ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸತತ ಸೋಲಿಸಿರುವ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ನಗರ, ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ, ರಾಜ್ಯದಿಂದ ಸಾಕಷ್ಟುಅನುದಾನ ತಂದು ಕೆಲಸ ಮಾಡಿ, ಮಧ್ಯ ಕರ್ನಾಟಕದ ದಾವಣಗೆರೆಯನ್ನು ಬಿಜೆಪಿ ಭದ್ರಕೋಟೆಯಾಗಿ ಮಾಡಿದವರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ಲಾಘಿಸಿದರು.
ದಾವಣಗೆರೆ (ಜು.06): ನಾಲ್ಕು ಚುನಾವಣೆಯಲ್ಲಿ ಕಾಂಗ್ರೆಸ್ಸನ್ನು ಸತತ ಸೋಲಿಸಿರುವ ಸಂಸದ ಡಾ.ಜಿ.ಎಂ.ಸಿದ್ದೇಶ್ವರ ನಗರ, ಜಿಲ್ಲೆಯ ಅಭಿವೃದ್ಧಿಗೆ ಕೇಂದ್ರ, ರಾಜ್ಯದಿಂದ ಸಾಕಷ್ಟು ಅನುದಾನ ತಂದು ಕೆಲಸ ಮಾಡಿ, ಮಧ್ಯ ಕರ್ನಾಟಕದ ದಾವಣಗೆರೆಯನ್ನು ಬಿಜೆಪಿ ಭದ್ರಕೋಟೆಯಾಗಿ ಮಾಡಿದವರು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶ್ಲಾಘಿಸಿದರು. ನಗರದ ಹೊಳೆಹೊನ್ನೂರು ತೋಟದಲ್ಲಿ ಬುಧವಾರ ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ 71ನೇ ಜನ್ಮದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿ ನೇರ ನಡೆ, ನುಡಿಗೆ ಹೆಸರಾದ ಅಭಿವೃದ್ಧಿ ಪರ, ಜನಪರ, ರೈತರ ಬಗ್ಗೆ ಕಾಳಜಿ ಹೊಂದಿರುವ ಸಂಸದ ಸಿದ್ದೇಶ್ವರ್ ಶ್ರೀಮಂತ ಕುಟುಂಬದಿಂದ ಬಂದರೂ ಜನ ಸಾಮಾನ್ಯರು, ರೈತರ ನೋವು, ನಲಿವಿಗೆ ಸ್ಪಂದಿಸಿದವರು ಎಂದರು.
ಅಭಿವೃದ್ಧಿ ಪರ ಚಿಂತನೆ, ರೈತರ ಪರ ನಿಲುವಿನ ಸಂಸದ ಸಿದ್ದೇಶ್ವರ ಪ್ರಯತ್ನದಿಂದಾಗಿ ದಾವಣಗೆರೆ ಜಿಲ್ಲೆ ಸಾಕಷ್ಟುಪ್ರಗತಿ ಕಂಡಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಂಸದ ಸಿದ್ದೇಶ್ವರ ಕ್ಷೇತ್ರದಲ್ಲಿ ಕಾಲಿಡದ ಹಳ್ಳಿ ಇಲ್ಲ. ಅಂದಿನ ಕಾಲಘಟ್ಟದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಸಿದ್ದೇಶ್ವರ ಕೆಲಸ ಮಾಡಿದ್ದಾರೆ. ಸಿದ್ದೇಶ್ವರರ ತಂದೆ ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಹಾಗೂ ಸಿದ್ದೇಶ್ವರ ಸಂಸದರಾಗಿ ಇಲ್ಲಿ ಸಾಕಷ್ಟುಕೆಲಸ ಮಾಡಿದ್ದಾರೆ. ದಿವಂಗತ ಮಲ್ಲಿಕಾರ್ಜುನಪ್ಪ ಇಲ್ಲಿ ಜಿಎಂಐಟಿ ಕಾಲೇಜು ಆರಂಭಿಸಿ, ಮಕ್ಕಳಿಗೆ ಶಿಕ್ಷಣ ನೀಡಲು ಮುನ್ನುಡಿ ಬರೆದರು ಎಂದು ತಿಳಿಸಿದರು. ದಾವಣಗೆರೆಗೆ ಸ್ಮಾರ್ಚ್ ಸಿಟಿ ಯೋಜನೆ ಬರುವಲ್ಲಿ ಸಂಸದ ಸಿದ್ದೇಶ್ವರ ಪರಿಶ್ರಮವೇ ಕಾರಣ. ದಾವಣಗೆರೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಅಭಿವೃದ್ಧಿಯ ನೀವೇ ಕಾಣುತ್ತಿದ್ದೀರಿ. ಇದೀಗ 71ನೇ ಜನ್ಮದಿನ ಆಚರಿಸಿಕೊಂಡಿದ್ದು, ನೂರಾರು ವರ್ಷ ಸಿದ್ದೇಶ್ವರಗೆ ಆಯುರಾರೋಗ್ಯ ದೇವರು ನೀಡಲಿ, ನಗರ ಜಿಲ್ಲೆಯ ಅಭಿವೃದ್ಧಿಗೆ ಮತ್ತಷ್ಟು ಶಕ್ತಿ ನೀಡಲಿ ಎಂದು ಯಡಿಯೂರಪ್ಪ ಹೇಳಿದರು.
ಹೊಲ ಉತ್ತಿ, ಬೀಜ ಬಿತ್ತಿ, ಬೆವರು ಹೊಳೆ ಹರಿಸಿ ಡಿಕೆಶಿ 'ಲುಲುಮಾಲ್' ಕಟ್ಟಿದ್ರಾ?: ಎಚ್.ಡಿ.ಕುಮಾರಸ್ವಾಮಿ
ಸುಲಭವಾಗಿ ಜನರಿಗೆ ಸಿಗುವ ಸಂಸದ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಒಂದು ಕಾಲದಲ್ಲಿ ದಾವಣಗೆರೆ ಎಂಪಿ ಅಂದರೆ ಯಾರೆಂಬುದೇ ಬಹಳಷ್ಟುಜನರಿಗೆ ಗೊತ್ತಿರಲಿಲ್ಲ. ಆದರೆ, ದಿವಂಗತ ಜಿ.ಮಲ್ಲಿಕಾರ್ಜುನಪ್ಪ ಮತ್ತು ಪುತ್ರ ಡಾ.ಜಿ.ಎಂ.ಸಿದ್ದೇಶ್ವರ ಬಂದ ನಂತರ ಸಂಸದರೆಂದರೆ ಏನೆಂಬುದು ಜನರಿಗೂ ಗೊತ್ತಾಯಿತು. ಜನರಿಗೆ ಸುಲಭವಾಗಿ ಸಿಗುವ, ಹಳ್ಳಿ ಹಳ್ಳಿಗೂ ಭೇಟಿ ನೀಡುವ ಸಂಸದನೆಂದರೆ ಅದು ಜಿ.ಎಂ.ಸಿದ್ದೇಶ್ವರ ಮಾತ್ರ. ಸಾರ್ವಜನಿಕ ಬದುಕಿನಿಂದ ಹಿಂದೆ ಸರಿಯದೇ, ಇನ್ನೂ ಸಾಕಷ್ಟು ಜನಸೇವೆ, ಅಭಿವೃದ್ಧಿ ಕಾರ್ಯ ಮಾಡಬೇಕು ಎಂದು ಹಾರೈಸಿದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ ಮಾತನಾಡಿ, ರಾಜ್ಯದಲ್ಲಿ ಒಬ್ಬ ಸಂಸದ ಹೇಗಿರಬೇಕೆಂಬುದನ್ನು ಸಂಸದ ಡಾ.ಜಿ.ಎಂ.ಸಿದ್ದೇಶ್ವರ ತೋರಿಸಿದ್ದಾರೆ. ಇನ್ನೂ ಹೆಚ್ಚು ಕಾಲ ಜನ ಸೇವೆಯಲ್ಲಿ ಸಿದ್ದೇಶ್ವರರವರು ತೊಡಗಬೇಕು ಎಂದರು.
ಭ್ರಷ್ಟಾಚಾರವನ್ನೇ ಸಾಂಸ್ಥಿಕವಾಗಿ ಮಾಡಿದ್ದ ಕುಖ್ಯಾತಿ ಬಿಜೆಪಿಗರದ್ದು: ಶಾಸಕ ಟಿ.ಬಿ.ಜಯಚಂದ್ರ
ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಗಾಯತ್ರಿ ಸಿದ್ದೇಶ್ವರ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ, ಎಂ.ಪಿ.ರೇಣುಕಾಚಾರ್ಯ, ಮುರುಗೇಶ ನಿರಾಣಿ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರಿಹರದ ಬಿ.ಪಿ.ಹರೀಶ, ಎಂ.ಚಂದ್ರಪ್ಪ, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಡಾ.ಎ.ಎಚ್.ಶಿವಯೋಗಿಸ್ವಾಮಿ, ಜಿ.ಎಸ್.ಅನಿತ್, ಹಿರಿಯ ಮುಖಂಡ ಯಶವಂತರಾವ್ ಜಾಧವ್, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಉಪಾಧ್ಯಕ್ಷ ಟಿ.ಶ್ರೀನಿವಾಸ ದಾಸಕರಿಯಪ್ಪ, ಪಿ.ಸಿ.ಶ್ರೀನಿವಾಸ ಭಟ್, ಶಾಂತರಾಜ ಪಾಟೀಲ್, ಮಹೇಶ ಪಲ್ಲಾಗಟ್ಟೆ, ದೂಡಾ ಮಾಜಿ ಅಧ್ಯಕ್ಷರಾರ ಎ.ವೈ.ಪ್ರಕಾಶ, ದೇವರಮನಿ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಶಿವನಗೌಡ ಪಾಟೀಲ್ ಇತರರಿದ್ದರು.