
ಬೆಂಗಳೂರು (ಜು.02): ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ಬಳಿಕ ರಾಜ್ಯ ಬಿಜೆಪಿಯಲ್ಲಿ ಶಾಸಕಾಂಗ ಪಕ್ಷದ ನಾಯಕ ಮತ್ತು ಪಕ್ಷದ ರಾಜ್ಯಾಧ್ಯಕ್ಷ ವಿಚಾರದಲ್ಲಿ ತೀವ್ರಗೊಂಡಿರುವ ಭಿನ್ನಮತವನ್ನು ಶಮನಗೊಳಿಸಲು ಪಕ್ಷದ ವರಿಷ್ಠರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೊಣೆ ನೀಡಲು ಮುಂದಾಗಿದ್ದಾರೆ. ಈ ಸಂಬಂಧ ದೆಹಲಿಗೆ ಬರುವಂತೆ ಯಡಿಯೂರಪ್ಪ ಅವರಿಗೆ ಬುಲಾವ್ ಬಂದಿದೆ.
ಪಕ್ಷದ ಹೈಕಮಾಂಡ್ ಕರೆದಿರುವ ಹಿನ್ನೆಲೆಯಲ್ಲಿ ಭಾನುವಾರ ದೆಹಲಿಗೆ ತೆರಳುತ್ತಿರುವ ಯಡಿಯೂರಪ್ಪ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಇತರೆ ನಾಯಕರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಭಾನುವಾರ ದೆಹಲಿಯಲ್ಲೇ ಉಳಿದುಕೊಂಡು ಸೋಮವಾರ ಹಿಂತಿರುಗಲಿದ್ದಾರೆ ಎಂದು ಹೇಳಲಾಗಿದೆ.
ಗ್ಯಾರಂಟಿ ಯೋಜನೆ ವಿಫಲಗೊಳಿಸಲು ಅಕ್ಕಿ ನೀಡದ ಕೇಂದ್ರ ಸರ್ಕಾರ: ಸಚಿವ ತಿಮ್ಮಾಪುರ
ಪಕ್ಷಕ್ಕೆ ಮುಜಗರವನ್ನುಂಟು ಮಾಡುವಂತಹ ಹೇಳಿಕೆ ನೀಡುವಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಸೂಚನೆಯನ್ನು ಪಕ್ಷದ ರಾಜ್ಯಾಧ್ಯಕ್ಷರು ನೀಡಿದರೂ ಕ್ಯಾರೆ ಎನ್ನುತ್ತಿಲ್ಲ. ಪಕ್ಷದ ಮೇಲೆ ಇನ್ನೂ ಹಿಡಿತ ಹೊಂದಿರುವ ಯಡಿಯೂರಪ್ಪ ಮೂಲಕ ಅಸಮಾಧಾನಗೊಂಡ ನಾಯಕರನ್ನು ಸುಮ್ಮನಿರಿಸಲು ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಸೋಮವಾರದಿಂದ ಹೊಸ ಸರ್ಕಾರದ ಮೊದಲ ಅಧಿವೇಶನ ಪ್ರಾರಂಭವಾಗುತ್ತಿದೆ. ಸದನದಲ್ಲಿ ಸರ್ಕಾರದ ವಿರುದ್ಧ ಟೀಕಾ-ಪ್ರಹಾರ ನಡೆಸುವ ಮತ್ತು ಪಕ್ಷವನ್ನು ಸದನದಲ್ಲಿ ಮುನ್ನಡೆಸುವ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ಅಲ್ಲದೇ, ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಪಕ್ಷದಲ್ಲಿ ಮಾತುಗಳು ಕೇಳಿಬರುತ್ತಿವೆ.
ಒಮ್ಮತಕ್ಕೆ ಯತ್ನ: ಪ್ರತಿಪಕ್ಷ ನಾಯಕನ ಆಯ್ಕೆ ಹಾಗೂ ರಾಜ್ಯಾಧ್ಯಕ್ಷನ ಆಯ್ಕೆ ವಿಚಾರದಲ್ಲಿ ರಾಜ್ಯ ನಾಯಕರ ಒಮ್ಮತ ಅಭಿಪ್ರಾಯ ಮೂಡಿಸಲು ಯಡಿಯೂರಪ್ಪ ಅವರಿಗೆ ಹೊಣೆಗಾರಿಕೆ ವಹಿಸಲು ಮುಂದಾಗಿದೆ. ಈ ಸಂಬಂಧ ಭಾನುವಾರ ದೆಹಲಿಗೆ ತೆರಳುತ್ತಿದ್ದು, ಬಿಎಸ್‌ವೈ ಜತೆ ಸಭೆ ನಂತರ ವರಿಷ್ಠರು ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕನ ಹೆಸರನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ಸ್ಥಾನ ವಿಚಾರ ಸಂಬಂಧ ಕೆಲವು ಶಾಸಕರು ಯಡಿಯೂರಪ್ಪ ಮುಂದೆ ತಮ್ಮ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದ್ದಾರೆ.
ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಕೆಲವರು ಇದ್ದು, ಹಲವು ಮಂದಿ ಒಲವು ಹೊಂದಿಲ್ಲ ಎನ್ನಲಾಗಿದೆ. ಬೊಮ್ಮಾಯಿ ಬಿಟ್ಟು ಬೇರೆ ಯಾರನ್ನಾದರೂ ಮಾಡಿ ಎಂಬ ಸಲಹೆಗಳನ್ನು ನೀಡಿದ್ದಾರೆ. ವಿವಾದಿತ ಹೇಳಿಕೆ ನೀಡುತ್ತಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೂ ಅವಕಾಶ ನೀಡಬಾರದು ಎಂಬ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಶಾಸಕರಾದ ಸುರೇಶ್ ಕುಮಾರ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೆಸರನ್ನು ಸೂಚಿಸಿದ್ದಾರೆ. ಇನ್ನು, ಕೆಲವರು ಸುನೀಲ್‌ಕುಮಾರ್ ಪರವೂ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗಿದೆ.
ಯಾವುದೇ ಜವಾಬ್ದಾರಿಯಾದರೂ ಒಕ್ಕಲಿಗರು ಸಮರ್ಥವಾಗಿ ನಿಬಾಯಿಸುವರು: ಶಾಸಕ ಟಿ.ಡಿ.ರಾಜೇಗೌಡ
ಯಡಿಯೂರಪ್ಪ ಅವರು ತಮ್ಮ ಬಳಿ ಶಾಸಕರು, ಮುಖಂಡರು ವ್ಯಕ್ತಪಡಿಸಿರುವ ಅಭಿಪ್ರಾಯ, ಸಲಹೆಗಳನ್ನು ವರಿಷ್ಠರ ಮುಂದೆ ಇಡಲಿದ್ದಾರೆ. ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಿದ ಬಳಿಕ ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕರ ಸ್ಥಾನಕ್ಕೆ ಹೆಸರನ್ನು ಅಂತಿಮಗೊಳಿಸುವ ನಿರೀಕ್ಷೆ ಎಂದು ಹೇಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.