ಬಿಜೆಪಿ ಜೊತೆ ಜೆಡಿಎಸ್‌ ವಿಲೀನ ಆಗಿದ್ಯಾ?: ಅನ್ನದಾನಿ ಹೇಳಿದ್ದಿಷ್ಟು

By Kannadaprabha News  |  First Published Oct 4, 2023, 1:30 AM IST

ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡರೂ ನಮ್ಮ ಪಕ್ಷದ ಸೆಕ್ಯುಲರ್ ಸಿದ್ಧಾಂತ ಇದ್ದೇ ಇರುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮುಸಲ್ಮಾನರು ಆತಂಕಗೊಳ್ಳುವುದು ಬೇಡ. ನಮ್ಮ ಜೊತೆಯಲ್ಲೇ ಇರಿ. ನಿಮ್ಮನ್ನ ರಕ್ಷಣೆ ಮಾಡೋದಕ್ಕೆ ದೇವೇಗೌಡರು, ಕುಮಾರಸ್ವಾಮಿ ಇದ್ದಾರೆ: ಮಾಜಿ ಶಾಸಕ ಡಾ.ಕೆ.ಅನ್ನದಾನಿ 


ಮಂಡ್ಯ(ಅ.04):  ಜೆಡಿಎಸ್‌ ಪಕ್ಷ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದೆಯೇ ವಿನಃ ವಿಲೀನ ಮಾಡಿಲ್ಲ. ನಮ್ಮ ಹೊಂದಾಣಿಕೆ ಲೋಕಸಭಾ ಚುನಾವಣೆಗಷ್ಟೇ ಸೀಮಿತ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ಜೊತೆ ಜೆಡಿಎಸ್‌ ಮೈತ್ರಿ ಮಾಡಿಕೊಂಡರೂ ನಮ್ಮ ಪಕ್ಷದ ಸೆಕ್ಯುಲರ್ ಸಿದ್ಧಾಂತ ಇದ್ದೇ ಇರುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮುಸಲ್ಮಾನರು ಆತಂಕಗೊಳ್ಳುವುದು ಬೇಡ. ನಮ್ಮ ಜೊತೆಯಲ್ಲೇ ಇರಿ. ನಿಮ್ಮನ್ನ ರಕ್ಷಣೆ ಮಾಡೋದಕ್ಕೆ ದೇವೇಗೌಡರು, ಕುಮಾರಸ್ವಾಮಿ ಇದ್ದಾರೆ. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದ ತಕ್ಷಣ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕೊಡುವುದಾಗಿ ನಂಬಿಸಿದ್ದರು. ಆದರೆ, ಇದುವರೆಗೂ ಮೀಸಲಾತಿ ಕೊಡಲಿಲ್ಲ. ಮುಸಲ್ಮಾನರು ಕಾಂಗ್ರೆಸ್‌ ಪರವಾಗಿಲ್ಲ ಎಂದರು.

Latest Videos

undefined

ಜೆಡಿಎಸ್ ಜಾತ್ಯಾತೀತ ಪಕ್ಷ, ಈಗ ಜನತಾನೂ ಇಲ್ಲ, ಜನರೂ ಇಲ್ಲ: ಹೆಚ್‌ಡಿಕೆ ವಿರುದ್ಧ ಹರಿಹಾಯ್ದ ಪ್ರಿಯಾಂಕ್‌ ಖರ್ಗೆ

ಮುಸಲ್ಮಾನರನ್ನು ನಂಬಿಕೊಂಡು ರಾಜಕೀಯ ಮಾಡುತ್ತಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಕೇಳಿದಾಗ, ಚುನಾವಣಾ ರಾಜಕಾರಣದಲ್ಲಿ ಎಲ್ಲ ಸಮುದಾಯಗಳು ಬೇಕು. ಕಸ ಗುಡಿಸುವವರಿಂದ ಹಿಡಿದು ಮೇಲ್ಮಟ್ಟದ ಸಮಾಜವೂ ಬೇಕು. ಎಲ್ಲಾ ಸಮಾಜವನ್ನು ಕಟ್ಟಿಕೊಂಡು ರಾಜಕೀಯ ಮಾಡಬೇಕು ಎಂಬ ಅರ್ಥದಲ್ಲಿ ಕುಮಾರಸ್ವಾಮಿ ಹೇಳಿದ್ದಾರೆ. ಬೇರೆ ಅರ್ಥದಲ್ಲಿ ಹೇಳಿಕೆ ನೀಡಿಲ್ಲ ಎಂದು ಸಮರ್ಥಿಸಿಕೊಂಡರು.

ಕುಮಾರಸ್ವಾಮಿ ಪ್ಯಾಂಟ್ ಒಳಗೆ ಚಡ್ಡಿ ಇದೆ ಎಂದು ಗೊತ್ತಾಯ್ತು ಎಂಬ ಜಮೀರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅನ್ನದಾನಿ, 2006ರಲ್ಲಿ ಜಮೀರ್ ಖಾಕಿ ಚಡ್ಡಿ ಹಾಕಿಕೊಂಡು ಬಿಜೆಪಿ ಜೊತೆ ಮಂತ್ರಿ ಆಗಿದ್ದಿರಾ. ಈಗ ಕುಮಾರಸ್ವಾಮಿ ಖಾಕಿ ಚಡ್ಡಿ ಬಗ್ಗೆ ಮಾತನಾಡುತ್ತೀರಿ. ಆಗ ನಿಮ್ಮ ಸಿದ್ಧಾಂತ ಎಲ್ಲಿ ಹೋಗಿತ್ತು ಎಂದು ಟೀಕಿಸಿದರು.

ಕಾಂಗ್ರೆಸ್‌ಗೆ ಹೆದರಿ ಜೆಡಿಎಸ್‌ ಜೊತೆ ಬಿಜೆಪಿ ಹೊಂದಾಣಿಕೆ: ಸಚಿವ ಶರಣಬಸಪ್ಪ ದರ್ಶನಾಪೂರ್‌

ಬಿಜೆಪಿ ಜೊತೆ ಮೈತ್ರಿಗೆ ದೇವೇಗೌಡನ್ನ ಹಿಂಸೆ ಕೊಟ್ಟು ಒಪ್ಪಿಸಿದ್ದಾರೆಂಬ ಟೀಕೆಗೆ, ದೇವೇಗೌಡರು ರಾಜಕೀಯ ಭಂಡಾರ, ದೊಡ್ಡ ವಿಶ್ವವಿದ್ಯಾಲಯ. ಹಿಂಸೆ ತೆಗೆದುಕೊಂಡು ಮೈತ್ರಿ ಒಪ್ಪಿಕೊಳ್ಳುವವರಲ್ಲ. ಯಾವ ಸಮಯಕ್ಕೆ ಏನು ನಿರ್ಧಾರ ತೆಗೆದುಕೊಳ್ಳಬೇಕೋ ಅದನ್ನೇ ತೆಗೆದುಕೊಳ್ಳುತ್ತಾರೆ. ಈ ದೇಶ ಆಳಿದವರಿಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಅವರ ನಿರ್ದೇಶನದಲ್ಲೇ ಪಕ್ಷವನ್ನು ಮುನ್ನಡೆಸಲಾಗುತ್ತಿದೆ ಎಂದರು.

2006ರಲ್ಲಿ ಚಲುವರಾಯಸ್ವಾಮಿ, ಜಮೀರ್ ಮಂತ್ರಿ ಆಗಬೇಕಿತ್ತು. ಆಗ ಅವರಿಗೆ ಜಾತ್ಯತೀತತೆ ಬೇಕಿತ್ತು. ಮಂತ್ರಿ ಆಗಿ ಆಯ್ತಲ್ಲ, ಅದಕ್ಕೆ ಈಗ ಜೆಡಿಎಸ್‌ನಲ್ಲಿ ಸೆಕ್ಯುಲರ್ ಇಲ್ಲ ಅಂತಿದ್ದಾರೆ. ನೀವೂ ಕೂಡ ಬಿಜೆಪಿ ಜೊತೆಗೆ ಮಂತ್ರಿ ಆಗಿದ್ದವರು. ಸೆಕ್ಯುಲರ್ ಬಗ್ಗೆ ಮಾತನಾಡಲು ನಿಮಗೆ ನೈತಿಕತೆ ಇಲ್ಲ ಎಂದು ಕಿಡಿ ಕಾರಿದರು.

click me!