Ramanagara: ಪಿಡಿ​ಒ​ಗಳ ಸಮಸ್ಯೆ ಸರ್ಕಾ​ರದ ಗಮನಕ್ಕೆ ತರುವೆ: ಶಾಸಕ ಎಚ್‌.ಸಿ.ಬಾಲಕೃಷ್ಣ

By Kannadaprabha NewsFirst Published Jun 29, 2023, 9:23 PM IST
Highlights

ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರಿಗೆ ಸರ್ಕಾರದ ಸೇವೆ ಸಲ್ಲಿಸುವ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿದರು. 

ರಾಮನಗರ (ಜೂ.29): ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರಿಗೆ ಸರ್ಕಾರದ ಸೇವೆ ಸಲ್ಲಿಸುವ ಗ್ರಾಮ ಪಂಚಾಯಿತಿಗಳಲ್ಲಿ ಪಿಡಿಒಗಳ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಹೇಳಿದರು. ಮಾಗಡಿ ಕ್ಷೇತ್ರ ವ್ಯಾಪ್ತಿಯ ಕೂಟಗಲ್‌ ಹೋಬಳಿಯ ಅಕ್ಕೂರು, ದೊಡ್ಡಗಂಗವಾಡಿ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಬುಧವಾರ ಕೃತಜ್ಞತಾ ಸಮರ್ಪಣಾ ಸಭೆ ಮತ್ತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಹಲವು ಗ್ರಾಪಂಗಳಲ್ಲಿ ಇ-ಖಾತಾ ಶೇಕಡ 90ರಷ್ಟು ಆಗಬೇಕಿದೆ. 

ಅದಕ್ಕೆ ದಾಖಲೆಗಳು ಮತ್ತು ಸರ್ವೆ ಸಮಸ್ಯೆ ಎಂದು ವಿನಾಕಾರಣ ವಿಳಂಬವಾಗುತ್ತಿದೆ. ಇದನ್ನು ನಾನು ಸಹಿಸುವುದಿಲ್ಲ. ಸಾರ್ವಜನಿಕರಿಗೆ ಕಾನೂನು ಬದ್ದವಾಗಿ ಎಲ್ಲ ಕೆಲಸಗಳು ನಡೆಯಬೇಕು. ಕಚೇರಿಯಲ್ಲಿ ಪ್ರತಿನಿತ್ಯ ಅಧಿಕಾರಿಗಳು 5.30 ರವರೆಗೆ ಇದ್ದು ಕೆಲಸ ನಿರ್ವಹಿಸಬೇಕು. ಕೆಲಸ ಆಗಿಲ್ಲ ಎಂದು ಸಾರ್ವಜನಿರು ಕಚೇರಿಗಳಿಗೆ ಅಲೆದಾಡಬಾರದು. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆಯಿಂದ ಕೆಲಸ ನಿರ್ವಹಿಸುವಂತೆ ಸೂಚನೆ ನೀಡಿದರು. ಫಾರಂ 57 ಬಗ್ಗೆ ಸರ್ಕಾರ ಇದುವರೆಗೆ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಆ ಸ್ಥಳವನ್ನು ಸಾರ್ವಜನಿಕರ ಉದ್ದೇಶಕ್ಕೆ ಮೀಸಲಿಡುವುದೋ ಅಥವಾ ಜಾನುವಾರುಗಳಿಗೆ ಮೀಸಲಿಡುವ ಬಗ್ಗೆ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ. 

Latest Videos

Ramanagara: ಮಾಗಡಿಯನ್ನು ಪ್ರವಾಸಿಗರ ತಾಣವಾಗಿ ಪರಿವರ್ತಿಸುವೆ: ಶಾಸಕ ಬಾಲಕೃಷ್ಣ

ಆದರೆ, ಫಾರಂ 50, 53ಯಡಿ ಅರ್ಜಿ ಹಾಕಿರುವ ಎಲ್ಲ ರೈತರಿಗೆ ಇನ್ನೆರಡು ತಿಂಗಳಲ್ಲಿ ಸಾಗುವಳಿ ಚೀಟಿ ಕೊಡಿಸುತ್ತೇನೆ. ಗ್ರಾಮಗಳಿಗೆ ಭೇಟಿ ನೀಡಿದ ಸಮಯದಲ್ಲಿ ಜಮೀನು ಸರ್ವೆ, ರಸ್ತೆ ನಿರ್ಮಾಣ, ಸ್ಮಶಾನ ಗುರುತಿಸುವುದು, ಹಕ್ಕುಪತ್ರಗಳ ಬಗ್ಗೆ ಮನವಿ ಸಲ್ಲಿಸಿದ್ದಾರೆ. ಚಿಕ್ಕಗಂಗವಾಡಿ ಗ್ರಾಮದಲ್ಲಿ ಸ್ಮಶಾನ ಮಂಜೂರಾಗಿದೆ, ಸ್ಥಳ ಗುರ್ತಿಸಭೇಕಿದೆ. ಈ ಬಗ್ಗೆ ಸರ್ವೆರ್ಯ ಪ್ರಭಾಕರ್‌ ಅಳತೆಗೆ ಕ್ರಮವಹಿಸಿ, ಮಾಕಳಿ ಹೊಳೆಗೆ ಚೆಕ್‌ ಡ್ಯಾಂ ನಿರ್ಮಾಣದ ಅಗತ್ಯತೆಯಿದ್ದು ಸಣ್ಣ ನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರ ಕೊಟ್ರೇಶ್‌ ಕ್ರಿಯಾ ಯೋಜನೆ ರೂಪಿಸಿ ಎಂದರು.

ದೊಡ್ಡಗಂಗವಾಡಿ ಗ್ರಾಪಂ ನಲ್ಲಿ 129 ಸ್ವತ್ತುಗಳಿಗಷ್ಟೆ ಇ-ಖಾತಾ ಆಗಿವೆ. ಈ ಬಗ್ಗೆ ಇನ್ನೆರಡು ತಿಂಗಳಲ್ಲಿ ಎಲ್ಲ ಸ್ವತ್ತುಗಳಿಗೂ ಇ-ಖಾತಾ ಆಗಬೇಕು. ಕರಪತ್ರ ಮುದ್ರಿಸಿ ಎಲ್ಲ ಮನೆಗಳಿಗೂ ಅರಿವು ಮೂಡಿಸುವ ಕಾರ್ಯವನ್ನು ಮಾಡಿ ಇಓ ಈ ಬಗ್ಗೆ ಆಗಾಗ್ಗೆ ಬೇಟಿ ನೀಡಿ ಕ್ರಮ ವಹಿಸಿ ಎಂದರು. ದೊಡ್ಡಗಂಗವಾಡಿ ಗ್ರಾಪಂಗೆ ಕಾಯಂ ಪಿಡಿಒ ಇಲ್ಲ, ಕಂಪ್ಯೂಟರ್‌ ಆಪರೇಟರ್‌ಗಳು ಸೇರಿದಂತೆ ಸಿಬ್ಬಂದಿ ಸಮಸ್ಯೆ ಬಗ್ಗೆ ಸಾರ್ವಜನಿಕರು ಶಾಸಕರ ಗಮನ ಸೆಳೆದರು.

ಬಿಜೆಪಿ-ಜೆಡಿ​ಎಸ್‌ ಮೈತ್ರಿ ಆಗಬಹುದು ಎಂದು ಅನಿಸುತ್ತಿದೆ: ಯೋಗೇಶ್ವರ್‌

ಈ ವೇಳೆ ಬಿಡದಿ - ಕೂಟಗಲ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಗಾಣಕಲ ನಟರಾಜು, ಜಿಪಂ ಮಾಜಿ ಅಧ್ಯಕ್ಷ ಕೆ.ರಮೇಶ್‌, ತಾಪಂ ಮಾಜಿ ಅಧ್ಯಕ್ಷರಾದ ಡಿ.ಎಂ.ಮಹದೇವಯ್ಯ, ಎಸ್‌.ಪಿ.ಜಗದೀಶ್‌, ತಹಸೀಲ್ದಾರ್‌ ತೇಜಸ್ವಿನಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರದೀಪ್‌, ರಾಜಸ್ವ ನಿರೀಕ್ಷಕ ಪ್ರಸನ್ನಕುಮಾರ್‌, ದೊಡ್ಡಗಂಗವಾಡಿ ಗ್ರಾಪಂ ಅಧ್ಯಕ್ಷ ಹನುಮಂತಯ್ಯ, ಮಾಜಿ ಅಧ್ಯಕ್ಷ ರಾಜಕು​ಮಾರ್‌, ಚಂದ್ರು ಮುಖಂಡರಾದ ದೊಡ್ಡಗಂಗವಾಡಿ ಗೋಪಾಲ, ಪುಟ್ಟಗೌರಮ್ಮ, ನರಸಿಂಹಮೂರ್ತಿ ಮತ್ತಿ​ತ​ರರು ಹಾಜ​ರಿ​ದ್ದರು.

click me!