ತಿರಂಗಾ ಅಭಿಯಾನ ಬಿಜೆಪಿಯ ನಾಟಕ: ಸಿದ್ದರಾಮಯ್ಯ

By Kannadaprabha NewsFirst Published Aug 12, 2022, 7:14 AM IST
Highlights

ರಾಷ್ಟ್ರಧ್ವಜಕ್ಕೆ ಗೌರವ ಕೊಡದವರು ಧ್ವಜ ಹಾರಿಸುತ್ತೇವೆ ಎಂದರೆ ನಂಬಬೇಕಾ?: ಸಿದ್ದು

ಬೆಂಗಳೂರು(ಆ.12): ‘ಮನೆ ಮನೆಯಲ್ಲೂ ತಿರಂಗಾ’ ಎಂಬುದು ಬಿಜೆಪಿಯವರ ನಾಟಕ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದವರು, ರಾಷ್ಟ್ರಧ್ವಜಕ್ಕೆ ಗೌರವ ಕೊಡದವರು ಈಗ ಮನೆ-ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತೇವೆ ಎಂದರೆ ಜನ ನಂಬುತ್ತಾರಾ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ವಿದುರಾಶ್ವತ್ಥದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರ ಜತೆಗೂಡಿ ಬೆಂಗಳೂರಿನ ಸರ್ವಜ್ಞ ನಗರ ಕ್ಷೇತ್ರದ ‘ಸ್ವಾತಂತ್ರ್ಯ ನಡಿಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿ ಸಹಜವಾಗಿಯೇ ಗೌರವಿಸಲ್ಪಡುವ ಎಲ್ಲಾ ವಿಚಾರಗಳನ್ನೂ ಪ್ರಚಾರದ ಗಿಮಿಕ್‌ ಆಗಿ ಬಳಸಿಕೊಳ್ಳುತ್ತಿದ್ದಾರೆ. ಇಂತಹ ಲಜ್ಜೆಗೆಟ್ಟ ಬಿಜೆಪಿಯನ್ನು ದೇಶದೆಲ್ಲೆಡೆ ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಕರೆ ನೀಡಿದರು.

ಕೇಸರಿ, ಬಿಳಿ ಹಾಗೂ ಹಸಿರು ಬಣ್ಣದ ಪೇಟ ಧರಿಸಿ ಗಮನ ಸೆಳೆದ ಅವರು, ಇಂದು ನಾವೆಲ್ಲರೂ ಸ್ವತಂತ್ರರಾಗಿದ್ದೇವೆ ಎಂದರೆ ಅದಕ್ಕೆ ಕಾಂಗ್ರೆಸ್‌ ಪಕ್ಷವೇ ಕಾರಣ. ದೇಶಕ್ಕಾಗಿ ಸಾವಿರಾರು ಜನ ಪ್ರಾಣ ತ್ಯಾಗ ಮಾಡಿದ್ದಾರೆ. ಬಿಜೆಪಿಯವರು ಸಾರ್ವರ್ಕರ್‌ ಅವರನ್ನು ಹಾಡಿ ಹೊಗಳುತ್ತಾರೆ. ಆದರೆ, ಬ್ರಿಟೀಷರ ಕ್ಷಮೆ ಕೇಳಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟವರು ಅವರು. ಅಂತಹವರನ್ನು ಪೂಜಿಸುವ ಬಿಜೆಪಿಯವರಿಂದ ನಾವು ದೇಶಭಕ್ತಿ ಪಾಠ ಕಲಿಯಬೇಕೆ? ಎಂದು ಪ್ರಶ್ನಿಸಿದರು.

ಸಿಎಂ ಬದಲಾವಣೆ ಚರ್ಚೆ: ಬಿಎಸ್‌ವೈ ಬದಲಾಗೋದು ಗೊತ್ತಿತ್ತು...ಬೊಮ್ಮಾಯಿ ಬಗ್ಗೆ ಸಿದ್ದು ಹೇಳಿದ್ದಿಷ್ಟು.

ಬಿಜೆಪಿಯವರಿಗೆ ಎಂದೂ ದೇಶದ ಬಗ್ಗೆ ಅಭಿಮಾನ ಇಲ್ಲ. ದೇಶಕ್ಕೆ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಎಲ್ಲವನ್ನೂ ನೀಡಿರುವುದು ಕಾಂಗ್ರೆಸ್‌. ಬಿಜೆಪಿಯವರಿಗೆ ಎಂದೂ ದೇಶಭಕ್ತಿ ಇರಲಿಲ್ಲ. ದೇಶಕ್ಕಾಗಿ ಎಂದೂ ಜೈಲಿಗೆ ಹೋದವರಲ್ಲ, ಪ್ರಾಣ ತ್ಯಾಗ ಮಾಡಿದವರಲ್ಲ. ದೇಶವನ್ನು ಲೂಟಿ ಹೊಡೆದಿದ್ದೇ ಇವರ ಸಾಧನೆ. ಇದೀಗ ತಮ್ಮ ಭ್ರಷ್ಟಾಚಾರ ಮರೆ ಮಾಚಲು ಮನೆ ಮನೆಯಲ್ಲೂ ತಿರಂಗ ಎಂಬ ನಾಟಕ ಶುರು ಮಾಡಿದ್ದಾರೆ ಎಂದು ಕಿಡಿ ಕಾರಿದರು.

ರಾಷ್ಟ್ರಧ್ವಜ ಹಾರಿಸಲು ಸಿದ್ದು ಹರಸಾಹಸ

ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮದ ವೇಳೆ ರಾಷ್ಟ್ರಧ್ವಜ ಹಾರಿಸಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಹಗ್ಗ ಎಳೆದರೂ ಬಾವುಟ ಹಾರಲಿಲ್ಲ. ಕೊನೆಗೆ ಮತ್ತೊಮ್ಮೆ ಧ್ವಜಕಂಬ ಏರಿದ ಕಾರ್ಯಕರ್ತರೊಬ್ಬರು ಮತ್ತೊಮ್ಮೆ ಸೂಕ್ತವಾಗಿ ರಾಷ್ಟ್ರಧ್ವಜ ಕಟ್ಟಿದರು. ಬಳಿಕ ಸಿದ್ದರಾಮಯ್ಯ ಅವರು ಹಗ್ಗ ಎಳೆದಾಗ ತ್ರಿವರ್ಣ ಧ್ವಜ ಹಾರಾಡಿತು.
 

click me!