ಅದೇನ್‌ ಬಿಚ್ಚಿಡ್ತೀರೋ, ಮೊದಲು ಬಿಚ್ಚಿಡಿ: ಶಾಸಕ ಶಿವಲಿಂಗೇಗೌಡರಿಗೆ ಎಚ್‌ಡಿಕೆ ಸವಾಲು

By Kannadaprabha NewsFirst Published Mar 1, 2023, 8:42 PM IST
Highlights

ಕುಟುಂಬ ರಾಜಕಾರಣದ ಬಗ್ಗೆ ಶಾಸಕ ಕೆ.ಎಂ ಶಿವಲಿಂಗೇಗೌಡರಿಗೆ ಈಗ ಜ್ಞಾನೋದಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು. 

ಅರಸೀಕೆರೆ (ಮಾ.01): ಕುಟುಂಬ ರಾಜಕಾರಣದ ಬಗ್ಗೆ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಈಗ ಜ್ಞಾನೋದಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಕಿಡಿಕಾರಿದರು. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ತೆರಳುವ ಮಾರ್ಗಮಧ್ಯೆ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಜೆಡಿಎಸ್‌ನಲ್ಲಿ ಎಲ್ಲಾ ರೀತಿಯ ರಾಜಕೀಯ ಅಧಿಕಾರ ಅನುಭವಿಸಿ ಕಾಂಗ್ರೆಸ್‌ ಸೇರಲು ಹೊರಟಿರುವ ಅವರು ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರ ಕುಟುಂಬ ರಾಜಕಾರಣದ ಬಗ್ಗೆ ಈಗ ಮಾತನಾಡಲು ಹೊರಟಿದ್ದಾರೆ. ಇದು ಅವರ ಮನಸ್ಥಿತಿ ಏನೆಂಬುದನ್ನು ಸಾಬೀತು ಮಾಡಿದೆ. 

ಸ್ವಾಭಿಮಾನಿ ಸಮಾವೇಶದ ಬಳಿಕ ಮಾಧ್ಯಮಗಳ ಮುಂದೆ ಅದೇನೋ ನಮ್ಮದನ್ನು ಬಿಚ್ಚಿಡುತ್ತೇನೆ ಎಂದಿದ್ದಾರೆ. ಅದೇನು ಬಿಚ್ಚಿಡುತ್ತಾರೋ ಅದನ್ನು ಮೊದಲು ಬಿಚ್ಚಿಡಲಿ ಇಂತಹ ಮಾತುಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ. ಸದನದ ಗ್ಯಾಲರಿಯಲ್ಲಿ ಯಾವ ಸಮುದಾಯದವರು ಬಂದು ಕುಳಿತಿದ್ದಾರೆ ಎಂಬುದನ್ನು ಗಮನಿಸಿ ಅದಕ್ಕೆ ತಕ್ಕಂತೆ ಮಾತನಾಡುವುದನ್ನು ನಾನು ಕಂಡಿದ್ದೇನೆ. ಜಾತಿಗಳ ವಿಭಜನೆಯ ಮೂಲಕ ಮತಗಳಿಸಿ ಚುನಾವಣೆ ಗೆದ್ದು ಬಂದಿರುವುದು ಎಲ್ಲರಿಗೂ ಗೊತ್ತಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣದ ಹಿಂದೆ ಯಾವ ರಾಜಕೀಯ ನಾಟಕ ಅಡಗಿದೆ ಎಂಬುದು ಕ್ಷೇತ್ರದ ಜನತೆಗೆ ಗೊತ್ತಿದೆ. 

Latest Videos

ಸಂವಿಧಾನ ಬದ್ಧವಾಗಿ ಕೆಲಸ ಮಾಡುವ ಪಕ್ಷ ಕಾಂಗ್ರೆಸ್‌: ಡಿ.ಕೆ.ಶಿವಕುಮಾರ್‌

ಸಿದ್ಧರಾಮಯ್ಯನವರನ್ನು ಆಹ್ವಾನಿಸಿ ಕಾರ್ಯಕ್ರಮ ನಡೆಸಿದ ಕೂಡಲೇ ಬಂದು ಸಮುದಾಯದ ಜನರು ನನ್ನ ಹಿಂದೆ ಬರುತ್ತಾರೆ ಎನ್ನುವ ಭ್ರಮೆಯಲ್ಲಿದ್ದಾರೆ. ಇಂತಹ ಪ್ರವೃತ್ತಿಯಿಂದ ಹೊರ ಬಂದು ಸ್ವಾತಂತ್ರ ಸೇನಾನಿ ಸಂಗೊಳ್ಳಿ ರಾಯಣ್ಣನಿಗೆ ನಿಜವಾದ ಗೌರವ ನೀಡಿದರೆ ಸಾರ್ಥಕವಾಗಲಿದೆ. ಸಂಗೊಳ್ಳಿ ರಾಯಣ್ಣನ ಸಮುದಾಯದ ಜನರು ಬದುಕು ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಂಡರೇ ಸಾಕು ಎಂದು ವಾಗ್ದಾಳಿ ನಡೆಸಿದರು. ಅರಸೀಕೆರೆ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿಗೆ ಎಷ್ಟುಅನುದಾನ ಕೊಟ್ಟಿದ್ದೀನಿ ಎಂಬುದನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿರುವವರು ಯಾರು? 

ಅಧಿಕಾರಿಗಳು ಬೇಡವೆಂದರೂ ಈ ಭಾಗದ ಜನರ ಉನ್ನತ ಶಿಕ್ಷಣದ ಕನಸು ನನಸು ಮಾಡಲು ಇಂಜಿನಿಯರಿಂಗ್‌ ಕಾಲೇಜು ಕೊಡುಗೆಯಾಗಿ ನೀಡಿದ್ದೇನೆ. ಪ್ರೌಢಶಾಲೆ, ಪದವಿ-ಪದವಿಪೂರ್ವ ಕಾಲೇಜುಗಳು ಯಾರ ಕೊಡುಗೆ ಎಂಬುದನ್ನು ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರನ್ನು ಕೇಳಿದರೇ ತಿಳಿಯುತ್ತದೆ. ಹೀಗೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನೆರವು ನೀಡಿದವರ ಬಗ್ಗೆ ಲಘುವಾಗಿ ಮಾತನಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಅನುದಾನ ಪಡೆಯುವಾಗ ಆಗದ ಕುಟುಂಬ ರಾಜಕಾರಣದ ನೆನಪು ಈಗ ಕಾಂಗ್ರೆಸ್‌ ಸೇರುವ ಕಾಲದಲ್ಲಿ ಬಂದಿದೆ ಎಂದು ಕುಟುಕಿದರು.

ಜೆಡಿಎಸ್‌ ಟಿಕೆಟ್‌ ಪಡೆದು ಅಧಿಕಾರ ಅನುಭವಿಸುತ್ತಿರುವ ಕೆಲ ನಗರಸಭಾ ಸದಸ್ಯರು ಸ್ವಾಭಿಮಾನಿ ಸಮಾವೇಶ ಸೇರಿ ಪಕ್ಷದ ಕೆಲ ಚಟುವಟಿಕೆಗಳಿಂದ ದೂರವಿದ್ದಾರೆ ಎನ್ನುವ ದೂರುಗಳು ಕೇಳಿಬಂದಿವೆ. ಈ ಸಂಬಂಧ ಅಗತ್ಯ ಮಾಹಿತಿ ಪಡೆದು ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎನ್ನುವ ಮೂಲಕ ಅನರ್ಹತೆಯ ಬಾಣ ಬಿಡುವ ಸುಳಿವು ನೀಡಿದರು. ಹಾಸನ ಸೇರಿ ಏಳು ವಿಧಾನಸಭಾ ಕ್ಷೇತ್ರಗಳ ಟಿಕೆಟ್‌ ಅಂತಿಮಗೊಂಡಿದ್ದು ಎರಡನೇ ಪಟ್ಟಿಯಲ್ಲಿ ಪ್ರಕಟಿಸಲಾಗುವುದು ಎಂದು ಹೇಳಿದರು.

ಪ್ರಧಾನಿ ಮೋದಿಯವರಿಗೆ ನೈಜ ರೈತಪರ ಕಾಳಜಿ ಇದ್ದಲ್ಲಿ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲಿ ಅವಾಯಿ ಚಪ್ಪಲಿ ಹಾಕುವವರು ವಿಮಾನದಲ್ಲಿ ಪ್ರಯಾಣಿಸಲು ಆಗ ಮಾತ್ರ ಸಾಧ್ಯ. ಚುನಾವಣಾ ಹೊಸ್ತಿಲಿನಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಎಸ್‌.ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್‌ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊಡೆ ಹಿಡಿಯದೆ ಅವಮಾನಿಸಿದ್ದಾರೆ ಎಂದರು.

ಮುಸಲ್ಮಾನರ ತಂಟೆಗೆ ಯಾರು ಬರ್ತಾರೆ ನೋಡೋಣ: ಎಚ್‌.ಡಿ.ಕುಮಾರಸ್ವಾಮಿ

10ನೇ ವಾರ್ಡ್‌ ನಗರಸಭಾ ಸದಸ್ಯರಾದ ಈಶಣ್ಣ ಗಂಗಾನಗರ ಬಡಾವಣೆಯ ನಿವಾಸಿಗಳ ಒಕ್ಕಲೆಬ್ಬಿಸಿದಂತೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿ.ಪಂ ಮಾಜಿ ಸದಸ್ಯ ಬಾಣಾವರ ಅಶೋಕ್‌, ತಾ.ಪಂ ಮಾಜಿ ಸದಸ್ಯರಾದ ಹೋಸೂರು ಗಂಗಾಧರ್‌, ಜಿಲ್ಲಾ ವರ್ಕ್ ಬೋರ್ಡ್‌ ಅಧ್ಯಕ್ಷ ಸಿಕಂದರ್‌, ಹರ್ಷವರ್ಧನ್‌ ನಗರಸಭಾ ಸದಸ್ಯರಾದ ಈಶಣ್ಣ ಮುಖಂಡರದ ಶೇಖರ್‌ ನಾಯ್‌್ಕ, ಬಸವಲಿಂಗಪ್ಪ, ರಮೇಶ್‌ ,ಮಲ್ಲಿಕಾರ್ಜುನ್‌,ದೇವಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

click me!