ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ, ವಾಮಮಾರ್ಗದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದರಾದರೂ ಕೊಟ್ಟಮಾತಿನಂತೆ ನಡೆದುಕೊಳ್ಳಲಿಲ್ಲ.
ಚನ್ನಪಟ್ಟಣ (ಫೆ.02): ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕಳೆದ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ, ವಾಮಮಾರ್ಗದಿಂದ ಚುನಾವಣೆಯಲ್ಲಿ ಗೆಲುವು ಸಾಧಿಸಿದರಾದರೂ ಕೊಟ್ಟಮಾತಿನಂತೆ ನಡೆದುಕೊಳ್ಳಲಿಲ್ಲ. ಅವರ ಅವಧಿಯಲ್ಲಿ ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೆ ರಾಜಕೀಯ ನಿವೃತ್ತಿ ಪಡೆಯುವುದಾಗಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸವಾಲೆಸೆದರು.
ತಾಲೂಕಿನ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸ್ವಾಭಿಮಾನ ಸಂಕಲ್ಪ ನಡಿಗೆಗೆ ಚಾಲನೆ ನೀಡಿ ಮಾತನಾಡಿದ ಅವರು, ನನ್ನ ಹೃದಯ ವೀಕಾಗಿದೆ ಎಂದು ಕಣ್ಣೀರು ಹಾಕಿ, ಸುಳ್ಳು ಭರವಸೆಗಳನ್ನು ನೀಡಿ, ನಯವಂಚಕತನದಿಂದ ಕಳೆದ ಚುನಾವಣೆಯಲ್ಲಿ ಗೆದ್ದ ಕುಮಾರಸ್ವಾಮಿ ಕ್ಷೇತ್ರಕ್ಕೆ ಯಾವುದೇ ಶಾಶ್ವತ ಕೊಡುಗೆ ನೀಡಲಿಲ್ಲ ಎಂದು ಕಿಡಿಕಾರಿದ ಅವರು, ಕುಮಾರಸ್ವಾಮಿ ಆಯ್ಕೆ ಬಳಿಕ ಕ್ಷೇತ್ರದಲ್ಲಿ ಅರಾಜಕತೆ ಸೃಷ್ಟಿಯಾಗಿದ್ದು, ಭ್ರಷ್ಟಾಚಾರ, ಗೂಂಡಾಗಿರಿ, ದೌರ್ಜನ್ಯಗಳು ಹೆಚ್ಚಾಗಿವೆ. ತಾಲೂಕಿನ ಆಡಳಿತ ಹಳಿತಪ್ಪಿದೆ. ಇಲ್ಲಿಂದ ಆಯ್ಕೆಯಾದ ಬಳಿಕ ಅವರೆಷ್ಟುಬಾರಿ ಕ್ಷೇತ್ರಕ್ಕೆ ಬಂದು ಹೋಗಿದ್ದಾರೆ. ಅವರನ್ನು ನಂಬಿ ಮತದಾರರು ಕ್ಷೇತ್ರದಿಂದ ಆಯ್ಕೆ ಮಾಡಿದರು. ಆದರೆ, ಗೆದ್ದ ನಂತರ ಅವರು ಜನರ ಸಂಕಷ್ಟಪರಿಹರಿಸುವ ಕೆಲಸ ಮಾಡಲಿಲ್ಲ ಎಂದರು.
ಜಯಮುತ್ತು ಸರ್ವಾಧಿಕಾರಿ ಧೋರಣೆ ಜೆಡಿಎಸ್‌ಗೇ ಕುತ್ತು: ಸಿ.ಪಿ.ಯೋಗೇಶ್ವರ್
ಸಿಎಂ ಆಗಿದ್ದಾಗ ಕ್ಷೇತ್ರಕ್ಕೇ ಬರಲಿಲ್ಲ: ಕುಮಾರಸ್ವಾಮಿ ಗೆದ್ದು ಮುಖ್ಯಮಂತ್ರಿಯಾದರೆ ಸಾಲ ಮನ್ನಾ ಆಗುತ್ತೆ ಎಂದು ತಾಲೂಕಿನ ಜನ ನಂಬಿದ್ದರು. ಆದರೆ, ಅವರು ಸಿಎಂ ಆಗಿದ್ದ 14 ತಿಂಗಳ ಅವಧಿಯಲ್ಲಿ ಒಂದು ಬಾರಿಯೂ ಕ್ಷೇತ್ರಕ್ಕೆ ಬರಲಿಲ್ಲ. ಚನ್ನಪಟ್ಟಣದಿಂದ ಆಯ್ಕೆಯಾದ ನಂತರ ಕುಮಾರಸ್ವಾಮಿ ಯಾವೊಬ್ಬ ಜೆಡಿಎಸ್ ನಾಯಕರನ್ನು ವಿಧಾನಸೌಧದ ಒಳಗೆ ಬಿಟ್ಟುಕೊಳ್ಳಲಿಲ್ಲ. ಯಾವುದೇ ಮುಖಂಡರು ಅವರ ಮುಂದೆ ಬೆಳೆಯುವುದು ಅವರಿಗೆ ಇಷ್ಟವಿಲ್ಲ. ದಶಕಗಳಿಂದ ಜೆಡಿಎಸ್ ನಿಷ್ಠಾವಂತರಾಗಿ ಗುರುತಿಸಿಕೊಂಡಿದ್ದ ಅನೇಕರು, ಅವರ ಕಾರ‍್ಯವೈಖರಿಯಿಂದ ಬೇಸತ್ತು ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟುಮುಖಂಡರು ಬರಲಿದ್ದಾರೆಂದರು. ಕುಮಾರಸ್ವಾಮಿಗೆ ರಾಮನಗರದ ಶಾಸಕ ಸ್ಥಾನ ಸಾಕಾಗಲಿಲ್ಲ ಎಂದು ಚನ್ನಪಟ್ಟಣಕ್ಕೆ ಬಂದರು. ಇಲ್ಲಿ ಗೆದ್ದ ಮೇಲೆ ಈಗ ಅಲ್ಲಿ ತಮ್ಮ ಮಗನನ್ನು ಪ್ರತಿಷ್ಠಾಪಿಸಲು ಹೊರಟಿದ್ದಾರೆ. ಮದ್ದೂರನ್ನು ತಮ್ಮ ಬೀಗರಿಗೆ ದಾರೆ ಎರೆದಿದ್ದಾರೆ. ಯಾವುದೇ ಸಾಮಾನ್ಯ ಕಾರ‍್ಯಕರ್ತ ಬೆಳೆಯುವುದು ಇವರಿಗೆ ಬೇಕಿಲ್ಲವೇ ಎಂದು ಪ್ರಶ್ನಿಸಿದರು.
ಓಪನ್ ಚಾಲೆಂಜ್: ಕುಮಾರಸ್ವಾಮಿ ಮಾತೆತ್ತಿದರೆ ಕ್ಷೇತ್ರಕ್ಕೆ 1500 ಕೋಟಿ ರು. ಅನುದಾನ ತಂದಿದ್ದೇನೆ ಅನ್ನುತ್ತಾರೆ. ಹಾಗಿದ್ದರೆ ಕಿತ್ತೋದ ರಸ್ತೆಗಳಿಗೆ ಅಷ್ಟೂಅನುದಾನ ಖರ್ಚಾಯಿತಾ? ಒಂದಿಬ್ಬರು ಗುತ್ತಿಗೆದಾರಿಗೆ ತಾಲೂಕನ್ನು ಅಡವಿಟ್ಟು, ಅವರು ಕೊಟ್ಟಹಣದಲ್ಲಿ ದಂಧೆ ಮಾಡುತ್ತಿದ್ದಾರೆ. ಕುಮಾರಸ್ವಾಮಿಗೆ ತಾಲೂಕಿನ ಪರಿಚಯವೇ ಇಲ್ಲ. ಚನ್ನಪಟ್ಟಣ ನನ್ನ ಕರ್ಮಭೂಮಿ, ಇಲ್ಲಿನ ಜನರ ನಾಡಿಮಿಡಿತ ನನಗೆ ಗೊತ್ತಿದೆ. ಬೇಕಿದ್ದರೆ ನಾನು ತಾಲೂಕಿನ 20 ಸಾವಿರ ಜನರ ಹೆಸರು ಹೇಳಬಲ್ಲೆ. ಕುಮಾರಸ್ವಾಮಿ ತಾಲೂಕಿನ 10 ಗ್ರಾಮಗಳ ಹೆಸರು ಹೇಳಲಿ, ತಾಲೂಕಿನ 10 ಜನ ಮುಖಂಡರ ಹೆಸರನ್ನು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು. ಕ್ಷೇತ್ರದ ಶಾಸಕರಾದ ಬಳಿಕ ಕುಮಾರಸ್ವಾಮಿ ತಾಲೂಕು ಕಚೇರಿಗೆ ಬಂದು ಒಂದೇ ಒಂದು ಸಭೆ ನಡೆಸಲಿಲ್ಲ. ತಾಲೂಕಿನ ಸಮಸ್ಯೆಗಳನ್ನು ಆಲಿಸಲಿಲ್ಲ. ಕ್ಷೇತ್ರದ ಜನರ ಸಂಕಷ್ಟನೋಡಲಾಗದೇ ಮುಖ್ಯಮಂತ್ರಿಗಳಿಗೆ ದುಂಬಾಲು ಬಿದ್ದು, ಅನುದಾನ ತಂದರೆ ಅಭಿವೃದ್ಧಿ ಕಾರ‍್ಯಗಳನ್ನು ಮಾಡಲು ಬಿಡುವುದಿಲ್ಲ. ಗೂಂಡಾಗಳನ್ನು ಕರೆಸಿ ನನ್ನ ಮೇಲೆ ಕಲ್ಲು, ಮೊಟ್ಟೆಹೊಡೆಸ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಂಬಿ ಸಾಲಗಾರರಾದ ಜನ: ಕಳೆದ ಬಾರಿ ಕುಮಾರಸ್ವಾಮಿ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ನೀಡಿ ಗೆದ್ದರು. ಸ್ತ್ರೀಶಕ್ತಿ ಸಾಲ, ಒಡವೆ ಸಾಲ ಮನ್ನಾ ಮಾಡುವುದಾಗಿ ಜನರಿಗೆ ಮಂಕುಬೂದಿ ಎರಚಿದರು ಎಂದು ಯೋಗೇಶ್ವರ್ ಆರೋಪಿಸಿದರು. ಎಚ್‌ಡಿಕೆ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಮಹಿಳೆಯರಿಗೆ ಎಷ್ಟುಬೇಕಾದರೂ ಸಾಲ ತೆಗೆದುಕೊಳ್ಳಿ ಕುಮಾರಸ್ವಾಮಿ ಸಿಎಂ ಆದ ನಂತರ ಎಲ್ಲರ ಸಾಲ ಮನ್ನಾ ಮಾಡುತ್ತಾರೆ ಎಂದು ಸುಳ್ಳು ಭರವಸೆಗಳನ್ನು ನೀಡಿದರು. ಇವರ ಮಾತನ್ನು ನಂಬಿದ ಎಷ್ಟೋ ಹೆಣ್ಣು ಮಕ್ಕಳು ಸಾಲಗಾರರಾಗಿದ್ದಾರೆ. ಜನರನ್ನು ಸಾಲಗಾರರಾಗಿ ಮಾಡಿದ್ದೇ ಇವರ ಸಾಧನೆ ಎಂದು ವ್ಯಂಗ್ಯವಾಡಿದರು.
ಜೆಡಿಎಸ್ 20 ಸ್ಥಾನವೂ ಗೆಲ್ಲಲಾಗದು: ಜೆಡಿಎಸ್ ಯಾವುದೇ ಕಾರಣಕ್ಕೂ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ 20 ಸ್ಥಾನವೂ ಬರುವುದಿಲ್ಲ. ಪಂಚರತ್ನ ಯಾತ್ರೆ ಮಾಡುತ್ತಿರುವ ಕುಮಾರಸ್ವಾಮಿ, ರಾಜ್ಯದಲ್ಲಿ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಅಭಿವೃದ್ಧಿ ಕಾರ‍್ಯಗಳನ್ನು ಮೆಚ್ಚಿರುವ ಜನತೆ ಮತ್ತೊಮ್ಮೆ ಬಿಜೆಪಿಯನ್ನು ಆಶೀರ್ವದಿಸಲಿದ್ದಾರೆಂದು ಯೋಗೇಶ್ವರ್ ಭರವಸೆ ನೀಡಿದರು.
ಜನಾಶೀರ್ವಾದ ಪಡೆಯಲು ಸ್ವಾಭಿಮಾನ ಸಂಕಲ್ಪ ನಡಿಗೆ: ನೀರಾವರಿ ಯೋಜನೆಗಳ ಅನುಷ್ಠಾನ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟುದುಡಿದರೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನ ನನ್ನ ಸೋಲಿಸಿದರು. ನನ್ನ ಸೋಲಿಗೆ ಕಾರಣ ತಿಳಿದುಕೊಳ್ಳುವ ಜತೆಗೆ ಮುಂಬರುವ ಚುನಾವಣೆಗೆ ಜನಾಶೀರ್ವಾದ ಪಡೆಯುವ ಉದ್ದೇಶದಿಂದ ಸ್ವಾಭಿಮಾನ ಸಂಕಲ್ಪ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಿಳಿಸಿದರು. ತಾಲೂಕಿನ ಶ್ರೀ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸ್ವಾಭಿಮಾನ ಸಂಕಲ್ಪ ನಡಿಗೆಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಕಾರಣಗಳೇನಿರಬಹುದೆಂದು ಸಾಕಷ್ಟು ಆತ್ಮವಿಮರ್ಶೆ ಮಾಡಿಕೊಂಡೆನಾದರೂ ಸಿಗಲಿಲ್ಲ. ಆದ್ದರಿಂದ ನನ್ನನ್ನು ಏಕೆ ಸೋಲಿಸಿದಿರಿ ಎಂದು ಜನರನ್ನೇ ಪ್ರಶ್ನಿಸಿ ಉತ್ತರ ಕಂಡುಕೊಳ್ಳುತ್ತೇನೆಂದು ತಿಳಿಸಿದರು.
ಸಂಸದೆ ಸುಮಲತಾ ನನ್ನ ಜೊತೆ ಸಂಪರ್ಕದಲ್ಲಿದ್ದಾರೆ: ಸಿ.ಪಿ.ಯೋಗೇಶ್ವರ್
ಜನರನ್ನು ಪ್ರಶ್ನಿಸುತ್ತೇನೆ: ತಾಲೂಕಿನವನಾದ ನಾನು ಇಲ್ಲಿಂದಲೇ ರಾಜಕೀಯ ಜೀವನ ಆರಂಭಿಸಿ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟುಶ್ರಮಿಸಿದ್ದೇನೆ. ಆದರೂ ಹೊರಗಿನಿಂದ ಬಂದ ಅಭ್ಯರ್ಥಿಯನ್ನು ಗೆಲ್ಲಿಸಿ ನನ್ನೇಕೆ ಸೋಲಿಸಿದಿರಿ. ತಾಲೂಕಿನ ಜನತೆ ಸ್ವಾಭಿಮಾನಿಗಳು, ಯಾವುದು ಸರಿ ಯಾವುದು ತಪ್ಪು ಎಂದು ವಿಮರ್ಶೆ ಮಾಡಬಲ್ಲರು. ನನ್ನ ಅವಧಿಯಲ್ಲಿ ಆದ ಕ್ಷೇತ್ರದ ನೀರಾವರಿ ಯೋಜನೆಗಳ ಒಟ್ಟು ಮೊತ್ತವೇ 200 ಕೋಟಿ ರು., ಕುಮಾರಸ್ವಾಮಿ ಕ್ಷೇತ್ರಕ್ಕೆ 1500 ಕೋಟಿ ಅನುದಾನ ತಂದಿದ್ದೇನೆಂದು ಹೇಳುತ್ತಾರೆ. ಹಾಗಿದ್ದರೆ ಆ ಹಣ ರಸ್ತೆಗಳ ಮಣ್ಣಲ್ಲಿ ಮಣ್ಣಾಗಿ ಹೋಯಿತೇ ಎಂದು ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಆರ್.ಎಂ.ಮಲುವೇಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು, ತಾಪಂ ಮಾಜಿ ಅಧ್ಯಕ್ಷ ಹರೂರು ರಾಜಣ್ಣ, ಮುಖಂಡರಾದ ಸಿಂಗರಾಜಿಪುರ ರಾಜಣ್ಣ, ಜಯಕುಮಾರ್, ವಿ.ಬಿ.ಚಂದ್ರು ಇತರರಿದ್ದರು.