ಚುನಾವಣೆ ಘೋಷಣೆಯಾದ ಬಳಿಕ ತೀವ್ರ ರಾಜಕೀಯ ಸಂಚಲನ ಮೂಡಿಸಿರುವ ಶಿವಮೊಗ್ಗ ನಗರ ಕ್ಷೇತ್ರ ಹಲವು ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗುತ್ತಿದೆ. ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಇದ್ದ ಏಕಪಕ್ಷೀಯ ರಾಜಕೀಯ ನೋಟ ದಿಕ್ಕು ತಪ್ಪಿದೆ.
ಗೋಪಾಲ್ ಯಡಗೆರೆ
ಶಿವಮೊಗ್ಗ (ಏ.23) : ಚುನಾವಣೆ ಘೋಷಣೆಯಾದ ಬಳಿಕ ತೀವ್ರ ರಾಜಕೀಯ ಸಂಚಲನ ಮೂಡಿಸಿರುವ ಶಿವಮೊಗ್ಗ ನಗರ ಕ್ಷೇತ್ರ ಹಲವು ರಾಜಕೀಯ ಸ್ಥಿತ್ಯಂತರಕ್ಕೆ ಕಾರಣವಾಗುತ್ತಿದೆ. ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಇದ್ದ ಏಕಪಕ್ಷೀಯ ರಾಜಕೀಯ ನೋಟ ದಿಕ್ಕು ತಪ್ಪಿದೆ.
ಕೆ.ಎಸ್. ಈಶ್ವರಪ್ಪ(KS Eshwarappa) ರಾಜಕೀಯ ನಿವೃತ್ತಿ ಘೋಷಣೆ ಬಳಿಕ ಕ್ಷೇತ್ರದ ರಾಜಕೀಯ ಬೆಳವಣಿಗೆಗೆ ಹೊಸ ತಿರುವು ಸಿಕ್ಕಿತು. ಬಿಜೆಪಿ ವಿಧಾನ ಪರಿಷತ್ತು ಸದಸ್ಯ ಆಯನೂರು ಮಂಜುನಾಥ್ ಪಕ್ಷಕ್ಕೆ ಸೆಡ್ಡು ಹೊಡೆದು ಚುನಾವಣಾ ಕಣಕ್ಕೆ ಇಳಿಯಲು ಮುಂದಾಗಿದೆ. ಇನ್ನೊಂದು ಮಹತ್ತರ ಬೆಳವಣಿಗೆ. ಇದರ ನಡುವೆ ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಕೆ.ಬಿ. ಪ್ರಸನ್ನಕುಮಾರ್ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದು ಮಹತ್ವದ ಬದಲಾವಣೆಗೆ ಕಾರಣವಾಗಬಲ್ಲ ಅಂಶವಾಗಿದೆ.
ಬಿಎಸ್ವೈ ನಿವಾಸಕ್ಕೆ ಕಲ್ಲೆಸೆತದಲ್ಲಿ ಮಾಜಿ ಶಾಸಕರ ಕೈವಾಡ : ಸಂಸದ ಬಿವೈ ರಾಘವೇಂದ್ರ...
34 ವರ್ಷಗಳಿಂದ ಈಶ್ವರಪ್ಪ ಅವರ ಕರ್ಮಭೂಮಿಯಾಗಿ, ರಾಜಕೀಯ ಬೆಳವಣಿಗೆಯಾದ ಈ ಕ್ಷೇತ್ರದಲ್ಲಿ ಈಶ್ವರಪ್ಪನವರ ಹವಾ ಮುಂದೆ ಉಳಿದೆಲ್ಲ ಪಕ್ಷಗಳ ಅಭ್ಯರ್ಥಿಗಳು ಮಂಕಾಗಿಯೇ ಕಾಣಿಸುತ್ತಿದ್ದುದು ಸುಳ್ಳಲ್ಲ. ಈ ಬಾರಿ ಅಂಥದೇ ರಾಜಕೀಯ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದವರಿಗೆ ಆರಂಭದಲ್ಲಿ ಆಯನೂರು ಮಂಜುನಾಥ್ ಎತ್ತಿದ ಅಪಸ್ವರ, ಫ್ಲೆಕ್ಸ್ ರಾಜಕಾರಣ, ಚುನಾವಣಾ ಕಣದಲ್ಲಿ ಇಳಿಯುತ್ತೇನೆ ಎಂದು ಘೋಷಿಸಿದಾಗಲೂ ಪರಿಸ್ಥಿತಿ ಗಂಭೀರವಾಗಿ ಬದಲಿಸುತ್ತದೆ ಎಂದು ಅನಿಸಿರಲಿಲ್ಲ. ಆದರೆ, ಯಾವಾಗ ಈಶ್ವರಪ್ಪ ಅವರು ಚುನಾವಣಾ ರಾಜಕಾರಣದ ನಿವೃತ್ತಿ ಘೋಷಿಸಿದರೋ ಆಗ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿ ಹೋಯಿತು. ಇದರ ಬೆನ್ನಲ್ಲೇ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಸಿ. ಯೋಗೀಶ್ ಹೆಸರು ಘೋಷಣೆ, ಬಳಿಕ ಆಯನೂರು ಮಂಜುನಾಥ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು, ಇದೆಲ್ಲದಕ್ಕೆ ಪೂರಕವಾಗಿ ಎಂಬಂತೆ ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಜೆಡಿಎಸ್ ಗೆ ಸೇರ್ಪಡೆಗೊಂಡು ಆಯನೂರು ಮಂಜುನಾಥ್ ಅವರನ್ನು ಬೆಂಬಲಿಸಿದ್ದು ಶಿವಮೊಗ್ಗ ಕ್ಷೇತ್ರದ ಚುನಾವಣಾ ಕಣಕ್ಕೆ ಹೊಸ ಕಳೆ, ಹೊಸ ರೂಪ, ಬೇರೆಯದೇ ಆಯಾಮ, ಹೊಸ ಲೆಕ್ಕಾಚಾರ ಬರುವಂತೆ ಮಾಡಿತು.
ಬಿಜೆಪಿಗೆ ಸುಲಭ ತುತ್ತು ಎಂದೇ ಭಾವಿಸಿದ್ದ ಈ ಕ್ಷೇತ್ರದಲ್ಲಿ ಈ ಕ್ಷಣಕ್ಕೆ ಅಕ್ಷರಶಃ ತ್ರಿಕೋನ ಸ್ಪರ್ಧೆಯಿದೆ. ಯಾರೇ ಗೆದ್ದರೂ ತೀರಾ ಸಣ್ಣ ಅಂತರ ಎಂಬ ಲೆಕ್ಕಾಚಾರ ಕೇಳಿ ಬರುತ್ತಿದೆ. ಸ್ವತಃ ಬಿಜೆಪಿ ಪಾಳಯವೇ ಆತಂಕಕ್ಕೆ ಬಿದ್ದಿದೆ. ಈಶ್ವರಪ್ಪನವರ ಹಿಂದೆ ಇದ್ದ ದೊಡ್ಡ ಮತದಾರರ, ತಳ ಹಂತದ ನಾಯಕರ ದಂಡು ಇದೀಗ ಸ್ವಲ್ಪ ದಿಕ್ಕೆಟ್ಟಂತೆ ವರ್ತಿಸುತ್ತಿದೆ. ಈಶ್ವರಪ್ಪ ಹೊರತಾಗಿ ಬೇರೆಯವರು ಎಂದರೆ ಅದೇ ನಿಷ್ಠೆಯಿಂದ ಕೆಲಸ ಮಾಡುತ್ತದೆಯೇ ಎಂಬುದು ಇನ್ನೂ ನಿಖರವಾಗುತ್ತಿಲ್ಲ. ಹಾಗೆಂದು ಇವರು ಬೇರೆ ಎಲ್ಲಿಗೆ ಹೋಗಬಲ್ಲರು? ಎಂದು ಪ್ರಶ್ನಿಸುವವರಿಗೆ ಜಾತಿ ಲೆಕ್ಕಾಚಾರವನ್ನು ಮುಂದಿಟ್ಟು ವಿವರಿಸಲಾಗುತ್ತಿದೆ. ಈ ಬಾರಿ ಜಾತಿ, ಜಾತಿಯೊಳಗಿನ ಉಪ ಜಾತಿ, ಜಾತಿಯೊಳಗಿನ ಶ್ರೀಮಂತರ ಮತ್ತು ಬಡವರ ನಾಯಕ ಎಂದೆಲ್ಲ ವರ್ಗೀಕರಿಸಲಾಗುತ್ತಿದೆ.
ಮೂರೂ ಪಕ್ಷಗಳ ಅಭ್ಯರ್ಥಿಗಳು ಕೂಡ ಒಂದೇ ಜಾತಿಯವರೇ ಆಗಿರುವುದು ವಿಶೇಷವಾಗಿದೆ. ಬಿಜೆಪಿ ಜಾತಿಯನ್ನು ಮೀರಿ ಸಂಘಟನೆ ಮಾಡಿದ್ದರೂ ಈ ಬಾರಿ ಜಾತಿ, ಉಪ ಜಾತಿಯ ಪರಿಧಿಯ ಒಳಗೆ ಸಿಲುಕುವಂತಾಗಿದೆ. ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರು ಯಾವ ಸಂದರ್ಭದಲ್ಲಿಯೂ ವೀರಶೈವ ಲಿಂಗಾಯಿತ ನಾಯಕ ಎಂದು ಗುರುತಿಸಿಕೊಳ್ಳದೆ ಇರುವುದು ಈ ಚುನಾವಣೆಯಲ್ಲಿ ಅವರಿಗೆ ಫ್ಲಸ್ಸೂ ಹೌದು, ಮೈನಸ್ ಕೂಡ ಹೌದು. ಸಧ್ಯಕ್ಕೆ ಇವರು ಎಲ್ಲದಕ್ಕೂ ಈಶ್ವರಪ್ಪನವರನ್ನೇ ನೆಚ್ಚಿಕೊಳ್ಳದೆ ವಿಧಿಯಿಲ್ಲ. ಇದರ ನಡುವೆಯೂ ಚುನಾವಣೆಯ ಹೊಣೆಯನ್ನು ಸಂಘಟನೆ ಹೊತ್ತುಕೊಳ್ಳಲಿದೆ ಎಂಬ ಮಾತು ಅವರಿಗೆ ಲಾಭವಾಗುವುದಂತೂ ಹೌದು.
ಎಂ.ಶ್ರೀಕಾಂತ್ ಹೊರತುಪಡಿಸಿ ಬೇರೆ ಯಾರೂ ಇದುವರೆಗೆ 20 ಸಾವಿರ ಮತದ ಅಂಚಿಗೆ ಹೋಗದೆ ಇದ್ದ ಜೆಡಿಎಸ್‌ಗೆ ಈ ಬಾರಿ ಹೊಸ ಜಾತಿ ಬಲ ಸೇರ್ಪಡೆಗೊಂಡಿದೆ ಎಂಬ ವಿಶ್ಲೇಷಣೆ ನಡೆದಿದೆ. ಶ್ರೀಕಾಂತ್, ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಮತ್ತು ಕೆ.ಬಿ. ಪ್ರಸನ್ನಕುಮಾರ್ ಮೂವರು ನಾಯಕರೂ ಅವರದೇ ಆದ ಬೆಂಬಲಿತ ನಾಯಕರು ಮತ್ತು ಬೆಂಬಲಿತ ಮತದಾರರ ದಂಡನ್ನು ಹೊಂದಿದ್ದಾರೆ. ಇವೆಲ್ಲವನ್ನೂ ಏಕ ಕಾಲಕ್ಕೆ ಒಂದೇ ತೆಕ್ಕೆಗೆ ತೆಗೆದುಕೊಳ್ಳಲು ಸಾಧ್ಯವೇ ಎಂಬುದು ಫಲಿತಾಂಶವನ್ನು ಆಚೀಚೆ ಮಾಡಬಲ್ಲದು.
ಲಿಂಗಾಯತರು ಪಕ್ಷ ಬಿಟ್ಟು ಹೋಗಲ್ಲ, ಅವರೇ ಬಿಜೆಪಿಯ ಭದ್ರಕೋಟೆ: ಸಿಸಿ ಪಾಟೀಲ
ಇತ್ತ ಕಾಂಗ್ರೆಸ್ ಅಭ್ಯರ್ಥಿ ಯೋಗೀಶ್ ಪ್ರಬಲ ಸಾಧು ಲಿಂಗಾಯಿತ ಅಭ್ಯರ್ಥಿಯಾಗಿದ್ದು, ಮಾಜಿ ಶಾಸಕ ಹೆಚ್. ಎಂ. ಚಂದ್ರಶೇಖರಪ್ಪ ಅವರ ಪುತ್ರ ಎಂಬುದರ ಜೊತೆಗೆ ಅವರದೇ ಆದ ದೊಡ್ಡ ಸಂಪರ್ಕ ಜಾಲವಿದೆ. ಜಾತಿ ಬಲವಿದೆ. ಎಲ್ಲದಕ್ಕಿಂತ ಅಲ್ಪಸಂಖ್ಯಾತರ ಬೆಂಬಲ ತಮಗಿದೆ ಎಂಬ ನಂಬಿಕೆ ಅವರ ದೊಡ್ಡ ಶಕ್ತಿಯಾದಂತೆ ಕಾಣುತ್ತಿದೆ. ಇವರಿಗೆ ಸಧ್ಯಕ್ಕೆ ಋುಣಾತ್ಮಕ ಸಂಗತಿಯೆಂದರೆ ಕಾಂಗ್ರೆಸ್ ನಾಯಕರಲ್ಲಿ ಇರುವ ಒಗ್ಗಟ್ಟಿನ ಕೊರತೆ. ಜೊತೆಗೆ ಇವರನ್ನೆಲ್ಲಾ ಒಗ್ಗೂಡಿಸುವ ನಾಯಕತ್ವದ ಕೊರತೆ.
ಒಟ್ಟಾರೆಯಾಗಿ ಈ ಕ್ಷಣ ಇರುವ ಚಿತ್ರಣ ನಾಳೆಗೆ ಬದಲಾಗುತ್ತಿದೆ. ಬಹುಶಃ ಶಿವಮೊಗ್ಗ ಇತಿಹಾಸದಲ್ಲಿಯೇ ಈ ಮಟ್ಟದ ರೋಚಕ ಚುನಾವಣೆ ಎದುರಾಗಿರಲಿಲ್ಲ. ಇಡೀ ಕ್ಷೇತ್ರದ ಜನತೆ ರೋಚಕ ಫಲಿತಾಂಶ ನೀಡುವ ಪಂದ್ಯವೊಂದಕ್ಕೆ ಸಾಕ್ಷಿಯಾಗುತ್ತಿದ್ದಾರೆ.