ಸಾಲದ ಶೂಲಕ್ಕೆ ತಳ್ಳುವ ರಿವರ್ಸ್‌ ಗೇರ್‌ ಬಜೆಟ್‌: ಮಾಜಿ ಸಿಎಂ ಬೊಮ್ಮಾಯಿ

Published : Jul 24, 2023, 12:30 AM IST
ಸಾಲದ ಶೂಲಕ್ಕೆ ತಳ್ಳುವ ರಿವರ್ಸ್‌ ಗೇರ್‌ ಬಜೆಟ್‌: ಮಾಜಿ ಸಿಎಂ ಬೊಮ್ಮಾಯಿ

ಸಾರಾಂಶ

ನಮ್ಮ ಸರ್ಕಾರದಿಂದ ಸಮಪರ್ಕವಾಗಿ ಕೋವಿಡ್‌ ನಿರ್ವಹಿಸಿ ಔಷಧಿ, ಬೆಡ್‌ಗಳು, ಐಸಿಯು ಸಮರ್ಪಕವಾಗಿ ದೊರೆಯುವಂತೆ ಮಾಡಿ ಕೋವಿಡ್‌ ನಿರ್ಹವಣೆಗೆ ಸುಮಾರು 20 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಅಲ್ಲದೇ ಸಂಪೂರ್ಣ ಕರ್ನಾಟಕದ ಜನತೆಗೆ ಎರಡು ಡೋಸ್‌ ವ್ಯಾಕ್ಸಿನೇಷನ್‌ ಕೊಟ್ಟು ಕೋವಿಡ್‌ ಅನ್ನು ಸಂಪೂರ್ಣ ನಿಯಂತ್ರಣ ಮಾಡಿದ್ದೇವೆ: ಮಾಜಿ ಸಿಎಂ ಬೊಮ್ಮಾಯಿ   

ಬೆಂಗಳೂರು(ಜು.24): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಆರ್ಥಿಕ ಲೆಕ್ಕಾಚಾರಕ್ಕಿಂತ ಕೇಂದ್ರ ಹಾಗೂ ಹಿಂದಿನ ಬಿಜೆಪಿ ಸರ್ಕಾರವನ್ನು ದೂಷಣೆ ಮಾಡಲು ಹೆಚ್ಚಿನ ಆದ್ಯತೆ ನೀಡಿದ್ದಾರೆ. ಇದೊಂದು ದ್ವೇಷ ರಾಜಕಾರಣದ, ಪ್ರಗತಿಗೆ ಮಾರಕವಾಗಿರುವ ಸಾಲದ ಶೂಲಕ್ಕೆ ತಳ್ಳುವ ಬಜೆಟ್‌ ಆಗಿದೆ.

ಕೋವಿಡ್‌ ನಿರ್ವಹಣೆಯಲ್ಲಿ ಹಿಂದಿನ ಸರ್ಕಾರ ವಿಫಲವಾಗಿದೆ ಎಂಬ ಆರೋಪ.

ಉತ್ತರ: ನಮ್ಮ ಸರ್ಕಾರದಿಂದ ಸಮಪರ್ಕವಾಗಿ ಕೋವಿಡ್‌ ನಿರ್ವಹಿಸಿ ಔಷಧಿ, ಬೆಡ್‌ಗಳು, ಐಸಿಯು ಸಮರ್ಪಕವಾಗಿ ದೊರೆಯುವಂತೆ ಮಾಡಿ ಕೋವಿಡ್‌ ನಿರ್ಹವಣೆಗೆ ಸುಮಾರು 20 ಸಾವಿರ ಕೋಟಿ ಖರ್ಚು ಮಾಡಿದ್ದೇವೆ. ಅಲ್ಲದೇ ಸಂಪೂರ್ಣ ಕರ್ನಾಟಕದ ಜನತೆಗೆ ಎರಡು ಡೋಸ್‌ ವ್ಯಾಕ್ಸಿನೇಷನ್‌ ಕೊಟ್ಟು ಕೋವಿಡ್‌ ಅನ್ನು ಸಂಪೂರ್ಣ ನಿಯಂತ್ರಣ ಮಾಡಿದ್ದೇವೆ.

ನೈಸ್ ವಿರುದ್ಧ ಜಂಟಿ ಹೋರಾಟ; ಬಿಜೆಪಿ-ಜೆಡಿಎಸ್ ಇನ್ನೂ ಹತ್ತಿರ ಹತ್ತಿರ!

ಕೋವಿಡ್‌ ನಂತರ ಆರ್ಥಿಕ ನಿರ್ವಹಣೆ ಸಮರ್ಪಕವಾಗಿ ಮಾಡಿಲ್ಲ ಎಂಬ ಆರೋಪ.

ಉತ್ತರ: ವಿಶ್ವದ ಆರ್ಥಿಕ ಪ್ರಗತಿ 3.4% ಇದೆ. ಹಾಗೂ ರಾಷ್ಟ್ರದ ಪ್ರಗತಿ 7% ಇದೆ. ಆದರೆ, ನಮ್ಮ ರಾಜ್ಯ 2022-23ರಲ್ಲಿ 11% ಬೆಳವಣಿಗೆಯಾಗಿದೆ. ರಾಜ್ಯವು 2022-23ರ ಜನವರಿಗೆ 70%ರಷ್ಟುಆಯವ್ಯಯ ಅಂದಾಜಿನಲ್ಲಿ ಬಂಡವಾಳ ವೆಚ್ಚ ಮಾಡಿದ್ದು, ಕಳೆದ ಹತ್ತು ವರ್ಷದ ಆಯವ್ಯಯ ಅಂದಾಜಿನಲ್ಲಿ ಅತಿ ಹೆಚ್ಚು ದಾಖಲೆಯಾಗಿದೆ.

2022ರಲ್ಲಿ ಹಣದುಬ್ಬರವನ್ನು 6.39%ನಿಂದ 4.1%ಗೆ ಇಳಿಸಲಾಗಿದೆ. 2021-22ರಲ್ಲಿ ಎಫ್‌ಡಿಐ 38% ರಾಜ್ಯಕ್ಕೆ ಹರಿದು ಬಂದಿದೆ. 2022-23ರ ಮೊದಲನೇ ಎರಡು ತ್ರೈಮಾಸಿಕದಲ್ಲಿ 20%ರಷ್ಟುಬಂಡವಾಳ ಹರಿದು ಬಂದಿದೆ.
ರಾಜ್ಯದ ತೆರಿಗೆ ಸಂಗ್ರಹ ಕಳೆದ ಮೂರು ವರ್ಷಗಳಲ್ಲಿ 17% ಪ್ರತಿ ವರ್ಷ ಹೆಚ್ಚಳವಾಗಿದೆ. ಮತ್ತು ಜಿಎಸ್‌ಟಿ, ಮೋಟರ್‌ ವಾಹನ ತೆರಿಗೆ, ಸ್ಟಾಂಪ್‌ ಡ್ಯೂಟಿ ಸಂಗ್ರಹ ಹೆಚ್ಚಳ ವಾಗಿದೆ. ನಮ್ಮ ಅವಧಿಯಲ್ಲಿ ಯಾವುದೇ ತೆರಿಗೆ ಹೆಚ್ಚಳ ಮಾಡದೇ ಆದಾಯ ಹೆಚ್ಚಳವಾಗಿದೆ. ಜಿಡಿಪಿ ಗ್ರೋಥ್‌ ರಾಷ್ಟ್ರದ ಜಿಡಿಪಿಗಿಂತ ಕಳೆದ ನಾಲ್ಕು ವರ್ಷದಿಂದ ನಮ್ಮ ರಾಜ್ಯದಲ್ಲಿ ಹೆಚ್ಚಿದೆ. 2022-23ಕ್ಕೆ ರಾಷ್ಟ್ರದ ಜಿಡಿಪಿ 7% ಇದ್ದರೆ, ನಮ್ಮದು 7.9% ಇದೆ.

2018-19ರಲ್ಲಿ ಫಿಸ್ಕಲ್‌ ಡೆಫಿಸಿಟ್‌ 2.73% ಇತ್ತು. ಈಗ ಕೋವಿಡ್‌ನ ಮಧ್ಯೆಯೂ 2023-24 ಫೆಬ್ರವರಿ ಬಜೆಟ್‌ನಲ್ಲಿ 2.6ಗೆ ತಂದು ಕೋವಿಡ್‌ ಪೂರ್ವದ ಸರ್‌ಪ್ಲಸ್‌ ಬಜೆಟನ್ನು ಮಂಡನೆ ಮಾಡಿರುವುದು ನಮ್ಮ ಆರ್ಥಿಕತೆಯ ಸಮರ್ಥ ನಿರ್ಹವಣೆಗೆ ಸಾಕ್ಷಿಯಾಗಿದೆ.

ಹಣಕಾಸು ನಿರ್ವಹಣೆ ಪರಿಶೀಲನಾ ಸಮಿತಿಯು ರಾಜ್ಯ ಸರ್ಕಾರದ ತೆರಿಗೆ ಸಂಗ್ರಹದಲ್ಲಿ ಹೆಚ್ಚಾಗಿರುವುದನ್ನು ಪ್ರಶಂಸೆ ಮಾಡಿದೆ. ಅಷ್ಟೇ ಅಲ್ಲ, ಒಟ್ಟಾರೆ 2021-22ರಲ್ಲಿ ಸಾಲ 26.7%ರಷ್ಟುಇದ್ದಿದ್ದು, 2022-23ರಲ್ಲಿ ಒಟ್ಟು ಶೇ.23.76%ಕ್ಕೆ ಇಳಿಸಿರುವಂಥದ್ದು ಸಾಲ ನಿರ್ವಹಣೆಯ ದಕ್ಷತೆ ತೋರಿಸುತ್ತದೆ.

ಕೋವಿಡ್‌ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಫಿಸ್ಕಲ್‌ ಡೆಫಿಸಿಟ್‌ 5%ಕ್ಕೆ ಹೆಚ್ಚಿಸಲು ಅನುಮತಿ ಕೊಟ್ಟರೂ ಕೂಡ 3.03ಯಲ್ಲಿ ನಿಭಾಯಿಸಿರುವಂಥದ್ದು ನಮ್ಮ ದಕ್ಷತೆಗೆ ಸಾಕ್ಷಿ. ಇದನ್ನು ಮುಂದೆ 2023-24ಕ್ಕೆ ಶೇ 2.6%ಕ್ಕೆ ಇಳಿಸಿರುವಂಥದ್ದು ಗಮನಾರ್ಹ ಮತ್ತು ಒಟ್ಟು ಸಾಲ ಜಿಎಸ್‌ಡಿಪಿಯ 25% ಒಳಗಡೆ ಅಂದರೆ 24.20%ಕ್ಕೆ ಸೀಮಿತಗೊಳಿಸಿರುವುದು ಹಣಕಾಸು ನಿರ್ವಹಣೆಗೆ ಸಾಕ್ಷಿಯಾಗಿದೆ.

2020-21ರಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಎಸ್‌ಟಿ ಸಂಗ್ರಹ 22% ಹೆಚ್ಚಳವಾಗಿದೆ. ಇಡೀ ದೇಶದಲ್ಲಿ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ ನಂಬರ್‌ 2 ಸ್ಥಾನದಲ್ಲಿದೆ. ಮತ್ತು ತೆರಿಗೆ ರಹಿತ ಆದಾಯ 49% ಹೆಚ್ಚಳವಾಗಿದೆ.
ಸಮರ್ಥ ಹಣಕಾಸು ನಿರ್ವಹಣೆ

ಕಳೆದ ಎರಡು ವರ್ಷ ಕೇಂದ್ರ ಬಜೆಟ್‌ನಲ್ಲಿ ಇಟ್ಟಿದ್ದಕ್ಕಿಂತ ಹೆಚ್ಚು ಹಣ ಡೆವೂಲ್ಯೂಷನ್‌ನಲ್ಲಿ ಬಂದಿರುತ್ತದೆ. ಹಾಗೂ ರಾಜ್ಯ ಸರ್ಕಾರವು ಬಜೆಟ್‌ನಲ್ಲಿ ಒಪ್ಪಿಗೆ ಪಡೆದ ಸಾಲವನ್ನು ಪೂರ್ತಿ ಪ್ರಮಾಣದಲ್ಲಿ ಬಳಸದೇ ಇರುವುದು ಕೂಡ ಆರ್ಥಿಕ ಶಿಸ್ತು ಕಾಪಾಡಿರುವುದನ್ನು ಸ್ಪಷ್ಟಪಡಿಸುತ್ತದೆ.

ಹೀಗಿರುವಾಗ ಆರ್ಥಿಕ ನಿರ್ವಹಣೆ ದಾರಿ ತಪ್ಪಿದೆ ಅನ್ನುವುದು ಶುದ್ಧ ಸುಳ್ಳು. ಅದಕ್ಕಾಗಿ ನಿವು ಇಷ್ಟುದೊಡ್ಡ ಗಾತ್ರದ ಬಜೆಟ್‌ ಮಂಡಿಸಲು ಸಾಧ್ಯವಾಗಿದೆ. ನೀವು ಸರಪ್ಲಸ್‌ ಬಜೆಟ ನ್ನು 12000 ಕೋಟಿ ರು. ಡೆಫಿಸಿಟ್‌ ಮಾಡಿರುವುದು ಯಾವ ಆರ್ಥಿಕ ಶಿಸ್ತು?

ಜನರ ಮೇಲೆ ತೆರಿಗೆ ಭಾರ

ತಾವು ಸುಮಾರು 13500 ಕೋಟಿ ರು. ಹೊಸ ತೆರಿಗೆಗಳ ಭಾರವನ್ನು ಜನರ ಮೇಲೆ ಹಾಕುತ್ತಿದ್ದೀರಿ ಹಾಗೂ 8000 ಕೋಟಿ ರು. ಸಾಲದ ಹೊರೆಯನ್ನು ರಾಜ್ಯದ ಜನರ ಮೇಲೆ ಹೇರುತ್ತಿದ್ದೀರಿ. ನೀವು ಜಾರಿಗೆ ತಂದಿರುವ ಗ್ಯಾರಂಟಿಗಳಲ್ಲಿ ಗೊಂದಲ ಇದೆ. ಅನ್ನಭಾಗ್ಯದಲ್ಲಿ 10 ಕೆ.ಜಿ. ಅಕ್ಕಿ ಕೊಡುತ್ತಿಲ್ಲ. ಗೃಹಜ್ಯೋತಿಯಲ್ಲಿ ವಿದ್ಯುತ್‌ ಬಳಕೆಗೆ ಮಿತಿ ಹಾಕಿದ್ದೀರಿ.
ಗೃಹ ಲಕ್ಷ್ಮೀಯಲ್ಲಿ ಬಹುತೇಕ ಜನರನ್ನು ಯೋಜನೆಯಿಂದ ಕೈಬಿಡುವ ಎಲ್ಲ ಲಕ್ಷಣಗಳಿವೆ. ಶಕ್ತಿ ಯೋಜನೆಯಲ್ಲಿ ರಾಜ್ಯ ಸಾರಿಗೆ ನಿಗಮಗಳು ಸಂಪೂರ್ಣವಾಗಿ ಕುಸಿಯುವ ಸಾಧ್ಯತೆ ಹೆಚ್ಚು. ಯುವನಿಧಿ ಹೆಸರಿನಲ್ಲಿ ರಾಜ್ಯದ ಯುವಕರಿಗೆ ದಾರಿ ತಪ್ಪಿಸಿದ್ದೀರಿ.

ಎಸ್ಸಿ-ಎಸ್ಟಿಜನಾಂಗದ ಅಭಿವೃದ್ಧಿಗೆ ಮೀಸಲಿಟ್ಟಎಸ್‌ಸಿಪಿ, ಟಿಎಸ್‌ಪಿಯ ಸುಮಾರು 13000 ಕೋಟಿ ರು. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿ, ಅವರಿಗೆ ಮೀಸಲಿಟ್ಟಹಣ ಕಡಿತ ಮಾಡಿದ್ದೀರಿ. ಇದು ನಿಮ್ಮ ಸಾಮಾಜಿಕ ನ್ಯಾಯವೇ? ರಾಜ್ಯದ ಪ್ರಗತಿಗೆ ಯಾವುದೇ ವಿಶೇಷ ಒತ್ತು ಕೊಟ್ಟಿಲ್ಲ, ಶಿಕ್ಷಣ, ಆರೋಗ್ಯ, ಲೊಕೋಪಯೋಗಿ, ನೀರಾವರಿಗೆ ಅನುದಾನ ಕಡಿಮೆ ಮಾಡಿರುವುದೇ ಇದಕ್ಕೆ ಸಾಕ್ಷಿ.

ರೈತರ ಆತ್ಮಹತ್ಯೆ, ಬರಗಾಲ ಬಗ್ಗೆ ಚರ್ಚೆ ಮಾಡಲು ಪ್ರತಿಪಕ್ಷಗಳ ನಿರ್ಧಾರ: ಬೊಮ್ಮಾಯಿ

ಬಜೆಟ್‌ನಲ್ಲಿ ತಾವು ಘೋಷಣೆ ಮಾಡಿರುವ ಬಹುತೇಕ ಯೋಜನೆಗಳನ್ನು ಈಡೇರಿಸಲು ಸಾಧ್ಯವಿಲ್ಲ. ಹೀಗಾಗಿ ತಮ್ಮ ತಪ್ಪು ಮುಚ್ಚಿಕೊಳ್ಳಲು ಕೇಂದ್ರ ಮತ್ತು ಹಿಂದಿನ ಸರ್ಕಾರದ ಮೇಲೆ ಆರೋಪ ಮಾಡುತ್ತಿದ್ದೀರಿ.
14ನೇ ಬಾರಿ ಬಜೆಟ್‌ ಮಂಡನೆ ಮಾಡಿರುವ ಯಾವುದೇ ಮುತ್ಸದ್ದಿತನ ಮತ್ತು ಧೀಮಂತಿಕೆ ಬಜೆಟ್‌ನಲ್ಲಿ ಇಲ್ಲ. ಇದೊಂದು ಪ್ರಗತಿಗೆ ಮಾರಕ ಆಗುವ, ಹೆಚ್ಚು ಸಾಲದ ಶೂಲಕ್ಕೆ ತಳ್ಳುವ ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಸಿದುಕೊಳ್ಳುವ ರಿವರ್ಸ್‌ ಗೇರ್‌ ಬಜೆಟ್‌ ಆಗಿದೆ.

ಕೋವಿಡ್‌ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಫಿಸ್ಕಲ್‌ ಡೆಫಿಸಿಟ್‌ ಶೇ.5ಕ್ಕೆ ಹೆಚ್ಚಿಸಲು ಅನುಮತಿ ಕೊಟ್ಟರೂ ಕೂಡ ನಾವು ಶೇ.3.03ರಲ್ಲಿ ನಿಭಾಯಿಸಿದ್ದೆವು. ಇದನ್ನು ಮುಂದೆ 2023-24ಕ್ಕೆ ಶೇ 2.6%ಕ್ಕೆ ಇಳಿಸಿರುವಂಥದ್ದು ನಮ್ಮ ಸಾಧನೆ. ಆದರೆ, ನಮ್ಮ ಕಾಲದ ಉಳಿತಾಯ ಬಜೆಟ್‌ಗಳ ಎದುರು ಈಗ ಸಿದ್ದರಾಮಯ್ಯ 12000 ಕೋಟಿ ರು. ಕೊರತೆ ಬಜೆಟ್‌ ಮಂಡಿಸಿರುವುದು ಯಾವ ಆರ್ಥಿಕ ಶಿಸ್ತು? ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶಾಸಕರಿಗೆ ಡಿ.ಕೆ.ಶಿವಕುಮಾರ್‌ ಔತಣಕೂಟ; 25ಕ್ಕೂ ಹೆಚ್ಚು ಶಾಸಕರು ಭಾಗಿ
ಸುತ್ತೋಲೆ ವಿವಾದಕ್ಕೆ ತೆರೆ.. ಹಾಲಿ ಪಿಯುಸಿ ಉಪನ್ಯಾಸಕರಿಗೆ ಇಲ್ಲ ಹಿಂಬಡ್ತಿ: ಸಚಿವ ಮಧು ಬಂಗಾರಪ್ಪ