ವಿಧಾನಸಭಾ ಚುನಾವಣೆಗೆ ನಿರಂತರ ಪ್ರಚಾರ ಕೈಗೊಳ್ಳಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಭಾನುವಾರದ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ.
ಬೆಂಗಳೂರು (ಏ.23): ವಿಧಾನಸಭಾ ಚುನಾವಣೆಗೆ ನಿರಂತರ ಪ್ರಚಾರ ಕೈಗೊಳ್ಳಲು ಮುಂದಾಗಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಜ್ವರದಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದು, ಭಾನುವಾರದ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ವೈದ್ಯರ ಸಲಹೆ ಮೇರೆಗೆ ಶನಿವಾರ ರಾತ್ರಿ ನಗರದ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚುನಾವಣಾ ಕಣ ಕಾವೇರಿದ್ದು, ಭಾನುವಾರದಿಂದ ಮೇ 8ರವರೆಗೆ ನಿರಂತರವಾಗಿ ಜೆಡಿಎಸ್ ಪರ ಪ್ರಚಾರದಲ್ಲಿ ತೊಡಗಲು ಕುಮಾರಸ್ವಾಮಿ ತೀರ್ಮಾನಿಸಿದ್ದರು. ಆದರೆ, ಅಭ್ಯರ್ಥಿ ಅಂತಿಮಗೊಳಿಸುವ ಕಾರ್ಯ ಮತ್ತು ನಿರಂತರ ರಾಜ್ಯ ಪ್ರವಾಸ ಹಿನ್ನೆಲೆಯಲ್ಲಿ ಆಯಾಸಗೊಂಡಿದ್ದ ಕುಮಾರಸ್ವಾಮಿ ಶನಿವಾರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿ ವಿಶ್ರಾಂತಿ ಪಡೆದುಕೊಂಡರು.
ಬಳಿಕ ಸಣ್ಣ ಪ್ರಮಾಣದಲ್ಲಿ ಲಂಗ್ಸ್ ಇನ್ಪೆಕ್ಷನ್, ಡಸ್ಟ್ ಅಲರ್ಜಿ ಹಾಗೂ ಜ್ವರದಿಂದಾಗಿ ಆಸ್ಪತ್ರೆಗೆ ದಾಖಲಾಗಿ ಸ್ಪೆಷಲ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಸದ್ಯ ಸ್ಥಿರವಾಗಿದೆ. ಡಾ.ಸತ್ಯನಾರಾಯಣ್ ಕುಮಾರಸ್ವಾಮಿಗೆ ಚಿಕಿತ್ಸೆಯನ್ನು ಮುಂದುವರೆಸಿದ್ದಾರೆಂದು ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದಾರೆ. ಇಂದು ನಿಖಿಲ್ ಕುಮಾರಸ್ವಾಮಿ ಆಸ್ಪತ್ರೆಗೆ ಭೇಟಿ ಕೊಟ್ಟು ತಂದೆ ಆರೋಗ್ಯ ವಿಚಾರಿಸಲಿದ್ದಾರೆ. ಮಧ್ಯಾಹ್ನದ ವೇಳೆ ಡಯಾಲಿಸಸ್‌ಗೆ ಮಣಿಪಾಲ್ ಆಸ್ಪತ್ರೆಗೆ ಬರಲಿರೋ ಎಚ್ ಡಿ ದೇವೇಗೌಡರು ಬರುತ್ತಿದ್ದು, ಆಸ್ಪತ್ರೆ ಬಳಿ ಯಾರೂ ಬರದಂತೆ ಎಚ್‌ಡಿಕೆ ಸೂಚನೆ ಕೊಟ್ಟಿದ್ದಾರೆ. ನಾಳೆ ಸಂಜೆ ಆಸ್ಪತ್ರೆಯಿಂದ ಕುಮಾರಸ್ವಾಮಿ ಡಿಸ್ಚಾರ್ಜ್ ಆಗುವ ಬಗ್ಗೆ ಮಣಿಪಾಲ್ ಆಸ್ಪತ್ರೆ ಉನ್ನತ ಮೂಲಗಳಿಂದ ಮಾಹಿತಿ ಬಂದಿದೆ.
ಬಿಸಿಲು, ಚುನಾವಣೆ: ರಾಜ್ಯದಲ್ಲೀಗ ಮದ್ಯದ ಕೊರತೆ: 20%ರಷ್ಟು ಬೇಡಿಕೆ ಹೆಚ್ಚಳ
ಇನ್ನು ಇಂದಿನಿಂದ (ಭಾನುವಾರ) ಕೈಗೊಳ್ಳಬೇಕಿದ್ದ ಪ್ರಚಾರವನ್ನು ಮುಂದೂಡಲಾಗಿದೆ. ಭಾನುವಾರ ರಾಮನಗರ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡು ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಮತ ಯಾಚಿಸಿ, ಚನ್ನಪಟ್ಟಣ ಕ್ಷೇತ್ರದಲ್ಲಿ ಪ್ರಚಾರ ಕೈಗೊಳ್ಳಲು ಕಾರ್ಯಕ್ರಮ ನಿಗದಿ ಮಾಡಲಾಗಿತ್ತು. ಇದೀಗ ಈ ಕಾರ್ಯಕ್ರಮವನ್ನು ಮುಂದೂಡಿದ್ದು, ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕ ಕುಮಾರಸ್ವಾಮಿ ಪ್ರಚಾರದಲ್ಲಿ ಕೈಗೊಳ್ಳಲಿದ್ದಾರೆ. ಮೇ 8ರವರೆಗೆ ಬಹಿರಂಗ ಪ್ರಚಾರ ನಡೆಸಲು ಆಯೋಗವು ಅವಕಾಶ ನೀಡಿರುವುದರಿಂದ ಅಲ್ಲಿಯವರೆಗೆ ರಾಜ್ಯಾದ್ಯಂತ ನಿರಂತರ ಪ್ರವಾಸ ಮಾಡಲಿದ್ದಾರೆ.
211 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ಈ ಎಲ್ಲಾ ಕ್ಷೇತ್ರಗಳಿಗೂ ಸಂಚರಿಸಲಿದ್ದಾರೆ. ಈ ವೇಳೆ ಅಭ್ಯರ್ಥಿಗಳ ಪರ ಬಹಿರಂಗ ಸಭೆ, ರಾರಯಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಚುನಾವಣಾ ಪ್ರಚಾರಕ್ಕಾಗಿ ಜೆಡಿಎಸ್ ತಾರಾ ಪ್ರಚಾರಕರ ತಂಡಗಳನ್ನು ರಚನೆ ಮಾಡಲಾಗಿದ್ದು, ಆಯಾ ತಂಡಗಳು ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಲಿವೆ. ಈಗಾಗಲೇ ಪಂಚರತ್ನ ರಥಯಾತ್ರೆ ಮೂಲಕ ಚುನಾವಣಾ ಪ್ರಚಾರ ನಡೆಸಲಾಗಿದೆ. ಈ ವೇಳೆ ಪಕ್ಷವು ಅಧಿಕಾರಕ್ಕೆ ಬಂದರೆ ಯಾವೆಲ್ಲಾ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂಬುದನ್ನು ಕುಮಾರಸ್ವಾಮಿ ಜನರ ಮುಂದಿಟ್ಟಿದ್ದಾರೆ.
ಇಂದು ಸಿದ್ಧಗಂಗಾ ಮಠಕ್ಕೆ ಹೊಸ ಉತ್ತರಾಧಿಕಾರಿ: ಮನೋಜ್ ಕುಮಾರ್‌ಗೆ ಪಟ್ಟಾಭಿಷೇಕ
ಮತ್ತೊಮ್ಮೆ ಪ್ರಚಾರದಲ್ಲಿ ಇದೇ ಕಾರ್ಯಕ್ರಮಗಳನ್ನು ಜನರ ಮುಂದಿಟ್ಟು ಮತ ಯಾಚಿಸಲಿದ್ದಾರೆ. ಪಂಚರತ್ನ ರಥಯಾತ್ರೆ ವೇಳೆ ಅಭೂತಪೂರ್ವ ಯಶಸ್ಸು ಸಿಕ್ಕಿದ್ದು, ಈ ಬಾರಿಯ ಪ್ರಚಾರದಲ್ಲಿಯೂ ಮತ್ತೊಮ್ಮೆ ಜನರ ಬೆಂಬಲ ಸಿಗುವ ನಿರೀಕ್ಷೆಯಲ್ಲಿ ಜೆಡಿಎಸ್ ಇದೆ. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.