ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಹಾಗೂ ಗೃಹಿಣಿಯರಿಗೆ 2 ಸಾವಿರ ರು. ನೆರವು ಖಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾನ ನೀಡಿದರು.
ಯಾದಗಿರಿ (ಜ.29): ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಹಾಗೂ ಗೃಹಿಣಿಯರಿಗೆ 2 ಸಾವಿರ ರು. ನೆರವು ಖಚಿತ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾನ ನೀಡಿದರು. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ಅಂಗವಾಗಿ ಶನಿವಾರ ಯಾದಗಿರಿಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ಬಡ ತಾಯಂದಿರ ಕಷ್ಟನಿವಾರಣೆಗೆ ಪ್ರತಿ ತಿಂಗಳು 2 ಸಾವಿರ ರು. ನೆರವು ಹಾಗೂ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವ ವಾಗ್ದಾನಕ್ಕೆ ಪ್ರಿಯಾಂಕಾ ಗಾಂಧಿ ಘೋಷಣೆ ಮಾಡಿದ್ದಾರೆ. ಜೊತೆಗೆ ನಮ್ಮ ಸರ್ಕಾರ ಬಂದಾಗ ಪ್ರತಿ ಕುಟುಂಬಕ್ಕೆ 10 ಕೆಜಿ ಉಚಿತ ಅಕ್ಕಿ ನೀಡುತ್ತೇವೆ. ಇದು ನಮ್ಮ ಭಾಷೆ ಎಂದರು.
ಖರ್ಗೆ, ಧರಂರಿಂದ ಈ ಭಾಗ ಅಭಿವೃದ್ಧಿ: ಕಾಂಗ್ರೆಸ್ ಅಧಿಕಾರವಧಿಯಲ್ಲಿ ಈ ಭಾಗ ಅಭಿವೃದ್ಧಿ ಆಗಿಲ್ಲ ಎಂದು ಪ್ರಧಾನಿ ಇತ್ತೀಚೆಗೆ ಇಲ್ಲಿಗೆ ಬಂದಾಗ ಹೇಳಿದ್ದಾರೆ. ನಮ್ಮ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರು ಈ ಭಾಗ ಹಿಂದುಳಿದಿದ್ದರಿಂದ ಶೈಕ್ಷಣಿಕ ಹಾಗೂ ಔದ್ಯೋಗಿಕ ಅಭಿವೃದ್ಧಿಗಾಗಿ ಆರ್ಟಿಕಲ್ 371 (ಜೆ) ಜಾರಿಗೆ ತಂದಿದ್ದಾರೆ. ಕಲಬುರಗಿಯಲ್ಲಿ ಇಎಸ್‌ಐ ಆಸ್ಪತ್ರೆ ಬಂದಿದೆ, ಅದು ಕಾಂಗ್ರೆಸ್ ಕೊಡುಗೆ ಎಂದ ಡಿಕೆಶಿ, ಬಿಜೆಪಿ ಸರ್ಕಾರವಧಿಯಲ್ಲಿ ಮೋದಿ ಈ ಭಾಗಕ್ಕೆ ಏನೂ ಮಾಡದೆ ಬರೀ ಭರವಸೆ ನೀಡಿದ್ದಾರೆಂದು ಟೀಕಿಸಿದರು.
ಯಾದಗಿರಿಯಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಬಸ್‌ಯಾತ್ರೆ: ಬಿಜೆಪಿ ವಿರುದ್ಧ ಸಿದ್ದು-ಡಿಕೆಶಿ ವಾಗ್ದಾಳಿ
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ರೈತರ, ಕೂಲಿ ಕಾರ್ಮಿಕರ, ಬಡವರ ದೀನ ದಲಿತರ ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮ, ಯೋಜನೆಗಳನ್ನು ಜಾರಿಗೆ ತಂದಿದೆ. ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ವಾರ್ಷಿಕ 5 ಸಾವಿರ ಕೋಟಿ ರು. ಅನುದಾನ ನೀಡುವುದರ ಜೊತೆಗೆ ಬ್ಯಾಕ್ ಲಾಗ್ ಹುದ್ದೆ ತುಂಬಲಾಗುವುದು ಎಂದು ಭರವಸೆ ನೀಡಿದರು. ಗುತ್ತಿಗೆದಾರರೊಬ್ಬರು ಈ ಸರ್ಕಾರದ ಕಮೀಷನ್ ದಂಧೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡರು. ನಾವೆಲ್ಲ ಹೋರಾಟ ಮಾಡಿದ ಮೇಲೆ ಇದಕ್ಕೆ ಕಾರಣರಾಗಿದ್ದಾರೆ ಎಂಬ ಆರೋಪ ಹೊತ್ತಿದ್ದ ಈಶ್ವರಪ್ಪ ರಾಜಿನಾಮೆ ನೀಡಿದರು. ಗುತ್ತಿಗೆದಾರರ ಸಂಘದಿಂದ ಮೋದಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದ್ದರಾದರೂ, ಮೋದಿ ಅವರು ಮೊನ್ನೆ ಬಂದಾಗ ಈ ಬಗ್ಗೆ ಏನನ್ನೂ ಪ್ರಸ್ತಾಪಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಧರ್ಮಗಳ ನಡುವೆ ಬಿರುಕು ಬಿಜೆಪಿ ಸಾಧನೆ: ಕಾಂಗ್ರೆಸ್ ಶಕ್ತಿ ಈ ದೇಶದ ಶಕ್ತಿ. ಈ ದೇಶಕ್ಕೆ ಸ್ವಾತಂತ್ರ್ಯ ತಂದಿದ್ದು, ರಾಷ್ಟ್ರಧ್ವಜ ನೀಡಿದ್ದು, ಸಂವಿಧಾನ ತಂದಿದ್ದು, ಮೀಸಲಾತಿ ತಂದಿದ್ದು ಕಾಂಗ್ರೆಸ್ ಪಕ್ಷ ಎಂದ ಡಿ.ಕೆ. ಶಿವಕುಮಾರ, ಯುವಕರಿಗೆ ಉದ್ಯೋಗ, ಮಕ್ಕಳಿಗೆ ಬಿಸಿಯೂಟ, ನೀರಾವರಿ ಯೋಜನೆ, ರೈತಪರ ಯೋಜನೆ, ಉಳುವವನಿಗೆ ಭೂಮಿ ಮಂಜೂರು ಮುಂತಾದ ಕಾರ್ಯಕ್ರಮಗಳು ಕಾಂಗ್ರೆಸ್ ಕೊಡುಗೆ. ಆದರೆ ಬಿಜೆಪಿ ಸಾಧನೆ ಎಂದರೆ ಧರ್ಮಗಳ ನಡುವೆ ಬಿರುಕು ಮೂಡಿಸಿ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.
ಬಿಜೆಪಿಗೆ ಕಾಂಗ್ರೆಸ್ ಕಂಡರೆ ಭಯ: ಸಿದ್ದರಾಮಯ್ಯ ತಿರುಗೇಟು
ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ ಬಗ್ಗೆ ಪಾಪದ ಪುರಾಣ ಎನ್ನುವ ಕಿರುಹೊತ್ತಗೆ ಮುದ್ರಿಸಿದ್ದು ಈ ಪುಸ್ತಕವನ್ನು ಜನಜಾಗೃತಿಗಾಗಿ ತಲುಪಿಸುತ್ತೇವೆ ಎಂದ ಅವರು, ಈ ಕೆಟ್ಟಸರ್ಕಾರದ ಕೊಳೆ ತೊಳೆಯುವ ಮೂಲಕ ಪ್ರಜಾಧ್ವನಿ ಕಾರ್ಯಕ್ರಮ ಬೆಳಗಾವಿಯಲ್ಲಿ 16ರಂದು ಪ್ರಾರಂಭಿಸಿದ್ದು, ಜ.28 ರಂದು ಯಾದಗಿರಿಯಲ್ಲಿ ಮುಕ್ತಾಯವಾಗಲಿದೆ ಎಂದರು.