ಕುಮಾರಸ್ವಾಮಿಗೆ ಪಂಚರತ್ನ ಯೋಜನೆ ಬಲ: ದೇವೇಗೌಡ

By Kannadaprabha NewsFirst Published May 8, 2023, 12:30 AM IST
Highlights

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಕೇವಲ ಪಂಚರತ್ನ ಯೋಜನೆ ಅಷ್ಟೇ ಅಲ್ಲ, ವಯೋವೃದ್ಧರಿಗೆ 5 ಸಾವಿರ ರು. ಮಾಶಾಸನ ಸೇರಿದಂತೆ ಮಹಿಳೆಯರಿಗೆ ವಿಶೇಷ ಸೌಲಭ್ಯ ಸಿಗುತ್ತವೆ. ರೈತರ ಮೇಲಿರುವ ಎಲ್ಲಾ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆಂದು ಹೇಳುವ ಯಾವುದಾದರೂ ಒಬ್ಬ ರಾಜಕಾರಣಿಯಿದ್ದರೆ ಅದು ಕುಮಾರಸ್ವಾಮಿ ಮಾತ್ರ: ದೇವೇಗೌಡ

ನಾಗಮಂಗಲ(ಮೇ.08): ನಾಡಿನ ರೈತರು, ಮಹಿಳೆಯರು, ಕೂಲಿ ಕಾರ್ಮಿಕರ ಪರವಾಗಿರುವ ಪಂಚರತ್ನ ಯೋಜನೆಗಳು ಎಚ್‌.ಡಿ.ಕುಮಾರಸ್ವಾಮಿ ಅವರ ಕೈ ಬಲಪಡಿಸುತ್ತವೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ಪಕ್ಷದ ಸರ್ವೋಚ್ಛ ನಾಯಕ ಎಚ್‌.ಡಿ.ದೇವೇಗೌಡ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜೆಡಿಎಸ್‌ ಕಾರ್ಯಕರ್ತರ ಬೃಹತ್‌ ಸಮಾವೇಶ ಮತ್ತು ಜೆಡಿಎಸ್‌ ಅಭ್ಯರ್ಥಿ ಸುರೇಶ್‌ಗೌಡ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ, ಭೀಕರ ಬರಗಾಲಕ್ಕೆ ಸಿಲುಕಿದ್ದ ನಾಗಮಂಗಲ ತಾಲೂಕಿನ ಜನರಿಗೆ ಮೈಸೂರು ಮಹಾರಾಜರು ಆಗಾಗ್ಗೆ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಅನ್ನವನ್ನು ತಂದು ಬಡಿಸುತ್ತಿದ್ದ ಕಾಲವೊಂದಿತ್ತು ಎಂಬುದನ್ನು ನೂರೈವತ್ತು ವರ್ಷಗಳ ಹಿಂದಿನ ಇತಿಹಾಸದಿಂದ ತಿಳಿದುಕೊಳ್ಳಬಹುದಾಗಿದೆ ಎಂದರು.

Latest Videos

ಮಂಡ್ಯದಲ್ಲಿ ನಿಖಿಲ್‌ ಸೋಲಿಸಿದ್ದಕ್ಕೆ ಕಾಂಗ್ರೆಸ್‌ಗೆ ಈಗ ಪಶ್ಚಾತ್ತಾಪ: ಎಚ್‌.ಡಿ.ಕುಮಾರಸ್ವಾಮಿ

ಹೇಮಾವತಿ ನೀರು ಕೊಟ್ಟಿದ್ದು ನಾನು:

ತಾಲೂಕಿನ ಹಲವಾರು ಜನರು ಜೀವನೋಪಾಯಕ್ಕಾಗಿ ಬೆಂಗಳೂರಿನಲ್ಲಿ ಕೂಲಿ ಕೆಲಸಕ್ಕೆ, ಅಧಿಕಾರಿಗಳ ಮನೆಗಳಲ್ಲಿ ಪಾತ್ರೆ ತೊಳೆಯಲು ಮತ್ತು ಮುಂಬೈನಲ್ಲಿ ಜಟಕಾ ಹೊಡೆಯಲು ಹೋದರು. ತಾಲೂಕಿಗೆ ಹೇಮಾವತಿ ಜಲಾಶಯದ ನೀರು ಹರಿಸಿದರೆ ನಿಮ್ಮ ಹೆಸರೇಳಿಕೊಂಡು ಜೀವನ ನಡೆಸುತ್ತೇವೆಂದು ಇಲ್ಲಿನ ಅನೇಕ ಮಂದಿ ಹಿರಿಯರು ನನ್ನನ್ನು ಕೋರಿಕೊಂಡಿದ್ದರು. ಅಂತಹ ಕೆಟ್ಟಸ್ಥಿತಿಯಲ್ಲಿದ್ದ ನಾಗಮಂಗಲಕ್ಕೆ ಹೇಮಾವತಿ ನೀರು ಹರಿಸಿದ್ದು ಇದೇ ದೇವೇಗೌಡ. ಆದರೆ, ಇಂದು ಕೆಲವರು ಮಾತನಾಡುತ್ತಾರೆ, ಎಲುಬಿಲ್ಲದ ನಾಲಿಗೆಯಲ್ಲಿ ಏನು ಬೇಕಾದರೂ ಮಾತನಾಡಬಹುದು. ಅಂದು ನಾನು ಕೇವಲ 45 ವರ್ಷದ ಹುಡುಗನಾಗಿದ್ದೆ. ಇಂದು ನನಗೆ 92 ವರ್ಷ. ಯಾವ ಕಾರಣಕ್ಕೆ ನಿಮ್ಮ ಮುಂದೆ ಬಂದುನಿಂತಿದ್ದೇನೆ ಎಂಬುದನ್ನು ನೀವೇ ಅರ್ಥೈಸಿಕೊಳ್ಳಬೇಕು ಎಂದರು.

ಯಾವ ಸಿಎಂ ಕೂಡ ಮಾಡಿಲ್ಲ:

ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರೆ ಕೇವಲ ಪಂಚರತ್ನ ಯೋಜನೆ ಅಷ್ಟೇ ಅಲ್ಲ, ವಯೋವೃದ್ಧರಿಗೆ 5 ಸಾವಿರ ರು. ಮಾಶಾಸನ ಸೇರಿದಂತೆ ಮಹಿಳೆಯರಿಗೆ ವಿಶೇಷ ಸೌಲಭ್ಯ ಸಿಗುತ್ತವೆ. ರೈತರ ಮೇಲಿರುವ ಎಲ್ಲಾ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡುತ್ತೇನೆಂದು ಹೇಳುವ ಯಾವುದಾದರೂ ಒಬ್ಬ ರಾಜಕಾರಣಿಯಿದ್ದರೆ ಅದು ಕುಮಾರಸ್ವಾಮಿ ಮಾತ್ರ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಹೈಟೆಕ್‌ ಆಸ್ಪತ್ರೆ, ಶಾಲೆಗಳು ನಿರ್ಮಾಣವಾಗುತ್ತವೆ. ಈ ಯೋಜನೆಗಳನ್ನು ದೇಶದ ಯಾವೊಬ್ಬ ಮುಖ್ಯಮಂತ್ರಿಯೂ ಮಾಡಿಲ್ಲ ಎಂದರು.

ಮಹಿಳೆಯರಿಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಶಕ್ತಿ ಕೊಡಲಿಲ್ಲ. ದೇಶದ ಎಲ್ಲಾ ಮಹಿಳೆಯರಿಗೂ ಮೀಸಲಾತಿ ಸೇರಿದಂತೆ ಹೆಚ್ಚು ಶಕ್ತಿ ನೀಡಿದ್ದು ಮತ್ತು ಪ್ರಧಾನಿಯಾಗಿದ್ದ ವೇಳೆ ಜೀವದ ಹಂಗು ತೊರೆದು ನಾಲ್ಕು ಬಾರಿ ಕಾಶ್ಮೀರಕ್ಕೆ ಹೋಗಿ ಬಂದಿದ್ದು ಇದೇ ದೇವೇಗೌಡ ಎಂದರು.

ನಮ್ಮ ಹಣದಲ್ಲಿ ಕುಡಿಯುವ ನೀರಿಗಾಗಿ ಚಿಕ್ಕ ಡ್ಯಾಂ ಒಂದನ್ನು ನಿರ್ಮಿಸಿಕೊಳ್ಳಲು ಅವಕಾಶ ಕೊಡುವುದಿಲ್ಲ ಎಂದರೆ ಕನ್ನಡಿಗರಾದ ನಾವು ನ್ಯಾಯವಾಗಿ ಹೋರಾಟ ಮಾಡಿ ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ಸರ್ವಪ್ರಯತ್ನ ಮಾಡಬೇಕಿದೆ. ಒಂದೆಡೆ ಕಾಂಗ್ರೆಸ್‌ ಮತ್ತೊಂದೆಡೆ ಬಿಜೆಪಿ ನೆರೆಯ ತಮಿಳುನಾಡಿನಲ್ಲಿ ತಲೆ ಎತ್ತಲು ಸಾಧ್ಯವಿಲ್ಲ ಎಂದು ಗುಡುಗಿದರು.

ಉಪಮುಖ್ಯಮಂತ್ರಿಯಾಗುವ ಕನಸು:

ಇಲ್ಲಿ ಯಾರೋ ಒಬ್ಬರು ಉಪಮುಖ್ಯಮಂತ್ರಿಯಾಗುತ್ತೇನೆಂಬ ಕನಸು ಕಟ್ಟಿಕೊಂಡಿದ್ದಾರೆ. ಯಾರನ್ನು ಉಪಮುಖ್ಯಮಂತ್ರಿ ಮಾಡುವುದು, ಇಲ್ಲಿರುವವರು ನನ್ನ ಜನ. ನರೇಂದ್ರ ಮೋದಿ ಅವರ ಕಣ್ಣು ಕುಕ್ಕುವಂತೆ 10ಕಿ.ಮೀ.ದೂರದಿಂದ ರೋಡ್‌ಶೋ ಮೂಲಕ ನನ್ನನ್ನು ಕರೆತಂದಿರುವ ಜನರು ನಿಮ್ಮನ್ನು ಡಿಸಿಎಂ ಆಗಲು ಬಿಡುತ್ತಾರಾ ಎಂದು ಪರೋಕ್ಷವಾಗಿ ಎನ್‌.ಚಲುವರಾಯಸ್ವಾಮಿಗೆ ಟಾಂಗ್‌ ಕೊಟ್ಟರು.

ಶಾಸಕ ಸುರೇಶ್‌ಗೌಡ ಮಾತನಾಡಿ, ತಾಲೂಕಿನ 128ಹಳ್ಳಿಗೆ ಮಾರ್ಕೋನಹಳ್ಳಿ ಜಲಾಶಯದಿಂದ ಕುಡಿವ ನೀರಿನ ಯೋಜನೆ ತಂದಿದ್ದೇನೆ. ಇನ್ನುಳಿದ 450 ಹಳ್ಳಿಗಳಿಗೂ ಕೆಆರ್‌ಎಸ್‌ನಿಂದ ಕುಡಿವ ನೀರು ಪೂರೈಸಲು 890 ಕೋಟಿ ರು. ವೆಚ್ಚದ ಅನುದಾನ ತಂದಿದ್ದೇನೆ. ತಾಲೂಕಿನ ಎಲ್ಲಾ ಕೆರೆ ಕಟ್ಟೆಗಳಿಗೆ ಹೇಮಾವತಿ ಜಲಾಶಯದ ನೀರು ತುಂಬಿಸಿದ್ದೇನೆ. ಕೊಪ್ಪ ಸೇರಿದಂತೆ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅನೇಕ ಕಾರ್ಯಕ್ರಮ ಬಾಕಿ ಇವೆ. ನಿಮ್ಮ ನಂಬಿಕೆಗೆ ಮೋಸ ಮಾಡುವುದಿಲ್ಲ. ಕೊಟ್ಟಂತಹ ಅಧಿಕಾರವನ್ನು ಮಾರಾಟ ಮಾಡಿಕೊಂಡಿಲ್ಲ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರ ಆಶೀರ್ವಾದ ನನ್ನ ಮೇಲಿದೆ. ಹಾಗಾಗಿ ಕ್ಷೇತ್ರದ ಜನರು ನನ್ನ ಕೈಬಲಪಡಿಸಿ ಆಶೀರ್ವದಿಸಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮನ್‌ಮುಲ್‌ ನಿರ್ದೇಶಕ ನೆಲ್ಲೀಗೆರೆ ಬಾಲು, ದಸಂಸ ಮುಖಂಡ ವೆಂಕಟಗಿರಿಯಯ್ಯ ಮಾತನಾಡಿದರು.

ದೇವೇಗೌಡರಿಂದ ರೋಡ್‌ ಶೋ:

ಇದಕ್ಕೂ ಮುನ್ನ ತಾಲೂಕಿನ ಬಿ.ಜಿ.ನಗರದ ಹೆಲಿಪ್ಯಾಡ್‌ಗೆ ಬಂದಿಳಿದ ಎಚ್‌.ಡಿ.ದೇವೇಗೌಡರನ್ನು ರಸ್ತೆ ಮೂಲಕ ಪಟ್ಟಣಕ್ಕೆ ಕರೆತಂದು, ಮಂಡ್ಯ ವೃತ್ತದಿಂದ ತಾಲೂಕು ಕ್ರೀಡಾಂಗಣದವರೆಗೆ ತೆರೆದ ವಾಹನದಲ್ಲಿ ಕೂರಿಸಿ ವಿವಿಧ ಜಾನಪದ ಕಲಾ ತಂಡಗಳು ಮತ್ತು ಸಾವಿರಾರು ಮಂದಿ ಜೆಡಿಎಸ್‌ ಕಾರ್ಯಕರ್ತರೊಂದಿಗೆ ರೋಡ್‌ ಶೋ ನಡೆಸಿ ವೇದಿಕೆಗೆ ಕರೆತರಲಾಯಿತು.

ಜೆಡಿಎಸ್‌ ಮುಗಿಸ್ತೇನೆ ಎನ್ನುವವರ ಕಂಡ್ರೆ ರಕ್ತ ಕುದಿಯುತ್ತೆ: ಎಚ್‌.ಡಿ.ದೇವೇಗೌಡ

ಅಭ್ಯರ್ಥಿ ಸುರೇಶ್‌ಗೌಡರ ತಾಯಿ ನಿಂಗಮ್ಮ, ಪುತ್ರಿ ಧನ್ಯತಾ, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್‌, ಎಸ್ಸಿ ಎಸ್ಟಿಘಟಕದ ಅಧ್ಯಕ್ಷ ಕಂಚಿನಕೋಟೆ ಮೂರ್ತಿ, ಮುಖಂಡರಾದ ಡೈಮಂಡ್‌ಮೂರ್ತಿ, ಪುರಸಭೆ ಅಧ್ಯಕ್ಷೆ ಆಶಾ, ಉಪಾಧ್ಯಕ್ಷ ಜಾಫರ್‌ ಸೇರಿದಂತೆ ಸಾವಿರಾರು ಮಂದಿ ಜೆಡಿಎಸ್‌ ಕಾರ್ಯಕರ್ತರು ಇದ್ದರು.

ಮಂಡ್ಯ ಜಿಲ್ಲೆ ಜೆಡಿಎಸ್‌ ಭದ್ರಕೋಟೆ ಎಂದು ನಮ್ಮ ಪಕ್ಷದ ನಾಯಕರು ಮೈಮರೆತಿದ್ದರಿಂದ ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಪಕ್ಷದ ಸದಸ್ಯರೇ ಹೆಚ್ಚಾಗಿದ್ದರೂ ಸಹ ಕೇವಲ 45 ಮತಗಳಲ್ಲಿ ನಾನು ಎಂಎಲ್ಸಿ ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು. ಪಕ್ಷದ ಮುಖಂಡರು ಈ ಚುನಾವಣೆಯಲ್ಲಿಯೂ ಮೈ ಮರೆತರೆ ಮತ್ತೆ ಸೋಲುಂಟಾಗಬಹುದು. ಆದ್ದರಿಂದ ಚುನಾವಣೆಗೆ ಬಾಕಿ ಇರುವ ಮೂರು ದಿನಗಳ ಕಾಲ ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಅಂತ ಮಾಜಿ ಎಂಎಲ್‌ಸಿ ಎನ್‌.ಅಪ್ಪಾಜಿಗೌಡ ತಿಳಿಸಿದ್ದಾರೆ.  

click me!