ರಾಜಕೀಯಕ್ಕೆ ‘ಕರ್ನಾಟಕ ಸಿಂಗಂ‘ ಅಣ್ಣಾಮಲೈ ಪ್ರವೇಶ!

By Suvarna NewsFirst Published May 18, 2020, 9:31 AM IST
Highlights

ರಾಜಕೀಯಕ್ಕೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಎಂಟ್ರಿ| ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ ಕರ್ನಾಟಕದ ಸಿಂಗಂ| ತಮಿಳುನಾಡಿನ ಚುನಾವಣಾ ಅಖಾಡಕ್ಕೆ ಅಣ್ಣಾಮಲೈ ಎಂಟ್ರಿ

ಚೆನ್ನೈ(ಮೇ.18): ಕರ್ನಾಟಕದ ಸಿಂಗಂ ಎಂದೇ ಖ್ಯಾತಿ ಗಳಿಸಿದ್ದ, ಅಪರಾಧಿಗಳಲ್ಲಿ ನಡುಕ ಹುಟ್ಟಿಸಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ಕೊಡುವುದು ಖಚಿತವಾಗಿದೆ.

ಹೌದು ವರ್ಷದ ಹಿಂದೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಪೊಲೀಸ್ ಸೇವೆಯಿಂದ ವಿಮುಕ್ತಗೊಂಡ ಸಿಂಗಂ ಖ್ಯಾತಿಯ ಅಣ್ಣಾಮಲೈ ರಾಜಕೀಯಕ್ಕೆ ಪ್ರವೇಶಿಸುತ್ತಾರೆಂಬ ಮಾತುಗಳು ಜೋರಾಗಿದ್ದವು. ಹೀಗಿದ್ದರೂ ಮಾಜಿ ಪೊಲೀಸ್ ಅಧಿಕಾರಿ ಈ ಮಾತುಗಳನ್ನು ಅಲ್ಲಗಳೆದಿದ್ದರು. ಆದರೀಗ ಅವರು ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡುತ್ತಿದ್ದಾರೆ. ಮುಂಬರುವ 2021ರ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಅಣ್ಣಾಮಲೈ ಘೋಷಣೆ ಮಾಡಿದ್ದಾರೆ.

ಅಣ್ಣಾಮಲೈ ರಾಜೀನಾಮೆ ಅಂಗೀಕರಿಸಿದ ಅಮಿತ್ ಶಾ ಸಚಿವಾಲಯ

ಅಣ್ಣಾಮಲೈ ಭಾನುವಾರ(ಮೇ.17) ಫೇಸ್​​ಬುಕ್​​ ಲೈವ್​​ನಲ್ಲಿ ಮಾತಾಡುವ ಸಂದರ್ಭದಲ್ಲಿ ತಾವು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ. ಅಲ್ಲದೇ ತಮಿಳುನಾಡಿನ ತನ್ನ ಹುಟ್ಟೂರಿನಲ್ಲೇ ವಾಸ್ಯವ್ಯ ಹೂಡಿ ಮುಂದಿನ ಚುನಾವಣೆಗೆ ಬೇಕಾದ ಅಗತ್ಯ ಕೆಲಸಗಳನ್ನು ಆರಂಭಿಸುವುದಾಗಿಯೂ ತಿಳಿಸಿದ್ದಾರೆ.

ಮಿಸ್​ ಯೂ ಕರ್ನಾಟಕ:

‘ಮಿಸ್​​ ಯೂ ಕರ್ನಾಟಕ’ ಎನ್ನುವ ಮೂಲಕ ತಮ್ಮ ಮಾತುಗಳನ್ನಾರಂಭಿಸಿದ ಅಣ್ಣಾಮಲೈ, ತಾನು ಪೊಲೀಸ್​​​ ಸೇವೆಯಲ್ಲಿದ್ದಾಗ ಕನ್ನಡಿಗರು ಬೆಟ್ಟದಷ್ಟು ಪ್ರೀತಿ ಕೊಟ್ಟಿದ್ದಾರೆ. ಆ ನಿಮ್ಮ ಪ್ರೀತಿಗೆ ಅಭಾರಿಯಾಗಿದ್ದೇನೆ. ನನಗೆ ಜನರೊಂದಿಗೆ ಇದ್ದು ರಾಜಕೀಯ ಸುಧಾರಣೆ ಮಾಡುವ ಆಲೋಚನೆ ಇದೆ.  ಆದ್ದರಿಂದ ಕರ್ನಾಟಕ ಪೊಲೀಸ್​​ ಇಲಾಖೆಗೆ ರಾಜೀನಾಮೆ ನೀಡಿ ನನ್ನೂರಿಗೆ ಬಂದಿದ್ದೇನೆ. ಜನರ ಸೇವೆ ಮಾಡಲಿದ್ದೇನೆ. ಕರ್ನಾಟಕದಲ್ಲಿ 10 ವರ್ಷ ಪೊಲೀಸ್​​ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದೇನೆ. ಕುಟುಂಬದ ಜತೆ ಸಮಯ ಕಳೆಯುವುದು, ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಬೇಕು, ಜನರ ಸೇವೆ ಮಾಡಬೇಕು, ರಾಜಕೀಯ ವ್ಯವಸ್ಥೆ ಬದಲಾಯಿಸಬೇಕು, ಪೊಲೀಸ್​​ ಅಧಿಕಾರಿಗಳಿಗೆ ಉತ್ತಮ ವಾತಾವರಣ ಕಲ್ಪಿಸಬೇಕು ಎಂಬುವುದು ನನ್ನಾಸೆ ಎಂದಿದ್ದಾರೆ.

click me!