ದಲಿತರು ಬಿಜೆಪಿ ಕಡೆ ತಿರುಗಿಯೂ ನೋಡಬೇಡಿ: ಸಿದ್ದರಾಮಯ್ಯ

By Kannadaprabha NewsFirst Published Mar 8, 2023, 3:30 AM IST
Highlights

ರಾಜ್ಯದಲ್ಲಿ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿತ್ತು. ಜನ ರಾಜಕೀಯವಾಗಿ ಪ್ರಬುದ್ಧವಾಗಿದ್ದು, ಹಿಂದುತ್ವದ ಪ್ರಯೋಗ ಕಷ್ಟವಾಗುತ್ತಿದೆ. ಹೀಗಾಗಿ ಹಣದ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಟನ್‌ಗಟ್ಟಲೇ ಲೂಟಿ ಹೊಡೆದ ಹಣವನ್ನು ಅಕ್ರಮದಿಂದ ಸಂಗ್ರಹಿಸುತ್ತಿದ್ದಾರೆ ಎಂದು ಕಿಡಿಕಾರಿದ ಸಿದ್ದರಾಮಯ್ಯ. 

ಬೆಂಗಳೂರು(ಮಾ.08): ‘ಬಿಜೆಪಿಯು ಮನುವಾದಿಗಳ, ಮೇಲ್ಜಾತಿಯವರ ಹಾಗೂ ಶ್ರೀಮಂತರ ಪಕ್ಷ. ಮನುವಾದಿಗಳು ಹಾಗೂ ಪುರೋಹಿತಶಾಹಿಗಳನ್ನು ಬೆಂಬಲಿಸುವವರು ಈ ದೇಶಕ್ಕೆ ಶಾಪ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು. ಹೀಗಾಗಿ ಯಾರೊಬ್ಬರೂ ಬಿಜೆಪಿಗೆ ಬೆಂಬಲ ನೀಡಬಾರದು. ದಲಿತರು ಬಿಜೆಪಿ ಕಡೆಗೆ ತಿರುಗಿಯೂ ನೋಡಬೇಡಿ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ರಾಜ್ಯದಲ್ಲಿ ಬಿಜೆಪಿ ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿತ್ತು. ಜನ ರಾಜಕೀಯವಾಗಿ ಪ್ರಬುದ್ಧವಾಗಿದ್ದು, ಹಿಂದುತ್ವದ ಪ್ರಯೋಗ ಕಷ್ಟವಾಗುತ್ತಿದೆ. ಹೀಗಾಗಿ ಹಣದ ಮೂಲಕ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಟನ್‌ಗಟ್ಟಲೇ ಲೂಟಿ ಹೊಡೆದ ಹಣವನ್ನು ಅಕ್ರಮದಿಂದ ಸಂಗ್ರಹಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಾನು ಬದುಕಿರೋವರೆಗೂ ಬಿಜೆಪಿ ವಿರೋಧಿಸುವೆ: ಸಿದ್ದರಾಮಯ್ಯ

ಕೆಪಿಸಿಸಿ ಕಚೇರಿಯಲ್ಲಿ ವಿಜಯಪುರ ನಗರ ಕ್ಷೇತ್ರದ ಮಾಜಿ ಶಾಸಕ ಮನೋಹರ್‌ ಐನಾಪುರ, ಕೊಳ್ಳೇಗಾಲ ಮಾಜಿ ಶಾಸಕ ನಂಜುಂಡಸ್ವಾಮಿ, ಮೈಸೂರು ಮಾಜಿ ಮೇಯರ್‌ ಹಾಗೂ ಬಿಎಸ್‌ಪಿ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜತೆಗೂಡಿ ಪಕ್ಷಕ್ಕೆ ಬರ ಮಾಡಿಕೊಂಡ ಅವರು ಬಳಿಕ ಮಾತನಾಡಿದರು.

ಈ ಮೂವರೂ ನಾಯಕರು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಜ್ಯ ನಾಯಕತ್ವದ ಮೇಲೆ ವಿಶ್ವಾಸ ಇಟ್ಟು ಷರತ್ತಿಲ್ಲದೆ ಪಕ್ಷಕ್ಕೆ ಸೇರುತ್ತಿದ್ದಾರೆ. ಜಿಲ್ಲಾ ಮಟ್ಟದಲ್ಲಿ ಅನ್ಯ ಪಕ್ಷಗಳ ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಅವರಿಗೆ ಅನುಮತಿ ನೀಡಿದ್ದೇವೆ. ಕೆಲವು ಪ್ರಮುಖ ನಾಯಕರನ್ನು ಮಾತ್ರ ಈ ಪಕ್ಷದ ಕಚೇರಿಯಲ್ಲಿ ಸೇರಿಸಿಕೊಳ್ಳಲಾಗುತ್ತಿದೆ. ಉಳಿದವರು ಆಯಾ ಜಿಲ್ಲಾ ಮಟ್ಟದಲ್ಲೇ ಸೇರ್ಪಡೆಯಾಗುತ್ತಾರೆ ಎಂದು ಹೇಳಿದರು.

ಬಿಜೆಪಿ ಬಗ್ಗೆ ಟೀಕಾ ಪ್ರಹಾರ ನಡೆಸಿದ ಅವರು, ಬಿಜೆಪಿ ಮೇಲ್ಜಾತಿ ಹಾಗೂ ಶ್ರೀಮಂತರ ಪಕ್ಷ. ಅವರು ತಳ ಸಮುದಾಯಗಳ ಶ್ರೇಯೋಭಿವೃದ್ಧಿ, ನಾಡಿನ ಅಭಿವೃದ್ಧಿ ಬಗ್ಗೆ ಯಾವತ್ತೂ ಆಲೋಚನೆ ಮಾಡಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರು ತಮ್ಮ ಕಾರ್ಯಕರ್ತರ ಸಭೆಯಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಡಿ, ಲವ್‌ ಜಿಹಾದ್‌ ಬಗ್ಗೆ ಮಾತನಾಡಿ ಎನ್ನುತ್ತಾರೆ. ಆ ಮೂಲಕ ರಾಜ್ಯದಲ್ಲಿ ಧರ್ಮ, ಜಾತಿ ಇಟ್ಟುಕೊಂಡು ಅಧಿಕಾರಕ್ಕೆ ಬರಬಹುದು ಎಂಬ ಹಗಲು ಕನಸು ಕಾಣುತ್ತಿದ್ದರು. ಇದೀಗ ಹಿಂದುತ್ವ ಪ್ರಯೋಗ ಕಷ್ಟಎಂಬುದು ಗೊತ್ತಾಗಿ ಲೂಟಿ ಹಣ ಹಂಚಿ ಗೆಲ್ಲಲು ಮುಂದಾಗಿದ್ದಾರೆ. ಹೀಗಾಗಿ ಅಂತಿಮ ಕ್ಷಣದವರೆಗೂ ಲೂಟಿಯಲ್ಲಿ ತೊಡಗಿದ್ದಾರೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಿಗೆ ಟಾರ್ಗೆಟ್‌ ಫಿಕ್ಸಾಗಿತ್ತು: ಸಿಎಂ ಬೊಮ್ಮಾಯಿ

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ವರ್ಷಗಳಾಗುತ್ತಿದ್ದು, ಯಾವುದೇ ಅಭಿವೃದ್ಧಿ ಮಾಡದೆ ಲೂಟಿ ಮಾಡುತ್ತಿದ್ದಾರೆ. ಗುತ್ತಿಗೆದಾರರ ಸಂಘ, ರುಪ್ಸಾ ಸಂಸ್ಥೆ, ಸ್ವಾಮೀಜಿಗಳು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದಾಗ ಬೊಮ್ಮಾಯಿ ಅವರು ದಾಖಲೆ ಕೇಳುತ್ತಿದ್ದರು. ಈ ಹಿಂದಿನ ಸರ್ಕಾರ ಮಾಡಿರಲಿಲ್ಲವೇ ಎಂದು ಹೇಳಿ ಜನರಿಗೆ ತಪ್ಪು ಮಾಹಿತಿ ನೀಡಿದ್ದರು. ಈಗ ಮಾಡಾಳು ವಿರೂಪಾಕ್ಷಪ್ಪ ಪ್ರಕರಣದಲ್ಲಿ ಏನಂತಾರೆ? ಮಾಡಾಳು ವಿರುಪಾಕ್ಷಪ್ಪ ಅವರ ಮನೆಯಲ್ಲಿ ಸಿಕ್ಕ 8 ಕೋಟಿ ರು. 40 ಪರ್ಸೆಂಟ್‌ ಕಮಿಷನ್‌ಗೆ ಪುರಾವೆ ಎಂದು ಹೇಳಿದರು.

ಉದ್ದೇಶಪೂರ್ವಕವಾಗಿ ಮಾಡಾಳು ರಕ್ಷಣೆ:

ಈ ಸರ್ಕಾರ ಈಗ ಶಾಸಕ ವಿರೂಪಾಕ್ಷಪ್ಪ ಅವರಿಗೆ ರಕ್ಷಣೆ ನೀಡುತ್ತಿದೆ. ಅವರನ್ನು ತಕ್ಷಣವೇ ಬಂಧನ ಮಾಡಲಿಲ್ಲ. ಅವರು ರಾಜೀನಾಮೆ ನೀಡಲು ಬಂದ ದಿನವೇ ಬಂಧಿಸಬೇಕಿತ್ತು. ಆ ಶಾಸಕ ಬೆಂಗಳೂರಿನಲ್ಲೇ ಇದ್ದು ನಿರೀಕ್ಷಣಾ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಹೀಗಿದ್ದರೂ ಜಾಮೀನು ಮಂಜೂರಾಗುವವರೆಗೂ ನಾಟಕ ಮಾಡುವ ಮೂಲಕ ಮಾಡಾಳು ಅವರನ್ನು ರಕ್ಷಣೆ ಮಾಡಿದೆ ಎಂದು ಕಿಡಿಕಾರಿದರು.
ಶಾಸಕರ ಪಕ್ಷ ಸೇರ್ಪಡೆ ವೇಳೆ ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ಧ್ರುವನಾರಾಯಣ ಸೇರಿ ಹಲವರು ಹಾಜರಿದ್ದರು.

click me!