ಕಾವೇರಿ ಸಂಕಷ್ಟ ಸೂತ್ರದ ಬಗ್ಗೆ ನಿಖರ ಅಂಕಿ-ಅಂಶಗಳಿಲ್ಲ: ಮಾಜಿ ಸಿಎಂ ಬೊಮ್ಮಾಯಿ ಹೇಳಿದ್ದೇನು?

By Kannadaprabha NewsFirst Published Oct 3, 2023, 3:20 AM IST
Highlights

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಸಂಕಷ್ಟ ಸೂತ್ರ ಕುರಿತಂತೆ ನ್ಯಾಯಾಧೀಕರಣದ ಬಳಿ ನಿಖರ ಅಂಕಿ-ಅಂಶಗಳಿಲ್ಲ. ಈ ಕುರಿತಂತೆ ರಾಜ್ಯ ಸರ್ಕಾರ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಂಕಷ್ಟ ಸೂತ್ರ ಸಿದ್ಧಪಡಿಸಿಕೊಂಡು ಮುನ್ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಮಂಡ್ಯ (ಅ.03): ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಸಂಕಷ್ಟ ಸೂತ್ರ ಕುರಿತಂತೆ ನ್ಯಾಯಾಧೀಕರಣದ ಬಳಿ ನಿಖರ ಅಂಕಿ-ಅಂಶಗಳಿಲ್ಲ. ಈ ಕುರಿತಂತೆ ರಾಜ್ಯ ಸರ್ಕಾರ ಕಾನೂನು ತಜ್ಞರೊಂದಿಗೆ ಚರ್ಚಿಸಿ ಸಂಕಷ್ಟ ಸೂತ್ರ ಸಿದ್ಧಪಡಿಸಿಕೊಂಡು ಮುನ್ನಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ವತಿಯಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಸಂಕಷ್ಟ ಸೂತ್ರ ಸಿದ್ಧಪಡಿಸಿಕೊಂಡು ಕಾನೂನು ಹೋರಾಟ ನಡೆಸುವುದರಿಂದ ಮಾತ್ರ ಕಾವೇರಿ ವಿಚಾರದಲ್ಲಿ ನ್ಯಾಯ ಪಡೆಯಲು ಸಾಧ್ಯ. 

ಈ ಸೂತ್ರವನ್ನು ಮುಂದಿಟ್ಟುಕೊಂಡು ಕಾವೇರಿ ನೀರು ನಿಯಂತ್ರಣ ಸಮಿತಿ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್‌ನಲ್ಲಿ ಸಮರ್ಥ ವಾದ ಮಂಡಿಸುವಂತೆ ಸಲಹೆ ನೀಡಿದರು. ಸುಪ್ರೀಂಕೋರ್ಟ್ ಈ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದರೆ ಕೇಂದ್ರದ ಮೇಲೆ ನಾವೆಲ್ಲರೂ ಸೇರಿ ಒತ್ತಡ ಹಾಕುವುದಕ್ಕೆ ಸಿದ್ಧರಿದ್ದೇವೆ. ಕಾವೇರಿ ನದಿ ನೀರಿನ ವಿಚಾರದಲ್ಲಿ ಹಿಂದೆ ಪ್ರಧಾನಮಂತ್ರಿಗಳಿಗೆ ಎಲ್ಲ ರೀತಿಯ ಅಧಿಕಾರವಿತ್ತು. ಆದರೆ, ಪ್ರಾಧಿಕಾರ ರಚನೆಯಾದ ನಂತರದಲ್ಲಿ ಪ್ರಧಾನಿಯವರ ಅಧಿಕಾರ ಮೊಟಕುಗೊಂಡಿದೆ. ಪ್ರಾಧಿಕಾರ ಮತ್ತು ಸುಪ್ರೀಂಕೋರ್ಟ್‌ನಲ್ಲಿ ನೀರು ಸಂಗ್ರಹದ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಬಹುದಾಗಿದೆ ಎಂದು ಹೇಳಿದರು.

Latest Videos

ಲಿಂಗಾಯತ ಅಧಿಕಾರಿಗಳಿಗೆ ಅನ್ಯಾಯವಾಗಲು ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ

ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ತಮಿಳುನಾಡಿನ ಕುರುವೈ ಬೆಳೆಗೆ ಹಾಗೂ ಕರ್ನಾಟಕದ ಮುಂಗಾರು ಬೆಳೆಗೆ ಬೇಕಾಗಿರುವ ಪ್ರದೇಶದ ಎಕರೆವಾರು ಮಾಹಿತಿ ಹಾಗೂ ನೀರಿನ ಪ್ರಮಾಣ ನ್ಯಾಯಮಂಡಳಿ ಆದೇಶದಲ್ಲಿ ನಿಗದಿಯಾಗಿದೆ. ಜಲಾಶಯಗಳಲ್ಲಿರುವ ನೀರಿನ ಮಟ್ಟವನ್ನು ಆಧರಿಸಿ ನೀರು ಹರಿಸುವಂತೆ ಎಲ್ಲಿಯೂ ಹೇಳಿಲ್ಲ. ಇಂತಹ ಅನೇಕ ಅಂಶಗಳನ್ನು ಮುಂದಿಟ್ಟುಕೊಂಡು ಸಮರ್ಥ ವಾದ ಮಂಡಿಸುವಲ್ಲಿ ರಾಜ್ಯಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ದೂರಿದರು. 2012ರಲ್ಲಿ ಬರ ಪರಿಸ್ಥಿತಿ ಎದುರಾಗಿದ್ದ ಸಮಯದಲ್ಲಿ ಬಿಜೆಪಿ ಅಧಿಕಾರದಲ್ಲಿತ್ತು. ಆ ಸಮಯದಲ್ಲಿ ತಮಿಳುನಾಡಿಗೆ ನಾಲ್ಕು ವಾರದಲ್ಲಿ 12 ಟಿಎಂಸಿ ನೀರು ಹರಿಸುವಂತೆ ಸರ್ವೋಚ್ಛ ನ್ಯಾಯಾಲಯ ಆದೇಶಿಸಿತ್ತು. 

ನಾವು ನೀರು ಬಿಡದೆ ಮೇಲ್ಮನವಿ ಸಲ್ಲಿಸಿ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟ ಬಳಿಕ ನೀರಿನ ಪ್ರಮಾಣವನ್ನು ಕಡಿಮೆ ಮಾಡಿ ಎರಡು ತಿಂಗಳ ಕಾಲಾವಕಾಶ ನೀಡಿದ್ದನ್ನು ಸ್ಮರಿಸಿದರು. ಆಗ ನಾವು ತೆಗೆದುಕೊಂಡ ನಿರ್ಧಾರವನ್ನು ಈಗಿನ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿದ್ದರೆ ಇಂತಹ ಪರಿಸ್ಥಿತಿ ಸೃಷ್ಟಿಯಾಗುತ್ತಿರಲಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರ ದುಡುಕಿನ ನಿರ್ಧಾರ ಕೈಗೊಂಡು ತಮಿಳುನಾಡಿಗೆ ನೀರು ಹರಿಸಿತು. ಜೂನ್-ಜುಲೈ ತಿಂಗಳಲ್ಲೇ ನೀರಾವರಿ ಸಲಹಾ ಸಮಿತಿ ಸಭೆ ನಡೆಸದೆ ಆಗಸ್ಟ್‌ನಲ್ಲಿ ನಡೆಸಿ ಜಲಾಶಯಗಳಲ್ಲಿ ನೀರು ಶೇಖರಣೆಗೆ ಕಾರಣವಾಯಿತು. ಕೆರೆ-ಕಟ್ಟೆ, ನಾಲೆಗಳಿಗೆ ಮೊದಲೇ ನೀರು ಹರಿಸಿ ಬಳಕೆ ಮಾಡಿದ್ದರೆ ನಮ್ಮ ನೆಲದಲ್ಲಾದರೂ ನೀರು ಉಳಿಯುತ್ತಿತ್ತು. 

ಶಿವಮೊಗ್ಗದಲ್ಲಿ ಗಲಭೆಗೆ ಆಗುವ ಮುನ್ನವೇ ನಾವು ಮುಂಜಾಗ್ರತೆ ಕ್ರಮ ತೆಗೆದುಕೊಂಡಿದ್ದೆವು: ಸಚಿವ ಪರಮೇಶ್ವರ್

ಪ್ರತಿ ಹಂತದಲ್ಲೂ ಸರ್ಕಾರ ತೋರಿದ ನಿರ್ಲಕ್ಷ್ಯತನ ರೈತರನ್ನು ಸಂಕಷ್ಟಕ್ಕೆ ದೂಡುವಂತೆ ಮಾಡಿತು ಎಂದು ಹೇಳಿದರು. ಕೆಆರ್‌ಎಸ್ ಜಲಾಶಯದಿಂದ ನೀರು ಬಿಟ್ಟಿಲ್ಲ. ಸೋರಿಕೆ ನೀರು ಹರಿದುಹೋಗುತ್ತಿರುವುದಾಗಿ ಜಲಸಂಪನ್ಮೂಲ ಸಚಿವರು ಸುಳ್ಳು ಹೇಳುತ್ತಿದ್ದಾರೆ. ಮುಂದಿನ ಐವತ್ತು ವರ್ಷಗಳ ಕಾಲ ನೀರು ಸೋರಿಕೆಯಾಗದಂತೆ ಗೇಟ್‌ಗಳನ್ನು ಬದಲಾಯಿಸಿ ದುರಸ್ತಿಪಡಿಸಲಾಗಿದೆ. ವಿನಾಕಾರಣ ಏನನ್ನೋ ಹೇಳಿ ಸಮರ್ಥನೆಗೆ ಮುಂದಾಗದೆ ಪರಿಹಾರ ಹುಡುಕುವಂತೆ ಸಲಹೆ ನೀಡಿದರು. ಮಾಜಿ ಸಚಿವ ಆರ್.ಅಶೋಕ್, ಶಾಸಕ ರವಿಸುಬ್ರಹ್ಮಣ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಅಶೋಕ್ ಜಯರಾಂ, ಹೆಚ್.ಆರ್.ಅರವಿಂದ್, ಕೇಶವ, ಕೆ.ಬೋರಯ್ಯ, ಸುನಂದಾ ಜಯರಾಂ, ಇಂಡುವಾಳು ಚಂದ್ರಶೇಖರ್, ಅಂಬುಜಮ್ಮ, ಸಿ.ಟಿ.ಮಂಜುನಾಥ ಇತರರಿದ್ದರು.

click me!