
ಉಡುಪಿ(ಮಾ.19): ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಅಸಮಾಧಾನಗೊಂಡಿರುವ ಡಿ.ವಿ. ಸದಾನಂದಗೌಡರು ಕಾಂಗ್ರೆಸ್‌ನಿಂದ ಉಡುಪಿ - ಚಿಕ್ಕಮಗಳೂರು ಅಥವಾ ಮೈಸೂರು ಟಿಕೆಟ್ ಸಿಕ್ಕಿದರೆ ಸ್ಪರ್ಧಿಸುವ ಒಲವು ತೋರಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿವಿಎಸ್ ತಮ್ಮ ಹುಟ್ಟೂರು ಮಂಗಳೂರಿನ ಟಿಕೆಟ್ ನೀಡಿದ್ರೆ ಓಕೆ ಎಂದು ಹೇಳುತ್ತಿದ್ದಾರೆ.
ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಬಿಜೆಪಿ ಅಭ್ಯರ್ಥಿ. ವಿಧಾನಸಭೆಯಲ್ಲಿ ಉಡುಪಿ ವ್ಯಾಪ್ತಿಯ ಎಲ್ಲಾ 4 ಕ್ಷೇತ್ರಗಳಲ್ಲಿ ಸೋತಿರುವ ಉಡುಪಿ ಕಾಂಗ್ರೆಸ್ ನಲ್ಲಿ ಲೋಕಸಭೆಗೆ ಅಭ್ಯರ್ಥಿ ಇಲ್ಲದೇ, ಚಿಕ್ಕಮಗಳೂರಿನ ಜಿಲ್ಲಾಧ್ಯಕ್ಷ ಡಾ.ಅಂಶುಮತ್, ನ್ಯಾಯವಾದಿ ಸುಧೀರ್ ಮರೋಳಿ, ಆರತಿ ಕೃಷ್ಣ ಅವರು ಟಿಕೆಟ್‌ಗಾಗಿ ತೀವ್ರ ಲಾಭಿ ನಡೆಸುತಿದ್ದರು. ಆದರೆ ಕಾಂಗ್ರೆಸ್‌ನಿಂದಲೇ ಬಿಜೆಪಿ ಸೇರಿದ್ದ, ಈಗ ಹಿಂ.ವ.ಗಳ ಆಯೋಗದ ಮಾಜಿ ಅಧ್ಯಕ್ಷರಾಗಿರುವ ಜಯಪ್ರಕಾಶ್ ಹೆಗ್ಡೆ ಮತ್ತೆ ಕಾಂಗ್ರೆಸ್ ಸೇರಿದ್ದು, ಅವರಿಗೇ ಟಿಕೆಟ್ ಎನ್ನಲಾಗುತ್ತಿತ್ತು. ಆದರೆ ಅವರ ವಿರುದ್ಧ ಚಿಕ್ಕಮಗಳೂರಿನಲ್ಲಿ ಆರಂಭವಾದ ಗೋಬ್ಯಾಕ್ ಕೂಗು, ಹೆಗ್ಡೆ ಅವರಿಗೆ ಚುನಾವಣೆಗೆ ಬೇಕಾದ ಆರ್ಥಿಕ ಸಂಪನ್ಮೂಲ ಕೊರತೆ ಅವರಿಗೆ ಟಿಕೆಟ್ ನೀಡಬೇಕೇ ಬೇಡವೇ ಎನ್ನುವ ಬಗ್ಗೆ ಹೈಕಮಾಂಡ್ ಅಳೆದುತೂಗುತ್ತಿದೆ.
ಬಂಡೆದ್ದ ಡಿವಿಎಸ್ ಕಾಂಗ್ರೆಸ್‌ನತ್ತ?: ಬಿಜೆಪಿಯ ಇನ್ನೊಬ್ಬ ಹಿರಿಯ ನಾಯಕನಿಂದ ಬಂಡಾಯ?
ಅಂಶುಮಂತ್ ಲಾಭಿ:
ಚಿಕ್ಕಮಮಗಳೂರು ವ್ಯಾಪ್ತಿಯ ಎಲ್ಲಾ 4 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ನ್ನು ಗೆಲ್ಲಿಸುವಲ್ಲಿ ಮುಖ್ಯಪಾತ್ರ ವಹಿಸಿದ್ದ ಡಾ.ಅಂಶುಮಂತ್ ಅವರಿಗೆ ಅಲ್ಲಿನ ಕಾರ್ಯಕರ್ತರ ಒಲವು ಮತ್ತು ಆರ್ಥಿಕ ಶಕ್ತಿ ಇದ್ದು, ಕಳೆದೆರಡು ದಿನಗಳಿಂದ ಅವರೇ ಅಭ್ಯರ್ಥಿ ಎಂದು ಸುದ್ದಿ ಬಲವಾಗಿತ್ತು. ಅವರೂ ಬೆಂಗಳೂರಿನಲ್ಲಿಯೇ ಇದ್ದು ಟಿಕೆಟ್‌ಗಾಗಿ ಬಲವಾದ ಲಾಭಿ ನಡೆಸುತ್ತಿದ್ದಾರೆ.
ಕಾರ್ಯಕರ್ತರ ಮುಜುಗರ:
ಕಳೆದ ಬಾರಿ ಲೋಕಸಭಾ ಚುನಾವಣಾ ಪೂರ್ವ ಮೈತ್ರಿಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತ ಕೇಳುವುದಕ್ಕೆ ಮುಜುಗರ ಅನುಭವಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ಈ ಬಾರಿ ಟಿಕೆಟ್‌ಗಾಗಿ ಬಿಜೆಪಿಯಿಂದ ಬಂದವರಿಗೆ ಮತ ಹಾಕಿ ಎಂದು ಕೇಳುವ ಮುಜುಗರಕ್ಕೆ ಒಳಗಾಗುವ ಗೊಂದಲದಲ್ಲಿದ್ದಾರೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಬಿಜೆಪಿ ಮತಗಳನ್ನು ಬಿಜೆಪಿಯಿಂದ ಬಂದ ಅಭ್ಯರ್ಥಿಗಳಿಂದ ಒಡೆದು ಗೆಲ್ಲುವುದಕ್ಕೆ ಯೋಜನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಡಿವಿಎಸ್ ಕಾಂಗ್ರೆಸ್ ಸೇರುವುದು ಖಚಿತ ಆದಲ್ಲಿ ಅವರು ಉಡುಪಿ - ಚಿಕ್ಕಮಗಳೂರಿನಿಂದ ಸ್ಪರ್ಧಿಸುವುದೂ ಖಚಿತವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.