ಮೋದಿ ರಾಜ್ಯ ಭೇಟಿ ಲಗೋರಿ, ಖೋ ಖೋ ಇದ್ದಂತೆ: ಎಚ್‌.ಡಿ.ಕುಮಾರಸ್ವಾಮಿ ವ್ಯಂಗ್ಯ

By Kannadaprabha NewsFirst Published Jan 20, 2023, 10:41 AM IST
Highlights

ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವುದನ್ನು ಲಗೋರಿ, ಖೋ ಖೋ ಆಟಗಳಿಗೆ ಹೋಲಿಕೆ ಮಾಡಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಪ್ರಧಾನಿ ರಾಜ್ಯದ ಭೇಟಿ ಬಗ್ಗೆ ವ್ಯಂಗ್ಯವಾಡಿದರು.

ವಿಜಯಪುರ (ಜ.20): ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿರುವುದನ್ನು ಲಗೋರಿ, ಖೋ ಖೋ ಆಟಗಳಿಗೆ ಹೋಲಿಕೆ ಮಾಡಿದ ರಾಜ್ಯದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು, ಪ್ರಧಾನಿ ರಾಜ್ಯದ ಭೇಟಿ ಬಗ್ಗೆ ವ್ಯಂಗ್ಯವಾಡಿದರು. ಗುರುವಾರ ಜಿಲ್ಲೆಯ ದೇವರಹಿಪ್ಪರಗಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಕ್ಕೆ ಬರುತ್ತಾರೆ, ಹೋಗುತ್ತಾರೆ. ಅದು ಲಗೋರಿ ಆಟನಾ? ಖೋ ಖೋ ಆಟನಾ? ಎಂದು ವ್ಯಂಗ ಮಾಡಿದರು. 

ಹಿಂದೆ ಖೋ ಖೋ ಆಟವಾಡುತ್ತಿದ್ದರಲ್ಲ. ಅದೇ ರೀತಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕ ರಾಜ್ಯಕ್ಕೆ ಬರುತ್ತಾರೆ, ಹೋಗುತ್ತಾರೆ. ಜನತೆಗೆ ಪ್ರಧಾನಿ ಖೋ ಕೊಡುತ್ತಿದ್ದಾರೆ ಎಂದು ಟೀಕಿಸಿದರು. ಕೇಂದ್ರ ಸರ್ಕಾರ ಎಂದೂ ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ನದಿ ನೀರು ಹಂಚಿಕೆಗೆ ನಿರ್ಲಕ್ಷ್ಯ ಮಾಡಿದೆ. ಇಂಥವರು ಏಕೆ ಮತ ಕೇಳಲು ಜನತೆ ಬಳಿ ಬರುತ್ತಿದ್ದಾರೆ ಎಂದು ಕುಮಾರಸ್ವಾಮಿ ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದರು. ಪ್ರಧಾನಿ ಮೋದಿ ಅವರು ಕಲಬುರಗಿಗೆ ಬಂದಿದ್ದಾರೆ. ನದಿಗಳು ಹರಿಯತ್ತಿವೆ. ನದಿ ನೀರು ಬಳಕೆ ಮಾಡಲು ಮೋದಿ ಸರ್ಕಾರ ಅವಕಾಶ ನೀಡುತ್ತಿಲ್ಲ. 

ಪ್ರಧಾನಿ ಮೋದಿ ಸಾಮಾಜಿಕ ಪರಿವರ್ತಕ: ಸಿಎಂ ಬೊಮ್ಮಾಯಿ ಬಣ್ಣನೆ

ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ನೀರಿದೆ. ಆದರೆ ಅದು ಸಮರ್ಪಕವಾಗಿ ಬಳಕೆಗೆ ಅವಕಾಶ ನೀಡದಿರುವುದರಿಂದಾಗಿ ಇನ್ನೂ ಒಣ ಭೂಮಿ ಇದೆ ಎಂದರು. ಕೆಲಸ ಮಾಡದೇ ಬಂದರೆ ಜನರು ಮೆಚ್ಚಿಕೊಳ್ಳುವುದಿಲ್ಲ. ಕರ್ನಾಟಕದ ಜನರು ಬಹಳ ಬುದ್ದಿವಂತರಿದ್ದಾರೆ. ಜನರು ಎರಡು ರಾಷ್ಟ್ರೀಯ ಪಕ್ಷಗಳ ವಿರುದ್ಧ ಬೇಸತ್ತು ಹೋಗಿದ್ದಾರೆ. ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ತರಬೇಕು ಎಂದು ಜನರಲ್ಲಿ ಅಂಡರ್‌ ಪಾಸ್‌ ಕರೆಂಟ್‌ ಪಾಸ್‌ ಆಗುತ್ತಿದೆ. ಅದಕ್ಕೆ ಪಂಚರತ್ನ ರಥ ಯಾತ್ರೆ ಮೂಲ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಶೇ.40 ಕಮಿಷನ್‌ ಹಣದಿಂದ ರಾಜ್ಯದ ಅಭಿವೃದ್ಧಿ ಆಗಲ್ಲ: ಶೇ.40 ಕಮಿಷನ್‌ದಿಂದ ವಿಧಾನಸೌಧದಿಂದ ಆಡಳಿತ ಮಾಡಿದರೇ ರಾಜ್ಯಅಭಿವೃದ್ಧಿ ಆಗುವುದಿಲ್ಲ. ಗ್ರಾಮ ಪಂಚಾಯತಿಯಿಂದ ಅಭಿವೃದ್ಧಿ ಆಗಬೇಕು. ಆ ಕನಸನ್ನು ಜೆಡಿಎಸ್‌ ಹೊತ್ತುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಅಂಜುಮನ್‌ ಶಾಲಾ ಆವರಣದಲ್ಲಿ ಹಮ್ಮಿಕೊಂಡಿರುವ ಜಾತ್ಯತೀತ ಜನತಾದಳದ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಾನು ಯಾವ ಪಕ್ಷಗಳನ್ನು ಟೀಕಿಸುವುದಿಲ್ಲ. 

ಪಕ್ಷಗಳನ್ನು ಟೀಕಿಸುವುದರಿಂದ ಜನತೆ ಬದುಕು ಹಸನಾಗುವುದಿಲ್ಲ. ಅದರ ಬದಲು ಜನತೆಯ ಕಲ್ಯಾಣಕ್ಕಾಗಿ ಆಲೋಚಿಸಿ ವಿವಿಧ ಯೋಜನೆಗಳನ್ನು ವಿನ್ಯಾಸಗೊಳಿಸುವ ಮೂಲಕ ಅದು ಸಾರ್ಥಕವಾಗುತ್ತದೆ ಎಂದರು. ಬಿಜೆಪಿ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತದೆ. ಆದರೆ, ಆ ಪಕ್ಷದ ಶಾಸಕರ ಮಧ್ಯ ನಡೆಯುತ್ತಿರುವ ಜಗಳ ಬೀದಿಗೆ ಬಂದಿದೆ. ಅವರು ಬಳಸುವ ಪದಗಳನ್ನು ರಾಜ್ಯದ ಜನತೆ ಆಲಿಸುತ್ತಿದ್ದಾರೆ. ಇದು ಬೇಕೆ ಎಂದು ಪ್ರಶ್ನಿಸಿದರು. 2006ರಲ್ಲಿ ರೈತರಿಗೆ ಸಾಲಮನ್ನಾ ಮಾಡಿದೆ. ಕಬ್ಬಿಗೆ ಸೂಕ್ತ ಬೆಲೆ ನೀಡಿದೆ ಮತ್ತು ರೈತರ ಬದುಕಿಗೆ ಅನೇಕ ಆಸರೆ ಆಗುವಂತಹ ಯೋಜನೆಗಳನ್ನು ಮಾಡಿದೆ. 

1 ಪೀಸ್‌ ಕಬಾಬ್‌ ಕಮ್ಮಿಕೊಟ್ಟ ಹೋಟೆಲ್‌ ಮಾಲೀಕನಿಗೆ ಥಳಿತ

ಆದರೆ, ಕಾಂಗ್ರೆಸ್‌ ಬಿಜೆಪಿ ರೈತರ ಯೋಜನೆ ಬಗ್ಗೆ ಅನೇಕ ಚರ್ಚೆ ಮಾಡುತ್ತಾರೆ ಹೊರತು ಕಾರ್ಯರೂಪಕ್ಕೆ ತರುವುದು ಮರೆಯುತ್ತಾರೆ. ದೇವೇಗೌಡರು ಕೆಲವೇ ತಿಂಗಳು ಪ್ರಧಾನಿಯಾಗಿದ್ದಾಗ ಈ ಭಾಗಕ್ಕೆ ಸುಮಾರು .18 ಸಾವಿರ ಕೋಟಿ ಹಣವನ್ನು ನೀರಾವರಿ ಕ್ಷೇತ್ರಕ್ಕೆ ನೀಡಿದ್ದಾರೆ. ಪಂಚರತ್ನ ಯೋಜನೆಗಳಿಗೆ ಯಾವುದೇ ರೀತಿಯ ಜಾತಿ, ಧರ್ಮ, ಕುಲ ಯಾವುದು ಇಲ್ಲ. ಇದೊಂದು ರಾಜ್ಯದ 6.5 ಕೋಟಿ ಜನತೆಯ ಕಲ್ಯಾಣಕ್ಕಾಗಿ ನಿರ್ಮಾಣಗೊಂಡ ಯೋಜನೆಗಳಾಗಿವೆ. ಒಂದು ಬಾರಿ 5 ವರ್ಷ ಸಂಪೂರ್ಣವಾಗಿ ಜೆಡಿಎಸ್‌ಗೆ ಅಧಿಕಾರ ನೀಡಿ, ಈ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡಿಯೇ ತೀರುತ್ತೇವೆ ಎಂದು ಭರವಸೆ ನೀಡಿದರು.

click me!