
ಮೈಸೂರು(ಮಾ.03): ಮುಖ್ಯಮಂತ್ರಿಯಾಗಿ ನಾನು ಏನೂ ಕೆಲಸ ಮಾಡಲಿಲ್ಲ, ಕೊಟ್ಟಕುದುರೆ ಏರದವ ವೀರನೂ ಅಲ್ಲ, ಶೂರನೂ ಅಲ್ಲ ಎಂದು ಹೇಳುತ್ತಾರೆ. ಆದರೆ ನೀವು ನೀಡಿದ್ದು ಕಾಲು ಮುರುಕ ಕುದುರೆ. ಅದನ್ನು ಏರು ಎನ್ನುವವನನ್ನು ಮನೆ ಮುರುಕ ಅಂತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ರೈತರ .25 ಸಾವಿರ ಕೋಟಿ ಸಾಲ ಮನ್ನಾ ಮಾಡಿದ ತೃಪ್ತಿ ನನಗಿದೆ. ನನ್ನ ಇಮೇಜ್ ಈಗಲೂ ಹಾಳಾಗಿಲ್ಲ. ಕಾಂಗ್ರೆಸ್ ಜತೆಗಿನ ಹೊಂದಾಣಿಕೆಯಿಂದ ತೊಂದರೆಯಾಗಿದೆ ನಿಜ. ಕಾಂಗ್ರೆಸ್ ಜೊತೆಗಿನ ಹೊಂದಾಣಿಕೆಯಿಂದ ತಪ್ಪಾಯಿತು. ನಾವು ರಾಜಕೀಯವಾಗಿ ಟ್ರ್ಯಾಪ್ ಆಗಿದ್ದೇವೆ. ಕಾಂಗ್ರೆಸ್‌ಗೆ ನಮ್ಮಿಂದ ಅನುಕೂಲವಾಗಿದೆಯೇ ಹೊರತು, ನಮಗೆ ಅನುಕೂಲವಾಗಿಲ್ಲ. ನಾನು ಸಿಎಂ ಆದ ಮೇಲೆ ತುಂಬಾ ಹಿಂಸೆ ಆಯಿತು. ತಾಜ್ ಹೋಟೆಲ್‌ನಲ್ಲಿದ್ದರೂ ಶಕ್ತಿಭವನದಲ್ಲಿ ಬೆಳಗ್ಗೆ 8 ರಿಂದಲೇ ಸಭೆ ನಡೆಸುತ್ತಿದ್ದೆ. ನನ್ನ ಗುರಿ ರೈತರ ಸಾಲ ಮನ್ನಾ ಮಾಡುವುದಾಗಿತ್ತು. ಬಳಿಕ ಸಚಿವ ಸ್ಥಾನದ ಸಂಖ್ಯೆಬಲದಲ್ಲಿ ಗೊಂದಲ, ಶಿಷ್ಟಾಚಾರ ಬಿಟ್ಟು ಅಧಿಕಾರಿಗಳ ವರ್ಗಾವಣೆ ಆಯಿತು. ಶಾಸಕಾಂಗ ಪಕ್ಷದ ಸಭೆ ಎಂದು ಕೆ.ಜೆ.ಜಾಜ್‌ರ್ ಅವರ ಹೋಟೆಲ್‌ಗೆ ಕರೆದರು, ಆದರೆ ಒಳಗೆ ಬಾ ಎನ್ನಲಿಲ್ಲ. ಸಿಎಂ ಆದವನು ಸುಮಾರು 15 ರಿಂದ 20 ನಿಮಿಷ ಹೊರಗೆ ಅಬ್ಬೇಪಾರಿಯಂತೆ ನಿಂತಿದ್ದೆ. ನೀವು ಹೇಗೆ ನಡೆಸಿಕೊಂಡಿದ್ದೀರಿ ಎಂಬುದು ಗೊತ್ತಿಲ್ಲವೇ ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಸಿಎಂರನ್ನು ಚಪ್ರಾಸಿ ತರ ನಡೆಸಿಕೊಂಡಿರಿ: ಡಿಕೆಶಿ ವಿರುದ್ಧ ಕುಮಾರಸ್ವಾಮಿ ಗರಂ
ಮೈಸೂರಲ್ಲಿ 26 ಅಥವಾ 27ರಂದು ಪಂಚರತ್ನ ಸಮಾರೋಪ: ಎಚ್ಡಿಕೆ
ಪಂಚರತ್ನ ಯಾತ್ರೆ ಮೂಲಕ ಹೊಸ ಇತಿಹಾಸ ಬರೆಯಲು ಮುಂದಾಗಿದ್ದೇವೆ. ಇದರ ಸಮಾರೋಪ ಮಾ.26 ಅಥವಾ 27 ರಂದು ಮೈಸೂರಿನಲ್ಲಿ ನಡೆಯಲಿದ್ದು, ಸುಮಾರು 10 ಲಕ್ಷ ಮಂದಿಯೊಂದಿಗೆ ಸಮಾರೋಪ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ. ಇದೊಂದು ಹೊಸ ಇತಿಹಾಸ ಸೃಷ್ಟಿಸಲಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಲಿಂಗಾಯತ ಪ್ಲೇ ಕಾರ್ಡ್ ನಡೆಯಲ್ಲ
ಹಾಸನ ಜೆಡಿಎಸ್‌ನ ಭದ್ರಕೋಟೆ. ಅಲ್ಲಿನ ಏಳು ಸ್ಥಾನವನ್ನು ನಾವು ಗೆಲ್ಲುತ್ತೇವೆ. ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿಯನ್ನು ಬಿಡುಗಡೆ ಗೊಳಿಸಲಾಗುವುದು. ಬಿಜೆಪಿಗೆ ಈ ಬಾರಿ ಲಿಂಗಾಯತ ಪ್ಲೇ ಕಾರ್ಡ್ ಉಪಯೋಗ ಆಗದು. ಏಕೆಂದರೆ ಪಂಚಮಸಾಲಿಗಳ ಮೀಸಲಾತಿ ವಿಚಾರದಲ್ಲಿ ಸರ್ಕಾರ ಎಡವಿದೆ. ಒಳ ಮೀಸಲಾತಿ ವಿಷಯದಲ್ಲಿ ಹುಡುಗಾಟಿಕೆ ಮಾಡಿದೆ. ನಾವು ಲಿಂಗಾಯತರಿಗೆ ಅವಕಾಶ ಇರುವ ಕಡೆ ಟಿಕೆಟ್ ಕೊಡುತ್ತೇವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.