Karnataka Politics: ಒಗ್ಗಟ್ಟು ತೋರಿ ಮುನಿಸು ಮುಚ್ಚಿದ ಬಿಜೆಪಿ ದಿಗ್ಗಜರು

By Govindaraj SFirst Published Dec 16, 2022, 6:44 AM IST
Highlights

ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ, ಹೀಗಾಗಿ ಅವರು ಮುನಿಸಿಕೊಂಡಿದ್ದಾರೆ ಎಂಬ ಆರೋಪಗಳನ್ನು ಅಲ್ಲಗಳೆಯಲು ಕೊಪ್ಪಳದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಿರಿಯ ನಾಯಕರು ಒಗ್ಗಟ್ಟು ಪ್ರದರ್ಶಿಸಿ, ಪರಸ್ಪರರನ್ನು ಹಾಡಿ ಹೊಗಳಿದರು. ಸ್ವತಃ ಬಿಎಸ್‌ವೈ ಯಾವುದೇ ಮುನಿಸು ಇಲ್ಲ ಎಂದರು.

ಕೊಪ್ಪಳ (ಡಿ.16): ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ, ಹೀಗಾಗಿ ಅವರು ಮುನಿಸಿಕೊಂಡಿದ್ದಾರೆ ಎಂಬ ಆರೋಪಗಳನ್ನು ಅಲ್ಲಗಳೆಯಲು ಕೊಪ್ಪಳದಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ಹಿರಿಯ ನಾಯಕರು ಒಗ್ಗಟ್ಟು ಪ್ರದರ್ಶಿಸಿ, ಪರಸ್ಪರರನ್ನು ಹಾಡಿ ಹೊಗಳಿದರು. ಸ್ವತಃ ಬಿಎಸ್‌ವೈ ಯಾವುದೇ ಮುನಿಸು ಇಲ್ಲ ಎಂದರು.

ಬಿಎಸ್‌ವೈ ಕರ್ನಾಟಕ ಬಿಜೆಪಿಯ ಪಿತಾಮಹ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪಗಳ ನಡುವೆಯೇ ಬಿಜೆಪಿ ರಾಷ್ಟ್ರಧ್ಯಕ್ಷ ಜೆ.ಪಿ.ನಡ್ಡಾ ಅವರು ಬಹಿರಂಗವಾಗಿಯೇ ಬಿಎಸ್‌ವೈ ಅವರನ್ನು ಹಾಡಿಹೊಗಳಿದ್ದಾರೆ. ‘ಕರ್ನಾಟಕ ಬಿಜೆಪಿಯ ಪಿತಾಮಹ’ ಎಂದು ಯಡಿಯೂರಪ್ಪ ಅವರನ್ನು ನಡ್ಡಾ ಕರೆದಿದ್ದಾರೆ. ಯಡಿಯೂರಪ್ಪ ಅವರು ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿಬೆಳೆಸಿದ ಪಿತಾಮಹ. ಅವರು ಮುಖ್ಯಮಂತ್ರಿಯಾಗಿ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ್ದಾರೆ. 

Chamarajanagar: ಬಿಎಸ್‌ವೈ ಫೋಟೋ ಇಲ್ಲದ್ದಕ್ಕೆ ಅಭಿಮಾನಿಗಳ ಆಕ್ರೋಶ

ಅವರ ಆಡಳಿತಾವಧಿಯ ಜನಪರ ಯೋಜನೆಗಳನ್ನು ಇದೀಗ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ರಿಪೋರ್ಟ್‌ ಕಾರ್ಡ್‌ ಇಟ್ಟುಕೊಂಡಿದ್ದಾರೆ. ಈ ರೀತಿಯ ಅಭಿವೃದ್ಧಿ ಕಾರ್ಯವನ್ನು ಕರ್ನಾಟಕದಲ್ಲಿ ಬೇರಿನ್ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಈ ರಿಪೋರ್ಟ್‌ ಕಾರ್ಡ್‌ ಅನ್ನು ಮುಂದಿಟ್ಟುಕೊಂಡೇ ನಾವು ಚುನಾವಣೆಗೆ ಹೋಗುತ್ತೇವೆ ಎಂದಿದ್ದಾರೆ.

ಬಿಎಸ್‌ವೈ, ನನ್ನ ಮಧ್ಯೆ ತಂದೆ-ಮಗ ಸಂಬಂಧ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ಮತ್ತು ಯಡಿಯೂರಪ್ಪರ ನಡುವೆ ಭಿನ್ನಾಭಿಪ್ರಾಯಗಳೆದ್ದಿವೆ ಎಂಬ ಸುದ್ದಿಗಳನ್ನು ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ನಗರದಲ್ಲಿ ಗುರುವಾರ ನಡೆದ ಬಿಜೆಪಿಯ 10 ಕಚೇರಿಗಳ ಉದ್ಘಾಟನೆ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮತ್ತು ಬಿ.ಎಸ್‌.ಯಡಿಯೂರಪ್ಪನವರ ಮಧ್ಯೆ ತಂದೆ-ಮಗನ ಸಂಬಂಧವಿದೆ. ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಸೃಷ್ಟಿಯಾಗುವುದು ಹಗಲುಗನಸು ಎಂದು ಹೇಳಿದರು. ಯಡಿಯೂರಪ್ಪ ಅವರು ನಮ್ಮ ಪರಮೋಚ್ಚ ನಾಯಕರು. ಪಕ್ಷಕ್ಕೆ ಯಡಿಯೂರಪ್ಪ ಅವರ ಮಾರ್ಗದರ್ಶನ ಯಾವತ್ತೂ ಇದೆ ಎಂದು ಎಂದರು.

ಬಿಜೆಪಿಯಲ್ಲಿ ಯಾರೂ ನನ್ನನ್ನು ನಿರ್ಲಕ್ಷಿಸಿಲ್ಲ: ಬಿಜೆಪಿ ಕಟ್ಟಿದವರಲ್ಲಿ ನಾನೂ ಒಬ್ಬ. ಬಿಜೆಪಿಯಲ್ಲಿ ಯಾರೂ ನನ್ನನ್ನು ನಿರ್ಲಕ್ಷಿಸಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಗುರುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಬೇರೆ ಪೂರ್ವನಿಗದಿತ ಕಾರ್ಯಕ್ರಮಗಳಲ್ಲಿ ನಾನು ಬ್ಯುಸಿಯಾಗಿದ್ದೆ. ಬುಧವಾರದವರೆಗೂ ಕಾರ್ಯಕ್ರಮಕ್ಕೆ ಬರುವ ಸ್ಥಿತಿಯಲ್ಲಿ ನಾನು ಇರಲಿಲ್ಲ. ಆದರೆ, ಪಕ್ಷದ ರಾಷ್ಟಾ್ರಧ್ಯಕ್ಷ ಜೆ.ಪಿ.ನಡ್ಡಾ ಆಹ್ವಾನದ ಮೇರೆಗೆ ಎಲ್ಲ ಕಾರ್ಯಕ್ರಮಗಳನ್ನು ಬದಿಗೊತ್ತಿ ಬಿಜೆಪಿ ಕಾರಾರ‍ಯಲಯ ಉದ್ಘಾಟನೆಯಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವಿಜಯೇಂದ್ರನನ್ನು ದೊಡ್ಡ ಅಂತರದಿಂದ ಗೆಲ್ಲಿಸಿ: ಬಿ.ಎಸ್‌.ಯಡಿಯೂರಪ್ಪ

ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಕಾಂಗ್ರೆಸ್‌ನಲ್ಲಿ ಭಾರೀ ಗೊಂದಲ ಇದೆ. ಅವರನ್ನು ಒಂದುಗೂಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒದ್ದಾಡುತ್ತಿದ್ದಾರೆ. ಇದನ್ನು ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ ಅರಿತುಕೊಳ್ಳಬೇಕು. ತಾವು ದೊಡ್ಡವರಾಗಬೇಕೆಂಬ ಭ್ರಮೆಯಲ್ಲಿ ಬಿಜೆಪಿ ಮನೆಯೊಂದು ಮೂರು ಬಾಗಿಲು ಎಂದು ಹೇಳಿಕೆ ಕೊಟ್ಟಿದ್ದಾರೆ ಎಂದು ಕಿಡಿಕಾರಿದ ಯಡಿಯೂರಪ್ಪ, ಬಿಜೆಪಿಯಲ್ಲಿ ಒಗ್ಗಟ್ಟಿದೆ ಎಂದರು. ಇದೇ ವೇಳೆ, ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಯಾವ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂಬುದನ್ನು ಪಕ್ಷ ನಿರ್ಧರಿಸಲಿದೆ. ನನಗೆ ಮತ್ತೆ ಮುಖ್ಯಮಂತ್ರಿ ಆಗುವ ಆಸೆ ಇಲ್ಲ. ಪಕ್ಷವನ್ನು ಅಧಿಕಾರಕ್ಕೆ ತರುವೆ ಎಂದರು.

click me!