From the India Gate: ಸಮಾಜವಾದಿ ಪಕ್ಷಕ್ಕೆ ಮತ್ತಷ್ಟು ಬಲ; ಭಾರತ್‌ ಜೋಡೋ ಯಾತ್ರೆ ಯಶಸ್ಸಿನ ಗುಟ್ಟು..!

By Suvarna NewsFirst Published Dec 26, 2022, 12:32 PM IST
Highlights

ಅಧಿಕಾರ ಹಿಡಿಯಲು ರಾಜಕೀಯ ನಾಯಕರು ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಅದೇ ರೀತಿ, ಹಿಂಬಾಗಿಲಿನಲ್ಲಿ, ಅಂದರೆ ಜನ ಸಾಮಾನ್ಯರ ಅರಿವಿಗೆ ಬರದೆ ನಾನಾ ಘಟನೆಗಳು ನಡೆಯುತ್ತವೆ. ರಾಜಕೀಯದಲ್ಲಿ ಅಭಿಪ್ರಾಯಗಳು, ಪಿತೂರಿಗಳು, ಅಧಿಕಾರದ ಆಟಗಳು ಹಾಗೂ ಆಂತರಿಕ ಜಗಳಗಳ ಮಹಾಪೂರವೇ ನಡೆಯುತ್ತದೆ. ದೇಶಾದ್ಯಂತ ಇತ್ತೀಚಿನ ರಾಜಕೀಯ ಹಾಗೂ ಅಧಿಕಾರಿಶಾಹಿ ವರ್ಗದ ಬೆಳವಣಿಗೆಗಳ ಬಗ್ಗೆ ಏಷ್ಯಾನೆಟ್‌ನ ಸಂಪೂರ್ಣ ಮಾಹಿತಿಯನ್ನೊಳಗೊಂಡ ಇಂಡಿಯಾ ಗೇಟ್ ಕಾಲಂ ಇಲ್ಲಿದೆ.

ಅಖಿಲೇಶ್‌ ಕುಟುಂಬದಲ್ಲಿ ಹ್ಯಾಪಿ ಎಂಡಿಂಗ್..!

ಆದದ್ದೆಲ್ಲವೂ ಒಳಿತೇ ಆಯಿತು ಎನ್ನುವಂತೆ ಈಗ ಅಖಿಲೇಶ್‌ ಯಾದವ್‌ (Akhilesh Yadav) ಕುಟುಂಬಕ್ಕೂ ಕೊನೆಯಲ್ಲಿ ಒಳ್ಳೆಯದೇ ಆಗುತ್ತಿದೆ. ಅಂದ್ರೆ, ನಾವು ಹೇಳುತ್ತಿರುವುದು ರಾಜಕೀಯ (Political) ವಿಚಾರದಲ್ಲಿ. ಇತ್ತೀಚೆಗಷ್ಟೇ, ಉತ್ತರ ಪ್ರದೇಶ (Uttar Pradesh) ಮಾಜಿ ಸಿಎಂ ಅಖಿಲೇಶ್‌ ಯಾದವ್‌ ಅವರ ಪತ್ನಿ ಡಿಂಪಲ್‌ ಯಾದವ್‌ (Dimple Yadav) ತನ್ನ ಮಾವನ ಸ್ವಕ್ಷೇತ್ರವಾದ ಮೈನ್‌ಪುರಿ ಲೋಕಸಭಾ ಉಪ ಚುನಾವಣೆಯಲ್ಲಿ ಭರ್ಜರಿ ದಿಗ್ವಿಜಯ ಸಾಧಿಸಿದ್ದರು. ಆ ಚುನಾವಣೆ ವೇಳೆ ಅಖಿಲೇಶ್‌ ಯಾದವ್‌ ಚಿಕ್ಕಪ್ಪ ಶಿವಪಾಲ್‌ ಯಾದವ್‌(Shivpal Yadav)  ಸಹ ಡಿಂಪಲ್‌ ಯಾದವ್‌ ಗೆಲುವಿಗೆ ಕಾರಣರಾಗಿದ್ದರು. ಅಖಿಲೇಶ್‌ ಕುಟುಂಬದ ಜತೆ ದೂರವಾಗಿ ಪಕ್ಷದಿಂದಲೇ ದೂರವಾಗಿದ್ದ ಶಿವಪಾಲ್‌ ಹೊಸ ಪಕ್ಷವನ್ನೂ ಕಟ್ಟಿದ್ದರು. ಆದರೆ, ಅಣ್ಣನ ಕ್ಷೇತ್ರ ಬಿಜೆಪಿ ಪಾಲಾಗಲು ಒಲ್ಲೆ ಎಂದ ಶಿವಪಾಲ್‌ ಡಿಂಪಲ್‌ ಯಾದವ್‌ ಪರ ಪ್ರಚಾರಕ್ಕಿಳಿದು ಭರ್ಜರಿ ಗೆಲುವಿಗೆ ಕಾರಣವಾಗಿದ್ದಾರೆ. ಈ ಮೂಲಕ ಅಖಿಲೇಶ್‌ ಅವರಿಗೆ ತಮ್ಮ ಚಿಕ್ಕಪ್ಪನ ಶಕ್ತಿಯ ಅರಿವಾಗಿರಬಹುದು.

ಇನ್ನು, ಶಿವಪಾಲ್‌ ಯಾದವ್‌ ಹಾಗೂ ಅವರ ಪಕ್ಷ ಸಮಾಜವಾದಿ ಪಕ್ಷಕ್ಕೆ ಮರಳಿದ್ದಲ್ಲದೆ, ಸದ್ಯದಲ್ಲೇ ಸಮಾಜವಾದಿ ಪಕ್ಷದಲ್ಲಿ ಅವರಿಗೆ ಒಳ್ಳೆಯ ಸ್ಥಾನ ಸಿಗಲಿದೆ ಎಂದೂ ಹೇಳಲಾಗುತ್ತಿದೆ. ಚುನಾವಣೆಯ ಫಲಿತಾಂಶ ಬಂದ ಬಳಿಕ ಅಖಿಲೇಶ್‌ ಚಿಕ್ಕಪ್ಪನ ಕಾಲು ಮುಟ್ಟಿ ನಮಸ್ಕರಿಸಿದ್ದನ್ನು ಮರೆಯಲಾಗದು. ಹಾಗೆ, ಶಿವಪಾಲ್‌ ಸಹ ಖುಷಿಯಾಗಿದ್ದು, ಮತ್ತೆ ಎಸ್‌ಪಿಯತ್ತ ಮುಖ ಮಾಡಿದ್ದಾರೆ. ರಾಜಕೀಯದಲ್ಲಿ ಈ ರೀತಿ ಪ್ರಾಮುಖ್ಯತೆ ಸಿಗಲೆಂದೇ ಅವರು ಮುಲಾಯಂ ಸಿಂಗ್ ಯಾದವ್‌ ಜತೆ ಜಗಳವಾಡುತ್ತಿದ್ದರು. 2024ರ ಸಂಸತ್‌ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶಿವಪಾಲ್‌ ಅವರ ಮುಂದಿನ ನಡೆ ಬಗ್ಗೆ ಎಲ್ಲರೂ ಕುತೂಹಲದ ಕಣ್ಣಿಡಬಹುದು. 

ಇದನ್ನು ಓದಿ: India Gate ಚಳಿಗಾಲ ಅಧಿವೇಶನಕ್ಕೆ ಬ್ರೇಕ್, ತೆಲಂಗಾಣದಲ್ಲಿ ರಾಜಕೀಯ ತಳಮಳ!

ಓಂ ಪ್ರಕಾಶ್‌ ಮತ್ತೆ ಬಿಜೆಪಿಗೆ..!
ಉರುಳುವ ಕಲ್ಲಿನಂತೆ ಒಂದು ಪಕ್ಷದಿಂದ ಮತ್ತೊಂದು ಪಕ್ಷ ಬದಲಿಸುವ ವಿಚಾರದಲ್ಲಿ ಖ್ಯಾತಿ ಹೊಂದಿರುವ ಓಂ ಪ್ರಕಾಶ್‌ ಮತ್ತೆ ತನ್ನ ಹಳೆಯ ಪಕ್ಷ ಅಂದರೆ ಬಿಜೆಪಿಗೆ ಮರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇವರು ಅಟಲ್‌ ಬಿಹಾರಿ ವಾಜಪೇಯಿ ಫೌಂಡೇಶನ್‌ನ ಸಹ ಮುಖ್ಯಸ್ಥರಾಗೂ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬಿಜೆಪಿಗೆ ವಾಪಸಾಗಲು ಅಂತಿಮ ಒಪ್ಪಿಗೆಗೆ ಕಾಯುತ್ತಿದ್ದು, ಈಗಾಗಲೇ ಕಮಲ ಪಕ್ಷದ ಕದ ತಟ್ಟುತ್ತಿದ್ದಾರಂತೆ. 

ತಾನಿರುವ ಪಕ್ಷದಲ್ಲಿ ತನಗೆ ಸರಿಯಾದ ಬೆಂಬಲ ಸಿಗುತ್ತಿಲ್ಲವೆಂದಾದರೆ, ಅವರು ತಮ್ಮ ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿಯೇ ವಾಗ್ಯುದ್ಧಕ್ಕೆ ಇಳಿಯುತ್ತಾರೆ. ಕಳೆದ ಸರ್ಕಾರದಲ್ಲಿ ಸಚಿವರಾಗಿದ್ದಾಗಲೂ ತನ್ನ ಪಕ್ಷದ ಸದಸ್ಯರ ಮೇಲೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಇನ್ನು, 2024ರ ಲೋಕಸಭೆ ಚುನಾವಣೆಗೂ ಮುನ್ನ ಈ ಬಾರಿಯೂ ಈ ಗಾಳವನ್ನು ಯಾವುದಾದರೂ ದೊಡ್ಡ ಮೀನು ನುಂಗುತ್ತದಾ ಎನ್ನುವುದನ್ನು ಕಾದು ನೋಡಬೇಕಾಗಿದೆ. 

ಇದನ್ನೂ ಓದಿ: FROM THE INDIA GATE: ಸಂಸದ್‌ ಟಿವಿಯಲ್ಲಿ ಪಟ್ಟು, ದೇವೇಗೌಡ-ಮೋದಿ ಭೇಟಿ ಹಿಂದಿನ ಗುಟ್ಟು!

 ಸರ್ಕಾರಕ್ಕೆ ಭಯ ಹುಟ್ಟಿಸೋ ಬಾಬಾ..!
 ರಾಜಸ್ಥಾನದಲ್ಲಿ ಈ ಹೆಸರು ಸರ್ಕಾರಕ್ಕೆ ಭಯವನ್ನು ಹುಟ್ಟಿಸುತ್ತದೆ. ಬಾಬಾ ಬಲಕ್‌ ನಾಥ್‌ ಎನ್ನುವ ಬಿಜೆಪಿ ನಾಯಕ ಯಾವುದೇ ರಾಜಕೀಯ ಹೆಜ್ಜೆ ಇಡಲೂ ರೆಡಿ ಇರುತ್ತಾರೆ. ಈ ಹಿನ್ನೆಲೆ ಈ ಬಿಜೆಪಿ ನಾಯಕ ರಾಹುಲ್‌ ಗಾಂಧಿಯವರ (Rahul Gandhi) ಭಾರತ್‌ ಜೋಡೋ ಯಾತ್ರೆಗೆ (Bharat Jodo Yatra) ತೊಂದರೆ ನೀಡುವ ಭಯದಿಂದ ಅವರ ಕ್ಷೇತ್ರದ ಅಭಿವೃದ್ಧಿಗೆ ಅಶೋಕ್‌ ಗೆಹ್ಲೋಟ್‌ 20 ಲಕ್ಷ ರೂ. ಖರ್ಚು ಮಾಡಿದ್ದಾರೆ. ಈ ಹಣದಲ್ಲಿ ರಸ್ತೆ ಅಭಿವೃದ್ಧಿ, ಕ್ಯಾಮೆರಾಗಳನ್ನುಇನ್ಸ್ಟಾಲ್‌ ಮಾಡಿರುವುದು ಹಾಗೂ ಸಮುದಾಯ ಕಟ್ಟಡಗಳನ್ನು ರಿಪೇರಿ ಮಾಡಿದ್ದಾರೆ. ಈ ಕಾರಣದಿಂದ ದೌಸಾ ಪ್ರದೇಶದಲ್ಲಿ ಯಾತ್ರೆ ಸರಾಗವಾಗಿ ಸಾಗಿದೆಯಂತೆ. 
 
ಮಹಿಳಾ ಶಕ್ತಿ..!
ರಾಜಸ್ಥಾನದಲ್ಲಿ ನಡೆದ ಭಾರತ್‌ ಜೋಡೋ ಯಾತ್ರೆಯಲ್ಲಿ ಈ ಮಹಿಳೆ ಭಾಗಿಯಾಗಿದ್ದು, ರಾಜಕೀಯ ವಲಯದಲ್ಲಿ ಭಾರಿ ಗುಸುಗುಸುಗೆ ಕಾರಣವಾಗಿದೆಯಂತೆ. ಈ ಹಿಂದೆ ಕಳೆದುಕೊಂಡಿದ್ದ ತನ್ನ ಕುಟುಂಬದ ಇಮೇಜ್‌ ಅನ್ನು ಮತ್ತೆ ಧಕ್ಕಿಸಿಕೊಳ್ಳುವ ಪ್ರಯತ್ನದಲ್ಲಿರುವ ಮಹಿಳಾ ನಾಯಕಿ, ಐದು ಬಾರಿ ಗಾಂಧಿ ಕುಟುಂಬದ ಜತೆ ಹತ್ತಿರದಲ್ಲಿ ಕಾಣಿಸಿಕೊಂಡರು. ಅಲ್ಲದೆ, ಕಾಂಗ್ರೆಸ್‌ನ ಮಾಜಿ ಅಧಿನಾಯಕಿ ಸೋನಿಯಾ ಗಾಂಧಿ ಅವರೊಂದಿಗೂ ಸೆಲ್ಫಿ ತೆಗೆಸಿಕೊಂಡಿದ್ದಾರೆ. ಸದ್ಯ ಇಮೇಜ್‌ ಬೆಳೆಸಿಕೊಳ್ಳುತ್ತಿರುವ ಇವರು ರಾಜಸ್ಥಾನದ ಭವಿಷ್ಯದ ಮುಖ್ಯಮಂತ್ರಿ ಅಭ್ಯರ್ಥಿ ಆದರೂ ಅಚ್ಚರಿ ಇಲ್ಲ ಎನ್ನಬಹುದು. 

click me!