
ಬೆಂಗಳೂರು (ಏ.29): ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಮೇಲೆ ಕಲ್ಲು ಎಸೆತ ಪ್ರಕರಣವನ್ನು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಇದೆಲ್ಲ ಡ್ರಾಮಾ ಎಂದು ಟೀಕೆ ಮಾಡಿದ್ದಾರೆ. ಬೆಂಗಳೂರಿನ ನಿವಾಸದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಈ ಬಗ್ಗೆ ಹೇಳಿಕೆ ನೀಡಿ ಯಾರು ಕಲ್ಲು ಎಸೆದಿದ್ದಾರೆ. ಯಾವುದೇ ರೀತಿಯ ತನಿಖೆ ಮಾಡಿ ಸತ್ಯಾಸತ್ಯಾತೆ ಹೊರಬರಲಿ. ಬಿಜೆಪಿಯವರು ಕಲ್ಲು ಹೊಡೆದಿದ್ದಾರಾ ಕೇಳಬೇಕು? ನಮ್ಮ ಪಕ್ಷದಲ್ಲಿ ಕಲ್ಲು ಹೊಡಿಯೋರು ಯಾರು ಇಲ್ಲ. ಅತ್ಯಂತ ಸೂಕ್ಷ್ಮವಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಪ್ರಚಾರ,ಮೆರವಣಿಗೆ ಭರಾಟೆಯಲ್ಲಿ ಆಗಿದೆ. ಧ್ವಜದ ಕಡ್ಡಿಯಿಂದ ಏಟಾಗಿದೆ ಅಂತ ಪತ್ರಿಕೆಯಲ್ಲಿ ಬರೆದಿದ್ದಾರೆ. ಮೆರವಣಿಗೆ ನೂಕು ನುಗ್ಗಲಿನಲ್ಲಿ ಆಗಿರಬಹುದು. ನಮಗೂ ಎಷ್ಟೋ ಸಲ ಆಗಿದೆ. ಹೊಲಿಗೆ ಏನು ಹಾಕಿಲ್ಲ ಅಂತಿದ್ದಾರೆ. ಅದಕ್ಕೆ ರಕ್ತ ಚೆಲ್ಲಾಡ್ತಿದೆ, ಚಿಮ್ಮಿ ಬಿಟ್ಟಿದೆ ಅಂತ ಟಿವಿ ಯಲ್ಲಿ ಬಂತು. ಈ ಡ್ರಾಮಾಗಳು ರಾಷ್ಟ್ರೀಯ ಪಕ್ಷಗಳಿಂದ ನಡೆಯುತ್ತಿದೆ. ಸೋಲಿನ ಭೀತಿಯಿಂದ ಈ ರೀತಿ ಹೊಸ ನಾಟಕ ಸೃಷ್ಟಿ ಮಾಡೋದ್ರಲ್ಲಿ ಎರಡು ಪಕ್ಷಗಳು ಸ್ಪರ್ಧೆಗೆ ಇಳಿದಿದ್ದಾರೆ. ಎಂದು ಹೆಚ್ ಡಿ ಕೆ ವ್ಯಂಗ್ಯ ವಾಡಿದ್ದಾರೆ.
ಶುಕ್ರವಾರ ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ತಲೆಗೆ ಏಟು ಬಿದ್ದಿತ್ತು. ಬಾವುಟದ ಕೋಲು ತಗುಲಿ ಈ ಘಟನೆ ನಡೆದಿದೆ ಎಂದು ಕೆಲವರು ಹೇಳಿದರೆ, ಕಲ್ಲು ತೂರಾಟದಿಂದಾಗಿ ಪರಮೇಶ್ವರ್‌ರಿಗೆ ಗಾಯವಾಗಿದೆ ಎಂದು ಮತ್ತೆ ಕೆಲವರು ಆರೋಪಿಸಿದ್ದಾರೆ. ಆದರೆ, ಈವರೆಗೂ ಪರಮೇಶ್ವರ್ ಅವರಿಗೆ ಪೆಟ್ಟು ಬಿದ್ದದ್ದು ಹೇಗೆಂಬುದು ಖಚಿತವಾಗಿಲ್ಲ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೊರಟಗೆರೆ: ಪ್ರಚಾರ ವೇಳೆ ಪರಂ ತಲೆಗೆ ಗಾಯ
ಕೊರಟಗೆರೆ ತಾಲೂಕು ಭೈರೇನಹಳ್ಳಿಯಲ್ಲಿ ಶುಕ್ರವಾರ ಪ್ರಚಾರ ಸಂದರ್ಭದಲ್ಲಿ ಅಭಿಮಾನಿಗಳು ಪರಮೇಶ್ವರ್‌ರನ್ನು ಎತ್ತಿ ಕುಣಿಸುತ್ತಿದ್ದ ವೇಳೆ ಅವರು ತಲೆ ಭಾಗ ಹಿಡಿದು ಕೆಳಗಿಳಿದರು. ಈ ವೇಳೆ ಅವರ ತಲೆಗೆ ಪೆಟ್ಟು ಬಿದ್ದಿದೆ. ಕೂಡಲೇ ಅವರಿಗೆ ಸಮೀಪದ ಅಕ್ಕಿರಾಂಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಸಿದ್ದಾರ್ಥ ನಗರದ ಅವರ ಮನೆಯಲ್ಲೇ ಮುಂದಿನ ಚಿಕಿತ್ಸೆ ನೀಡಲಾಯಿತು. ಪರಮೇಶ್ವರ್ ಅವರಿಗೆ ಗಂಭೀರ ಏಟು ಬಿದ್ದಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಕೊರಟಗೆರೆ : ಪರಮೇಶ್ವರ್ 9.88 ಕೋಟಿ ರು.ಒಡೆಯ
ಈ ಹಿಂದೆ ಪ್ರಚಾರ ಸಭೆಯಲ್ಲಿ ನಡೆದಂತೆ ಕಿಡಿಗೇಡಿಗಳು ಕಲ್ಲು ತೂರಿರಬಹುದು ಎಂದು ಮತ್ತೆ ಕೆಲವರು ವ್ಯಾಖ್ಯಾನಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಪಡೆದಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕೊರಟಗೆರೆ ಕಾರ್ಯಕರ್ತರು ತುಮಕೂರಿನ ಸಿದ್ದಾರ್ಥ ನಗರದ ಅವರ ಮನೆಗೆ ಆಗಮಿಸಿ ಆರೋಗ್ಯ ವಿಚಾರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.