ಅವಕಾಶ ನೀಡುವಂತೆ ತಾಕೀತು ಮಾಡಿದೆ. ಪರಿಣಾಮ- ಶಾಸಕರ ಪಟ್ಟಿಯ ಜತೆಗೆ ಕಾರ್ಯಕರ್ತರ ಹೆಸರನ್ನು ಒಳಗೊಂಡ ಸಮಗ್ರ ಪಟ್ಟಿಯನ್ನು ಸಿದ್ಧಪಡಿಸುವ ಪ್ರಕ್ರಿಯೆಯನ್ನು ಇನ್ನು ಮೇಲೆ ಕಾಂಗ್ರೆಸ್ ನಾಯಕತ್ವ ನಡೆಸಬೇಕಿದೆ. ಹೀಗಾಗಿ ನಿಗಮ-ಮಂಡಳಿ ನೇಮಕ ಎಂಬುದು ಅನಿರ್ದಿಷ್ಟ ಕಾಲ ಮುಂದಕ್ಕೆ ಹೋಗಿದೆ.
ಹಲವು ತಿಂಗಳ ಸಿದ್ಧತೆ ಬಳಿಕ ರಾಜ್ಯ ನಾಯಕರು ನವೆಂಬರ್ ಅಂತಿಮ ವಾರದಲ್ಲಿ 39 ಮಂದಿ ಶಾಸಕರ ಪಟ್ಟಿಯನ್ನು ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸು ಮಾಡಿದ್ದರು. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಚಿವರ ತಂಡ ಸೋಮವಾರ ಸಂಜೆಯೇ ದೆಹಲಿಗೆ ತಲುಪಿ ಮಂಗಳವಾರ ಹಾಗೂ ಬುಧವಾರ ಎರಡೂ ದಿನ ಹೈಕಮಾಂಡ್ ಜೊತೆಗೆ ಅಂತಿಮ ಹಂತದ ಚರ್ಚೆ ನಡೆಸಿತ್ತು.
ಹಿಂದಿನ ಕೋವಿಡ್ ತಪ್ಪು ಮತ್ತೆ ಆಗಕೂಡದು: ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠರಾದ ರಾಹುಲ್‌ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗೆ ವಿವಿಧ ಹಂತದ ಸಭೆಗಳನ್ನು ನಡೆಸಲಾಗಿತ್ತು. ಇದೇ ವೇಳೆ ತಮಗೂ ಅವಕಾಶ ನೀಡುವಂತೆ ಹೈಕಮಾಂಡ್ ಮೇಲೆ ಒತ್ತಡ ಹಾಕಲು ಕಾಂಗ್ರೆಸ್ ಕಾರ್ಯಕರ್ತರ ದೊಡ್ಡ ದಂಡೇ ದೆಹಲಿಗೆ ತೆರಳಿತ್ತು. ವರಿಷ್ಠ ರಾಹುಲ್ ಗಾಂಧಿ ಅವರವರೆಗೂ ಈ ಮುಖಂಡರು ದೂರು ಒಯ್ದಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕರಿಗೆ ಮಾತ್ರವಲ್ಲ, ಮುಖಂಡರಿಗೂ ಅವಕಾಶ ನೀಡಬೇಕು ಎಂದು ರಾಹುಲ್ ಗಾಂಧಿ ಸೂಚನೆ ನೀಡಿದ್ದರು ಎನ್ನಲಾಗಿದೆ.
ತಪ್ಪು ಸಂದೇಶ ರವಾನೆ: ಈ ಹಿನ್ನೆಲೆಯಲ್ಲಿ ರಾಜ್ಯ ನಾಯಕತ್ವದೊಂದಿಗೆ ನಡೆಸಿದ ಸಭೆಯಲ್ಲಿ ಪಕ್ಷದ ವರಿಷ್ಠರು ಕೇವಲ ಶಾಸಕರ ಪಟ್ಟಿಗೆ ಒಪ್ಪಿಗೆ ನೀಡಲು ಮುಂದಾಗಲಿಲ್ಲ. ಚುನಾವಣೆಯಲ್ಲಿ ದುಡಿದಿರುವ ಕಾರ್ಯಕರ್ತರು ಹಾಗೂ ಮುಖಂಡರಿಗೆ ಪ್ರಾಧಾನ್ಯತೆ ನೀಡದಿದ್ದರೆ ತಪ್ಪು ಸಂದೇಶ ರವಾನೆಯಾಗುತ್ತದೆ. ಮುಂದಿನ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದು ಪಕ್ಷಕ್ಕೆ ಸೂಕ್ತವಲ್ಲ. ಹೀಗಾಗಿ ಕಾರ್ಯಕರ್ತರು ಹಾಗೂ ಮುಖಂಡರಿಗೆ ಅವಕಾಶ ನೀಡಿ ಅಂತಿಮ ಪಟ್ಟಿಯನ್ನು ಸಲ್ಲಿಸಿ. ಬಳಿಕವಷ್ಟೇ ಮೊದಲ ಪಟ್ಟಿ ಬಿಡುಗಡೆ ಮಾಡೋಣ ಎಂದು ಸೂಚಿಸಿದರು ಎನ್ನಲಾಗಿದೆ. ಇನ್ನು ಹೈಕಮಾಂಡ್ ಸೂಚನೆಯಂತೆ ರಾಜ್ಯ ನಾಯಕತ್ವ ಇನ್ನಷ್ಟೇ ಮುಖಂಡರು ಹಾಗೂ ಕಾರ್ಯಕರ್ತರನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕಿದೆ. ಹೀಗಾಗಿ ನಿಗಮ-ಮಂಡಳಿ ನೇಮಕ ಅನಿರ್ದಿಷ್ಟಾವಧಿಗೆ ಮುಂದೂಡಿದಂತಾಗಿದೆ.
ಕಾರ್ಯಕರ್ತರಿಗೂ ಅವಕಾಶ: ದೆಹಲಿಯ ಎಐಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೆಂಗಳೂರಿನಲ್ಲಿ ಹಲವು ಸಭೆ ನಡೆಸಿ ಪಟ್ಟಿ ತಯಾರಿಸಲಾಗಿತ್ತು. ನಮ್ಮ ಪಟ್ಟಿಯನ್ನು ಹೈಕಮಾಂಡ್‌ಗೆ ನೀಡಿದ್ದೇವೆ. ಜತೆಗೆ ಚರ್ಚೆಯನ್ನೂ ನಡೆಸಿದ್ದು ಶೀಘ್ರ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಈ ವೇಳೆ ಕಾರ್ಯಕರ್ತರಿಗೂ ಅವಕಾಶ ನೀಡಲಾಗುವುದು. ಮೊದಲಿನಿಂದಲೂ ಕಾರ್ಯಕರ್ತರಿಗೆ ಅವಕಾಶ ನೀಡಬೇಕೆಂಬ ಪ್ರಸ್ತಾಪವಿದ್ದು, ಇದಕ್ಕೆ ನಮ್ಮ ವಿರೋಧವಿಲ್ಲ. ಈ ಪಟ್ಟಿ ಬಿಡುಗಡೆ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಮಾಡಲಿದೆ ಎಂದರು.
ನಿಗಮ ಮಂಡಳಿಗೆ ಶೀಘ್ರವೇ ನೇಮಕಾತಿ: ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಇನ್ನೂ ಪಟ್ಟಿ ನೋಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಾವು ಕಳುಹಿಸಿದ ನಿಗಮ-ಮಂಡಳಿ ಪಟ್ಟಿಯನ್ನು ಇನ್ನೂ ವರಿಷ್ಠರು ನೋಡಿಲ್ಲ. ನೋಡಿ ಪ್ರತಿಕ್ರಿಯಿಸುವುದಾಗಿ ತಿಳಿಸಿದ್ದಾರೆ. ಎರಡು ಮೂರು ದಿನದಲ್ಲಿ ಹೈಕಮಾಂಡ್ ನಾಯಕರು ಪ್ರತಿಕ್ರಿಯೆ ನೀಡಬಹುದು. ಈಗ ಲೋಕಸಭೆ ಚುನಾವಣೆ ತಯಾರಿ ಬಗ್ಗೆ ಚರ್ಚಿಸಿದ್ದೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.