ಹರಿಹರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾರಥ್ಯದ ಪಂಚರತ್ನ ರಥಯಾತ್ರೆಗೆ ಅದ್ಧೂರಿ ಸ್ವಾಗತ ವ್ಯಕ್ತವಾಗಿದೆ. ಕೆ.ಬೇವಿನಹಳ್ಳಿ ಗ್ರಾಮದಲ್ಲಿ ಜಿಲ್ಲೆಯಲ್ಲಿ 2ನೇ ದಿನದ ರಥಯಾತ್ರೆ ಆರಂಭವಾಗುತ್ತಿದ್ದಂತೆ ಇಡೀ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕಂಡು ಬಂದಿತು.
ದಾವಣಗೆರೆ (ಫೆ.02): ಹರಿಹರ ತಾಲೂಕಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಾರಥ್ಯದ ಪಂಚರತ್ನ ರಥಯಾತ್ರೆಗೆ ಅದ್ಧೂರಿ ಸ್ವಾಗತ ವ್ಯಕ್ತವಾಗಿದೆ. ಕೆ.ಬೇವಿನಹಳ್ಳಿ ಗ್ರಾಮದಲ್ಲಿ ಜಿಲ್ಲೆಯಲ್ಲಿ 2ನೇ ದಿನದ ರಥಯಾತ್ರೆ ಆರಂಭವಾಗುತ್ತಿದ್ದಂತೆ ಇಡೀ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕಂಡು ಬಂದಿತು. ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕ ಕುಮಾರಸ್ವಾಮಿಗೆ ಭವ್ಯ ಮೆರವಣಿಗೆಯಲ್ಲಿ ಕರೆದೊಯ್ದರು. ನಂತರ ಗ್ರಾಮದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಕುಮಾರಸ್ವಾಮಿ, ಭೋಜೇಗೌಡ, ಎಚ್ಚೆಸ್ ಶಿವಶಂಕರ ಇತರರು ಪೂಜೆ ಸಲ್ಲಿಸಿದರು. ಪುಷ್ಪವೃಷ್ಟಿಮೂಲಕ ಪಂಚರತ್ನ ರಥಯಾತ್ರೆಗೆ ಸ್ವಾಗತಿಸಲಾಯಿತು.
ಮಿಟ್ಲಕಟ್ಟೆ ಗ್ರಾಮದಲ್ಲಿ ರಥಯಾತ್ರೆಗೆ ಮಹಿಳೆಯರು ಕುಂಭಮೇಳದ ಸ್ವಾಗತ ಕೋರಿದರೆ, ಯುವ ಕಾರ್ಯಕರ್ತರು ಪಟಾಕಿ ಸಿಡಿಸಿ, ಸ್ವಾಗತಿಸಿದರು. ಗ್ರಾಮದ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ಕುಮಾರಸ್ವಾಮಿ ಪೂಜೆ ನೆರವೇರಿಸಿದರು. ದೇವರ ಬೆಳಕೆರೆ ಗ್ರಾಮದಲ್ಲೂ ಪಟಾಕಿ ಸಿಡಿಸಿ, ಅದ್ಧೂರಿ ಮೆರವಣಿಗೆ ಮೂಲಕ ಕುಮಾರಸ್ವಾಮಿ ಸಾರಥ್ಯದ ಜೆಡಿಎಸ್‌ಗೆ ಗ್ರಾಮಸ್ಥರು, ಮುಖಂಡರು, ಕಾರ್ಯಕರ್ತರು ಶುಭ ಹಾರೈಸಿದರು.
ಜೆಡಿಎಸ್‌ಗೆ ಮತ ಹಾಕಿದರೆ ಬಿಜೆಪಿಗೆ ಹಾಕಿದಂತೆ: ಶಾಸಕ ಜಮೀರ್ ಅಹಮದ್
ರಥಯಾತ್ರೆಯ 2ನೇ ದಿನವು ಬನ್ನಿಕೋಡು ಗ್ರಾಮದಿಂದ ಆರಂಭವಾಗಿ, ಕೆ.ಬೇವಿನಹಳ್ಳಿ, ದೇವರ ಬೆಳಕೆರೆ ಇತರೆ ಗ್ರಾಮಗಳ ಮೂಲಕ ಮಲೆಬೆನ್ನೂರು ಪಟ್ಟಣ ಹಾಗೂ ಹರಿಹರ ನಗರದ ಗಾಂಧಿ ಮೈದಾನದಲ್ಲಿ ಬಹಿರಂಗ ಸಭೆ ನಡೆಸಿತು. ದೇವರ ಬೆಳಕೆರೆ ಗ್ರಾಮದಲ್ಲಿ ಸಾಲಮನ್ನಾ ಆಗದ ರೈತರು ಎಚ್.ಡಿ.ಕುಮಾರಸ್ವಾಮಿಗೆ ಸಾಲಮನ್ನಾದ ಅರ್ಜಿ ಸಲ್ಲಿಸಿದರು. ಅರ್ಜಿ, ದಾಖಲೆ ಪರಿಶೀಲಿಸಿದ ಕುಮಾರಸ್ವಾಮಿ ಮನವಿ ಕೊಟ್ಟಿರುವ ಈ ರೈತರ ಸಾಲ ಮನ್ನಾ ಆಗಿದೆ. ಆದರೆ, ಸಾಲದ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಬಿಜೆಪಿ ಸರ್ಕಾರದಲ್ಲಿ ಸಾಲ ಮನ್ನಾ ಸೌಲಭ್ಯ ವಂಚಿತವಾದ ಕುಟುಂಬಗಳ ಸ್ಥಿತಿ ಇದು ಎಂದು ಬೇಸರ ವ್ಯಕ್ತಪಡಿಸಿದರು.
ಮೂಗಿಗೆ ತುಪ್ಪ ಸವರಿದಂತಿದೆ ಕೇಂದ್ರ ಬಜೆಟ್: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಜನರನ್ನು ಮರುಳು ಮಾಡಲು ಮಾಡಿದ ಘೋಷಣೆಯ ಬಜೆಟ್ ಇದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಟುಕಿದರು. ಜಿಲ್ಲೆಯ ಹರಿಹರ ತಾಲೂಕು ಬನ್ನಿಕೋಡು ಗ್ರಾಮದಲ್ಲಿ ಪಂಚರತ್ನ ರಥಯಾತ್ರೆಯ 2ನೇ ದಿನದ ಜಿಲ್ಲಾ ಪ್ರವಾಸದ ಮುನ್ನ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರದ ಬಜೆಟ್ ಮೂಗಿಗೆ ತುಪ್ಪ ಸವರಿದಂತಾಗಿದ್ದು, ಚುನಾವಣೆ ಹಿನ್ನೆಲೆಯಲ್ಲಿ ನೀಡಿದ ಬಜೆಟ್ ಇದಷ್ಟೇ ಎಂದರು.
ಯಾವುದೇ ಅಭಿವೃದ್ಧಿ ಘೋಷಣೆ ಮಾಡಿದರೂ ಅವು ಜಾರಿಗೊಳ್ಳುವುದು ಚುನಾವಣೆ ನಂತರವಷ್ಟೆ. ಕಳೆದ 8 ವರ್ಷಗಳಲ್ಲಿ ಘೋಷಣೆಯಾಗದ ಕಾರ್ಯಕ್ರಮಗಳನ್ನು ಇಂದು ಘೋಷಣೆ ಮಾಡುತ್ತಾರೆ. ಇಂದಿನ ಬಜೆಟ್ ಘೋಷಣೆ ಕೇವಲ ಕಾಗದ ಪತ್ರದಲ್ಲಿ ಇರುತ್ತವಷ್ಟೇ. ರಾಜ್ಯದ ರೈಲ್ವೇ ಯೋಜನೆಗಳು ಇಂದಿಗೂ ಹಾಗೇ ಉಳಿದಿವೆ. ಘೋಷಣೆಯಾದ ಯೋಜನೆಗಳು ನಾಳೆಗೆ ಜಾರಿಯೂ ಆಗುವುದಿಲ್ಲ ಎಂದು ಹೇಳಿದರು. ಮಹದಾಯಿ, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ಹಣ ಘೋಷಣೆ ಮಾಡಿದ್ದು, ಆ ಹಣ ಬರುವುದೂ ಏಪ್ರಿಲ್ ತಿಂಗಳ ನಂತರವೇ.
ಜನರನ್ನು ತಾತ್ಕಾಲಿಕವಾಗಿ ಮರುಳು ಮಾಡಲು ಘೋಷಣೆ ಮಾಡಲಾಗಿದೆಯಷ್ಟೇ. ಏನೇ ಘೋಷಣೆ ಮಾಡಿದರೂ ಮುಂದೆ ಬರುವ ಸರ್ಕಾರದ ಮೇಲೆ ಅದು ನಿರ್ಧಾರವಾಗುತ್ತದೆ. ಘೋಷಣೆಗಳು ಕೇವಲ ಕಾಗದ ಪತ್ರವಾಗಿದ್ದು, ಚುನಾವಣೆ ಪ್ರಚಾರಕ್ಕೆ ಬಿಜೆಪಿ ಅದನ್ನು ಬಳಸಿಕೊಳ್ಳಲಿದೆ. ಬಿಜೆಪಿಯನ್ನೇ ಜನ ತಿರಸ್ಕರಿಸಿದರೆ ಯಾವ ರೀತಿ ಯೋಜನೆಗಳು ಜಾರಿಗೊಳ್ಳುತ್ತವೆ ಎಂದು ಪ್ರಶ್ನಿಸಿದರು. ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಮಾಜಿ ಎಂಎಲ್‌ಸಿ ರಮೇಶ ಗೌಡ ಇತರರು ಇದ್ದರು.
Chikkaballapur: ಅಮೃತ ಕಾಲದಲ್ಲಿ ಸರ್ವಸ್ಪರ್ಶಿ ಬಜೆಟ್: ಸಚಿವ ಸುಧಾಕರ್
ಕೇಂದ್ರ ಬಜೆಟ್‌ನಲ್ಲಿ ಏನೇ ಘೋಷಿಸಿದರೂ ನಂಬಿಕೆ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಘೋಷಣೆ ಮೂಗಿಗೆ ತುಪ್ಪ ಸವರುವ ಕೆಲಸವಷ್ಟೇ. ಕರ್ನಾಟಕ ಬರ ಪೀಡಿತ ಪ್ರದೇಶವೆಂಬುದು ಈಗಷ್ಟೇ ಕೇಂದ್ರ ಸರ್ಕಾರಕ್ಕೆ ಜ್ಞಾನೋದಯವಾಯಿತೆ? ಇಂತಹ ಬಜೆಟ್‌ನಿಂದ ಜನರೂ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿಲ್ಲ. ಇದೊಂದು ಚುನಾವಣೆ ಹಿನ್ನೆಲೆಯ ಬಜೆಟ್ ಎಂಬುದಾಗಿ ಯಾರಿಗಾದರೂ ಅರ್ಥವಾಗುತ್ತದೆ.
-ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ