ಸಿಎಂರನ್ನು ಚಪ್ರಾಸಿ ತರ ನಡೆಸಿಕೊಂಡಿರಿ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ಗರಂ

By Kannadaprabha NewsFirst Published Mar 3, 2023, 2:00 AM IST
Highlights

ಓರ್ವ ಮುಖ್ಯಮಂತ್ರಿಯನ್ನ ಚಪ್ರಾಸಿ ತರ ನಡೆಸಿಕೊಂಡಿರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಕಿಡಿಕಾರಿದರು. 

ಚಿಕ್ಕಮಗಳೂರು (ಮಾ.03): ಓರ್ವ ಮುಖ್ಯಮಂತ್ರಿಯನ್ನ ಚಪ್ರಾಸಿ ತರ ನಡೆಸಿಕೊಂಡಿರಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ವಿರುದ್ಧ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದರು. ಮೂಡಿಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈಗ ಅವರು ಯಾರ ಪೂಜೆ ಮಾಡುತ್ತಿದ್ದಾರೆ, ರಾಹುಲ್‌ ಗಾಂಧಿ ಅವರು ರೈತನ ಮಗನಾ ಎಂದು ಪ್ರಶ್ನಿಸಿದರು. ರೈತರ ಮಕ್ಕಳಿಗೆ ಇಡಿ ನೋಟಿಸ್‌ ಕೊಟ್ಟಿರುವುದನ್ನ ಎಲ್ಲಾದರೂ ನೋಡಿದ್ದೀರಾ ಎಂದ ಅವರು, ಜೆಡಿಎಸ್‌ ಬಗ್ಗೆ ಲಘುವಾಗಿ ಮಾತನಾಡಿದರೆ 79 ಸ್ಥಾನದಿಂದ, 29ಕ್ಕೆ ಬರುತ್ತೀರಾ ಎಂದು ಎಚ್ಚರಿಕೆ ನೀಡಿದರು. ಜೆಡಿಎಸ್‌- ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಇನ್ನೂ ದುಡ್ಡು ಹೊಡೆಯಲು ಬಿಡಬೇಕಿತ್ತಾ, ನನ್ನನ್ನು ಯಾವ ರೀತಿ ನಡೆಸಿಕೊಂಡರು ಎಂಬುದು ಗೊತ್ತಿದೆ ಎಂದರು.

ನೀರಾವರಿ ಸಚಿವನಾಗಿ ಏನೇನು ನಡೆಸಿದ್ದೀಯಾ ಗೊತ್ತಿದೆ ಕಣಪ್ಪಾ ನಿನ್ನ ಬಂಡವಾಳ. ನಾನು ಮಧ್ಯ ಪ್ರವೇಶ ಮಾಡಿರಲಿಲ್ಲ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು. ನಿಮಗೆ ಎಷ್ಟುಸ್ವತಂತ್ರ ಕೊಟ್ಟಿದ್ದೆ, ಆದರೂ ನೀವು ಯಾವ ರೀತಿ ನಡೆಸಿಕೊಂಡಿರಿ, ಓರ್ವ ಸಿಎಂರನ್ನು ಚಪ್ರಾಸಿ ತರಹ ನೋಡಿದ್ದಿರೀ, ನನ್ನ ಬಗ್ಗೆ ಲಘುವಾಗಿ ಮಾತನಾಡುತ್ತೀರಾ ಎಂದರು. ನಾವೇನು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇವಾ, ಹುಡುಕಿಕೊಂಡು ಬಂದವರು ನೀವು, ಸಿಎಂ ಸ್ಥಾನ ಕೊಡ್ತೀವಿ ಬನ್ನಿ ಅಂತ, ಬೇಡ ಯಾರನ್ನಾದ್ರು ಮಾಡಿಕೊಳ್ಳಿ ಅಂತ ಹೇಳಿದ್ದೆವು ಅಲ್ವಾ, ಮಲ್ಲಿಕಾರ್ಜುನ ಖರ್ಗೆಯನ್ನು ಮಾಡಿಕೊಳ್ಳಿ ಎಂದು ಹೇಳಿಲ್ವಾ.

Latest Videos

ನಿಮ್ಮ ಕಾರ್ಯಕ್ರಮ ಹೇಳಿ, ನಮ್ಮನ್ನು ಟೀಕಿಸುವುದು ಬೇಡ: ಎಚ್‌.ಡಿ.ಕುಮಾರಸ್ವಾಮಿ

ಅಂದು ನಾವು ಈ ಮಾತು ಹೇಳಿದಾಗ ಗುಲಾಮ್‌ ನಬೀ ಆಜಾದ್‌, ಸಿದ್ದರಾಮಯ್ಯ, ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ, ಇದ್ರು ಅಲ್ವಾ ಯಾಕೆ ಜೆಡಿಎಸ್‌ ತಲೆಗೆ ಕಟ್ಟಿದ್ರಿ, ಆಮೇಲೆ ಯಾವ ರೀತಿ ನಡೆಸಿಕೊಂಡ್ರಿ ಎಂದರು. ಯಾವುದೇ ಷರತ್ತು ಇಲ್ಲ ಅಂದ್ರಿ, ಇಷ್ಟುಮಂತ್ರಿ ಸ್ಥಾನ ಬೇಕು, ಇದೇ ಇಲಾಖೆಗಳು ಬೇಕೆಂದು ನಮ್ಮ ಮೇಲೆ ದಬ್ಬಾಳಿಕೆ ನಡೆಸಿದ್ರಿ. ನಿಮಗೆ ಯಾವ ನೈತಿಕತೆ ಇದೆ ಜೆಡಿಎಸ್‌ ಬಗ್ಗೆ ಚರ್ಚೆ ಮಾಡಲು ಎಂದು ಹೇಳಿದ ಕುಮಾರಸ್ವಾಮಿ, ನಮ್ಮ ಕಾರ್ಯಕರ್ತರಿಗೆ ಒಂದು ನಯಾ ಪೈಸಾ ಕಡಿಮೆಯಾಗಬಾರದೆಂದು ನಮ್ಮ ಮೇಲೆ ಒತ್ತಡ ಹಾಕಿದ್ರಲ್ಲಾ, ಸಿದ್ದರಾಮಯ್ಯ ಕಮಿಟ್‌ ಆಗಿದ್ದ 4 ಸಾವಿರ ಕೋಟಿ ರುಪಾಯಿ ಸಾಲವನ್ನು ನಮ್ಮ ಸರ್ಕಾರ ತೀರಿಸಬೇಕಾಯಿತು ಎಂದರು.

ಪಂಚರತ್ನ ಯಾತ್ರೆ, ಮೊದಲ ಹಂತ ಅಂತ್ಯ: ಜಿಲ್ಲೆಯ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ದಿನಗಳ ಕಾಲ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪಂಚರತ್ನ ರಥಯಾತ್ರೆ ಬುಧವಾರ ಮುಕ್ತಾಯಗೊಂಡಿತು. ಶೃಂಗೇರಿ ಕ್ಷೇತ್ರದ ಮೂರು ತಾಲೂಕುಗಳು,ಚಿಕ್ಕಮಗಳೂರು ಮತ್ತು ಮೂಡಿಗೆರೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲಾಯಿತು. ಈ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್‌ ತನ್ನ ಅಭ್ಯ ರ್ಥಿಯನ್ನು ಘೋಷಣೆ ಮಾಡಿದೆ. ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರವಾಸದ ಸಂದರ್ಭದಲ್ಲಿ ಸ್ಥಳೀಯ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಜತೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

ಬೆಳಿಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ, ತೇಗೂರಿನ ಇತಿಹಾಸ ಪ್ರಸಿದ್ಧ ಆಂಜನೇಯ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು. ರಾಜ್ಯದಲ್ಲಿ ಬಹುಮತ ಸರ್ಕಾರ ಹಾಗೂ ಹೆತ್ತ ವರ ದೀರ್ಘಾಯುಷ್ಯಕ್ಕಾಗಿ ಕೋರಿದರು. ಆಗ ದೇವರು ಬಲಗೈ ಹಸ್ತದಿಂದ ಅಪ್ಪಣೆ ನೀಡಿತು. ಬಳಿಕ ಯಾತ್ರೆ ಮಳಲೂರು ಮಾರ್ಗವಾಗಿ ಮೂಡಿಗೆರೆ ವಿಧಾನಸಭಾ ಕ್ಷೇತ್ರ ಪ್ರವೇಶಿಸಿ, ನೆರಡಿ ಗ್ರಾಮದ ರತ್ನ ಗರ್ಭ ಗಣಪತಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ಅವರು ಸ್ಥಳೀಯ ಗ್ರಾಮಸ್ಥರ ಸಮಸ್ಯೆಆಲಿಸಿದರು. ಹೆಡದಾಳು ಗ್ರಾಮದಲ್ಲಿ ವಿದ್ಯಾರ್ಥಿನಿ ಶ್ರಾವ್ಯಾ, ಕುಮಾರಸ್ವಾಮಿ ಬಳಿಗೆ ಬಂದು ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿ ವರೆಗೆ ಗುಣಮಟ್ಟದ ಉಚಿತ ಶಿಕ್ಷಣ ನೀಡುವ ತಮ್ಮ ಯೋಜನೆ ಅತ್ಯುತ್ತಮವಾಗಿದೆ ಎಂದು ಹೇಳಿ ತಾನು ಡಬ್ಬಿಯಲ್ಲಿ ಕೂಡಿಟ್ಟಹಣವನ್ನು ನೀಡಿ, ಪಂಚರತ್ನ ರಥಯಾತ್ರೆಗೆ ಶುಭ ಕೋರಿದರು. 

ಎಚ್‌ಡಿಕೆಯವರನ್ನು ಮುಖ್ಯಮಂತ್ರಿ ಮಾಡುವುದೇ ದೇವೇಗೌಡರ ಕೊನೆಯ ಆಸೆ: ಶಾಸಕ ಜಿ.ಟಿ.ದೇವೇಗೌಡ

ಆ ವಿದ್ಯಾರ್ಥಿನಿಯ ಉದಾರತೆಯನ್ನು ಮಾಜಿ ಮುಖ್ಯಮಂತ್ರಿಗಳು ಕೊಂಡಾಡಿದರು. ಮೂಡಿಗೆರೆಯ ಅಡ್ಯಂತಾಯ ಬಯಲು ರಂಗ ಮಂದಿರದಲ್ಲಿ ನಡೆದ ಪಂಚರತ್ನ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, ನಿಮ್ಮ ಋುಣ ತೀರಿಸಲು ಅವಕಾಶ ನೀಡಿ, ಜೆಡಿಎಸ್‌ ಅಭ್ಯರ್ಥಿ ನಿಂಗಯ್ಯ ಅಲ್ಲಾ, ನಾನೇ ಎಂದು ತಿಳಿದು ಮತ ನೀಡಿ ಎಂದು ವಿನಂತಿಸಿದರು. ಮೂಡಿಗೆರೆಯಲ್ಲಿ ದೇವೇಗೌಡರ ಕೂಗು ಕೇಳಿದರೆ ಸಾಕು ಬೆಂಬಲ ಸಿಗುತ್ತದೆ. ಹಳ್ಳಿಹಳ್ಳಿಗಳಲ್ಲೂ ಉತ್ತಮ ಬೆಂಬಲ ಸಿಕ್ಕಿದೆ. ಇಡೀ ರಾಜ್ಯದಲ್ಲಿ 18 ಗಂಟೆ ಹೋರಾಟ ಮಾಡುತ್ತಿದ್ದೇನೆ. ವೈಯುಕ್ತಿಕ ಸ್ಥಾನಮಾನಕ್ಕಲ್ಲ ಎಂದರು.

click me!