ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಎಲ್‌ಕೆಜಿಯಿಂದ ಪಿಯುಸಿವರೆಗೆ ಫ್ರೀ ಶಿಕ್ಷಣ: ಎಚ್‌ಡಿಕೆ ಭರವಸೆ

By Kannadaprabha News  |  First Published Feb 1, 2023, 8:51 AM IST

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಮಕ್ಕಳಿಗೆ ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.


ದಾವಣಗೆರೆ (ಫೆ.01): ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಮಕ್ಕಳಿಗೆ ಎಲ್‌ಕೆಜಿಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು. ಜೊತೆಗೆ, ಈಗಿರುವ ಕೃಷಿ ವಿಮೆ ಯೋಜನೆಯಲ್ಲಿ ಬದಲಾವಣೆ ಮಾಡಿ ಹೊಸ ರೂಪದಲ್ಲಿ ಜಾರಿಗೊಳಿಸಲಾಗುವುದು. ತೆಲಂಗಾಣ ಮಾದರಿ ‘ರೈತ ಬಂಧು ಯೋಜನೆ’ ತಂದು ಪ್ರತಿ ರೈತರಿಗೆ ಎಕರೆಗೆ 10 ಸಾವಿರ ರು. ನೀಡುವ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ.

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಂಡಜ್ಜಿಯಲ್ಲಿ ಮಂಗಳವಾರ ‘ಪಂಚರತ್ನ ರಥಯಾತ್ರೆ’ ಅಂಗವಾಗಿ ನಡೆದ ಬಹಿರಂಗ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಅಧಿಕಾರಕ್ಕೆ ಬಂದರೆ ‘ಪಂಚರತ್ನ’ದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸುವುದೇ ನನ್ನ ಗುರಿ. ರೈತರ, ಜನ ಸಾಮಾನ್ಯರ, ಬಡವರ ಸಂಕಷ್ಟಪರಿಹರಿಸುವ ಕೆಲಸ ಮಾಡುತ್ತೇನೆ. ಬಡವರಿಗೆ 5 ಲಕ್ಷ ರು. ಮೌಲ್ಯದ ಉಚಿತ ಮನೆ ವಿತರಿಸುತ್ತೇವೆ. ಪ್ರತಿ ಕುಟುಂಬದ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ದ್ವಿತೀಯ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡುತ್ತೇವೆ. ತೆಲಂಗಾಣ ಮಾದರಿಯಲ್ಲಿ ರೈತಬಂಧು ಕಾರ್ಯಕ್ರಮ ಜಾರಿಗೊಳಿಸಿ, ಬಿತ್ತನೆ ಕಾಲಕ್ಕೆ ಸರಿಯಾಗಿ 10 ಸಾವಿರ ರು. ನೀಡುತ್ತೇವೆ. 

Tap to resize

Latest Videos

ಜೆಡಿಎಸ್‌ ಅಧಿಕಾರಕ್ಕೆ ಬಂದರೆ ವೃದ್ಧರಿಗೆ 5000, ರೈತರಿಗೆ ಎಕರೆಗೆ ವರ್ಷಕ್ಕೊಮ್ಮೆ 10000: ಎಚ್‌ಡಿಕೆ ಘೋಷಣೆ

ಪ್ರತಿ ಎಕರೆಗೆ 10 ಸಾವಿರದಂತೆ 10 ಎಕರೆ ಇರುವ ರೈತರಿಗೆ 1 ಲಕ್ಷ ರು.ವರೆಗೆ ನೀಡಲಾಗುವುದು. ರೈತರಿಗೆ ದಿನದ 24 ಗಂಟೆ ಉಚಿತ ವಿದ್ಯುತ್‌ ನೀಡುತ್ತೇವೆ. ಕೃಷಿ ವಿಮೆ ಜಾರಿಗೊಳಿಸುತ್ತೇವೆ. ಬಿತ್ತನೆ ಬೀಜ, ರಸಗೊಬ್ಬರಕ್ಕಾಗಿ ರೈತರು ಖಾಸಗಿಯವರ ಬಳಿ ಸಾಲ ಮಾಡಬಾರದು ಎಂಬುದೇ ನನ್ನ ಉದ್ದೇಶ ಎಂದು ಹೇಳಿದರು. ಅಧಿಕಾರಕ್ಕೆ ಬಂದ 24 ಗಂಟೆಯಲ್ಲೇ ಮಹಿಳಾ ಸ್ವಸಹಾಯ ಸಂಘಗಳ ಸಾಲ ಮನ್ನಾ ಮಾಡುತ್ತೇನೆ. ವಿಧವೆಯರ ಮಾಸಾಶನವನ್ನು 800 ರು.ನಿಂದ 2 ಸಾವಿರ ರು.ಗೆ ಹೆಚ್ಚಿಸಲಾಗುವುದು. ವೃದ್ಧರಿಗೆ ನೀಡಲಾಗುವ ಮಾಸಾಶನವನ್ನು ಮಾಸಿಕ 5 ಸಾವಿರ ರು.ಗೆ ಹೆಚ್ಚಿಸಲಾಗುವುದು. ಅಂಗವಿಕಲರಿಗೆ ಮಾಸಿಕ 2,500 ರು. ನೀಡುತ್ತೇನೆ ಎಂದು ಪುನರುಚ್ಚರಿಸಿದರು.

ಬಿಜೆಪಿ, ಕಾಂಗ್ರೆಸ್‌ ಜತೆ ಕೈಜೋಡಿಸಿದರೆ ಪ್ರಗತಿ ಅಸಾಧ್ಯ: ಎಚ್‌.ಡಿ.ಕುಮಾರಸ್ವಾಮಿ

ರೈತರ ಸಾಲ ಮನ್ನಾ ಮಾಡಲೆಂದೇ ಕಾಂಗ್ರೆಸ್‌ ಜೊತೆಗೆ 2018ರಲ್ಲಿ ಮೈತ್ರಿ ಸರ್ಕಾರ ರಚಿಸಿದ್ದೆ. ಸಾಲ ಮನ್ನಾಗೆ ಮಿತ್ರ ಪಕ್ಷ ಸಹಕರಿಸದಿದ್ದರೂ ಹಟದಿಂದ 25 ಸಾವಿರ ಕೋಟಿ ರು. ಸಾಲ ಮನ್ನಾ ಮಾಡುವ ಮೂಲಕ ರೈತರ ಕಣ್ಣೀರು ಒರೆಸುವ ಕೆಲಸ ಮಾಡಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2 ಲಕ್ಷ ಕುಟುಂಬಗಳಿಗೆ ಸಾಲ ಮನ್ನಾ ಮಾಡಲಿಲ್ಲ. ಇದಕ್ಕಾಗಿ ಮೀಸಲಿಟ್ಟಿದ್ದ ಸುಮಾರು 7 ಸಾವಿರ ಕೋಟಿ ರು.ಗಳನ್ನು ಬಿಜೆಪಿ ಸರ್ಕಾರ ಬೇರೆಡೆ ವರ್ಗಾಯಿಸಿತು ಎಂದು ಆರೋಪಿಸಿದರು.

click me!