ನಾನು ಕ್ವಾರಿ ನಡೆಸಲಿಲ್ಲ, ಗ್ರಾನೈಟ್ ಹೊಡೆಯಲಿಲ್ಲ, ವಿದೇಶಕ್ಕೆ ಗ್ರಾನೈಟ್ ರಫ್ತು ಮಾಡಲಿಲ್ಲ, ಕ್ವಾರಿಯವರಿಂದ ಹಣ ಕೇಳಲಿಲ್ಲ, ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಮಾಲ್ ಕಟ್ಟಲಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣ (ಜೂ.29): ನಾನು ಕ್ವಾರಿ ನಡೆಸಲಿಲ್ಲ, ಗ್ರಾನೈಟ್ ಹೊಡೆಯಲಿಲ್ಲ, ವಿದೇಶಕ್ಕೆ ಗ್ರಾನೈಟ್ ರಫ್ತು ಮಾಡಲಿಲ್ಲ, ಕ್ವಾರಿಯವರಿಂದ ಹಣ ಕೇಳಲಿಲ್ಲ, ಬೆಂಗಳೂರಿನಲ್ಲಿ ದೊಡ್ಡ ದೊಡ್ಡ ಮಾಲ್ ಕಟ್ಟಲಿಲ್ಲ. ಆದರೂ ಜನ ನಮ್ಮನ್ನು ಅವರನ್ನು ಒಂದೇ ತಕ್ಕಡಿಯಲ್ಲಿ ತೂಗುತ್ತಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಪರೋಕ್ಷ ವಾಗ್ದಾಳಿ ನಡೆಸಿದರು. ತಾಲೂಕಿನ ಮತ್ತೀಕೆರೆ ಗ್ರಾಮದಲ್ಲಿ ನೂತನ ಗ್ರಾಪಂ ಕಚೇರಿ ಕಟ್ಟಡವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಮೊನ್ನೆ ಯಾವುದೋ ಮಾಲ್ ಉದ್ಘಾಟಿಸಿದ ಅವರು, ನನ್ನ ಮೂಲ ವೃತ್ತಿ ಬಿಜಿನೆಸ್, ರಾಜಕೀಯ ಫ್ಯಾಷನ್ ಎಂದಿದ್ದಾರೆ.
ಆದರೆ ನಾನು ಜಿಲ್ಲೆಯಲ್ಲಿ ಇದುವರೆಗೆ ಯಾವುದೇ ಕ್ವಾರಿ ಮಾಡಲಿಲ್ಲ, ಯಾರಿಂದಲೂ ಮಾಡಿಸಲಿಲ್ಲ. ಪ್ರಾಮಾಣಿಕವಾಗಿ ಬದುಕುತ್ತಿದ್ದೇನೆ. ಆದರೂ ದೇವೇಗೌಡರ ಕುಟುಂಬವನ್ನು, ಅವರನ್ನು ಜನ ಒಂದೇ ತಕ್ಕಡಿಯಲ್ಲಿ ತೂಗುವುದು ಬೇಸರ ಮೂಡಿಸಿದೆ ಎಂದರು. ನಾನು ಎರಡು ಬಾರಿ ರಾಜ್ಯದ ಮುಖ್ಯಮಂತ್ರಿಯಾದರೂ ಅಧಿಕಾರಿಗಳಿಂದ ದುಡ್ಡು ಕೇಳಲಿಲ್ಲ. ಗುತ್ತಿಗೆದಾರರಿಂದ ಲಂಚ ಪಡೆಯಲಿಲ್ಲ. ಕಿರಾತಕರ ಮಧ್ಯೆ ಹೇಗೆ ಚುನಾವಣೆಗಳನ್ನು ಮಾಡಿದ್ದೇನೆ ಎಂಬುದು ನನಗೆ ಗೊತ್ತು. ಆದರೆ, ಈ ಸರ್ಕಾರ ಬಂದು ತಿಂಗಳಾಗಿಲ್ಲ, ಆಗಲೇ ವರ್ಗಾವಣೆ ದಂಧೆ ಶುರುಮಾಡಿಕೊಂಡಿದೆ.
ಕಾಂಗ್ರೆಸ್ ಸರ್ಕಾರದಲ್ಲೀಗ ವರ್ಗಾವಣೆ ದಂಧೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ: ಎಚ್‌ಡಿಕೆ
ಪೊಲೀಸ್ ಇಲಾಖೆಗೆ ಫೈನ್ ವಸೂಲಿಗೆ ಟಾರ್ಗೆಟ್ ನೀಡಲಾಗಿದೆ. ದುಡ್ಡು ನೀಡಿ ಬಂದ ಅಧಿಕಾರಿ ಇಲ್ಲಿ ನಿಮ್ಮ ರಕ್ತ ಹೀರುತ್ತಾನೆ ಎಂದು ಕಿಡಿಕಾರಿದ ಅವರು, ಕೇತಗಾನಹಳ್ಳಿಯಲ್ಲಿರುವ ಜಮೀನು ನಾನು ಸಿನಿಮಾ ನಿರ್ಮಾಣ ಮಾಡುವಾಗ ಖರೀದಿಸಿದ್ದು, ರಾಜಕೀಯಕ್ಕೆ ಬಂದ ಮೇಲೆ ನಾನು ಯಾವುದೇ ಆಸ್ತಿ ಮಾಡಲಿಲ್ಲ. 2018ರಲ್ಲೇ ರಾಜಕೀಯ ಬೇಡ ಎಂದು ತೀರ್ಮಾನಿಸಿದ್ದೆ. ಆದರೆ ಬಡವರ ಪರ ನಿಲ್ಲಬೇಕು ಎಂಬ ಉದ್ದೇಶದಿಂದ ರಾಜಕೀಯದಲ್ಲಿದ್ದೇನೆ ಎಂದರು.
ಕಳೆದ ಬಾರಿ 14 ತಿಂಗಳು ಸಿಎಂ ಆಗುವ ಅವಕಾಶ ಸಿಕ್ಕಿತ್ತು. ಇನ್ನು ಒಂದು ವರ್ಷ ಅವಕಾಶ ಸಿಕ್ಕಿದ್ದರೆ ತಾಲೂಕಿನ ಎಲ್ಲ ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿ ಮಾಡುತ್ತಿದ್ದೆ. ಜು.7ಕ್ಕೆ ಬಜೆಟ್ ಇದ್ದು, ಯಾವ ಯೋಜನೆಗಳಿಗೆ ಎಷ್ಟುಹಣ ನೀಡುತ್ತಾರೋ ನೋಡೋಣ. ಗ್ರಾಪಂ ಸದಸ್ಯರು ಜನರ ಕೆಲಸಗಳನ್ನು ಮಾಡಿಕೊಡಲು ಆದ್ಯತೆ ನೀಡಿ. ನಿಮಗೆ ಬೇಕಾದ ಸಹಕಾರ ನೀಡಲು ನಾನು ಬದ್ಧನಾಗಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ತಾಪಂ ಇಒ ಶಿವಕುಮಾರ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಚ್.ಸಿ.ಜಯಮುತ್ತು, ಜೆಡಿಎಸ್ ಮುಖಂಡರಾದ ಪ್ರಸನ್ನ ಪಿ.ಗೌಡ, ಗೋವಿಂದನಹಳ್ಳಿ ನಾಗರಾಜು, ಗ್ರಾಪಂ ಅಧ್ಯಕ್ಷೆ ಪದ್ಮಾ ಮುರಳಿ, ಹರೀಶ್ ಇತರರಿದ್ದರು.
ಎಲ್ಲ ಮಕ್ಕಳಿಗೂ ಉತ್ತಮ ಶಿಕ್ಷಣ ಸಿಗಲಿ: ಸ್ವಾತಂತ್ರ್ಯ ಬಂದು 76 ವರ್ಷವಾದರೂ ಇಂದಿಗೂ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ಮೀಸಲಿಟ್ಟಅನುದಾನ ಸಮರ್ಪಕವಾಗಿ ತಲುಪುತ್ತಿಲ್ಲ. ದೇಶದ ಅಭಿವೃದ್ಧಿಗೆ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಪ್ರಗತಿ ಮುಖ್ಯಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಇವರೆಡು ಕ್ಷೇತ್ರದ ಮಹತ್ವವನ್ನು ಅರಿತಿದ್ದರಿಂದಲೇ ನಾವು ಪಂಚರತ್ನ ಯೋಜನೆಯ ರೂಪುರೇಷೆ ಮಾಡಿದ್ದೆ. ಆದರೆ ಜನ ಬೆಂಬಲಿಸಲಿಲ್ಲ. ಪ್ರತಿ ಕುಟುಂಬದ ಮಕ್ಕಳಿಗೆ ಉತ್ತಮ ಶಿಕ್ಷಣ ದೊರಕಿದ್ದಾಗ ಮಾತ್ರ ಆ ಕುಟುಂಬಗಳು ಅಭಿವೃದ್ಧಿಯಾಗಲು ಸಾಧ್ಯ.
Ramanagara: ಮಾಗಡಿಯನ್ನು ಪ್ರವಾಸಿಗರ ತಾಣವಾಗಿ ಪರಿವರ್ತಿಸುವೆ: ಶಾಸಕ ಬಾಲಕೃಷ್ಣ
ಅದರಲ್ಲೂ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣವನ್ನು ಮೊಟಕುಗೊಳಿಸಬಾರದು. ನಮ್ಮ ತಾಲೂಕು ಶೈಕ್ಷಣಿಕವಾಗಿ ಪ್ರಗತಿಯಲ್ಲಿರುವುದು ಸಂತೋಷದ ವಿಚಾರ. ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿನ ಶಿಕ್ಷಕರ ಜೊತೆ ಶೈಕ್ಷಣಿಕ ಸಮಾಲೋಚನೆ ನಡೆಸಲಿದ್ದೇನೆ. ಶಿಕ್ಷಣ ಕ್ಷೇತ್ರದ ಬಗ್ಗೆ ನನ್ನದೇ ಆದ ಕನಸಿತ್ತು. ಆದರೆ, ಅದಕ್ಕೆ ಅವಕಾಶ ಸಿಕ್ಕಿಲ್ಲ. ಶಾಸಕ್ಟನಿಧಿಯಿಂದ ಯಾವುದಾದರೂ ಗ್ರಾಪಂನಲ್ಲಿ ಪೈಲೆಟ್ ಯೋಜನೆಯಡಿ ಒಂದು ಮಾದರಿ ಶಾಲೆ ನಿರ್ಮಿಸಿ ಸರ್ಕಾರದ ಗಮನ ಸೆಳೆಯುತ್ತೇನೆ ಎಂದರು.