
ಬಾಗಲಕೋಟೆ, (ಏ.18): ಕೇವಲ ಗುತ್ತಿಗೆದಾರರಿಂದ ಮಾತ್ರವಲ್ಲ, ಮಠಾಧೀಶರಿಂದಲೂ ಪರ್ಸೆಂಟೇಜ್ ಕೇಳುತ್ತಿದೆ ಎಂದು ಕರ್ನಾಟಕ ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಕೇಳಿಬಂದಿದೆ.
ಹೌದು...ಗುತ್ತಿಗೆದಾರರು 40% ಕಮಿಷತ್ ಆರೋಪ ಮಾಡಿದ್ದರು. ಇದೀಗ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಬಾಳಗಂಡಿಯಲ್ಲಿ ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಅವರು ಮಠಗಳು ಶೇ 30ರ ಪರ್ಸೆಂಟೇಜ್ ಕೊಟ್ಟರೆ ಮಾತ್ರ ಅನುದಾನ ಬಿಡುಗಡೆಯಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಇನ್ನು ಈ ಬಗ್ಗೆ ಕಾಂಗ್ರೆಸ್ ನಾಯಕರು ಸಹ ರಾಜ್ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದ್ಕೆ ಸಿಎಂ ಬೊಮ್ಮಾಯಿ ಪ್ರಕ್ರಿಯಿಸಿ ಕಾಂಗ್ರೆಸ್ ಅವಧಿಯ ಭ್ರಷ್ಟಾಚಾರದ ಹಗರಣಗಳನ್ನ ಜನತೆ ಮುಂದಿಡುತ್ತೇವೆ ಎಂದಿದ್ದಾರೆ.
Bagalkot: ಮಠಮಾನ್ಯಗಳ ಅನುದಾನದಲ್ಲಿ 30 % ಕಮಿಷನ್ ನೀಡಬೇಕಿದೆ: ದಿಂಗಾಲೇಶ್ವರ ಶ್ರೀ
ಇದಕ್ಕೆ ಕಿಡಿಕಾರಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ನನ್ನ ಬಳಿ ಸಾಕ್ಷಿಯಿದೆ ಎಂದು ಖಾಲಿ ಬುಟ್ಟಿಯ ಮುಂದೆ ನಿಂತು ಪುಂಗಿ ಊದಬೇಡಿ, ದಾಖಲೆಗಳನ್ನು ಬಿಡುಗಡೆ ಮಾಡಿ ಮಾತನಾಡಿ. ಬುಟ್ಟಿಯ ಒಳಗಿರುವುದು ನಾಗರ ಹಾವೋ, ಹಾವಿನಪುರದ ಹಾವೋ ನೋಡಿಯೇ ಬಿಡೋಣ ಎಂದು ಸವಾಲು ಹಾಕಿದ್ದಾರೆ.
ಧರ್ಮ ರಕ್ಷಕರು ಎಂದು ತಮ್ಮನ್ನು ಕರೆದುಕೊಳ್ಳುವ ಬಿಜೆಪಿಯವರು ಮಠ, ಮಂದಿರಗಳ ಅನುದಾನವನ್ನೂ ಬಿಡದೆ 30% ಕಮಿಷನ್ ತಿಂದು ತೇಗುತ್ತಿರುವುದು ನಾಚಿಕೆಗೇಡು. 10% ಡಿಸ್ಕೌಂಟ್ ಯಾಕೆ? ಅದನ್ನು ತಿಂದು ಬಿಡಿ. ದೇವರಿಂದಲೂ ಕಮಿಷನ್ ಕೇಳುವ ನಿಮ್ಮದು ಯಾವ ರೀತಿಯ ಧರ್ಮ ರಕ್ಷಣೆ? #40PercentCommissionGovt ಎಂದು ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ತಿರುಗೇಟು ನೀಡಿದ್ದಾರೆ.
ಸ್ವಾಮೀಜಿ ಹೇಳಿಕೆಗೆ ರಾಜಕಾರಣಿಗಳ ಪ್ರತಿಕ್ರಿಯೆ
ಎಸ್.ಆರ್.ಪಾಟೀಲ್ ನೇತೃತ್ವದ ಟ್ರ್ಯಾಕ್ಟರ್ ಱಲಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ದಿಂಗಲೇಶ್ವರ ಸ್ವಾಮೀಜಿ, 30 ಪರ್ಸೆಂಟ್ ಹಣ ಕೊಟ್ಟರೆ ಮಾತ್ರ ಮಠಗಳ ಕಟ್ಟಡ ಶುರುವಾಗುತ್ತವೆ. ಕಮಿಷನ್ ಬಗ್ಗೆ ಅಧಿಕಾರಿಗಳೇ ಬಂದು ಹೇಳುತ್ತಾರೆ. ನವದೆಹಲಿ ಅಥವಾ ಬೆಂಗಳೂರಿನಲ್ಲಿ ಐಸ್ ಕ್ರೀಂ ಬಿಡುಗಡೆಯಾದರೆ ಉತ್ತರ ಕರ್ನಾಟಕಕ್ಕೆ ಬರುವುದು ಬರೀ ಕಡ್ಡಿ ಮಾತ್ರ ಎಂದು ಐಸ್ ಕ್ರೀಂ ಕಥೆಯ ಮೂಲಕ ಭ್ರಷ್ಟಾಚಾರದ ಮುಖ ಬಚ್ಚಿಟ್ಟರು. ಸ್ವಾಮೀಜಿ ನೀಡಿದ ಮಠಗಳ ಪರ್ಸೆಂಟೇಜ್ ವ್ಯವಹಾರದ ಹೇಳಿಕೆಗೆ ರಾಜ್ಯದ ಹಲವು ರಾಜಕಾರಿಣಿಗಳು ಪ್ರತಿಕ್ರಿಯಿಸಿದ್ದಾರೆ.
ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆ ಕುರಿತು ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕಮಿಷನ್ ಪಿಡುಗು ಸ್ವಾಮೀಜಿಗಳನ್ನು ಸಹ ಬಿಟ್ಟಿಲ್ಲ ಎನ್ನುವುದು ವಿಷಾದನೀಯ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದರು.
ಮಠಗಳಿಗೆ ನೀಡುವ ಅನುದಾನದಲ್ಲಿ 30 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದಾರೆ ಎನ್ನುವ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ದೇವಾಲಯ, ಆಶ್ರಮ, ಮಠಗಳಿಗೆ ಅನುದಾನ ಬಿಡುಗಡೆ ಮಾಡಲು ಕಮಿಷನ್ ಕೇಳುತ್ತಿರುವ ರಾಜ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಇಂಥ ಅಕ್ಷಮ್ಯ ಅಪರಾಧಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಪಾಠ ಕಲಿಸುತ್ತಾರೆ. ಭ್ರಷ್ಟರಿಗೆ ಯಾವುದೇ ಜಾತಿ, ಧರ್ಮವಿಲ್ಲ. ಅವರು ಜಾತಿ, ಧರ್ಮವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದು ಹೇಳಿದರು
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.