'ಮಹಿಳೆಯರ ಬಗ್ಗೆ ಕಾಳಜಿಯಿದ್ದರೆ ಸಾಂತ್ವನ ಮತ್ತು ಮಾತೃಶ್ರೀ ಯೋಜನೆ ರದ್ದತಿ ಹಿಂಪಡೆಯಿರಿ'

By Suvarna NewsFirst Published May 16, 2020, 6:10 PM IST
Highlights

ಸಾಂತ್ವನ ಮತ್ತು ಮಾತೃಶ್ರೀ ಯೋಜನೆ ಸ್ಥಗಿತಗೊಳಿಸಲು ಮುಂದಾಗಿರುವ ಸರ್ಕಾರದ ನಡೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ

ಬೆಂಗಳೂರು, (ಮೇ.16): ಕೇಂದ್ರ ಸರ್ಕಾರದ ಮಾತೃ ವಂದನ ಯೋಜನೆ ಜಾರಿಗೊಳಿಸಿರುವುದರಿಂದ ರಾಜ್ಯ ಸರ್ಕಾರ ಗರ್ಭಿಣಿ ಮಹಿಳೆಯರಿಗೆ ಆಹಾರ ಪದಾರ್ಥ ನೀಡುತ್ತಿದ್ದ ಮಾತೃಶ್ರೀ ಯೋಜನೆಯನ್ನು ಸ್ಥಗಿತಗೊಳಿಸಲು ತೀರ್ಮಾನಿಸಿದೆ.‌ 

ಆದ್ರೆ ಇದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾಂತ್ವನ ಮತ್ತು ಮಾತೃಶ್ರೀ ಯೋಜನೆಗಳನ್ನು ಸ್ಥಗಿತ ಮಾಡಲು ರಾಜ್ಯ ಸರಕಾರ ನೀಡಿರುವ ಆದೇಶವನ್ನು ಹಿಂಪಡೆಯಬೇಕೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪತ್ರದ ಮೂಲಕ ಸರಕಾರಕ್ಕೆ ಆಗ್ರಹಿಸಿದ್ದಾರೆ.

'ಸಾಂತ್ವನ ಕೇಂದ್ರ ಮುಚ್ಚವುದು ಕೊರೋನಾ ಸಂಕಷ್ಟದಲ್ಲಿದ್ದ ಸ್ತ್ರೀಯರಿಗೆ ಮತ್ತೊಂದು ಬರೆ ಎಳೆದಂತೆ'

ಈ ಬಗ್ಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಮಹಿಳೆಯರ ಪ್ರಮುಖ ಸಮಸ್ಯೆಗಳಾದ ವರದಕ್ಷಿಣೆ ಕಿರುಕುಳ, ಲೈಂಗಿಕ ಹಲ್ಲೆ, ಕೌಟುಂಬಿಕ ಹಿಂಸೆ ಹಾಗೂ ಇತರೆ ದೌರ್ಜನ್ಯಗಳಿಗೆ ಒಳಪಟ್ಟ ಮಹಿಳೆಯರ ಸಮಸ್ಯೆಗಳಿಗೆ ಒಂದೇ ಸೂರಿನಡಿಯಲ್ಲಿ ಸ್ಪಂದಿಸಿ, ಅವರಿಗೆ ವೈದ್ಯಕೀಯ, ಕಾನೂನು, ಸಲಹೆ ಹಾಗೂ ಸಾಂತ್ವನವನ್ನು ನೀಡುವುದರ ಮೂಲಕ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ 2001-02ನೇ ಸಾಲಿನಿಂದ "ಸಾಂತ್ವನ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿತ್ತು. 

ಇದೆ ರೀತಿ ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಟಿಕತೆ ಮತ್ತು ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ ತಲಾ ರೂ.5,000/-ಗಳ ಸಹಾಯಧನ ನೀಡುವ "ಮಾತೃಶ್ರೀ ಯೋಜನೆಯನ್ನು 2018 ರಿಂದ ರಾಜ್ಯದಲ್ಲಿ ಜಾರಿಗೊಳಿಸಲಾಗಿತ್ತು.

ಸದ್ಯ ರಾಜ್ಯ ಸರ್ಕಾರ ಕೋವಿಡ್-19 ರೋಗದ ನೆಪ ಒಡ್ಡಿ, ಸಂಪನ್ಮೂಲಗಳ ಉಳಿತಾಯದ ನೆಪದಲ್ಲಿ ಸಾಂತ್ವನ ಮತ್ತು ಮಾತೃಶ್ರೀಯಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಏಕಾಏಕಿ ರದ್ದುಗೊಳಿಸಿರುವುದು ಮಹಿಳಾ ಸಮೂಹಕ್ಕೆ ಮಾಡಿರುವ ದೊಡ್ಡ ದ್ರೋಹ ಮತ್ತು ಅನ್ಯಾಯವಾಗಿರುತ್ತದೆ. ಸರ್ಕಾರಕ್ಕೆ ಏನಾದರೂ ಮಹಿಳೆಯರ ಬಗ್ಗೆ ಕಾಳಜಿ ಇದ್ದರೆ ಕೂಡಲೆ ಸಾಂತ್ವನ ಮತ್ತು ಮಾತೃಶ್ರೀ ಯೋಜನೆಗಳ ರದ್ಧತಿಯನ್ನು ಹಿಂಪಡೆದು ಯಥಾಸ್ಥಿತಿ ಮುಂದುವರೆಸಬೇಕು ಎಂದು ಆಗ್ರಹಿಸಿದ್ದಾರೆ.

click me!