ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಸೋಲಿನ ಹೊಣೆ ನಾನೇ ಹೊರುತ್ತೇನೆಂದ ಮಾಜಿ ಶಾಸಕ ಕೆ.ಜಿ.ಬೋಪಯ್ಯ

By Govindaraj S  |  First Published May 18, 2023, 10:43 PM IST

ಈ ಬಾರಿಯ ಚುನಾವಣೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ಬಳಿಕ ಗುರುವಾರ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನಲ್ಲಿ  ಆತ್ಮಾವಲೋಕನ ಸಭೆ ನಡೆಯಿತು. 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮೇ.18): ಈ ಬಾರಿಯ ಚುನಾವಣೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲಿನ ಬಳಿಕ ಗುರುವಾರ ಪೊನ್ನಂಪೇಟೆ ತಾಲ್ಲೂಕಿನ ಗೋಣಿಕೊಪ್ಪಲಿನಲ್ಲಿ  ಆತ್ಮಾವಲೋಕನ ಸಭೆ ನಡೆಯಿತು. ಬಿಜೆಪಿ ಕೊಡಗು ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆ ಆರಂಭಗೊಳ್ಳುತಿದ್ದಂತೆ ಕಾರ್ಯಕರ್ತರ ಆಕ್ರೋಶ ಮುಗಿಲು ಮುಟ್ಟಿತು. ಸೋಲಿಗೆ ಕಾರಣದ ಬಗೆ ಹಲವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. 

Tap to resize

Latest Videos

undefined

ಚುನಾವಣಾ ಪ್ರಚಾರದ ವೇಳೆ ಅಡ್ಡಂಡ ಕಾರ್ಯಪ್ಪ ಅವರು ಮಾಡಿದ ವಿವಾದಾತ್ಮಕ ಭಾಷಣ, ಕಾರ್ಯಕರ್ತರಲ್ಲಿ ಉಂಟಾದ ಹೊಂದಾಣಿಕೆ ಕೊರತೆ, ಕೆಲವು ಮುಖಂಡರ ತಟಸ್ಥ ಧೋರಣೆ, ಶಾಸಕರ ಕೆಲವು ಆಪ್ತರ ನಡವಳಿಕೆ ಸೇರಿದಂತೆ ಸಭೆಯಲ್ಲಿ ಹಲವು ಕಾರ್ಯಕರ್ತರು ಹಲವು ವಿಚಾರಗಳ ಬಗ್ಗೆ ಆಕ್ರೋಶದಿಂದ ಮಾತನಾಡಿದರು. ಒಂದು ಹಂತದಲ್ಲಿ ಜಿಲ್ಲಾ ಅಧ್ಯಕ್ಷ ರಾಬಿನ್ ದೇವಯ್ಯ ಅವರ ರಾಜೀನಾಮೆಯನ್ನು ಕೂಡ ಹಲವರು ಒತ್ತಾಯಿಸಿದರು. ಜಿಲ್ಲಾಧ್ಯಕ್ಷರಾಗಿ ಅವರು ಕಾರ್ಯಕರ್ತರನ್ನು ನಡೆಸಿಕೊಂಡ ರೀತಿ ಹಾಗೂ ಪಕ್ಷದ ಕೆಲಸದಲ್ಲಿ ಅವರು ಅಸಡ್ಡೆ ತೋರಿದ್ದಾರೆ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದರು. 

ನನ್ನ ಸೋಲಿಗೆ ಪಕ್ಷದ ಕೆಲ ಮುಖಂಡರೇ ಕಾರಣ: ಮಾಜಿ ಸಚಿವ ಸೋಮಣ್ಣ

ಸಭೆಯಲ್ಲಿ ಹಲವರ ವಿರುದ್ಧ ಆರೋಪಗಳು ಕೂಡ ಕೇಳಿ ಬಂದವು. ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಹಾಗೂ ರಂಗಾಯಣ ಮಾಜಿ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಆತ್ಮಾವಲೋಕನ ಸಭೆಗೆ ಗೈರಾಗಿದ್ದರು. ಉಳಿದಂತೆ ಪಕ್ಷದ ವಿವಿಧ ಘಟಕದ ಮುಖಂಡರು ಕ್ಷೇತ್ರದ ಬಹುತೇಕ ಪಕ್ಷದ ಪ್ರಮುಖ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಕೆ. ಜಿ ಬೋಪಯ್ಯ ಕಾರ್ಯಕರ್ತರು ಎಲ್ಲರೂ ಕೂಡ ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಕಳೆದ ಬಾರಿಗಿಂತ ಹೆಚ್ಚು ಮತ ನಮ್ಮ ಪಕ್ಷಕ್ಕೆ ದೊರಕ್ಕಿರುವುದೇ ಅದಕ್ಕೆ ಸಾಕ್ಷಿ. ಆದರೆ ಪಕ್ಷದೊಳಗೆ ಹೊಂದಾಣಿಕೆಯ ಕೊರತೆಯಿಂದ ಇನ್ನಷ್ಟು ಮತಗಳನ್ನು ಪಡೆಯುವಲ್ಲಿ ನಾವು ವಿಫಲರಾಗಿದ್ದೇವೆ. 

ಇದರ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಮುಂದೆ ಪಕ್ಷವನ್ನು ಬಲಪಡಿಸುವತ್ತ ಎಲ್ಲರೂ ಚಿತ್ತಹರಿಸಬೇಕು  ಎಂದರು. ಪಕ್ಷದ ಎಲ್ಲಾ ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತೇನೆ. ಮುಂಬರುವ ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚು ಗೆಲ್ಲಿಸುವಂತೆ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕು ಎಂದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಬಿನ್ ದೇವಯ್ಯ ಮಾತನಾಡಿ ನಾನು ಪ್ರಾಮಾಣಿಕವಾಗಿ ಪಕ್ಷದಲ್ಲಿ ಕೆಲಸವನ್ನು ನಿರ್ವಹಿಸಿದ್ದೇನೆ. ನಾನು ಯಾವುದೇ ರೀತಿಯ ಅಸಡ್ಡೆ ಮನೋಭಾವನೆಯನ್ನು ತೋರಲಿಲ್ಲ. 

Ramanagara: ಗೆದ್ದರೂ, ಸೋತರು ಇದೇ ನನ್ನ ಕರ್ಮಭೂಮಿ: ಸಿ.ಪಿ.ಯೋಗೇಶ್ವರ್‌

ಪಕ್ಷದ ಕಾರ್ಯಕರ್ತರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಿದ್ದೇನೆ. ಮುಂದೆಯೂ ಕೂಡ ಪಕ್ಷದ ಬಲ ವರ್ಧನೆಗೆ ಅವಿರತ ಶ್ರಮವಹಿಸುತ್ತೇನೆ. ನಾನು ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ, ನೀವೆಲ್ಲ ಬಯಸಿದ್ದರೆ ಈಗಲೇ ನಾನು ನನ್ನ ರಾಜೀನಾಮೆಯನ್ನು ನೀಡುತ್ತೇನೆ ಎಂದು ಸಭೆಯಲ್ಲಿ ಪ್ರಕಟಿಸಿದರು. ಈ ಸಂದರ್ಭ ಹಲವು ಕಾರ್ಯಕರ್ತರು ಸಮಾಧಾನಪಡಿಸಿ ಕಾರ್ಯಕ್ರಮ ಮುಕ್ತಾಯಗೊಳಿಸಿದರು. ಸಭೆಯಲ್ಲಿ ಬಿಜೆಪಿ ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಮಾಜಿ ಜಿಲ್ಲಾಧ್ಯಕ್ಷ ಹಾಗೂ ಈ ಬಾರಿಯ ಚುನಾವಣಾ ಉಸ್ತುವಾರಿ  ರವೀಂದ್ರ ಸೇರಿದಂತೆ ಪ್ರಮುಖರು ಇದ್ದರು.

click me!