ಶೆಟ್ಟರ್‌ ರೀತಿ ನನ್ನನ್ನು ವಾಪಸ್‌ ಕರ್ಕೊಳ್ಳಲ್ವಾ?: ಈಶ್ವರಪ್ಪ

By Kannadaprabha News  |  First Published Mar 19, 2024, 12:59 PM IST

ಈ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಜಗದೀಶ್‌ ಶೆಟ್ಟರ್‌ ಅವರನ್ನು ಯಡಿಯೂರಪ್ಪನವರು ಮನೆಗೆ ಹೋಗಿ ಮರಳಿ ಕರೆದುಕೊಂಡು ಬಂದರು. ಬೆಳಗಾವಿ ಟಿಕೆಟ್‌ ಕೂಡಾ ಅವರಿಗೆ ನೀಡಲಾಗುವುದು ಎಂದು ಘೋಷಿಸಿದರು. ನಾನು ಗೆದ್ದರೆ ನಾಳೆ ಪಕ್ಷ ನನ್ನನ್ನು ಸೇರಿಸಿಕೊಳ್ಳುವುದಿಲ್ಲವೆ? ಸೇರಿಸಿಕೊಳ್ಳಲೇಬೇಕು ಎಂದು ಹೇಳಿದ ಕೆ.ಎಸ್. ಈಶ್ವರಪ್ಪ 


ಸೊರಬ/ಶಿವಮೊಗ್ಗ(ಮಾ.19): ಮನವೊಲಿಕೆಗೆ ಯಾರೇ ಬಂದರೂ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸುವ ತೀರ್ಮಾನದಿಂದ ಹಿಂದೆ ಸರಿಯುವುದಿಲ್ಲ, ಸ್ಪರ್ಧೆ ಮಾಡುವುದು ಅಚಲ. ಸ್ಪರ್ಧಿಸಿದರೆ ಪಕ್ಷ ಏನು ಮಾಡಲು ಸಾಧ್ಯ?. ಹೆಚ್ಚೆಂದರೆ ಉಚ್ಚಾಟನೆ ಮಾಡಬಹುದು. ಗೆದ್ದ ಮೇಲೆ ಪಕ್ಷಕ್ಕೆ ಸೇರಿಸಿಕೊಳ್ಳಲೇಬೇಕು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛಿಸಿರುವ ಕೆ.ಎಸ್. ಈಶ್ವರಪ್ಪ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ ಜಗದೀಶ್‌ ಶೆಟ್ಟರ್‌ ಅವರನ್ನು ಯಡಿಯೂರಪ್ಪನವರು ಮನೆಗೆ ಹೋಗಿ ಮರಳಿ ಕರೆದುಕೊಂಡು ಬಂದರು. ಬೆಳಗಾವಿ ಟಿಕೆಟ್‌ ಕೂಡಾ ಅವರಿಗೆ ನೀಡಲಾಗುವುದು ಎಂದು ಘೋಷಿಸಿದರು. ನಾನು ಗೆದ್ದರೆ ನಾಳೆ ಪಕ್ಷ ನನ್ನನ್ನು ಸೇರಿಸಿಕೊಳ್ಳುವುದಿಲ್ಲವೆ? ಸೇರಿಸಿಕೊಳ್ಳಲೇಬೇಕು ಎಂದು ಹೇಳಿದರು.

Latest Videos

undefined

ಹಿಂದುತ್ವವಾದಿಗಳಿಗೆ ಟಿಕೆಟ್ ತಪ್ಪಿಸಿ ಯಡಿಯೂರಪ್ಪ ಮೋಸ ಮಾಡಿದ್ದಾರೆ: ಕೆ.ಎಸ್‌.ಈಶ್ವರಪ್ಪ

ಸದ್ಯಕ್ಕೆ ನನ್ನ ಸ್ಪರ್ಧೆಯನ್ನು ತಡೆಯುವ ವಿಫಲ ಪ್ರಯತ್ನವನ್ನು ಬಿಜೆಪಿ ಮುಖಂಡರು ನಿಲ್ಲಿಸಲಿ. ನನ್ನ ಈ ಸ್ಪರ್ಧೆ ಪಕ್ಷದ, ಮೋದಿ ವಿರುದ್ಧ ಅಲ್ಲ. ಕುಟುಂಬ ರಾಜಕಾರಣ, ಯಡಿಯೂರಪ್ಪನವರ ಸರ್ವಾಧಿಕಾರದ ವಿರುದ್ಧ. ಬಿಜೆಪಿ ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬದವರ ಸ್ವತ್ತಲ್ಲ. ನಾನೂ ಕೂಡ ಪಕ್ಷಕ್ಕಾಗಿ ದುಡಿದಿದ್ದೇನೆ. ಇಡೀ ಪಕ್ಷವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಹುನ್ನಾರ ನಡೆಸಿರುವ ಬಿ.ಎಸ್. ಯಡಿಯೂರಪ್ಪ ಅವರಿಗೆ ಶಿವಮೊಗ್ಗ ಲೋಕಸಭಾ ಚುನಾವಣೆ ಪಾಠ ಕಲಿಸುತ್ತದೆ. ನನ್ನಂತೆ ಬಸವನಗೌಡ ಪಾಟೀಲ್ ಯತ್ನಾಳ್, ಸಿ.ಟಿ. ರವಿ, ಪ್ರತಾಪ್ ಸಿಂಹ, ಡಿ.ವಿ. ಸದಾನಂದಗೌಡ ಅವರಿಗೂ ಯಡಿಯೂರಪ್ಪ ಅವರ ಕುಟುಂಬ ಲೋಕಸಭೆಗೆ ಟಿಕೆಟ್ ನೀಡದೇ ವಂಚಿಸಲಾಗಿದೆ ಎಂದು ಆರೋಪಿದರು.
ಆಗ ಯಡಿಯೂರಪ್ಪ, ಈಗ ವಿಜಯೇಂದ್ರ‌ಗೆ ಜೈಕಾರ ಹಾಕುತ್ತಾ ಇರಬೇಕೇನು. ವಿಜಯೇಂದ್ರ‌ ಮುಖ್ಯಮಂತ್ರಿ ಆಗುವುದನ್ನು ನಾವು ನೋಡುತ್ತಾ ಕುಳಿತಿರಬೇಕೇನು? ಎಂದು ಈಶ್ವರಪ್ಪ ಪ್ರಶ್ನಿಸಿದರು.

ನಾನು ನನ್ನ ಪುತ್ರನಿಗಾಗಿ ಸ್ಪರ್ಧಿಸುತ್ತಿಲ್ಲ. ಪಕ್ಷ ಸರಿಪಡಿಸಲು ಈ ಸ್ಪರ್ಧೆ. ಈಗ ನನ್ನ ಪುತ್ರ ಕಾಂತೇಶ್ ಗೆ ಹಾವೇರಿಯಿಂದ ಟಿಕೆಟ್‌ ನೀಡುತ್ತೇನೆ ಎಂದರೂ ಅದು ಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ನಾನು ಮತ್ತು ನನ್ನ ಕುಟುಂಬ ಕಟ್ಟಾ ಹಿಂದುತ್ವವಾದಿ. ನನ್ನ ಎದೆ ಬಗೆದರೆ ರಾಮ, ಕೃಷ್ಣರೇ ಕಾಣುತ್ತಾರೆ. ಪ್ರಧಾನಿ ಮೋದಿ ತಮಗೆ ಆದರ್ಶ. ಅವರ ಬಗ್ಗೆ ದೈವತ್ವ ಭಾವನೆ ಹೊಂದಿದ್ದು, ತನ್ನಪಾಲಿಗೆ ದೇವರು, ಅವರು ತನ್ನ ಪ್ರಾಣ. ಅವರನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತೇನೆ. ನಮ್ಮ ಊರಿಗೆ ಪ್ರಧಾನಿ ಬರುತ್ತಿರುವುದು ಸಂತಸದ ವಿಚಾರ. ಆದರೆ ಅವರನ್ನು ಭೇಟಿ ಆಗದ ಸ್ಥಿತಿಯಲ್ಲಿದ್ದೇನೆ. ನಾನು ಸಮಾವೇಶದಲ್ಲಿ ಭಾಗವಹಿಸುವುದು ಸರಿಯಲ್ಲ. ನರೇಂದ್ರ ಮೋದಿ ಬರುವ ಸುದಿನದಂದು ಜಿಲ್ಲೆಯ ಮಠಾಧೀಶರನ್ನು ಭೇಟಿಯಾಗಿ ಪ್ರವಾಸ ಕೈಗೊಂಡಿದ್ದೇನೆ. ಗೆದ್ದ ಬಳಿಕ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುತ್ತೇನೆ. ಈಗ ನನ್ನ ಬೆಂಬಲಿಗರಿಗೆ ಸಭೆಗೆ ಹೋಗಲು ತಿಳಿಸಿದ್ದೇನೆ. ಮೋದಿ ಮಾತು ಕೇಳಿಕೊಂಡು ಬನ್ನಿ ಎಂದಿದ್ದೇನೆ ಎಂದರು.

click me!