ರಾಜಕಾರಣದಲ್ಲಿ ಹೀಗೆಯೇ ಆಗುತ್ತದೆಂದು ಹೇಳಲು ಆಗಲ್ಲ. ಮತ್ತೆ ಯಾವುದನ್ನೂ ಅಲ್ಲಗಳೆಯುವುದಕ್ಕೂ ಸಾಧ್ಯವಿಲ್ಲ. ಹಿಂದಿನಿಂದಲೂ ಇಂಥದ್ದು ನಡೆದುಕೊಂಡು ಬಂದಿದೆ. ಈಗ ಮಹಾರಾಷ್ಟ್ರದಲ್ಲಿ ಆಗುತ್ತಿರುವುದು ನನ್ನ ಮಾತಿಗೆ ನಿದರ್ಶನ ಎಂದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ದಾವಣಗೆರೆ(ಜು.06): ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಬೆನ್ನಲ್ಲೇ ರಾಜ್ಯ ಸರ್ಕಾರದ ಕುರಿತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಗಟಿನ ಉತ್ತರ ನೀಡಿದ್ದಾರೆ. ರಾಜಕಾರಣದಲ್ಲಿ ಯಾವ ಸಮಯದಲ್ಲಿ ಏನಾಗುತ್ತೋ ಗೊತ್ತಾಗಲ್ಲ. ಯಾವುದನ್ನೂ ಅಲ್ಲಗಳೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಗರದಲ್ಲಿ ಬುಧವಾರ ಸಂಸದ ಡಾ.ಜಿ.ಎಂ.ಸಿದ್ದೇಶ್ವರ್ ಅವರ 71ನೇ ಜನ್ಮದಿನಾಚರಣೆಗೆ ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕಾರಣದಲ್ಲಿ ಹೀಗೆಯೇ ಆಗುತ್ತದೆಂದು ಹೇಳಲು ಆಗಲ್ಲ. ಮತ್ತೆ ಯಾವುದನ್ನೂ ಅಲ್ಲಗಳೆಯುವುದಕ್ಕೂ ಸಾಧ್ಯವಿಲ್ಲ. ಹಿಂದಿನಿಂದಲೂ ಇಂಥದ್ದು ನಡೆದುಕೊಂಡು ಬಂದಿದೆ. ಈಗ ಮಹಾರಾಷ್ಟ್ರದಲ್ಲಿ ಆಗುತ್ತಿರುವುದು ನನ್ನ ಮಾತಿಗೆ ನಿದರ್ಶನ ಎಂದರು. ರಾಜ್ಯದಲ್ಲಿ ಚುನಾವಣೆಗೂ ಮುನ್ನ ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳೇ ಒಂದು. ಈಗ ಮಾಡಿದ್ದೇ ಮತ್ತೊಂದು. ಗ್ಯಾರಂಟಿ ಐದು ದೋಖಾಗಳನ್ನು ನೀಡಿ, ರಾಜ್ಯದ ಜನರಿಗೆ ಮೋಸ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಸದನದ ಒಳ ಮತ್ತು ಹೊರಗೆ ನಮ್ಮ ಹೋರಾಟ ನಡೆಯಲಿದೆ ಎಂದು ತಿಳಿಸಿದರು.
ಗ್ಯಾರಂಟಿ ಅನುಷ್ಠಾನದಲ್ಲಿ ಕಾಂಗ್ರೆಸ್ ಮೋಸ: ಬೊಮ್ಮಾಯಿ ಕಿಡಿ
ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರದ ಬಗ್ಗೆ ನಮ್ಮ ಪ್ರಮುಖ ನಾಯಕರ ಜೊತೆಗೆ ಚರ್ಚೆ ನಡೆದಿದೆ. ಗುರುವಾರದೊಳಗೆ ಪ್ರತಿಪಕ್ಷ ನಾಯಕನ ಆಯ್ಕೆ ಆಗುತ್ತದೆ. ಬಿಜೆಪಿ ರಾಷ್ಟ್ರೀಯ ನಾಯಕರು ಬೇರೆ ಬೇರೆ ರಾಜ್ಯಗಳ ವಿಚಾರದಲ್ಲಿ ಮುಳುಗಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿದೆ ಅಷ್ಟೇ ಎಂದು ಬೊಮ್ಮಾಯಿ ಹೇಳಿದರು.