ಪ್ರಚಾರದ ವೇಳೆ ಸಂದರ್ಶನದಲ್ಲಿ ಮಾಜಿ ಸಿಎಂ ಹೇಳಿಕೆ ವೈರಲ್, ನನ್ನ ಹೇಳಿಕೆ ಬೊಮ್ಮಾಯಿಗೆ ಮಾತ್ರವೇ ಸೀಮಿತ: ಬಳಿಕ ಸಿದ್ದರಾಮಯ್ಯ ಸ್ಪಷ್ಟನೆ
ಮೈಸೂರು(ಏ.23): ‘ರಾಜ್ಯದಲ್ಲಿ ಲಿಂಗಾಯತರೇ ಮುಖ್ಯಮಂತ್ರಿಯಾಗಿದ್ದಾರೆ. ಅವರೇ ಎಲ್ಲಾ ಭ್ರಷ್ಟಾಚಾರ ಮಾಡಿ ರಾಜ್ಯವನ್ನು ಹಾಳು ಮಾಡಿರುವುದು’ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದು, ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಹೇಳಿಕೆ ವಿವಾದವಾಗುತ್ತಿದ್ದಂತೆ ಎಚ್ಚೆತ್ತಿರುವ ಸಿದ್ದು, ‘ಲಿಂಗಾಯತರೆಲ್ಲರೂ ಭ್ರಷ್ಟಾಚಾರ ಮಾಡಿದ್ದಾರೆ ಎಂದು ನಾನು ಹೇಳಿಲ್ಲ. ನನ್ನ ಹೇಳಿಕೆ ಬಸವರಾಜ ಬೊಮ್ಮಾಯಿಗೆ ಮಾತ್ರವೇ ಸೀಮಿತ. ಚುನಾವಣೆ ಸಂದರ್ಭದಲ್ಲಿ ನನ್ನ ಹೇಳಿಕೆಯನ್ನು ತಿರುಚಿ, ಅದರ ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.
ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾಗ ವಿದ್ಯುನ್ಮಾನ ಮಾಧ್ಯಮವೊಂದಕ್ಕೆ ಅವರು ಸಂದರ್ಶನ ನೀಡಿದ್ದರು. ಈ ವೇಳೆ, ಬಿಜೆಪಿಯವರು ಕಾಂಗ್ರೆಸ್‌ಗೆ ಲಿಂಗಾಯಿತ ಸಿಎಂ ಮಾಡಿ ನೋಡೋಣ ಎಂಬ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ಇದಕ್ಕೆ ನಿಮ್ಮ ಉತ್ತರವೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಈಗ ಲಿಂಗಾಯಿತರೇ ಮುಖ್ಯಮಂತ್ರಿ (ಬಸವರಾಜ ಬೊಮ್ಮಾಯಿ) ಇದ್ದಾರಲ್ಲಾ. ಅವರೇ ಎಲ್ಲ ಭ್ರಷ್ಟಾಚಾರ ಮಾಡಿ, ರಾಜ್ಯವನ್ನು ಹಾಳು ಮಾಡಿರುವುದು’ ಎಂದು ಹೇಳಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ವರುಣದಲ್ಲಿ ದೊಡ್ಡ ಅಂತರದಿಂದ ಗೆಲ್ಲುತ್ತೇನೆ: ಸಿದ್ದರಾಮಯ್ಯ
ಈ ಹಿಂದೆ ವೀರಶೈವ-ಲಿಂಗಾಯಿತ ಸಮಾಜವನ್ನು ಒಡೆಯಲು ಯತ್ನಿಸಿದ ಸಿದ್ದರಾಮಯ್ಯ, ಈಗ ಆ ಸಮುದಾಯದವರೆಲ್ಲ ಭ್ರಷ್ಟರು, ರಾಜ್ಯವನ್ನು ಹಾಳು ಮಾಡಿದವರು ಎಂಬ ಸಂವೇದನಾರಹಿತ ಹಾಗೂ ದ್ವೇಷಪೂರಿತ ಹೇಳಿಕೆ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ.
ನನ್ನ ಹೇಳಿಕೆ ಬೊಮ್ಮಾಯಿಗೆ ಮಾತ್ರವೇ ಸೀಮಿತ:
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ‘ನನ್ನ ಹೇಳಿಕೆ ಬಸವರಾಜ ಬೊಮ್ಮಾಯಿಗೆ ಮಾತ್ರವೇ ಸೀಮಿತ. ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದಷ್ಟೇ ಹೇಳಿದ್ದೇನೆ. ಲಿಂಗಾಯತರೆಲ್ಲರೂ ಭ್ರಷ್ಟಾಚಾರ ಮಾಡಿದ್ದಾರೆ ಎಂದಿಲ್ಲ. ಲಿಂಗಾಯಿತರಲ್ಲಿ ಮುಖ್ಯಮಂತ್ರಿಗಳಾಗಿದ್ದವರು ಬಹಳ ಪ್ರಾಮಾಣಿಕರಾಗಿದ್ದರು. ಆದರೆ, ಬೊಮ್ಮಾಯಿ ಹಾಗಿಲ್ಲ. ಚುನಾವಣೆ ಸಂದರ್ಭದಲ್ಲಿ ನನ್ನ ಹೇಳಿಕೆಯನ್ನು ತಿರುಚಿ, ಲಾಭ ಪಡೆಯಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಕಿಡಿ ಕಾರಿದ್ದಾರೆ.
ನಾವು ಜಾತಿ ಮೇಲೆ ಮುಖ್ಯಮಂತ್ರಿಯನ್ನು ಮಾಡುವುದಿಲ್ಲ. ಚುನಾವಣೆ ಬಳಿಕ, ಸಿಎಂ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.