ಧರಂಸಿಂಗ್‌ ಬಡವರ ಪರ ಬದ್ಧತೆ ಇದ್ದಂತಹ ರಾಜಕಾರಣಿ: ಸಿದ್ದರಾಮಯ್ಯ

By Govindaraj S  |  First Published Dec 26, 2022, 9:49 PM IST

ಧರಂಸಿಂಗ್‌ ಸಜ್ಜನ, ವಿನಯವಂತ ಹಾಗೂ ಕರುಣಾಮಯಿ ರಾಜಕಾರಣಿಯಾಗಿದ್ದರು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ದಿ.ಧರಂಸಿಂಗ್‌ ವ್ಯಕ್ತಿತ್ವವನ್ನು ತಮ್ಮದೇ ಆದ ಶೈಲಿಯಲ್ಲಿ ಬಣ್ಣಿಸಿದರು. 


ಕಲಬುರಗಿ (ಡಿ.26): ಧರಂಸಿಂಗ್‌ ಸಜ್ಜನ, ವಿನಯವಂತ ಹಾಗೂ ಕರುಣಾಮಯಿ ರಾಜಕಾರಣಿಯಾಗಿದ್ದರು ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ದಿ.ಧರಂಸಿಂಗ್‌ ವ್ಯಕ್ತಿತ್ವವನ್ನು ತಮ್ಮದೇ ಆದ ಶೈಲಿಯಲ್ಲಿ ಬಣ್ಣಿಸಿದರು. ಧರಂಸಿಂಗ್‌ ಫೌಂಡೇಷನ್‌ ವತಿಯಿಂದ ನಿರ್ಮಿಸಲಾದ ದಿ. ಮಾಜಿ ಸಿಎಂ ಧರಂಸಿಂಗ್‌ ಅವರ ಸ್ಮರಣಾರ್ಥ ಪರಿವಾರದವರು ನಿರ್ಮಿಸಿರುವ ಉಚಿತ ಕಲ್ಯಾಣ ಮಂಟಪ ಉದ್ಘಾಟನೆ ಮಾಡಿ, ಸರ್ವಧರ್ಮಗಳ 108 ಜೋಡಿ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಜ್ಜನ ರಾಜಕಾರಣಿಯ ಆದರ್ಶಗಳನ್ನು ಮರೆಯದೆ ಅವರು ತೋರಿದಂತಹ ಮಾರ್ಗದಲ್ಲಿ ನಡೆಯುತ್ತಿದ್ದಾರೆಂದು ಶಾಸಕ ಅಜಯ್‌ಸಿಂಗ್‌, ವಿಜಯಸಿಂಗ್‌ ಹಾಗೂ ಪ್ರಭಾವತಿ ಧರಂಸಿಂಗ್‌ ಅವರಿಗೆ ಅಭಿನಂದಿಸಿದ ಸಿದ್ದರಾಮಯ್ಯ ಇದೊಂದು ಬಡವರ ಪರವಾದ ಕಾರ್ಯ ಎಂದು ಶ್ಲಾಘಿಸಿದರು.

ಧರಂಸಿಂಗ್‌ ನನ್ನನ್ನೇ ಉಪಮುಖ್ಯಮಂತ್ರಿ ಸ್ಥಾನದಿಂದ ಡಿಸ್ಮಿಸ್‌ ಮಾಡಿದ್ರು: ತಮ್ಮ ಮಾತುಗಳಲ್ಲಿ ಧರಂಸಿಂಗ್‌ ಹಾಗೂ ತಮ್ಮ ರಾಜಕೀಯ ಸಂಬಂಧಗಳನ್ನು ವಿವರಿಸಿದ ಸಿದ್ದರಾಮಯ್ಯ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿದ್ದ ತಮ್ಮನ್ನೇ ಧರಂಸಿಂಗ್‌ ವಜಾ ಮಾಡಿದ್ದ ರಾಜಕೀಯ ಪ್ರಸಂಗ ಪ್ರಸ್ತಾಪಿಸಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. 2004ರಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗಿತ್ತು. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಅಧಿಕಾರದಲ್ಲಿತ್ತು. ನಾನಾಗ ಜೆಡಿಎಸ್‌ ಅಧ್ಯಕ್ಷನಾಗಿದ್ದೆ. ಅಂದು ನಡೆದ ಮಾತುಕತೆಯಂತೆ ಧರಂಸಿಂಗ್‌ ಸಿಎಂ, ನಾನು ಡಿಸಿಎಂ, ನಾನು ಉಪಮುಖ್ಯಮಂತ್ರಿಯಾಗಿ ಒಂದು ವರ್ಷ ಎರಡು ತಿಂಗಳು ಅಧಿಕಾರಾವಧಿ ತುಂಬುವುದರೊಳಗೇ ದೇವೇಗೌಡರ ಮಾತುಕೇಳಿ ಧರಂಸಿಂಗ್‌ ನನ್ನನ್ನು ಡಿಸಿಎಂ ಹುದ್ದೆಯಿಂದ ಡಿಸ್‌ಮಿಸ್‌ ಮಾಡಿದರು. 

Tap to resize

Latest Videos

undefined

Bus Yatra: ಜ.11ಕ್ಕೆ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್‌ ಬಸ್‌ ಯಾತ್ರೆ

ಅದು ಅವರ ಸ್ವಂತ ನಿರ್ಧಾರವಾಗಿರಲಿಲ್ಲ ಎಂದು ನನಗಂದು ಚೆನ್ನಾಗಿ ಗೊತ್ತಿತ್ತು ಎಂದು ಅಂದಿನ ರೋಚಕ ರಾಜಕೀಯ ಪ್ರಸಂಗ ಮೆಲಕು ಹಾಕುತ್ತಲೇ ಧರಂಸಿಂಗ್‌ ವ್ಯಕ್ತಿತ್ವ ಕಟ್ಟಿಕೊಡುವ ಯತ್ನ ಮಾಡಿದರು. ಸಜ್ಜನ ವಿನಯವಂತ ಹಾಗೂ ಕರುಣಾಮಯಿ ವ್ಯಕ್ತಿಯಾಗಿದ್ದ ಧರಂಸಿಂಗ್‌ ತಮ್ಮನ್ನು ಆತ್ಮೀಯವಾಗಿ ನೋಡುತ್ತಿದ್ದರು. ಎಂದೂ ಅನ್ಯ ಪಕ್ಷದವರೆಂದು ತಮ್ಮೊಂದಿಗೆ ಅವರು ವರ್ತಿಸಿದ್ದಿಲ್ಲ, ಜನಪರ ಕಾಳಜಿ ಹಾಗೂ ಅಭಿವೃದ್ಧಿ ಮಾಡುವ ಆಲೋಚನೆಯಲ್ಲಿ ಇದ್ದವರು. ಎಂಟು ಬಾರಿ ಎಂಎಲ್‌ಎ ಹಾಗೂ ಎರಡು ಬಾರಿ ಸಂಸದರಾಗಿ ಮತ್ತೆ ಸಿಎಂ ಆಗಿ ಜನರ ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಲೇ ಇದ್ದರು. ಈ ಭಾಗದಲ್ಲಿ ಏನಾದರೂ ಅಭಿವೃದ್ಧಿ ಆಗಿದ್ದರೆ ಖರ್ಗೆ ಹಾಗೂ ಧರಂಸಿಂಗ್‌ ಕಾರಣರಾಗಿದ್ದಾರೆ. ಹಾಗಾಗಿ ಅವರನ್ನ ರಾಮ-ಲಕ್ಷ್ಮಣ ಎಂದು ಜನ ಕರೆಯೊದ್ರರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲವೆಂದರು.

ಚುನಾವಣೆಯಲ್ಲಿ ಸೋತಾಗಲೂ ಕೂಡಾ ಜನಪರ ಕೆಲಸ ಮಾಡುತ್ತಿದ್ದರು. ಕಲಬುರಗಿಗೆ ರಿಂಗ್‌ ರಸ್ತೆ ಅವರ ಕೊಡುಗೆ. ಸಂವಿಧಾನದ ತಿದ್ದುಪಡಿ ಮಾಡಿ 371(ಜೆ) ಜಾರಿಗೆ ಆಗಿದ್ದರೆ ಖರ್ಗೆ ಹಾಗೂ ಧರಂಸಿಂಗ್‌ ಅವರ ಶ್ರಮದಿಂದ ಆಗಿದೆ ಎಂದರು. ಶಾಸಕ ಪ್ರಿಯಾಂಕ್‌ ಖರ್ಗೆ ಮಾತನಾಡಿ, ಹಿರಿಯ ನಾಯಕ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅನುಪಸ್ಥಿತಿಯಲ್ಲಿ ಅವರ ಪರವಾಗಿ ಧರಂಸಿಂಗ್‌ ¶ೌಂಡೇಶನ್‌ ಅವರಿಗೆ ಹಾಗೂ ಇಂದು ವಿವಾಹವಾದ 108 ಜೋಡಿಗಳಿಗೆ ಶುಭಾಶಯ ತಿಳಿಸಿದರು. ಅನಾರೋಗ್ಯದಿಂದಾಗಿ ಖರ್ಗೆ ಅವರು ಕಾರ್ಯಕ್ರಮಕ್ಕೆ ಬರದಿರುವುದಕ್ಕೆ ಧರಂಸಿಂಗ್‌ ಅವರ ಕುಟುಂಬದ ಸದಸ್ಯರ ಹಾಗೂ ಜೇವರ್ಗಿ ಜನರ ಕ್ಷಮೆಯಾಚಿಸಿದರು. ಬಡವರ ಪರ ಕಾಳಜಿ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿ ಗೆ ಮುಖ್ಯವಾಹಿನಿಗೆ ತರುವ ಧರಂಸಿಂಗ್‌ ಅವರ ಪ್ರಾಮಾಣಿಕ ಪ್ರಯತ್ನ ಅವರನ್ನು ಜೇವರ್ಗಿಯ ಜನರು ಅವರನ್ನು ಆರಿಸಿ ಕಳಿಸಿದ್ದರು ಎಂದರು.

ಶಾಸಕ ಡಾ. ಅಜಯ್‌ ಸಿಂಗ್‌ ಮಾತನಾಡಿ, ಬಡವರ ಬದುಕು ಹಸನಾಗಿಸಲು ಕಲ್ಯಾಣ ಮಂಟಪ ನಿರ್ಮಿಸಬೇಕೆಂಬ ತಮ್ಮ ತಂದೆಯವರ ಕನಸು ಇದೀಗ ನನಸಾಗುತ್ತಿದೆ ಎಂದು ಹರ್ಷಿಸಿದರು. ಅನಾರೋಗ್ಯಕ್ಕೊಳಗಾದಾಗ ಹಾಗೂ ಮದುವೆಗೆ ಅದೆಷ್ಟೇ ವೆಚ್ಚವಾದರೂ ಪರವಾಗಿಲ್ಲ ಎನ್ನುವರೇ ಇರುತ್ತಾರೆ. ಅಂತಹದ್ದರಲ್ಲಿ ಕಲ್ಯಾಣ ಮಂಟಪಕ್ಕೆಂದು ಸಾಲ ಸೋಲ ಮಾಡಿಕೊಂಡು ತೊಂದರೆಗೊಳಗಾಗದಿರಲಿ ಎಂದು ಬಡವರಿಗಾಗಿ ತಾವು ಉಚಿತವಾಗಿ ಕಲ್ಯಾಣ ಮಂಟಪ ಸೇವೆ ನೀಡುತ್ತಿರೋದಾಗಿ ಹೇಳಿದರು. ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್‌ ಮಾತನಾಡುತ್ತ ಧರಂಸಿಂಗ್‌ರ ಜಾತ್ಯತೀತ ವ್ಯಕ್ತಿತ್ವ ಕೊಂಡಾಡಿದರು.

ಸಿದ್ರಾಮುಲ್ಲಾಖಾನ್‌ ಎನ್ನಲು ರವಿ ಯಾರು?: ಸಿದ್ದರಾಮಯ್ಯ

2 ಮುಸ್ಲಿಂ ಸಮುದಾಯದ ಜೋಡಿಗಳೂ ಸೇರಿದಂತೆ ಸರ್ವಧರ್ಮಗಳ 108 ಜೋಡಿಗಳ ಮದುವೆ ಇಲ್ಲಿ ನೆರವೇರಿಸುವ ಮೂಲಕ ಡಾ. ಅಜಯ್‌ಸಿಂಗ್‌ ಇದೊಂದು ಜಾತ್ಯತೀತ ಕಾರ್ಯಕ್ರಮ ಎಂಬ ಸಂದೇಶ ರವಾನಿಸಿದರು. ಶಾಸಕರಾದ ಎಂ ವೈ ಪಾಟೀಲ, ಶರಣಬಸಪ್ಪಗೌಡ ದರ್ಶನಾಪುರ, ಪ್ರಭಾವತಿ ಧರಂಸಿಂಗ್‌, ಮಾಜಿ ಸಚಿವ ಶರಣಪ್ರಕಾಶ ಪಾಟೀಲ್‌, ಮಾಜಿ ಎಂಎಲ್‌ಸಿ ವಿಜಯ್‌ ಸಿಂಗ್‌ ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣ ಕಮಕನೂರ್‌, ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ್‌, ಸೊನ್ನದ ಶಿವಾನಂದ ಸ್ವಾಮಿಗಳು, ನೆಲೆಗೋ ಸಿದ್ದಲಿಂಗ ಸ್ವಾಮೀಜಿ ಸೇರಿದಂತೆ 30 ಕ್ಕೂ ಹೆಚ್ಚು ವಿವಿಧ ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.

click me!