ಗೊಡ್ಡು ಬೆದರಿಕೆಗೆ ನಾನು ಬಗ್ಗಲ್ಲ, ಭಯ ಪಡಲ್ಲ, ಸಚಿವ ಅಶ್ವತ್ಥ ಹೇಳಿಕೆಗೆ ವಿಧಾನಸಭೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು
ವಿಧಾನಸಭೆ(ಫೆ.22): ‘ನನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳುವುದಿಲ್ಲ. ನನ್ನ ಜೀವನದ ಕೊನೆಯವರೆಗೆ ಸಮಾಜದ ದುರ್ಬಲರು, ದಲಿತರು, ಬಡವರ, ಅಲ್ಪಸಂಖ್ಯಾತರ ಪರವಾಗಿಯೇ ಹೋರಾಟ ನಡೆಸುತ್ತೇನೆ. ದಮ್ಮು, ತಾಕತ್ತು ಇದ್ದರೆ ನನ್ನನ್ನು ಹೊಡೆದು ಹಾಕಲಿ ನೋಡೋಣ’ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಮಂಗಳವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಸಚಿವರೊಬ್ಬರು (ಡಾ.ಸಿ.ಎನ್.ಅಶ್ವತ್ಥನಾರಾಯಣ) ನನ್ನನ್ನು ಟಿಪ್ಪು ಸುಲ್ತಾನ್ ರೀತಿ ಹೊಡೆದು ಹಾಕಿ ಎಂದಿದ್ದಾರೆ. ನನ್ನನ್ನು ಹೆದರಿಸಬಹುದು ಎಂದು ಭಾವಿಸಿದ್ದರೆ, ಅದು ಅವರ ಭ್ರಮೆ. ಇಂತಹ ಗೊಡ್ಡು ಬೆದರಿಕೆಗಳಿಗೆ ಬಗ್ಗುವುದಿಲ್ಲ. ಬಡವರು, ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಸೇರಿದಂತೆ ಅನ್ಯಾಯಕ್ಕೊಳಗಾದ ಪ್ರತಿಯೊಬ್ಬರ ಪರ ಹೋರಾಟ ನಡೆಸುತ್ತೇನೆ. ಯಾವುದೇ ಬೆದರಿಕೆಗಳಿಗೆ ಭಯ ಪಡುವುದಿಲ್ಲ’ ಎಂದು ಹೇಳಿದರು.
ಹೊಡಿ, ಬಡಿ ಸಂಸ್ಕೃತಿ ಉಳ್ಳವರು ಬಿಜೆಪಿಗರು: ಸಿದ್ದರಾಮಯ್ಯ
‘ಅಬ್ಬಕ್ಕ-ಟಿಪ್ಪು ಸುಲ್ತಾನ್, ಗಾಂಧಿ-ಗೋಡ್ಸೆಯಂತಹ ಭಾವನಾತ್ಮಕ ವಿಚಾರಗಳನ್ನು ಬಿಟ್ಟುಬಿಡಿ. ಅಭಿವೃದ್ಧಿ ವಿಚಾರಗಳ ಮೇಲೆ ಚರ್ಚೆ ಮಾಡಿ. ಸಾರ್ವಜನಿಕವಾಗಿ ಅಭಿವೃದ್ಧಿ ವಿಷಯ ಚರ್ಚೆಯಾಗಲಿ. ಆದರೆ, ಬಿಜೆಪಿಯವರು ಅದರ ಬಗ್ಗೆ ಚರ್ಚೆ ನಡೆಸಲು ಸಿದ್ಧರಿಲ್ಲ. ಚುನಾವಣೆಯಲ್ಲಿ ಸೋಲು ಖಚಿತ ಎಂಬುದು ಗೊತ್ತು. ಅದಕ್ಕೆ ಅಭಿವೃದ್ಧಿ ಬಗ್ಗೆ ಚರ್ಚಿಸದೆ ವಿಷಯಾಂತರ ಮಾಡುತ್ತಾರೆ. ಟಿಪ್ಪುಸುಲ್ತಾನ್‌ನನ್ನು ಮೇಲೆ ಕಳಿಸಿದಂತೆ ಸಿದ್ದರಾಮಯ್ಯ ಅವರನ್ನು ಮೇಲೆ ಕಳಿಸಿ ಎಂದಿದ್ದಾರೆ. ಕೊಲೆ ಮಾಡು ಎಂದು ಯಾವುದಾದರೂ ಧರ್ಮ ಹೇಳುತ್ತದಾ? ಟಿಪ್ಪು ಮುಗಿಸಿದಂತೆ ಸಿದ್ದರಾಮಯ್ಯ ಅವರನ್ನು ಮುಗಿಸಿ ಎಂದರೆ ಇದು ಅವರ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತದೆ’ ಎಂದು ಟೀಕಿಸಿದರು.
ಅಸಮರ್ಥ ಗೃಹಸಚಿವ, ಇಲಾಖೆ:
ಈ ವೇಳೆ ಮಧ್ಯಪ್ರವೇಶಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಈಗಾಗಲೇ ಈ ವಿಷಯವಾಗಿ ಸಚಿವರು ವಿಷಾದ ವ್ಯಕ್ತಪಡಿಸಿದ್ದಾರೆ. ಅದು ಆಡು ಭಾಷೆಯಲ್ಲಿ ಹೇಳಿದ್ದಾರೆ’ ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಮುಗಿಸಿಬಿಡಿ ಎನ್ನುವುದು ಆಡುಭಾಷೆನಾ? ಅದು ಭೂಗತ ರೌಡಿಗಳ ಭಾಷೆ’ ಎಂದು ಕೆಣಕಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಗೃಹಸಚಿವರು, ನಿಮ್ಮ ಆಡಳಿತದಲ್ಲಿ 30 ಸಾವಿರಕ್ಕೂ ಹೆಚ್ಚು ಮಂದಿ ವಿರುದ್ಧ ರೌಡಿಶೀಟರ್ ತೆಗೆಯಲಾಗಿದೆ ಎಂದರು.
ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ‘ರೌಡಿಗಳನ್ನು ಮಟ್ಟಹಾಕಲು ರೌಡಿಶೀಟರ್ ತೆಗೆಯಲಾಗುತ್ತದೆ. ನಿಮ್ಮಂತೆ ಕ್ರಿಮಿನಲ್ ಪ್ರಕರಣಗಳನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ. ಗೃಹ ಇಲಾಖೆ ಜೀವಂತವಾಗಿದ್ದರೆ ಮತ್ತು ನೀವು ಸಮರ್ಥ ಗೃಹಸಚಿವರೇ ಆಗಿದ್ದರೆ ಸಚಿವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ’ ಎಂದರು.
ಅಶ್ವತ್ಥ ನಾರಾಯಣ ಸಚಿವರಾಗಿರಲು ನಾಲಾಯಕ್: ಸಿದ್ದರಾಮಯ್ಯ
ಲೋಕಾಯುಕ್ತ ಅಧಿಕಾರ ಮೊಟಕು ಹಸಿ ಸುಳ್ಳು: ಸಿದ್ದು
ವಿಧಾನಸಭೆ: ತಮ್ಮ ರಕ್ಷಣೆಗಾಗಿ ಎಸಿಬಿ ರಚಿಸಿ ಲೋಕಾಯುಕ್ತ ಸಂಸ್ಥೆಯನ್ನು ಅಧಿಕಾರ ಕಿತ್ತುಕೊಳ್ಳಲಾಗಿದೆ ಎಂಬ ಸರ್ಕಾರದ ಆರೋಪವು ಹಸಿಸುಳ್ಳು ಎಂದು ಸರ್ಕಾರವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
‘ಲೋಕಾಯುಕ್ತ ಸಂಸ್ಥೆಯು ಮುಖ್ಯಮಂತ್ರಿಗಳ ಮೇಲೆ ಆರೋಪ ಕೇಳಿಬಂದರೆ ತನಿಖೆ ಮಾಡಬಹುದು ಎಂದ ಮೇಲೆ ಎಲ್ಲಿ ಅಧಿಕಾರ ಕಿತ್ತುಕೊಳ್ಳಲಾಗಿದೆ. ಬಿಜೆಪಿ ಸರ್ಕಾರ ಇರುವ ರಾಜ್ಯಗಳಲ್ಲಿ ಎರಡು ಇದೆ. ಅಲ್ಲಿ ಯಾಕೆ ಎಸಿಬಿ ಮುಚ್ಚಿಲ್ಲ? ಇನ್ನು ನನ್ನ ವಿರುದ್ಧ ಆಧಾರರಹಿತ ಆರೋಪ ಕೇಳಿಬಂದಿರುವುದಕ್ಕೆ ದೂರುಗಳು ತಿರಸ್ಕೃತಗೊಂಡಿವೆ’ ಎಂದರು ತಿರುಗೇಟು ನೀಡಿದರು.
‘ಎಸಿಬಿ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದ ಒಟ್ಟು 16 ರಾಜ್ಯಗಳಲ್ಲಿ ಇದೆ. ಎಸಿಬಿ ರಚನೆ ಮಾಡಿ ಲೋಕಾಯುಕ್ತದ ಅಧಿಕಾರ ಕಸಿಯಲಾಗಿದೆ ಎಂದು ಹೇಳುವುದು ಸರಿಯಲ್ಲ, ಅಡ್ವೊಕೇಟ್ ಜನರಲ್ ಅವರು ಎಸಿಬಿ ರಚನೆ ಮಾಡಿರುವುದು ಸರಿ ಎಂದು ನ್ಯಾಯಾಲಯದಲ್ಲಿ ಹೇಳಿದ್ದಾರೆ. ಇದಕ್ಕೆ ವಿರುದ್ಧವಾಗಿ ಸರ್ಕಾರ ಯಾಕೆ ಹೇಳಿಕೆ ಕೊಡಬೇಕು? ನ್ಯಾಯಾಲಯದಲ್ಲಿ ಒಂದು, ಹೊರಗಡೆ ಒಂದು ಭಿನ್ನ ನಿಲುವು ಯಾಕೆ? ಸರ್ಕಾರ ಸುಪ್ರೀಂ ಕೋರ್ಚ್‌ನ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಒಂದು ತನಿಖಾ ಸಮಿತಿ ರಚನೆ ಮಾಡಿ ನಮ್ಮ ವಿರುದ್ಧ ಮತ್ತು ಈಗಿನ ಸರ್ಕಾರದ ವಿರುದ್ಧ ಇರುವ ಎಲ್ಲಾ ಆರೋಪಗಳನ್ನು ತನಿಖೆ ಮಾಡಿಸಲಿ’ ಎಂದು ಸವಾಲು ಹಾಕಿದರು.