ಮೂರು ಪಕ್ಷಗಳಿಗೂ ಈ ಚುನಾವಣೆ ಅಗ್ನಿ ಪರೀಕ್ಷೆ: ಎಚ್‌.ಡಿ.ಕುಮಾರಸ್ವಾಮಿ

By Kannadaprabha News  |  First Published Mar 3, 2023, 1:40 AM IST

ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ಪಷ್ಟಬಹುಮತ ಲಭ್ಯವಾಗಲಿದ್ದು, ಒಂದರ್ಥದಲ್ಲಿ ಮೂರು ಪಕ್ಷಗಳಿಗೂ ಈ ಅಗ್ನಿ ಪರೀಕ್ಷೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 


ಮೈಸೂರು (ಮಾ.03): ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ಗೆ ಸ್ಪಷ್ಟಬಹುಮತ ಲಭ್ಯವಾಗಲಿದ್ದು, ಒಂದರ್ಥದಲ್ಲಿ ಮೂರು ಪಕ್ಷಗಳಿಗೂ ಈ ಅಗ್ನಿ ಪರೀಕ್ಷೆ ಆಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕ ಪ್ರಕಟಣೆ ಸಮೀಪ ಇದೆ. ಈ ತಿಂಗಳ 20 ರಿಂದ 30ರೊಳಗೆ ಚುನಾವಣಾ ಆಯೋಗವು ದಿನಾಂಕ ಘೋಷಿಸಬಹುದು. ಈ ಸಂಬಂಧ ಮೂರು ಪಕ್ಷದಲ್ಲಿಯೂ ತಯಾರಿ ದೊಡ್ಡಮಟ್ಟದಲ್ಲಿ ನಡೆದಿದೆ ಎಂದರು. ಈ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ 5 ರಿಂದ 10 ಸ್ಥಾನಗಳನ್ನು ಗೆಲ್ಲಬಹುದು ಎಂಬ ಮಾತನ್ನು ಅನೇಕರು ಹೇಳುತ್ತಿದ್ದಾರೆ. 

ನಮ್ಮ ಪಕ್ಷದ ಕೆಲವು ನಾಯಕರು ತಮ್ಮ ಎರಡೂ ಕಾಲನ್ನು ಕಿತ್ತು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ. ನಾಲ್ಕೈದು ದಿನದಲ್ಲಿ ಒಂದಿಬ್ಬರು ಹೋಗಬಹುದು. ಅದಕ್ಕೆ ಪ್ರಾಮುಖ್ಯತೆ ಕೊಡುವುದಿಲ್ಲ ಎಂದು ಅವರು ಹೇಳಿದರು. 2023ರ ಈ ಚುನಾವಣೆ ಮೂರು ಪಕ್ಷಗಳಿಗೂ ಅಗ್ನಿ ಪರೀಕ್ಷೆ ಇದ್ದಂತೆ. ಯಾರು ಗೆದ್ದರೂ, ಸೋತರೂ ಮುಂದಿನ ರಾಜಕೀಯ ಭವಿಷ್ಯ ಇದರಲ್ಲಿ ಅಡಗಿರುತ್ತದೆ. ನಮಗಂತೂ ಸ್ಪಷ್ಟಬಹುಮತ ದೊರಕುವ ನಿರೀಕ್ಷೆ ಇದೆ. ರಾಜ್ಯದ ಎಲ್ಲೆಡೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ ಎಂದು ಅವರು ಹೇಳಿದರು. 150 ಸ್ಥಾನ ಗೆಲ್ಲುವುದಾಗಿ ಬಿಜೆಪಿಯವರು ಹೇಳುತ್ತಿದ್ದಾರೆ. ಸದನದಲ್ಲಿ ಕಂದಾಯ ಸಚಿವರು ಕರ್ನಾಟಕ ಬಿಟ್ಟು ತೆಲಂಗಾಣಕ್ಕೆ ಹೋಗಬೇಕಾಗುತ್ತದೆ ಎಂದು ನಮ್ಮನ್ನು ಟೀಕಿಸಿದ್ದಾರೆ. ಆದರೆ ಯಾರು ಹೋಗಬೇಕು ಎಂಬುದನ್ನು ಜನ ನಿರ್ಧರಿಸುತ್ತಾರೆ ಅಲ್ಲವೇ ಎಂದು ಅವರು ಪ್ರಶ್ನಿಸಿದರು.

Tap to resize

Latest Videos

ಎಚ್‌ಡಿಕೆಯವರನ್ನು ಮುಖ್ಯಮಂತ್ರಿ ಮಾಡುವುದೇ ದೇವೇಗೌಡರ ಕೊನೆಯ ಆಸೆ: ಶಾಸಕ ಜಿ.ಟಿ.ದೇವೇಗೌಡ

ಕಾಲು ಮುರುಕ ಕುದುರೆ ಏರಲು ಹೇಗೆ ಸಾಧ್ಯ?: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ ಏನೂ ಕೆಲಸ ಮಾಡಲಿಲ್ಲ ಎನ್ನುತ್ತಾರೆ. ಕೊಟ್ಟಕುದುರೆಯನ್ನು ಏರದವ ವೀರನೂ ಅಲ್ಲ, ಶೂರನು ಅಲ್ಲ ಎನ್ನುತ್ತಾರೆ. ಆದರೆ ನೀವು ನೀಡಿದ್ದು ಕಾಲು ಮುರುಕ ಕುದುರೆ. ಅದನ್ನು ಏರು ಎನ್ನುವವನನ್ನು ಮನೆ ಮುರುಕ ಅಂತಾರೆ ಎಂದು ಮೊದಲಿಸಿದರು. ಆದರೆ ರಾಜ್ಯದ ರೈತರ 25 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದ ತೃಪ್ತಿ ನನಗೆ ಇದೆ. ನನ್ನ ಇಮೇಜ್‌ ಈಗಲೂ ಹಾಳಾಗಿಲ್ಲ. ನಾನು ಈಗಲೂ ಉತ್ತರ ಕರ್ನಾಕ ಮತ್ತು ದಕ್ಷಿಣ ಕರ್ನಾಟಕಕ್ಕೆ ತೆರಳಿದರೆ ಬಹಳ ಪ್ರೀತಿ ವಿಶ್ವಾಸದಿಂದ ಕಾಣುತ್ತಾರೆ. 

ನಮ್ಮ ಪಕ್ಷಕ್ಕೆ ಕನಿಷ್ಠ 125 ಕ್ಷೇತ್ರದಲ್ಲಿ ಗೆಲ್ಲುವ ಅವಕಾಶ ಇದೆ. ಕಾಂಗ್ರೆಸ್‌ ಜತೆಗಿನ ಹೊಂದಾಣಿಕೆಯಿಂದ ತೊಂದರೆಯಾಗಿದೆ ನಿಜ. ಮಂಡ್ಯದಲ್ಲಿ ಕಾಂಗ್ರೆಸ್‌ ನಿಖಿಲ್‌ ಕುಮಾರಸ್ವಾಮಿಯನ್ನು ಬೆಂಬಲಿಸಿದ್ದರೆ 10 ಲಕ್ಷ ಮತ ಬರಬೇಕಿತ್ತು. ತುಮಕೂರಿನಲ್ಲಿ ಬೆಂಬಲಿಸಿದ್ದರೆ ದೇವೇಗೌಡರು ಗೆಲ್ಲಬೇಕಿತ್ತು. ಈಗ ತುಮಕೂರಿನ ಬಿಜೆಪಿ ನಾಯಕರು ಕಳೆದ ಬಾರಿ ನಮ್ಮನ್ನು ಬೆಂಬಲಿಸಿದ ಕಾಂಗ್ರೆಸ್‌ಗೆ ಮತ ನೀಡಿ ಎಂದು ಕೋರುತ್ತಿದ್ದಾರೆ. ಅಂದರೆ ಇದರ್ಥ ಏನು ಎಂದು ಅವರು ಪ್ರಶ್ನಿಸಿದರು. ಕಾಂಗ್ರೆಸ್‌ ಜೊತೆಗಿನ ಹೊಂದಾಣಿಕೆಯಿಂದ ತಪ್ಪಾಯಿತು. ನಾವು ರಾಜಕೀಯವಾಗಿ ಟ್ರಾಪ್‌ ಆಗಿದ್ದೇವೆ. 

ಕಾಂಗ್ರೆಸ್‌ಗೆ ನಮ್ಮಿಂದ ಅನುಕೂಲವಾಗಿದೆಯೇ ಹೊರತು, ಕಾಂಗ್ರೆಸ್‌ನಿಂದ ನಮಗೆ ಅನುಕೂಲವಾಗಿಲ್ಲ. ಹಿಂದುತ್ವ ಈಗ ಕೆಲಸ ಮಾಡುವುದಿಲ್ಲ. ನಮ್ಮ ಸಭೆಗಳಿಗೆ ದೊಡ್ಡ ಮಟ್ಟದಲ್ಲಿ ಯುವಕರು ಪಾಲ್ಗೊಳ್ಳುತ್ತಿದ್ದಾರೆ. ನಾವು ಕಾರ್ಯಕರ್ತರಿಗೆ ಟಿಕೆಟ್‌ ಕೊಡುತ್ತೇವೆ ಎಂಬುದರ ಹೇಳಿಕೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು. ನಮ್ಮ ಪ್ರತಿಯೊಬ್ಬ ಕಾರ್ಯಕರ್ತನೂ ಕುಟುಂಬವೆ. ಎಲ್ಲಿ ಯಾವುದೇ ಸಮಸ್ಯೆ ಇಲ್ಲವೋ ಅಲ್ಲಿ ಕಾರ್ಯಕರ್ತರಿಗೆ ಟಿಕೆಟ್‌ ಕೊಡಲಾಗಿದೆ. ಎಲ್ಲಿ ಸಮಸ್ಯೆ ಇದ್ದು ಕಾರ್ಯಕರ್ತರು ನೊಂದಿದ್ದಾರೆಯೋ ಅಲ್ಲಿ ಬೇರೆ ವ್ಯವಸ್ಥೆ ಮಾಡಲಾಯಿತು. ಕಳೆದ ಬಾರಿ ಮಧುಗಿರಿಗೆ ಕೊನೆ ಕ್ಷಣದವರೆಗೂ ಅಭ್ಯರ್ಥಿ ಸಿಗಲಿಲ್ಲ. ಆಗ ಅನಿತಾ ಅವರಿಗೆ ಟಿಕೆಟ್‌ ನೀಡಲಾಯಿತು ಎಂದು ಅವರು ಹೇಳಿದರು.

ಲಿಂಗಾಯತ ಪ್ಲೇ ಕಾರ್ಡ್‌ ನಡೆಯಲ್ಲ: ಹಾಸನ ಜೆಡಿಎಸ್‌ನ ಭದ್ರಕೋಟೆ. ಅಲ್ಲಿನ ಏಳು ಸ್ಥಾನವನ್ನು ನಾವು ಗೆಲ್ಲುತ್ತೇವೆ. ಇನ್ನೊಂದು ವಾರದಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಗೊಳಿಸಲಾಗುವುದು. ಬಿಜೆಪಿಗೆ ಈ ಬಾರಿ ಲಿಂಗಾಯತ ಪ್ಲೇ ಕಾರ್ಡ್‌ ಉಪಯೋಗ ಆಗದು. ಏಕೆಂದರೆ ಪಂಚಮಸಾಲಿಗಳ ಮೀಸಲಾತಿಯನ್ನು ಸರ್ಕಾರ ಎಡವಿದೆ. ಒಳ ಮೀಸಲಾತಿ ವಿಷಯದಲ್ಲಿ ಹುಡುಗಾಟಿಕೆ ಮಾಡಿದೆ. ನಾವು ಲಿಂಗಾಯತರಿಗೆ ಅವಕಾಶ ಇರುವ ಕಡೆ ಟಿಕೆಟ್‌ ಕೊಡುತ್ತೇವೆ ಎಂದರು. ದೇವೇಗೌಡರ ಆರೋಗ್ಯ ಸ್ಥಿರವಾಗಿದೆ. ಇನ್ನೆರಡು ದಿನ ಆಸ್ಪತ್ರೆಯಲ್ಲಿಯೇ ಇರಬೇಕು ಎಂದಿದ್ದಾರೆ. ನಮ್ಮ ಕುಟುಂಬ ದೇವರನ್ನು ನಂಬಿ ಬದುಕುತ್ತಿದೆ. ಬಿಜೆಪಿ ಬೇಕು ಎಂದಾಗ ದೇವರ ಹೆಸರು ಹೇಳುತ್ತಾರೆ. ಆದರೆ ನಾವು ಹಾಗಲ್ಲ. ವೈದ್ಯಕೀಯ ಚಿಕಿತ್ಸೆಯ ಜೊತೆಗೆ ಗ್ರಹಗತಿ ಶಾಂತಿ ಪರಿಹಾರವಾಗಿ ದೇವೇಗೌಡರ ಆರೋಗ್ಯಕ್ಕಾಗಿ 9 ದಿನದ ಯಾಗ ಹಮ್ಮಿಕೊಂಡಿದ್ದೇವೆ. ಇದರಲ್ಲಿ ಯಾವುದೇ ಮುಚ್ಚುಮರೆ ಇಲ್ಲ ಎಂದರು.

ಪಂಚರತ್ನ ಮೂಲಕ ಹೊಸ ಇತಿಹಾಸ: ಪಂಚರತ್ನ ಯಾತ್ರೆಯ ಮೂಲಕ ಹೊಸ ಇತಿಹಾಸ ಬರೆಯಲು ಮುಂದಾಗಿದ್ದೇವೆ. ಇದರ ಸಮಾರೋಪ ಮಾ. 26 ಅಥವಾ 27 ರಂದು ಮೈಸೂರಿನಲ್ಲಿ ನಡೆಯಲಿದ್ದು, ಸುಮಾರು 10 ಲಕ್ಷ ಮಂದಿಯೊಂದಿಗೆ ಸಮಾರೋಪ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಇದೊಂದು ಹೊಸ ಇತಿಹಾಸ ಸೃಷ್ಟಿಸಲಿದೆ ಎಂದರು. ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಳ್ಳಲು ಮೊದಲಿದ್ದ ಬಿಜೆಪಿನೇ ಬೇರೆ, ಈಗಿರುವ ಬಿಜೆಪಿಯೇ ಬೇರೆ. ಈಗ ಅವರು ಅಧಿಕಾರದ ರುಚಿ ನೋಡಿದ್ದಾರೆ ಎಂದು ಟೀಕಿಸಿದರು. ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್‌, ಕೆ. ಮಹದೇವ್‌, ಎಂ. ಅಶ್ವಿನ್‌ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ, ಮಾಜಿ ಸದಸ್ಯ ರಮೇಶ್‌ಗೌಡ, ನಗರ ಪಾಲಿಕೆ ಸದಸ್ಯ ಕೆ.ವಿ. ಶ್ರೀಧರ್‌, ಮಾಜಿ ಸದಸ್ಯ ಕೆ.ವಿ. ಮಲ್ಲೇಶ್‌, ನಗರ ಜೆಡಿಎಸ್‌ ಅಧ್ಯಕ್ಷ ಕೆ.ಟಿ. ಚಲುವೇಗೌಡ, ಮಾಜಿ ಮೇಯರ್‌ಗಳಾದ ಆರ್‌. ಲಿಂಗಪ್ಪ, ಎಂ.ಜೆ. ರವಿಕುಮಾರ್‌, ಮಾಜಿ ಉಪ ಮೇಯರ್‌ ಕೃಷ್ಣ, ಪತ್ರಕರ್ತರ ಸಂಘದ ಅಧ್ಯಕ್ಷ ಎಸ್‌.ಟಿ. ರವಿಕುಮಾರ್‌, ಉಪಾಧ್ಯಕ್ಷರಾದ ಅನುರಾಗ್‌ ಬಸವರಾಜ್‌, ಧರ್ಮಾಪುರ ನಾರಾಯಣ್‌, ಪ್ರಧಾನ ಕಾರ್ಯದರ್ಶಿ ಎಂ. ಸುಬಹ್ರಣ್ಯ, ಕಾರ್ಯದರ್ಶಿ ರಂಗಸ್ವಾಮಿ ಇದ್ದರು.

ನಿಮ್ಮ ಕಾರ್ಯಕ್ರಮ ಹೇಳಿ, ನಮ್ಮನ್ನು ಟೀಕಿಸುವುದು ಬೇಡ: ಎಚ್‌.ಡಿ.ಕುಮಾರಸ್ವಾಮಿ

ನಾನು ಸಾತನೂರಿಗೆ ಹೋಗಲು ಡಿಕೆಶಿ, ಡಿಕೆಸು ಬಿಟ್ಟಿರಲಿಲ್ಲ: ಇಂದು ರಾಮನಗರದಲ್ಲಿ ಹೈ ವೋಲ್ಟೇಜ್‌ ಸಭೆ ನಡೆಯಿತು. ನಾನು ಮತ್ತು ಅನಿತಾ ಕುಮಾರಸ್ವಾಮಿ ಸಾತನೂರಿಗೆ ತೆರಳುವುದು ತಡವಾದ್ದರಿಂದ ನೀವು ಉದ್ಘಾಟಿಸಿ, ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ನಾನೇ ಹೇಳಿದ್ದೆ. ಆದ್ದರಿಂದ ಸಚಿವ ಸುಧಾಕರ್‌ ಉದ್ಘಾಟಿಸಿದ್ದಾರೆ. ಇದರಲ್ಲೇನು ವಿಶೇಷ ಇಲ್ಲ. ಆಯಾ ಪಕ್ಷದ ಸರ್ಕಾರ ಆಡಳಿತ ನಡೆಸುವಾಗ ಇದು ಸಾಮಾನ್ಯ. ನಾನು ಸಂಸದನಾಗಿದ್ದಾಗ ನನ್ನನ್ನು ಸಾತನೂರಿಗೆ ಹೋಗಲು ಈ ಅಣ್ಣ ತಮ್ಮಂದಿರು (ಡಿ.ಕೆ. ಶಿವಕುಮಾರ್‌- ಡಿ.ಕೆ. ಸುರೇಶ್‌) ಬಿಡಲಿಲ್ಲ ಎಂದು ಕುಮಾರಸ್ವಾಮಿ ಮೊದಲಿಸಿದರು.

ಆಡ್ವಾಣಿ, ಜೋಷಿ ಎಲ್ಲೋದರು?: ಕರ್ನಾಟಕದಲ್ಲಿ ಅಧಿಕಾರ ನಡೆಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಬಿಜೆಪಿ ಹೇಗೆ ನಡೆಸಿಕೊಂಡಿತು ಎಂಬುದು ಗೊತ್ತಿದೆ. ಅವರು ದೆಹಲಿಗೆ ಹೋದಾಗಲೆಲ್ಲ, ಸಂದರ್ಶನ ನೀಡದೆ ವಾಪಸ್‌ ಕಳುಹಿಸುತ್ತಿದ್ದರು. ನಂತರ ಅವರನ್ನು ದಿಢೀರನೇ ಬದಲಿಸಿತು. ಈಗ ನೋಡಿದರೆ ವೇದಿಕೆ ಏರುವಾಗಲೇ ಕೈ ಹಿಡಿದು ಬರುವುದು, ನಮಸ್ಕರಿಸುವುದು ಮಾಡುತ್ತಾರೆ? ಇಲ್ಲಿ ನೋಡಿದರೆ ಅವರ ಪುತ್ರ ಲಿಂಗಾಯತ ಮತ ಒಡೆಯಲು ಕಾಂಗ್ರೆಸ್‌ ಯತ್ನಿಸುತ್ತಿದೆ ಎಂದು ಆರೋಪಿಸುತ್ತಾರೆ. ಮೋದಿ ಅವರು ನಿಜಲಿಂಗಪ್ಪ, ವೀರೇಂದ್ರಪಾಟೀಲರನ್ನು ಹೇಗೆ ನಡೆಸಿಕೊಂಡರು ಎಂದು ಪ್ರಶ್ನಿಸುತ್ತಾರೆ. ಆದರೆ ಬಿಜೆಪಿಯಲ್ಲಿ ಆಡ್ವಾಣಿ ಮತ್ತು ಮುರಳಿ ಮನೋಹರ ಜೋಷಿ ಅವರನ್ನು ಹೇಗೆ ನಡೆಸಿಕೊಳ್ಳಲಾಯಿತು ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

click me!