ನಾನು ಮುಂಚೆಯಿಂದಲೂ ಸ್ನೇಹಕ್ಕೆ ಗೌರವ ಕೊಟ್ಟ ವ್ಯಕ್ತಿ. ಜನಾರ್ಧನ ರೆಡ್ಡಿ ಜತೆಗಿನ ಸ್ನೇಹ ರಾಜಕೀಯ ಹೊರತಾದದ್ದು. ಆದರೆ, ಪಕ್ಷ ನನಗೆ ತಾಯಿಗೆ ಸಮಾನ. ಪಕ್ಷ ಹಾಗೂ ಸ್ನೇಹವನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತೇನೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ವರದಿ: ಭರತ್ ರಾಜ್ ಕಲ್ಲಡ್ಕ, ಏಷ್ಯಾನೆಟ್ ಸುವರ್ಣನ್ಯೂಸ್
ಉತ್ತರ ಕನ್ನಡ (ಡಿ.9): ನಾನು ಮುಂಚೆಯಿಂದಲೂ ಸ್ನೇಹಕ್ಕೆ ಗೌರವ ಕೊಟ್ಟ ವ್ಯಕ್ತಿ. ಜನಾರ್ಧನ ರೆಡ್ಡಿ ಜತೆಗಿನ ಸ್ನೇಹ ರಾಜಕೀಯ ಹೊರತಾದದ್ದು. ಆದರೆ, ಪಕ್ಷ ನನಗೆ ತಾಯಿಗೆ ಸಮಾನ. ಪಕ್ಷ ಹಾಗೂ ಸ್ನೇಹವನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತೇನೆ ಎಂದು ಯಲ್ಲಾಪುರದ ನಂದೊಳ್ಳಿಯಲ್ಲಿ ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಸಚಿವ ಶ್ರೀರಾಮುಲು ಹೇಳಿದರು. ಮಾಧ್ಯಮದ ಜತೆ ಮಾತನಾಡಿದ ಅವರು, ಸ್ನೇಹವೇ ಬೇರೆ ರಾಜಕಾರಣವೇ ಬೇರೆ ಎರಡನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೇನೆ. ಬಿಜೆಪಿ ಹಿಂದಿನಿಂದಲೂ ಶಿಸ್ತಿನ ಪಾಠ ಮಾಡಿದೆ. ಸ್ನೇಹಕ್ಕೆ ಯಾವತ್ತೂ ಚಿರ ಋಣಿ ಅದನ್ನು ಬಿಟ್ಟುಕೊಡಲು ಆಗುವುದಿಲ್ಲ, ಪಾರ್ಟಿ ನನ್ನ ತಾಯಿಗೆ ಸಮ ಅದನ್ನೂ ಯಾವತ್ತೂ ಬಿಟ್ಟುಕೊಡಲು ಸಾಧ್ಯವಿಲ್ಲ. ಎರಡನ್ನೂ ಸಮಾನವಾಗಿ ನೋಡುತ್ತೇನೆ. ಜನಾರ್ಧನ ರೆಡ್ಡಿಯನ್ನು ಪಕ್ಷಕ್ಕೆ ಮರಳಿ ಕರೆತರುವ ವಿಚಾರದಲ್ಲಿ ಪಕ್ಷ ತೀರ್ಮಾನ ಮಾಡುತ್ತದೆ ಎಂದರು.
ಇನ್ನು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೇಳುತ್ತದೆಯೋ ಆ ಕ್ಷೇತ್ರದಿಂದ ಸ್ಪರ್ದಿಸುತ್ತೇನೆ. ಈವರೆಗೂ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಸೂಚನೆ ನೀಡಿಲ್ಲ. ಪಕ್ಷ ಹೇಳಿದ ಕ್ಷೇತ್ರದಿಂದ ಸ್ಪರ್ದಿಸುತ್ತೇನೆ ಎಂದ ಅವರು ಮುಂದೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೇ ಎಂಬ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿ, ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ಬುಡಕಟ್ಟು ಸಮುದಾಯಕ್ಕೆ ಸೇರಿದ ನನ್ನನ್ನು ನಾಲ್ಕನೇ ಬಾರಿ ಮಂತ್ರಿ ಮಾಡಲು ಅವಕಾಶ ನೀಡಿದೆ. ನಮ್ಮ ಉದ್ದೇಶ ಇಷ್ಟೇ ಪಾರ್ಟಿ ಏನು ತೀರ್ಮಾನ ಮಾಡುತ್ತೋ ಅದಕ್ಕೆ ನಾವು ಬದ್ದರಾಗಿದ್ದೇವೆ ಎಂದರು.
ರೆಡ್ಡಿ ಸ್ನೇಹ, ಪಕ್ಷ ಸರಿದೂಗಿಸಿಕೊಂಡು ಹೋಗುತ್ತೇನೆ: ಸಚಿವ ಶ್ರೀರಾಮುಲು
ಇನ್ನು ಕಾಂಗ್ರೆಸ್ ನವರು ಸೋತು ಸುಣ್ಣವಾಗಿದ್ದಾರೆ. ಸಿದ್ದರಾಮಯ್ಯ ,ಡಿಕೆಶಿ ಒಂದೊಂದು ದಿಕ್ಕಿಗೆ ಓಡುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತ ಹಗಲು ಕನಸು ಕಾಣುತಿದ್ದಾರೆ. ಎಲ್ಲಾ ಸರ್ವೆಗಳನ್ನು ನೋಡಿದ್ರೆ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ. ಕೆಲವೊಂದು ಕಡೆ ಬಿದ್ದಿರಬಹುದು. ಆದರೆ, ಚುನಾವಣೆಗೆ ನಾಲ್ಕೈದು ತಿಂಗಳು ಇರುವ ಕಾರಣ ಎಲ್ಲವನ್ನೂ ಸರಿ ಮಾಡಿಕೊಳ್ಳುತ್ತೇವೆ. ಕಾಂಗ್ರೆಸ್ ನ ಹಗಲು ಕನಸನ್ನು ನನಸಾಗಲು ಬಿಡುವುದಿಲ್ಲ. 2023ರಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವಂತೆ ಮಾಡುತ್ತೇವೆ ಎಂದರು.
ರಾಮುಲು ಪಂಚವಟಿಯಲ್ಲಿ ಜನಾರ್ದನ ರೆಡ್ಡಿ ವಾಸ್ತವ್ಯ, ದೇಗುಲಗಳಿಗೆ ಭೇಟಿ
ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವ ವಿಚಾರ ಸಂಬಂಧಿಸಿ ಪ್ರತಿಕ್ರಯಿಸಿದ ಅವರು, ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಮಾಹಿತಿ ನಮಗಿಲ್ಲ. ಹಿರಿಯ ಶಾಸಕರನ್ನು, ಸಚಿವರನ್ನು ಕೈ ಬಿಟ್ಟು, ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಪಕ್ಷದಿಂದ ಯಾವುದೇ ಸೂಚನೆಯಿಲ್ಲ. ಪಕ್ಷ ಯಾವ ಅಂತಿಮ ತೀರ್ಮಾನ ಕೈಗೊಳ್ತದೆಯೋ ಅದಕ್ಕೆ ನಾವು ಬದ್ಧರಾಗಿದ್ದೇವೆ. ಯಾವುದೇ ರೀತಿಯಲ್ಲಿ ಮೂಲ ಬಿಜೆಪಿಗರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಎಲ್ಲರನ್ನೂ ಒಟ್ಟಾಗಿ ಒಗ್ಗಟ್ಟಾಗಿ ಕರೆದುಕೊಂಡು ಈ ಚುನಾವಣೆ ಎದುರಿಸುವ ಕೆಲಸ ಮಾಡ್ತೇವೆ. ಕಾಂಗ್ರೆಸನ್ನು ಬುಡ ಸಮೇತ ಕಿತ್ತು ಹಾಕುವ ಕೆಲಸವನ್ನು ಮಾಡ್ತೇವೆ, ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.