ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿಲ್ಲ, ಇಡುವುದೂ ಇಲ್ಲ, ಯಾವುದೇ ಸ್ಥಾನಮಾನ ಕೊಟ್ಟರೂ ನಿಭಾಯಿಸುವೆ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್
ಹುಬ್ಬಳ್ಳಿ(ಮೇ.29): ‘ನೂತನ ಕಾಂಗ್ರೆಸ್ ಕ್ಯಾಬಿನೆಟ್‌ನಲ್ಲಿ ನಾನು ಮತ್ತು ಲಕ್ಷ್ಮಣ ಸವದಿ ಸಚಿವರಾಗಬೇಕು ಎಂಬುದು ಜನರ ಅಭಿಲಾಷೆಯಾಗಿತ್ತು. ಆದರೆ, ಹಲವು ಕಾರಣಗಳಿಂದ ನಮ್ಮಿಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ. ಹಾಗಂತ, ನಾನು ಸಚಿವ ಸ್ಥಾನ ಬೇಕು ಎಂದು ಬೇಡಿಕೆ ಇಟ್ಟಿಲ್ಲ, ಇಡುವುದೂ ಇಲ್ಲ. ಇನ್ನೂ ಹಲವಾರು ಸ್ಥಾನಮಾನಗಳಿವೆ. ಯಾವುದೇ ಸ್ಥಾನ ಕೊಟ್ಟರೂ ನಿಭಾಯಿಸಿಕೊಂಡು ಹೋಗುತ್ತೇನೆ ಎನ್ನುವ ನಂಬಿಕೆಯಿದೆ’ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ, ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಈಗಾಗಲೇ ಸಚಿವ ಸಂಪುಟದಲ್ಲಿ 34 ಸ್ಥಾನಗಳು ಭರ್ತಿಯಾಗಿವೆ. ಈ ಸಂದರ್ಭದಲ್ಲಿ ನನಗೆ ಸಚಿವ ಸ್ಥಾನ ನೀಡುವಂತೆ ಕೇಳುವುದು ಸರಿಯಲ್ಲ. ಅಷ್ಟಕ್ಕೂ, ಕಾಂಗ್ರೆಸ್‌ಗೆ ಯಾವುದೇ ಷರತ್ತಿಲ್ಲದೆ ಬಂದಿದ್ದೇನೆ. ಕಾಂಗ್ರೆಸ್‌ಗೆ ಬಂದು ಕೇವಲ ಒಂದೂವರೆ ತಿಂಗಳಾಗಿದೆ ಎಂದರು.
ಬಿಜೆಪಿ ಸರ್ಕಾರದ ಅವಧಿಯ ಕಾಮಗಾರಿಗಳ ಹಣ ಬಿಡುಗಡೆ ತಡೆ ಆದೇಶಕ್ಕೆ ಆಕ್ರೋಶ
ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷ ಸಮಯವಿದೆ. ಮುಂದಿನ ದಿನಗಳಲ್ಲಿ ಪಕ್ಷ ನನಗೆ ಯಾವ ಸ್ಥಾನ ನೀಡುತ್ತದೆಯೋ ಅದಕ್ಕೆ ಬದ್ಧನಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವೆ ಎಂದರು.