ಸರ್ಕಾರದ ಯಾವ ವಿಚಾರಣೆಗೂ ನಾನು ಹೆದರಲಾರೆ, ಸರ್ಕಾರದಿಂದ ಪ್ರತಿ ಹುದ್ದೆ ಸೇಲ್, ಗುತ್ತಿಗೆದಾರರ ಬಿಲ್‌ಗೂ ಕಮಿಷನ್, ನಾವು ಕೋವಿಡ್‌ಗೆ ಪ್ರಾಣ ಒತ್ತೆ ಇಟ್ಟಿದ್ದಾಗ ಕೈ ನಾಯಕರು ಎಲ್ಲಿದ್ರು?: ಮಾಜಿ ಸಚಿವ ಕೆ.ಸುಧಾಕರ್
ಚಿಕ್ಕಬಳ್ಳಾಪುರ(ಆ.30): ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ದಿವಾಳಿ ಮಾಡಲು ಹೊರಟಿದೆ. ರಾಜ್ಯ ಸರ್ಕಾರ ಈಗಲೇ 85 ಸಾವಿರ ಕೋಟಿ ರು. ಸಾಲ ಮಾಡಿದ್ದು, ಇನ್ನೈದು ವರ್ಷದಲ್ಲಿ 5 ಲಕ್ಷ ಕೋಟಿ ರು. ಸಾಲ ಆಗಲಿದೆ. ಕಾಂಗ್ರೆಸ್‌ನ 2 ಸಾವಿರ ರು. ಗ್ಯಾರಂಟಿ ಗಿಮಿಕ್‌ಗೆ ರಾಜ್ಯವನ್ನು ಮಾರಾಟ ಮಾಡುವ ಸ್ಥಿತಿ ಒದಗಿದೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಮಂಗಳವಾರ ಬಿಜೆಪಿ ವತಿಯಿಂದ ಏರ್ಪಡಿಸಿದ್ದ ಬಿಜೆಪಿ ಬೆಂಬಲಿತ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕರ್ನಾಟಕವು ಕಲ್ಯಾಣ ರಾಜ್ಯ ಎಂಬ ಹೆಸರು ಪಡೆದಿದೆ. ಆದರೆ ಇವರ ಗ್ಯಾರಂಟಿಗಳ ಮೂಲಕ ದಿವಾಳಿ ರಾಜ್ಯ ಮಾಡುತ್ತಿದೆ. ಸ್ವಚ್ಛ ಆಡಳಿತ ಎಂದಿರುವ ಕಾಂಗ್ರೆಸ್ ನಾಯಕರು ಇಡೀ ಆಡಳಿತವನ್ನೇ ಗುಡಿಸುತ್ತಿದ್ದಾರೆ ಎಂದರು.
ವಯಸ್ಸಾಗಿದೆ, ನನಗೆ ಎಂಪಿ ಟಿಕೆಟ್ ಕೊಡಲ್ಲ: ಸಂಸದ ಬಚ್ಚೇಗೌಡ
ಅವರಿಗೇ ಗ್ಯಾರಂಟಿ ಇಲ್ಲ:
135 ಶಾಸಕರು ಗೆದ್ದಿದ್ದರೂ ಬಿಜೆಪಿ ಮತ್ತು ಜೆಡಿಎಸ್ ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆಯುವ ಯತ್ನ ನಡೆದಿದೆ. ಕಾಂಗ್ರೆಸ್‌ನವರಿಗೆ ಇನ್ನೂ ಐದು ವರ್ಷ ನಮ್ಮದೇ ಆಡಳಿತವಿದೆ ಎಂಬ ಗ್ಯಾರಂಟಿಯೇ ಇಲ್ಲವೇ? ಎಂದು ಪ್ರಶ್ನೆ ಮಾಡಿದರು.
ದ್ವೇಷ ರಾಜಕಾರಣ:
ನಮ್ಮ ಸರ್ಕಾರದ ಅವಧಿಯಲ್ಲಿ ನಾವು ಪ್ರಾಣವನ್ನೇ ಒತ್ತೆಯಿಟ್ಟು ಕೋವಿಡ್ ಕೆಲಸ ಮಾಡಿದ್ದೇವೆ. ರಾಜ್ಯದ ಜನರ ರಕ್ಷಣೆ ಮಾಡಿದ್ದೇವೆ. ಆಗ ಕಾಂಗ್ರೆಸ್ ನಾಯಕರು ಹೆಲ್ಮೆಟ್, ಮಾಸ್‌್ಕ ಧರಿಸಿಕೊಂಡು, ಮನೆಗೆ ಪ್ರವೇಶವಿಲ್ಲ ಎಂಬ ಬೋರ್ಡು ಹಾಕಿಕೊಂಡು ಕುಳಿತಿದ್ದರು. ಈಗ ಅದೇ ನಾಯಕರು ಅದರ ವಿಚಾರಣೆಗಾಗಿ ಸಮಿತಿ ರಚಿಸಿ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ ನಾಯಕರು ಸತ್ಯ ಹರಿಶ್ಚಂದ್ರರೇ ಆಗಿದ್ದರೆ, ಅವರಿಗೆ ಎದೆಗಾರಿಕೆ ಇದ್ದರೆ 2013 ರಿಂದ 2023ರವರೆಗೂ ಸೇರಿಸಿ ತನಿಖೆ ಮಾಡಿಸಲಿ ನೋಡೋಣ. ಸರ್ಕಾರ ಎಷ್ಟೇ ವಿಚಾರಣಾ ಸಮಿತಿ ರಚಿಸಿದರೂ, ಅದನ್ನು ಎದುರಿಸುವ ತಾಕತ್ತು ಹಾಗೂ ಮನೋಸ್ಥೈರ್ಯ ನಮಗೆ ಇದೆ ಎಂದು ಸವಾಲೆಸೆದರು.
ಪ್ರತಿ ಹುದ್ದೆ ಸೇಲ್:
ರಾಜ್ಯ ಸರ್ಕಾರದಲ್ಲಿ ಪ್ರತಿ ಹುದ್ದೆ ಸೇಲ್ ಆಗುತ್ತಿದ್ದು, ಎಲ್ಲಕ್ಕೂ ಬೆಲೆ ನಿಗದಿಯಾಗಿದೆ. ಪ್ರತಿ ಅಧಿಕಾರಿ ದುಡ್ಡು ಕೊಟ್ಟು ವರ್ಗಾವಣೆ ಮಾಡಿಸಿಕೊಳ್ಳಬೇಕು. ಇನ್ನು, ಗುತ್ತಿಗೆದಾರರಿಗೆ ಕೆಲಸವೇ ಇಲ್ಲ. ಸರ್ಕಾರದಲ್ಲಿರುವವರು ಹಳೆ ಬಿಲ್‌ಗಳ ಪಾವತಿಗೂ ಅವರಿಂದ ಪರ್ಸೆಂಟೇಜ್ ಕೇಳುತ್ತಿದ್ದಾರೆ. ಭ್ರಷ್ಟಾಚಾರ ರಹಿತ ಸರ್ಕಾರ ಕೊಡುತ್ತೇವೆ ಎಂದ ಕಾಂಗ್ರೆಸ್ ಭ್ರಷ್ಟಾಚಾರಯುಕ್ತ ಸರ್ಕಾರ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರದಿಂದ ಪ್ರಧಾನಿ ಮೋದಿ ಕೆಳಗಿಳಿಸುವದೇ ನಮ್ಮ ಗುರಿ: ರಕ್ಷಾ ರಾಮಯ್ಯ
ಕಡೆವರೆಗೂ ಬಿಜೆಪಿಯಲ್ಲೇ:
ಕೆಲವು ಊಹಾಪೋಹಗಳಿಗೆ ಕಿವಿಗೊಡಬೇಡಿ, ರಾಜಕೀಯದಲ್ಲಿ ಇರೋವರೆಗೂ ನಾನು ಬಿಜೆಪಿಯಲ್ಲೇ ಇರುತ್ತೇನೆ. ನಮ್ಮವೇ ಕೆಲ ತಪ್ಪುಗಳಿಂದ ಕಳೆದ ಚುನಾವಣೆಯಲ್ಲಿ ಪಕ್ಷ ಸೋತಿದೆ. ನಾನೂ ಈ ಕ್ಷೇತ್ರದ ಅಭಿವೃದ್ಧಿಗಾಗಿ 100% ಕೇವಲ ಮಾಡಿದೆ. ಆದರೂ ಸೋಲಾಯಿತು. ಒಂದು ಸೋಲಿನಿಂದ ಧೃತಿಗೆಡುವುದಿಲ್ಲ ಎಂದು ಹೇಳಿದರು.
ಸಮಾರಂಭದಲ್ಲಿ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ, ಖಾದಿ ಮಂಡಳಿ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್, ಬಿಎಂಟಿಸಿ ಮಾಜಿ ಉಪಾಧ್ಯಕ್ಷ ಹಾಗೂ ಕೆ.ವಿ.ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ.ವಿ.ನವೀನ್ ಕಿರಣ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ, ಮಾಜಿ ಶಾಸಕರಾದ ಅನಸೂಯಾಮ್ಮ ನಟರಾಜನ್, ಎಂ.ರಾಜಣ್ಣ, ಇನ್ನಿತರ ಪ್ರಮುಖರಿದ್ದರು.