ಸಮಾವೇಶಕ್ಕೆ ಬಂದ ಬಹುತೇಕರು ಹಾರ-ತುರಾಯಿ ತಂದಿದ್ದೀರಿ. ನಾನು ಚುನಾವಣೆಯಲ್ಲಿ ಗೆಲ್ಲುವವರೆಗೆ ಯಾರಿಂದಲೂ ಹಾರ ಹಾಕಿಸಿಕೊಳ್ಳಲ್ಲ. ಒಂದು ವೇಳೆ ಗೆಲ್ಲದಿದ್ದರೆ ನನ್ನ ಹೆಣದ ಮೇಲೆಯೇ ಹಾರ, ತುರಾಯಿ ಹಾಕಿ ಎಂದು ಘೋಷಿಸಿದ ಸವದಿ.
ಬೆಳಗಾವಿ(ಏ.14): ಅಥಣಿ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಶುಕ್ರವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವ, ವಿಧಾನ ಪರಿಷತ್ ಸ್ಥಾನಕ್ಕೂ ತಮ್ಮ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಬೆಳಗ್ಗೆ ಸಭಾಪತಿ ಬಸವರಾಜ ಹೊರಟ್ಟಿ ಭೇಟಿಯಾಗಿ ಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ. ಬಳಿಕ ಕಾಂಗ್ರೆಸ್ ನಾಯಕರ ಜತೆಗೆ ಪಕ್ಷ ಸೇರ್ಪಡೆ ವಿಚಾರವಾಗಿ ಚರ್ಚೆ ನಡೆಸುವ ನಿರೀಕ್ಷೆ ಇದೆ.
ಬಿಜೆಪಿ ತೊರೆಯುವ ಕುರಿತು ಅಥಣಿಯಲ್ಲಿ ಗುರುವಾರ ರಾತ್ರಿ ಆಪ್ತರ ಸಭೆ ನಡೆಸಿದ ಅವರು ಕಾರ್ಯಕರ್ತರು ಆಯೋಜಿಸಿದ್ದ ಸಮಾವೇಶದಲ್ಲಿ ಪಾಲ್ಗೊಂಡರು. ಸಮಾವೇಶಕ್ಕೆ ಬಂದ ಬಹುತೇಕರು ಹಾರ-ತುರಾಯಿ ತಂದಿದ್ದೀರಿ. ನಾನು ಚುನಾವಣೆಯಲ್ಲಿ ಗೆಲ್ಲುವವರೆಗೆ ಯಾರಿಂದಲೂ ಹಾರ ಹಾಕಿಸಿಕೊಳ್ಳಲ್ಲ. ಒಂದು ವೇಳೆ ಗೆಲ್ಲದಿದ್ದರೆ ನನ್ನ ಹೆಣದ ಮೇಲೆಯೇ ಹಾರ, ತುರಾಯಿ ಹಾಕಿ ಎಂದು ಘೋಷಿಸಿದರು.
ಲಕ್ಷ್ಮಣ ಸವದಿ ಬಂಡಾಯ: ಕಾಂಗ್ರೆಸ್‌ಗೆ ಸಿಗುತ್ತಾ ಲಾಭ?
ಸಭೆಗೂ ಮುನ್ನ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಬಿಜೆಪಿ ಬಿಡುವ ನನ್ನ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದರು. ನನ್ನನ್ನು ಯಾಕೆ ಉಪ ಮುಖ್ಯಮಂತ್ರಿ ಸ್ಥಾನದಿಂದ ತೆಗೆದಿರಿ? ನಾನು ಏನು ತಪ್ಪು ಮಾಡಿದ್ದೆ? ಯಾರನ್ನಾದರೂ ಅತ್ಯಾಚಾರ ಮಾಡಿದ್ನಾ? ಯಾವ ಅಪರಾಧದ ಮೇಲೆ ತೆಗೆದು ಹಾಕಿದ್ದೀರಿ ಎಂದು ವರಿಷ್ಠರ ವಿರುದ್ಧ ಹರಿಹಾಯ್ದರು.
ಸೋತಿದ್ದರೂ ಉಪ ಮುಖ್ಯಮಂತ್ರಿ ಮಾಡಿದ್ದ ಪಕ್ಷವನ್ನು ಬಿಡುತ್ತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉಪ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ನಾನು ಕೇಳಿದ್ದೆನಾ? ನನಗೆ ಆ ಹುದ್ದೆ ಕೊಟ್ಟಮೇಲೆ ಪ್ರಾಮಾಣಿಕವಾಗಿ ಕೆಲಸ ಮಾಡಿದೆ. ಮೊದಲು ಪಕ್ಷದ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಿಜೆಪಿ ಬಿಡುವ ನನ್ನ ನಿರ್ಧಾರ ಅಚಲ. ಅದನ್ನು ಪ್ರಕಟ ಮಾಡುವ ಪೂರ್ವದಲ್ಲಿ ಏನೂ ಹೇಳಲ್ಲ. ಪಕ್ಷದಿಂದ ಹೊರ ಬಂದು ಮುಂದಿನ ತೀರ್ಮಾನ ಮಾಡುವೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಬೆಂಬಲಿಗರ ತರಾಟೆ, ಕಾರ್‌ಗೆ ಗುದ್ದಿ ಆಕ್ರೋಶ
ಅಥಣಿ: ಬಿಜೆಪಿ ತೊರೆಯದಂತೆ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ಮನವೊಲಿಕೆಗೆ ಗುರುವಾರ ಅಥಣಿಗೆ ಆಗಮಿಸಿದ್ದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಶ ನೇರ್ಲಿ ಮತ್ತು ಆರ್‌ಎಸ್‌ಎಸ್ ಮುಖಂಡರಿಗೆ ಸವದಿ ಬೆಂಬಲಿಗರು ಮುತ್ತಿಗೆ ಹಾಕಿ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರೆ, ಮತ್ತೆ ಕೆಲವರು ನೇರ್ಲಿ ಅವರ ಕಾರಿಗೆ ಗುದ್ದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಟಿಕೆಟ್‌ಗೆ ಭಿಕ್ಷೆ ಪಾತ್ರೆ ಹಿಡಿದು ತಿರುಗಲ್ಲ, ನಾನು ಸ್ವಾಭಿಮಾನಿ ರಾಜಕಾರಣಿ: ಲಕ್ಷ್ಮಣ ಸವದಿ
ನಮ್ಮ ಸಾಹುಕಾರಗೆ ಏಕೆ ಟಿಕೆಟ್ ತಪ್ಪಿಸಿದ್ದೀರಿ? ಉತ್ತರ ಕೊಟ್ಟೇ ಹೋಗುವಂತೆ ಪಟ್ಟುಹಿಡಿದ ಬೆಂಬಲಿಗರು ಈ ಜಿಲ್ಲಾಧ್ಯಕ್ಷ ಸಂಧಾನಕ್ಕೆ ಬಂದಿದ್ದಾರೆ. ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷರಾದ ಲಕ್ಷ್ಮಣ ಸವದಿ ಅವರಿಗೆ ಬಿಜೆಪಿ ವರಿಷ್ಠರು ಬೆಲೆ ಕೊಟ್ಟಿಲ್ಲ ಎಂದು ವ್ಯಂಗ್ಯವಾಡಿದರು. ಆಗ ಸವದಿ ಮಧ್ಯಪ್ರವೇಶಿಸಿ ಆಕ್ರೋಶಿತರನ್ನು ಸಮಾಧಾನ ಪಡಿಸಲೆತ್ನಿಸಿದರು. ಬಳಿಕ ನೇರ್ಲಿ ಅವರ ಕೈ ಹಿಡಿದುಕೊಂಡು ಬಂದು ಸವದಿ ಅವರೇ ಕಾರಿನೊಳಗೆ ಹತ್ತಿಸಿದರು. ಈ ವೇಳೆ ಕಾರನ್ನು ಸುತ್ತುವರೆದ ಜನ ಘೋಷಣೆ ಹಾಕಿದರು, ಕಾರಿನ ಬಾಗಿಲಿಗೆ ಗುದ್ದಿದರು. ಬಳಿಕ ಸವದಿ ಪುತ್ರರು ಜನರನ್ನು ಚದುರಿಸಿ ಕಾರಿಗೆ ದಾರಿ ಮಾಡಿಕೊಟ್ಟರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.