ಕಾಂಗ್ರೆಸ್ ನಿಂದ ದೂರವಾಗಲು ಮುಂದಾಗಿರುವ ಉಮೇಶ್ ಜಾಧವ್ ಗೆ ಪರ್ಯಾಯ ಕಾರ್ಯತಂತ್ರ..?ಉಮೇಶ್ ಜಾಧವ ಎದುರಿಸಲು ಅದೇ ಸಮುದಾಯದ ಮುಖಂಡರನ್ನು ಕರೆತರಲು ಯತ್ನ! ಲಂಬಾಣಿ ಮತಗಳನ್ನು ಉಳಿಸಿಕೊಳ್ಳಲು ಖರ್ಗೆ ಮಾಸ್ಟರ್ ಪ್ಲಾನ್.
ಕಲಬುರಗಿ,[ಫೆ.20]: ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಗರಿಗೆದರಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ಪ್ಲ್ಯಾನ್ ರೂಪಿಸಿದೆ.
ಅಷ್ಟೇ ಅಲ್ಲದೇ ಕಾಂಗ್ರೆಸ್ ತೊರೆದಿರುವ ಮುಖಂಡರುಗಳನ್ನು ಬಿಜೆಪಿ ಒಟ್ಟುಗೂಡಿಸಿ ಸಾಮೂಹಿಕವಾಗಿ ಮಲ್ಲಿಕಾರ್ಜುನ ಖರ್ಗೆ ಗೆಲುವಿಗೆ ಬ್ರೇಕ್ ಹಾಕಲು ತಂತ್ರಗಳನ್ನು ರೂಪಿಸುತ್ತಿದೆ.
'ಲೋಕ'ಸಮರ: ಮಲ್ಲಿಕಾರ್ಜುನ ಖರ್ಗೆ ಸೋಲಿಸಲು ರೆಡಿಯಾಯ್ತು ಸ್ಪೆಷಲ್ ಟೀಂ..!
ಒಂದೊಂದು ಜಾತಿ ಸಮುದಾಯದ ಪ್ರಮುಖ ಮುಖಂಡರನ್ನ ಬಳಸಿಕೊಂಡು ಖರ್ಗೆ ಅವರನ್ನು ಮಣಿಸಲು ಕಸರತ್ತು ಆರಂಭಿಸಿದೆ. ಅದರಲ್ಲೂ ಲಂಬಾಣಿ[ಬಂಜಾರ] ಮತಗಳು ಕಲಬುರಗಿ ಗ್ರಾಮೀಣ ಚಿತ್ತಾಪುರ ಮತ್ತು ಗುರುಮಿಠಕಲ್ ನಲ್ಲಿ ಅಧಿಕ ಸಂಖ್ಯೆಯಲ್ಲಿವೆ.
ಈ ಹಿನ್ನಲೆ ಲಂಬಾಣಿ ಸಮುದಾಯದ ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಅವರನ್ನು ಬುಟ್ಟಿಗೆ ಹಾಕಿಕೊಂಡಿದ್ದು, ಖರ್ಗೆಗೆ ಪ್ರತಿಸ್ಪರ್ಧಿಯಾಗಿ ಚಿಂಚೋಳಿ ಕಾಂಗ್ರೆಸ್ ಶಾಸಕ ಡಾ. ಉಮೇಶ್ ಜಾಧವ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ತೆರೆಮರೆಯಲ್ಲಿ ಪ್ರಯತ್ನ ನಡೆಸುತ್ತಿದೆ ಎನ್ನಲಾಗಿದೆ.
ಟಿಕೆಟ್ ಫೈಟ್ : ಖರ್ಗೆ ಮಣಿಸಲು ‘ಕೈ’ಗೆ ಬಿಜೆಪಿ ಆಪರೇಷನ್?
ಇದ್ರಿಂದ ಲಂಬಾಣಿ ಮತಗಳು ಬಿಜೆಪಿ ಪಾಲಾಗುತ್ತವೆ ಎಂದು ಕಾಂಗ್ರೆಸ್ ಗೆ ದಿಕ್ಕುತೋಚದಂತಾಗಿದೆ. ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಮಲ್ಲಿಕಾರ್ಜುನ ಖರ್ಗೆ ಗೆಲುವು ಅನಿವಾರ್ಯವಾಗಿದ್ದು, ಇದಕ್ಕಾಗಿ ತಮ್ಮ ಬತ್ತಳಿಕೆಯಿಂದ ಬಂದೊಂದೆ ಹೊಸ ಅಸ್ತ್ರ ಪ್ರಯೋಗಿಸಲು ಶುರುಮಾಡಿದ್ದಾರೆ.
ಲಂಬಾಣಿ ಮತಗಳನ್ನ ಸೆಳೆಯಲು ಖರ್ಗೆ ಹೊಸ ಅಸ್ತ್ರ
ಹೌದು... ಲಂಬಾಣಿ ಸಮುದಾಯದ ಪ್ರಮುಖ ನಾಯಕ ಎಂದೇ ಬಿಂಬಿತರಾಗಿರುವ ಉಮೇಶ್ ಜಾಧವ್ ಅವರು ಈಗಾಗಲೇ ಕಾಂಗ್ರೆಸ್ ನಿಂದ ಒಂದು ಕಾಲು ಹೊರಗಿಟ್ಟಿದ್ದು, ಬಿಜೆಪಿ ಸೇರುವುದು ಪಕ್ಕಾ ಎನ್ನಲಾಗಿದೆ. ಇದ್ರಿಂದ ಎಚ್ಚೆತ್ತುಕೊಂಡಿರುವ ಮಲ್ಲಿಕಾಜರ್ಜುನ ಖರ್ಗೆ ದೋಸ್ತಿ ಪಕ್ಷದ ನಾಯಕನ ಮೊರೆ ಹೋಗಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಗೆಲುವಿಗೆ ಲಂಬಾಣಿ ಸಮುದಾಯ ಮತ ಅವಶ್ಯವಾಗಿರುವ ಹಿನ್ನೆಲೆಯಲ್ಲಿ ಅದೇ ಸಮುದಾಯದ ಮತ್ತೊಬ್ಬ ನಾಯಕ, ಮಾಜಿ
ಸಚಿವ ರೇವು ನಾಯಕ್ ಬೆಳಮಗಿಯನ್ನು ಕಾಂಗ್ರೆಸ್ ಗೆ ಕರೆತರಲು ಪ್ಲಾನ್ ಮಾಡುತ್ತಿದ್ದಾರೆ ಎನ್ನವ ಸುದ್ದಿ ಜಿಲ್ಲಾ ರಾಜಕಾರಣದಲ್ಲಿ ದಟ್ಟವಾಗಿದೆ.
ಬಿಜೆಪಿ ಬಿಟ್ಟು ಪ್ರಸ್ತುತ ದೋಸ್ತಿ ಪಕ್ಷ ಜೆಡಿಎಸ್ ನಲ್ಲಿರುವ ರೇವು ನಾಯಕ್ ಬೆಳಮಗಿ ಇಂದು [ಬುಧವಾರ] ಕಲಬುರಗಿಯಲ್ಲಿರುವ ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಭೇಟಿ ನೀಡಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.
ಲಂಬಾಣಿ ಸಮೂದಾಯದ ಮತಗಳು ಕೈಜಾರುವ ಭಯದಲ್ಲಿರುವ ಖರ್ಗೆ, ರೇವು ನಾಯಕ ಬೆಳಮಗಿ ಸೆಳೆಯುವ ಮೂಲಕ ಲಂಬಾಣಿ ಮತದಾರರನ್ನು ಉಳಿಸಿಕೊಳ್ಳಲು ಕಸರತ್ತು ನಡೆಸಿದ್ದಾರೆ.
ಮತ್ತೊಂದೆಡೆ ಮಾಜಿ ಸಿಎಂ ಧರ್ಮಸಿಂಗ್ ಮತ್ತು ಮಾಜಿ ಸಚಿವ ಖಮರುಲ್ ಇಸ್ಲಾಂ ಅಕಾಲಿಕ ನಿಧನ ನಂತರ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.