ಬಿಜೆಪಿ ಸರ್ಕಾರದ ಚಾಜ್‌ರ್‍ಶೀಟ್‌ನ್ನೊಳಗೊಂಡ ಪಾಪದ ಪುರಾಣವನ್ನು ಜನರಿಗೆ ತಲುಪಿಸುವ ಕಾರಣದಿಂದಲೇ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕೈಗೊಂಡಿದೆ. ನಾನು ಹಾಗೂ ಡಿ.ಕೆ.ಶಿವಕುಮಾರ ರಾಜ್ಯಾದ್ಯಂತ ಸಂಚರಿಸಿ ಬಿಜೆಪಿ ಸರ್ಕಾರದ ಕರ್ಮಕಾಂಡಗಳನ್ನು ಬಿಚ್ಚಿಡಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ಯಾದಗಿರಿ (ಜ.29): ಬಿಜೆಪಿ ಸರ್ಕಾರದ ಚಾಜ್‌ರ್‍ಶೀಟ್‌ನ್ನೊಳಗೊಂಡ ಪಾಪದ ಪುರಾಣವನ್ನು ಜನರಿಗೆ ತಲುಪಿಸುವ ಕಾರಣದಿಂದಲೇ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಕೈಗೊಂಡಿದೆ. ನಾನು ಹಾಗೂ ಡಿ.ಕೆ.ಶಿವಕುಮಾರ ರಾಜ್ಯಾದ್ಯಂತ ಸಂಚರಿಸಿ ಬಿಜೆಪಿ ಸರ್ಕಾರದ ಕರ್ಮಕಾಂಡಗಳನ್ನು ಬಿಚ್ಚಿಡಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಅಂಗವಾಗಿ ಶನಿವಾರ ಯಾದಗಿರಿಯ ವನಿಕೇರಿ ಲೇಔಟ್ ಮೈದಾನದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಫೆ.3ರಿಂದ ಬೀದರ್‌ನ ಬಸವ ಕಲ್ಯಾಣದಿಂದ 2ನೇ ಹಂತದ ಪ್ರಜಾಧ್ವನಿ ಯಾತ್ರೆ ಶುರುವಾಗಲಿದೆ ಎಂದರು.
ಪ್ರಧಾನಿ ಮೋದಿಯೇ ಬಿಜೆಪಿಯವರ ಬಂಡವಾಳ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ ಯೋಜನೆಗಳನ್ನು ಈಗ ಮೋದಿ ಉದ್ಘಾಟಿಸುತ್ತಿದ್ದಾರೆ. ಅಡುಗೆ ಮಾಡಿದ್ದು ನಾವು, ಬಡಿಸಿದ್ದು ಮೋದಿ ಎಂಬಂತಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಸರ್ಕಾರದಲ್ಲಿ ಯೋಜನೆಗಳು ಹಾಗೂ ಜನರಿಗೆ ತಲುಪಿದ ಬಗ್ಗೆ ಒಂದೇ ವೇದಿಕೆಯಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಲು ನಾನು ಸಿದ್ಧ ಎಂದು ಸವಾಲೆಸೆದರು.
ನಾರಾಯಣಪುರ ಎಡದಂಡೆ ಕಾಲುವೆ ಸ್ಕಾಡಾ ಗೇಟ್ ಅಳವಡಿಸಲು 3500 ಕೋಟಿ ರು. ಖರ್ಚು ಮಾಡಿ 2014 ರಿಂದ ಪ್ರಾರಂಭಿಸಿ 2017ರಲ್ಲೆ ಮುಗಿಸಿದ್ದೇವೆ. ಆದರೆ ಉದ್ಘಾಟನೆ ಮಾಡಿದ್ದು ಮಾತ್ರ ಮೋದಿ. ರಾಜ್ಯದ ಜನರು ಬಿಜೆಪಿ ಸರ್ಕಾರವನ್ನು ಕಿತ್ತೆಸೆದು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದಾರೆ. ‘ಪ್ರಜಾಧ್ವನಿ’ ಕಾರ್ಯಕ್ರಮದಲ್ಲಿ ಜನರು ನಿರೀಕ್ಷೆಗೂ ಮೀರಿ ಸ್ಪಂದಿಸಿ ದ್ದಾರೆ. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿಗೆ ಕಾಂಗ್ರೆಸ್ ಕಂಡರೆ ಭಯ: ಸಿದ್ದರಾಮಯ್ಯ ತಿರುಗೇಟು
ಕಾಂಗ್ರೆಸ್ ಅಧಿಕಾರವಧಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ 35 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ. ಈ ಭಾಗದ ಅಭಿವೃದ್ಧಿಗೆ ಕಲಂ 371 (ಜೆ) ಕಾನೂನು ಮಾಡಲಾಗಿದೆ ಎಂದ ಅವರು, ನನ್ನ ಅಧಿಕಾರವಧಿಯಲ್ಲಿ ನೀಡಿದ 165 ಭರವಸೆ ಪೈಕಿ 158 ಭರವಸೆ ಈಡೇರಿಸಿದ್ದು, ಹೆಚ್ಚುವರಿ 30 ಕಾರ್ಯಕ್ರಮಗಳನ್ನು ನೀಡಲಾಗಿದೆ. ಪ್ರಮಾಣ ವಚನ ಸ್ವೀಕರಿಸಿದ ಒಂದೇ ತಾಸಿನಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ ಹಾಗೂ ಸಾಲ ಮನ್ನಾದಂತಹ ಭರವಸೆಗಳನ್ನು ಈಡೇರಿಸಿದ್ದೇವೆ. ಆದರೆ, ಬಿಜೆಪಿ ಆಡಳಿತದಲ್ಲಿ ಬರೀ ಭರವಸೆಗಳನ್ನು ನೀಡಲಾಗುತ್ತಿದೆ ಎಂದರು.