ಒಂದೆಡೆ ಹಿಂದು ಸಂಘಟನೆಗಳು ಹಾಗೂ ಹಿಂದುಗಳನ್ನು ಕೆಣಕುವಂಥ ಹೇಳಿಕೆ ನೀಡುವ ಸಿದ್ಧರಾಮಯ್ಯ ಇನ್ನೊಂದೆಡೆ, ಹಿಂದುಗಳ ಮತ ತಪ್ಪಿಹೋಗಬಾರದು ಎನ್ನುವ ಕಾರಣಕ್ಕೆ ಟೆಂಪಲ್ ರನ್ ಅನ್ನು ಕೂಡ ಆರಂಭಿಸಿದ್ದಾರೆ. ಇದೇ ಮೊದಲ ಬಾರಿಗೆ ಸಿದ್ಧರಾಮಯ್ಯ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ ರಂಭಾಪುರಿ ಶ್ರೀಗಳ ಎದುರು, ಧರ್ಮ ಒಡೆಯಲು ಹೋಗಿ ತಪ್ಪು ಮಾಡಿದೆ ಎಂದು ಸಿದ್ಧರಾಮಯ್ಯ ಪಶ್ಚಾತ್ತಾಪದ ಮಾತನ್ನೂ ಆಡಿದ್ದಾರೆ.
ಬೆಂಗಳೂರು (ಅ.19): ಮುಂಬರುವ ವಿಧಾನಸಭೆಯಲ್ಲಿ ಗೆಲುವು ಸಾಧಿಸಲು ಲಿಂಗಾಯತ ಮತಗಳು ಅನಿವಾರ್ಯ ಎನ್ನುವುದನ್ನು ಈಗಾಗಲೇ ಅರ್ಥ ಮಾಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು, ತಮ್ಮ ರಾಜಕೀಯ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಾಳೆಹೊನ್ನೂರಿನ ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದಲ್ಲದೆ, ರಂಭಾಪುರಿ ಸ್ವಾಮೀಜಿಗಳ ಆಶೀರ್ವಾದವನ್ನೂ ಪಡೆದುಕೊಂಡಿದ್ದಾರೆ. ಇದೇ ವೇಳೆ ರಂಭಾಪುರಿ ಸ್ವಾಮೀಜಿಗಳ ಮುಂದೆ ಸಿದ್ಧರಾಮಯ್ಯ ಪಶ್ಚಾತ್ತಾಪದ ಮಾತುಗಳನ್ನೂ ಆಡಿದ್ದಾರೆ. ಲಿಂಗಾಯತ ಧರ್ಮ ಒಡೆಯುವ ವಿಚಾರದ ಬಗ್ಗೆ ಮಾತನಾಡುತ್ತಾ, ಧರ್ಮ ಒಡೆಯುವುದು ನನ್ನ ಉದ್ದೇಶವಾಗಿರಲಿಲ್ಲ. ಕೆಲವರು ನನ್ನನ್ನು ದಾರಿ ತಪ್ಪಿಸಿದರು. ಈ ಸಾಹಸಕ್ಕೆ ಕೈ ಹಾಕಿ ಬಹಳ ದೊಡ್ಡ ತಪ್ಪು ಮಾಡಿದೆ ಎಂದು ಅವರು ಹೇಳಿದ್ದಾರೆ. ಇನ್ನೆಂದೂ ನಾನು ಧರ್ಮದ ವಿಚಾರದ ಬಗ್ಗೆ ಹೋಗುವುದಿಲ್ಲ. ರಾಜ್ಯದ ಜನರ ಹಾಗೂ ಅಭಿವೃದ್ಧಿಯ ಬಗ್ಗೆ ಮಾತ್ರ ಆದ್ಯತೆ ನೀಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿರುವುದಾಗಿ ರಂಭಾಪುರಿ ಪೀಠದ ವೀರ ಸೋಮೇಶ್ವರ ಸ್ವಾಮೀಜಿ ಹೇಳಿದ್ದಾರೆ.
ಪಂಚಪೀಠಗಳಲ್ಲಿ ಒಂದಾಗಿರುವ ರಂಭಾಪುರೀ ಮಠಕ್ಕೆ ಭೇಟಿ ನೀಡಿದ ಸಿದ್ಧರಾಮಯ್ಯ ಅವರಿಗೆ ಮಂತ್ರ-ಘೋಷಗಳ ಮೂಲಕ ಸ್ವಾಗತ ನೀಡಲಾಗಿದೆ. ಬಾಳೆಹೊನ್ನೂರಿನಲ್ಲಿ ಇರುವ ಮಠ ಇದಾಗಿದ್ದು, ಪಂಚ ಪೀಠಗಳಲ್ಲಿ ಮೊದಲನೇ ಮಠ ಎನ್ನುವ ಶ್ರೇಯ ಇದರಾಗಿದೆ. ಇದೇ ವೇಳೆ ದೇವಸ್ಥಾನದಲ್ಲಿ ಭದ್ರಕಾಲಿ ಅಮ್ಮನ ದೇವಾಲಯವನ್ನು ಸುತ್ತುವರಿದು ಸಿದ್ಧರಾಮಯ್ಯ ನಮಸ್ಕಾರವನ್ನೂ ಮಾಡಿದ್ದಾರೆ. ಇದೇ ವೇಳೆ ಬಾಳೆಹೊನ್ನೂರು ಶ್ರೀ ಪ್ರಸನ್ನ ರೇಣುಕಾ ವೀರಸೋಮಶ್ವರ ಶಿವಾಚಾರ್ಯ ಸ್ಬಾಮೀಜಿಯಿಂದ ಆರ್ಶೀವಾದವನ್ನೂ ಮಾಡಿದ್ದಾರೆ.
ತಮ್ಮ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ನೀಡಿದ ಸಿದ್ದು ಕುರಿತಾಗಿ ಮಾತನಾಡಿದ ರಂಭಾಪುರಿ ಶ್ರೀಗಳು, 'ಬರ್ತೀನಿ, ಬರ್ತೀನಿ ಎಂದು ಈಗ ಬಂದಿದ್ದೀರಾ' ಎಂದು ಪ್ರಶ್ನೆ ಮಾಡಿದರು. ಈ ವೇಳೆ ರುದ್ರಾಕ್ಷಿ ಮಾಲೆಯನ್ನೂ ಸಿದ್ಧರಾಮಯ್ಯ ಅವರಿಗೆ ಹಾಕಿದರು. ಮುಂದಿನ ಚುನಾವಣೆಯವರೆಗೂ ಯಾವುದೇ ಕಾರಣಕ್ಕೂ ಈ ಮಾಲೆಯನ್ನು ತೆಗೆಯಬೇಡಿ. ಕಾಶಿಯ ಹಾರ ಮುಂದಿನ ಚುನಾವಣೆವರೆಗೂ ನಿಮ್ಮ ಕೊರಳಲ್ಲೇ ಇರಲಿ ಒಳ್ಳೆಯದು ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಗೆ ಕಾಶಿಯಿಂದ ತಂದಿದ್ದ ರುದ್ರಾಕ್ಷಿ ಹಾರ ಹಾಕಿ ಸನ್ಮಾನಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಿಂದ ನೆಹರೂ ಔಟ್, ಸರ್ಕಾರದ ವಿರುದ್ಧ ಸಿದ್ಧು ಕೆಂಡಾಮಂಡಲ!
ಧರ್ಮ ಒಡೆಯಲು ಹೋಗಿ ತಪ್ಪು ಮಾಡಿದೆ: ಲಿಂಗಾಯತ ಪ್ರತ್ಯೇಕ ಧರ್ಮಹೋರಾಟ ವಿಚಾರದ ಬಗ್ಗೆ ಮಾತನಾಡುತ್ತಾ, ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆ ಸಿದ್ದರಾಮಯ್ಯ ರಂಭಾಪುರಿ ಶ್ರೀಗಳ ಮುಂದೆ ಪಶ್ಚಾತ್ತಾಪದ ಮಾತುಗಳನ್ನಾಗಿದ್ದಾರೆ. ನಾನು ಧರ್ಮ ಒಡೆಯುವ ಕೆಲಕ್ಕೆ ಕೈ ಹಾಕಿರಲಿಲ್ಲ. ಕೆಲವರು ನನ್ನನ್ನ ದಾರಿ ತಪ್ಪಿಸಿದರು. ಖಂಡಿತವಾಗಿಯೂ ಇದರ ಬಗ್ಗೆ ಪಶ್ಚಾತ್ತಾಪವಾಗಿದೆ ಧರ್ಮ ಒಡೆಯುವುದು ನನ್ನ ಉದ್ದೇಶ ಆಗಿರಲಿಲ್ಲ. ಇನ್ಯಾವತ್ತೂ ಧರ್ಮದ ವಿಷಯಕ್ಕೆ ಹೋಗುವುದಿಲ್ಲ. ರಾಜ್ಯದ ಅಭಿವೃದ್ಧಿ, ಜನರ ಕಲ್ಯಾಣಕ್ಕೆ ಕೆಲಸ ಮಾಡ್ತೇನೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ' ಎಂದು ಸ್ವಾಮೀಜಿ ತಿಳಿಸಿದ್ದಾರೆ. ಸಿದ್ದರಾಮಯ್ಯ ಜೊತೆಗಿನ ಮಾತುಕತೆ ವಿವರವನ್ನು ರಂಭಾಪುರೀ ಪೀಠದ ವೀರ ಸೋಮೇಶ್ವರ ಶ್ರೀ ಹೇಳಿಕೆ ನೀಡಿದ್ದಾರೆ.
ಬಿಜೆಪಿಗೆ ಹತಾಶೆ, ಪ್ರತಿಭಟನೆಗೆ ಸರ್ಕಾರದ ಕುಮ್ಮಕ್ಕು: ಸಿದ್ದರಾಮಯ್ಯ ಕಿಡಿ
ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಯಾಕೆ ಯಾಕೆ ಹಾಕಬೇಕಿತ್ತು ಎಂದು ಸಿದ್ಧರಾಮಯ್ಯ ಹೇಳಿದ್ದ ಒಂದೇ ಒಂದು ಮಾತಿಗೆ ಇಂದು ರಾಜ್ಯಾದ್ಯಂತ ಅವರ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆಗಳು ಆರಂಭವಾಗಿದೆ. ಹಿಂದು ಸಮುದಾಯದ ವಿರೋಧವನ್ನು ತಣಿಸುವ ನಿಟ್ಟಿಯಲ್ಲಿ ಹಾಗೂ ಲಿಂಗಾಯತ ಮತ ಬ್ಯಾಂಕ್‌ಅನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ಶೃಂಗೇರಿ ಶಾರದಾಂಬೆ ಹಾಗೂ ರಂಭಾಪುರಿ ಮಠಕ್ಕೆ ಭೇಟಿ ನೀಡಿದ್ದಾರೆ ಎಂದು ವಿಶ್ಲೇಷಣೆ ಮಾಡಲಾಗಿದೆ.
ಇತ್ತೀಚೆಗೆ ಸಿದ್ಧರಾಮೋತ್ಸವಕ್ಕಾಗಿ ರಾಜ್ಯಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಚಿತ್ರದುರ್ಗದ ಮರುಘಾ ಮಠಕ್ಕೆ ನಿಗದಿಯಾಗಿರದೇ ಇದ್ದ ಭೇಟಿ ನೀಡಿದ್ದರು. ಮುರುಘಾ ಮಠದ ಸ್ವಾಮೀಜಿಗಳನ್ನೂ ಭೇಟಿಯಾಗಿದ್ದ ರಾಹುಲ್ ಗಾಂಧಿ, ಅವರಲ್ಲಿ ಲಿಂಗ ದೀಕ್ಷೆಯ ಬಗ್ಗೆಯೂ ಮಾತನಾಡಿದ್ದರು. ಇವೆಲ್ಲವೂ ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಲಿಂಗಾಯತ ಮತಗಳನ್ನು ಸೆಳೆಯುವ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನ ಎಂದೇ ವಿಶ್ಲೇಷಣೆ ಮಾಡಲಾಗಿತ್ತು. ಆದರೆ, ಸಿದ್ಧರಾಮಯ್ಯ ಮೊದಲಿನಿಂದಲೂ ಮಠ, ಸ್ವಾಮೀಜಿಗಳ ಗೋಜಿಗೆ ಅಷ್ಟಾಗಿ ಹೋಗಿರಲಿಲ್ಲ. ಆದರೆ, ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇಬೇಕು ಎನ್ನುವ ಪಣ ತೊಟ್ಟಂತಿರುವ ಸಿದ್ಧರಾಮಯ್ಯ, ರಂಭಾಪುರಿ ಮಠಕ್ಕೆ ನೀಡುವ ಮುನ್ನ ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೂ ಭೇಟಿ ನೀಡಿ ದರ್ಶನ ಪಡೆದಿದ್ದರು.