Karnataka Politics: ಕಾಂಗ್ರೆಸ್‌ ಕಾವೇರಿ ಪರ ಹೋರಾಟ ಮಾಡಲಿಲ್ಲ: ದೇವೇಗೌಡ ಟೀಕೆ

By Govindaraj S  |  First Published Apr 18, 2022, 6:03 PM IST

ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ರಾಜ್ಯಕ್ಕೆ ಆದ ಅನ್ಯಾಯದ ವಿರುದ್ಧ ಕಾಂಗ್ರೆಸ್‌ ಎಂದಿಗೂ ಹೋರಾಟ ಮಾಡಲಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಟೀಕಿಸಿದರು.


ಮಂಡ್ಯ (ಏ.18): ಕಾವೇರಿ ನದಿ ನೀರಿನ (Kaveri River) ಹಂಚಿಕೆಯಲ್ಲಿ ರಾಜ್ಯಕ್ಕೆ (Karnataka) ಆದ ಅನ್ಯಾಯದ ವಿರುದ್ಧ ಕಾಂಗ್ರೆಸ್‌ (Congress) ಎಂದಿಗೂ ಹೋರಾಟ ಮಾಡಲಿಲ್ಲ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ (HD Devegowda) ಟೀಕಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದ ಮುಂಭಾಗ ನಡೆದ ಜನತಾ ಜಲಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಾವೇರಿ ನೀರಿನ ಮೇಲಿನ ಹಕ್ಕನ್ನು ಕಾಂಗ್ರೆಸ್‌ ಎಂದಿಗೂ ಪ್ರತಿಪಾದಿಸಲೇ ಇಲ್ಲ. 

ಅನ್ಯಾಯದ ವಿರುದ್ಧ ಹೋರಾಟ ಮಾಡುವ ಬದ್ಧತೆಯನ್ನೂ ಪ್ರದರ್ಶಿಸಲಿಲ್ಲ. ಕಾವೇರಿ ಕಣಿವೆ ಜನರಿಗೆ ಹೋರಾಟದ ಧ್ವನಿ ಎತ್ತಿದ್ದ ನನಗೂ ಬೆಂಬಲವಾಗಿ ನಿಲ್ಲಲಿಲ್ಲ ಎಂದು ಬೇಸರದಿಂದ ನುಡಿದರು. ಕಾವೇರಿ ನೀರಿನ ವಿಷಯವಾಗಿ ಜಿಲ್ಲೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಿದವರೆಂದರೆ ಜಿ.ಮಾದೇಗೌಡರು ಮತ್ತು ಅವರ ಜೊತೆಯಲ್ಲಿದ್ದ ಹುಡುಗರು. ಸ್ಥಳೀಯ ಕೆಲವು ಕಾಂಗ್ರೆಸ್‌ ಮುಖಂಡರು ಅವರ ಜೊತೆಗೆ ಬಂದು ಕುಳಿತರು. ಆಗ ಜೆಡಿಎಸ್‌ ಅವರ ಜೊತೆಗೆ ನಿಂತು ಹೋರಾಟದ ಶಕ್ತಿಯನ್ನು ಹೆಚ್ಚಿಸಿತು ಎಂದರು.

Tap to resize

Latest Videos

ಅಧಿಕಾರ ನಡೆಸಲಾಗದು: ತಮಿಳರನ್ನು ಹೊರತುಪಡಿಸಿ ಕೇಂದ್ರದಲ್ಲಿ ಯಾವ ಪಕ್ಷವೂ ಅಧಿಕಾರ ನಡೆಸಲು ಸಾಧ್ಯವಿಲ್ಲ. 40 ಸಂಸದರ ಬೆಂಬಲ ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಬೇಕೇಬೇಕು. ಇದೇ ಕಾರಣದಿಂದ ನಿರಂತರವಾಗಿ ತಮಿಳುನಾಡು ಕಾವೇರಿ ನೀರಿನ ಮೇಲೆ ಹಕ್ಕನ್ನು ಸಾಧಿಸುತ್ತಾ ಬಂದಿದೆ ಎಂದರು.

Karnataka Politics: ಜೆಡಿಎಸ್‌ ಅಧಿಕಾರಕ್ಕೆ ತರುವುದು ನನ್ನ ಕೊನೇ ಆಸೆ: ದೇವೇಗೌಡ

ತುಟಿ ಬಿಚ್ಚಲಿಲ್ಲ: ಡಾ. ಮನಮೋಹನ್‌ಸಿಂಗ್‌ ಪ್ರಧಾನಿಯಾಗಿದ್ದ ಸಮಯದಲ್ಲಿ ರಾಜ್ಯದ ಎಸ್‌.ಎಂ.ಕೃಷ್ಣ, ಮಲ್ಲಿಕಾರ್ಜುನ ಖರ್ಗೆ, ವೀರಪ್ಪಮೊಯ್ಲಿ, ಕೆ.ಎಚ್‌.ಮುನಿಯಪ್ಪ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ನಾನು ಆ ಸಮಯದಲ್ಲಿ ಕಾವೇರಿ ನೀರಿನ ವಿಷಯವಾಗಿ ರಾಜ್ಯಕ್ಕಾಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಸಿಂಗ್‌ ಅವರಲ್ಲಿ ಮನವಿ ಮಾಡಿದ್ದೆ. ಈ ವಿಷಯದಲ್ಲಿ ನಾನೇನೂ ಮಾಡಲಾಗುವುದಿಲ್ಲ. ನ್ಯಾಯಾಲಯದಲ್ಲಿ ಹೋರಾಟ ನಡೆಸುವಂತೆ ನನಗೆ ಹೇಳಿದರು. ಈ ಬಗ್ಗೆ ಕಾಂಗ್ರೆಸ್‌ನ ನಾಲ್ವರು ಮಂತ್ರಿಗಳು, ಬಿಜೆಪಿಯ 18 ಸಂಸದರು ತುಟಿಬಿಚ್ಚಲಿಲ್ಲ. ಜೆಡಿಎಸ್‌ನಿಂದ ನಾನೊಬ್ಬ ಏನು ಮಾಡಲು ಸಾಧ್ಯ. ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯವನ್ನು ಪ್ರತಿಭಟಿಸಲು ಯಾರೂ ಬೆಂಬಲವಾಗಿ ನಿಲ್ಲದ ನನ್ನ ಸ್ಥಿತಿಯನ್ನು ನೋಡಿ ನಾನೇ ಭಾವುಕನಾಗಿ ಅತ್ತುಬಿಟ್ಟಿದ್ದೇನೆ ಎಂದು ನೋವಿನಿಂದ ನುಡಿದರು.

ಸುಮ್ಮನೆ ಕೂರುವವನಲ್ಲ: ನನ್ನದು ಹೋರಾಟದ ಜೀವನ. ಏಕಾಂಗಿಯಾಗಿಯೇ ಹೋರಾಟ ಮಾಡಿ 14 ಟಿಎಂಸಿ ನೀರನ್ನು ರಾಜ್ಯಕ್ಕೆ ದೊರಕಿಸಿಕೊಟ್ಟಿದ್ದೇನೆ. ಇನ್ನೂ ಹೋರಾಟ ಮಾಡುವ ಶಕ್ತಿ ನನ್ನಲ್ಲಿದೆ. ನನ್ನ ದೇಹದಿಂದ ಉಸಿರು ಯಾವಾಗ ಬೇರ್ಪಡುತ್ತೋ ಗೊತ್ತಿಲ್ಲ. ಉಸಿರಿರುವವರೆಗೂ ರಾಜ್ಯದ ಜನರ ಉಳಿವಿಗಾಗಿ ನಾನು ಹೋರಾಡುತ್ತಲೇ ಇರುತ್ತೇನೆ. ನಾನೆಂದಿಗೂ ಸುಮ್ಮನೇ ಕೂರುವ ವ್ಯಕ್ತಿಯೇ ಅಲ್ಲ ಎಂದು ಗುಡುಗಿದರು.

ಪಕ್ಷ ಅಧಿಕಾರಕ್ಕೆ ತರುವ ಗುರಿ: ಈ ಪಕ್ಷ ಹುಟ್ಟಿದ್ದೇ ಎಲ್ಲ ಜನಾಂಗದವರ ಆಶೀರ್ವಾದದಿಂದ. 16 ಸಂಸದರನ್ನು ಈ ಪಕ್ಷದಿಂದ ಕೊಟ್ಟಿದ್ದ ದಾಖಲೆ ಇದೆ. ಆದರೆ, ಹತ್ತೇ ತಿಂಗಳಲ್ಲಿ ಕಾಂಗ್ರೆಸ್ಸಿಗರು ತುಳಿದುಹಾಕಿದರು. ಆದರೂ ಈ ಪಕ್ಷವನ್ನು ಯಾರಿಂದಲೂ ಸರ್ವನಾಶ ಮಾಡಲು ಸಾಧ್ಯವಿಲ್ಲ. ಜನತಾ ಜಲಧಾರೆ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ. ಅದನ್ನು ಯಶಸ್ವಿಯಾಗಿ ಮುನ್ನಡೆಸುವುದು ನಮ್ಮೆಲ್ಲರ ಉದ್ದೇಶವಾಗಿದೆ. ಈ ಮೂಲಕ ರಾಜ್ಯದಲ್ಲಿ ಜೆಡಿಎಸ್‌ಗೆ ಶಕ್ತಿ ತುಂಬಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ಎಲ್ಲರೂ ಸಂಕಲ್ಪ ಮಾಡುವಂತೆ ತಿಳಿಸಿದರು.

ಕೇಂದ್ರ ಮಾಜಿ ಸಚಿವ ಸಿ.ಎಂ.ಇಬ್ರಾಹಿಂಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಅಲ್ಪಸಂಖ್ಯಾತರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಎಚ್‌.ಕೆ. ಕುಮಾರಸ್ವಾಮಿ ಅವರನ್ನು ಸಂಸದೀಯ ಮಂಡಳಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಅವರಿಗೂ ಸ್ಥಾನ ಮಾನ ಕಲ್ಪಿಸಲಾಗಿದೆ. ಮೇಲುಕೋಟೆ ಕ್ಷೇತ್ರದಲ್ಲಿ ಸಿ.ಎಸ್‌.ಪುಟ್ಟರಾಜು ಪರ ಜನಬೆಂಬಲವಿದ್ದು, ಜನರ ಆಶೀರ್ವಾದ ಅವರ ಮೇಲೆ ಹೀಗೆ ಇರಲೆಂದು ಮನವಿ ಮಾಡಿದರು.

JDS Jaladhare: ನಮ್ಮ ಹಕ್ಕಿಗೆ ನಾವು ಹೋರಾಟ ನಡೆಸಬೇಕು: ಎಚ್‌.ಡಿ. ದೇವೇಗೌಡ

ಶಾಸಕರಾದ ಡಿ.ಸಿ.ತಮ್ಮಣ್ಣ, ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌, ತಾಲೂಕು ಕಾರ್ಯಾಧ್ಯಕ್ಷ ಎಸ್‌.ಎ.ಮಲ್ಲೇಶ್‌, ಪುರಸಭೆ ಆಧ್ಯಕ್ಷೆ ಅರ್ಚನಾ ಚಂದ್ರು, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಯಶವಂತ್‌, ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕರಾದ ಗುರುಸ್ವಾಮಿ, ಶ್ಯಾದನಹಳ್ಳಿ ಚಲುವರಾಜು, ಟಿಎಪಿಸಿಎಂಎಸ್‌ ಅಧ್ಯಕ್ಷ ಡಿ.ಶ್ರೀನಿವಾಸ್‌, ನಿರ್ದೇಶಕ ಕಣಿವೆ ಯೋಗೇಶ್‌, ಜೆಡಿಎಸ್‌ ಮುಖಂಡರಾದ ಕೆ.ವೈರಮುಡಿಗೌಡ, ಕ್ಯಾತನಹಳ್ಳಿ ಚೇತನ್‌, ಪ್ರವೀಣ್‌, ಮಲ್ಲಿಗೆರೆ ರವಿಕರ, ಪುರಸಭೆ ಸದ್ಯಸರು, ಜೆಡಿಎಸ್‌ ಮುಖಂಡರು ಭಾಗಿಯಾಗಿದ್ದರು.

click me!