ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ ಸದ್ಯ ಆ ಗ್ಯಾರಂಟಿಗಳು ಮುರಾಬಟ್ಟೆಯಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕೋಡಿ (ಜೂ.26): ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳನ್ನು ನೀಡಿ ಅಧಿಕಾರಕ್ಕೆ ಬಂದಿದೆ. ಆದರೆ ಸದ್ಯ ಆ ಗ್ಯಾರಂಟಿಗಳು ಮುರಾಬಟ್ಟೆಯಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ 9 ವರ್ಷಗಳ ಸಾಧನೆ ತಿಳಿಸುವ ಹಾಗೂ ಚಿಕ್ಕೋಡಿ ಜಿಲ್ಲಾ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಬಿಜೆಪಿ ಪಕ್ಷ ಹೆಮ್ಮೆರವಾಗಿ ಬೆಳೆದಿದೆ. ಒಂದು ಸೋಲಿನಿಂದ ನಾವು ಧೃತಿಗೆಡುವುದಿಲ್ಲ ಎಂದರು.
ಬಿಜೆಪಿ ನಾಯಕರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕಾಂಗ್ರೆಸ್ ಸುಳ್ಳು ಭರವಸೆ ಕೊಟ್ಟು ಚುನಾವಣೆ ಗೆದ್ದಿದೆ. ಆದರೆ ಅದನ್ನು ಈಡೇರಿಸಲು ಸಾಧ್ಯವಾಗದೆ ಗ್ಯಾರಂಟಿಗಳೆಲ್ಲ ಮುರಾಬಟ್ಟೆಯಾಗಿವೆ. ಇನ್ನೆರೆಡು ತಿಂಗಳಲ್ಲಿ ಡಿಸೇಲ್ ಇಲ್ಲದೆ ಬಸ್‌ಗಳು ಸಂಚಾರ ನಿಲ್ಲಿಸಲಿವೆ ಅಷ್ಟೇ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು. ಸದ್ಯ ರಾಜ್ಯದಲ್ಲಿ ವರ್ಗಾವಣೆ ದಂಧೆ ಪ್ರಾರಂಭವಾಗಿದೆ. ವಿದ್ಯುತ್ ದರ ಏರಿಕೆಯಾಗಿ ಕೈಗಾರಿಕೆ ನಿಂತು ಹೋಗುತ್ತಿವೆ. ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರು ತಿರುಗಿ ಬೀಳುತ್ತಾರೆ. ಬಿಜೆಪಿ ಸರ್ಕಾರ ಇದ್ದಾಗ ಬೆಳಗಾವಿ ಜಿಲ್ಲೆಯಲ್ಲಿ ನೀರಾವರಿಗೆ 5 ಸಾವಿರ ಕೋಟಿ ಕೊಟ್ಟಿದೆ. ಆದರೆ, ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಈ ಕೆಲಸಗಳನ್ನು ನಿಲ್ಲಿಸಿದೆ ಎಂದು ಆರೋಪಿಸಿದರು.
ಡಿ.ಕೆ.ಶಿವಕುಮಾರ್ ಭೇಟಿ ಬಗ್ಗೆ ಯತ್ನಾಳ್, ಬೊಮ್ಮಾಯಿ ಮಧ್ಯೆ ಘರ್ಷಣೆ
ಮಾಜಿ ಸಚಿವೆ ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅಮೇರಿಕಾ ಆಹ್ವಾನಿಸಿರುವುದು ಹೆಮ್ಮೆಯ ಸಂಗತಿ. ಪ್ರಧಾನಿ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಪಕ್ಷದ ಕಾರ್ಯರ್ತರು ಲೋಕಸಭೆ ಚುನಾವಣೆಗೆ ಸನ್ನದ್ಧರಾಗಬೇಕು ಎಂದು ಕರೆ ನೀಡಿದರು. ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ರಮೇಶ ಜಿಗಜಿಣಗಿ, ಶಾಸಕರಾದ ದುರ್ಯೋಧನ ಐಹೊಳೆ, ಎ.ಎಸ್.ಪಾಟೀಲ ನಡಹಳ್ಳಿ, ಅಭಯ ಪಾಟೀಲ, ಬಾಲಚಂದ್ರ ಜಾರಕಿಹೋಳಿ, ಭೈರತಿ ಬಸವರಾಜ, ಮಾಜಿ ಶಾಸಕ ಪಿ.ರಾಜೀವ, ಮಾಜಿ ಸಚಿವ ಮುರಗೇಶ ನಿರಾಣಿ, ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಸಭೆ ಉದ್ದೇಶಿಸಿ ಮಾತನಾಡಿದರು.
ಕಾರವಾರದ ಬೈತ್ಕೋಲ್ನಲ್ಲಿ ಗುಡ್ಡ ಕುಸಿತದ ಭೀತಿ: ಜನವಸತಿ ಪ್ರದೇಶದತ್ತ ಮಳೆ ನೀರು
ಮಾಜಿ ಶಾಸಕ ಮಹೇಶ ಕುಮಟಳ್ಳಿ, ದುಂಡಪ್ಪ ಬೆಂಡವಾಡೆ, ಉಜ್ಚಲಾ ಬಡವನಾಚೆ, ಮಹೇಶ ಭಾತೆ, ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತೀಶ ಅಪ್ಪಾಜಿಗೋಳ, ಸಂಜಯಗೌಡ ಪಾಟೀಲ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು. ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ ಸ್ವಾಗತಿಸಿದರು. ಚಿಕ್ಕೋಡಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನಿಂಗಪ್ಪ ಖೋಕಲೆ ನಿರೂಪಿಸಿದರು, ರಮೇಶ ಖೇತಗೌಡರ ವಂದಿಸಿದರು.